ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣ ಪ್ರಮಾಣದ ರೈತರ ಸಂಖ್ಯೆಯೇ ಅಧಿಕ. ಇಲ್ಲಿ ಉತ್ತಮ ಮಳೆಯಾಗುತ್ತಾದರೂ ತೇವಾಂಶವನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಮಣ್ಣಿಗಿರುವುದಿಲ್ಲ. ಇಲ್ಲಿ ಇರುವುದು ಜಂಬಿಟ್ಟಿಗೆ ಮಣ್ಣು. ಇದನ್ನು ಲ್ಯಾಟ್ರಾಯಿಟ್ ಸಾಯಿಲ್ ಎಂದೂ ಕರೆಯುತ್ತಾರೆ. ಆದ್ದರಿಂದ ಇಲ್ಲಿ ಬಹುತೇಕರು ಮಳೆನೀರು ಕೊಯ್ಲನ್ನು ಕಡ್ಡಾಯವಾಗಿ ಮಾಡುತ್ತಾರೆ. ಅದರ ಹನಿಹನಿ ನೀರನ್ನು ಜತನದಿಂದ ಬಳಸುತ್ತಾರೆ. ಹೀಗೆ ಮಾಡುತ್ತಾ ಸಮಗ್ರಕೃಷಿಯ ತತ್ವಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಂಡವರು ಮೂಡಬಿದ್ರೆ ಸಮೀಪ ಇರುವ ದರೆಗುಡ್ಡೆ ಗ್ರಾಮದ ಕೃಷಿಕ ಪ್ರಭಾಕರ್.

ಕೃಷಿಕ ಪ್ರಭಾಕರ್ ಅವರ ಕುಟುಂಬದ ಹಿರಿಯರು ಕೃಷಿಯನ್ನೇ ಮಾಡುತ್ತಾ ಬಂದವರು. ಆದರೆ ಪ್ರಭಾಕರ್ ಅದನ್ನು ಹೆಚ್ಚು ಸುಸ್ಥಿರಗೊಳಿಸಿದ್ದಾರೆ. ವೈವಿಧ್ಯಮಯ ಮಾಡಿದ್ದಾರೆ. ಇದಕ್ಕೆ ಕಾರಣ ಇವರ ನಿರಂತರ ಪರಿಶ್ರಮ, ಕೃಷಿಯಲ್ಲಿ ಹೊಸಹೊಸ ವಿಚಾರಗಳನ್ನು ಕಲಿಯುವುದು, ಸಾಧ್ಯವಿರುವ ಅಂಶಗಳನ್ನು ಅಳವಡಿಸಿಕೊಳ್ಳುತ್ತಾ ಬಂದಿರುವುದೇ ಕಾರಣವಾಗಿದೆ. ಇಲ್ಲಿನ ತೋಟ ಜೀವ ವೈವಿಧ್ಯತೆಯಿಂದ ಕೂಡಿದೆ.

ಇರುವುದು ಎರಡು ಎಕರೆ ಹದಿನೈದು ಸೆಂಟ್ಸ್ ಜಾಗವಾದರೂ ಒಂದಿಂಚೂ ನೆಲವನ್ನು ವ್ಯರ್ಥವಾಗಲು ಬಿಟ್ಟಿಲ್ಲ. ಎಲ್ಲಿ ಏನು ಬೆಳೆಯಬೇಕು, ಹಸುಗಳ ಕೊಟ್ಟಿಗೆ, ಹಂದಿಗಳನ್ನು ಕೂಡಿ ಹಾಕುವ ದೊಡ್ಡಿ, ಕೋಳಿಗೂಡು ಇವೆಲ್ಲವನ್ನು ವ್ಯವಸ್ಥಿತವಾಗಿ ಯೋಜನೆ ಮಾಡಿದ್ದಾರೆ. ತೋಟದಲ್ಲಿಯೇ ಮನೆಯೂ ಇದೆ. ಇಲ್ಲಿಯೇ ಇರುವುದರಿಂದ ಸದಾ ಕೃಷಿ ಮತ್ತು ಜಾನುವಾರುಗಳತ್ತ ಸಂಪೂರ್ಣ ಗಮನ ನೀಡಲು ಸಾಧ್ಯವಾಗಿದೆ.

ಇಲ್ಲಿಯ ಮಣ್ಣು ಜಂಬಿಟ್ಟಿಗೆಯಿಂದ ಕೂಡಿದೆ. ಈ ಸ್ಥಳದಲ್ಲಿ ಪಾದೆಕಲ್ಲುಗಳೇ ಜಾಸ್ತಿ. ದಶಕಗಳ ಹಿಂದೆ ಇದು ಫಲವತ್ತಾದ ಭೂಮಿ ಆಗಿರಲಿಲ್ಲ. ಇಲ್ಲಿ ಕೃಷಿ ಮಾಡಲು ಬಹಳ ಸಾಹಸ ಪಟ್ಟಿದ್ದಾರೆ. ಹಂತಹಂತವಾಗಿ ಮಣ್ಣನ್ನು ಫಲವತ್ತುಗೊಳಿಸಿದ್ದಾರೆ. ಇದರ ಪ್ರತಿಫಲ ಇಂದು ಅವರಿಗೆ ದೊರೆಯುತ್ತಿದೆ. ಯಾವುದೇ ತೋಟಗಾರಿಕೆ ಬೆಳೆ ಹಾಕಿದರೂ ಅದು ಅತ್ಯುತ್ತಮವಾಗಿ ಬೆಳೆಯುವಂಥ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ.

ಬೆಳೆಗಳು: ತೋಟದಲ್ಲಿ ಅಡಿಕೆ ಮತ್ತು ತೆಂಗು ಪ್ರಧಾನ ಬೆಳೆಗಳು. ಉಪಬೆಳೆಗಳಾಗಿ ಕಾಳುಮೆಣಸು, ಬಾಳೆ ಇದೆ. ಸಾಂಪ್ರದಾಯಿಕ ಕೃಷಿಯಂತೆ ಅಡಿಕೆ ಮರಗಳಿಗೆ ಮತ್ತು ತೆಂಗಿನ ಮರಗಳಿಗೆ ಕಾಳು ಮೆಣಸು ಬಳ್ಳಿ ಹಬ್ಬಿಸಿದ್ದಾರೆ. ಸಾಕಷ್ಟು ಬಳ್ಳಿಗಳು ಉತ್ತಮವಾಗಿ ಬೆಳೆದಿವೆ. ಕೆಲವು ಬಳ್ಳಿಗಳ ಬೆಳವಣಿಗೆ ಅಷ್ಟೊಂದು ಉತ್ತಮವಾಗಿಲ್ಲ. ಏಕೆಂದರೆ ಅವುಗಳಿಗೆ ರೋಗಬಾಧೆ ಇದೆ.

ಪಣಿಯೂರು ತಳಿಯ ಕಾಳುಮೆಣಸಿನ ಬಳ್ಳಿಗಳಿವು. ಇವುಗಳ ಕೃಷಿಗೆ ಪ್ರತ್ಯೇಕವಾದ ಖರ್ಚು ಮಾಡದೇ ಇರುವುದು ಗಮನಾರ್ಹ. ಇದರಿಂದಾಗಿ ಇಲ್ಲಿ ಕಾಳುಮೆಣಸು ಬೋನಸ್ ಬೆಳೆಯಾಗಿದೆ. ಕಾಳುಮೆಣಸಿನ ಮಾರಾಟದಿಂದ ಎಷ್ಟೇ ಹಣ ಬಂದರೂ ಅದು ಲಾಭದಾಯಕವೇ ಆಗಿದೆ. ಅಡಿಕೆಗೆ ನೀರುವ ಪೋಷಕಾಂಶವೇ ಇವುಗಳಿಗೂ ಸಾಕಾಗುತ್ತದೆ. ವರ್ಷಕ್ಕೆ ಒಮ್ಮೆ ಕಹಿಬೇವಿನ ಹಿಂಡಿ ನೀಡುತ್ತಾರೆ. ಇದರಿಂದ ಬೇರುಹುಳುಗಳ ಬಾಧೆ ನಿಯಂತ್ರಿತವಾಗಿದೆ.

ರೋಗದ ಬಾಧೆ ತೀವ್ರವಾಗಿರುವ ಮೆಣಸಿನ ಬಳ್ಳಿಗಳನ್ನು ಕಿತ್ತು ಸುಟ್ಟು ಹಾಕುತ್ತಾರೆ. ಹೀಗೆ ಮಾಡುವುದು ಅತ್ಯವಶ್ಯಕ. ಇಲ್ಲದಿದ್ದರೆ ರೋಗ ಬಾಧೆ ಇತರ ಸಸ್ಯಗಳಿಗೂ ಹಬ್ಬುತ್ತದೆ. ಬಳ್ಳಿ ಕಿತ್ತ ನಂತರ ಅದೇ ಜಾಗದಲ್ಲಿ ಮಣ್ಣಿಗೆ ಕಹಿಬೇವಿನ ಹಿಂಡಿ ಹಾಕಿ ಅಲ್ಲಿ ಮತ್ತೊಂದು ಮೆಣಸಿನ ಬಳ್ಳಿ ನೀಡುತ್ತಾರೆ. ಸದಾ ಎಚ್ಚರ ವಹಿಸಿ ಹೀಗೆ ಮಾಡುತ್ತಿರುವುದರಿಂದ ಕಾಳು ಮೆಣಸಿಗೆ ಉಂಟಾಗಿರುವ ರೋಗಬಾಧೆ ನಿಯಂತ್ರಿತವಾಗಿದೆ.

ಇಳುವರಿ: ರೋಗಬಾಧೆ ಇಲ್ಲದೇ ಇರುವ ಕಾಳುಮೆಣಸಿನ ಬಳ್ಳಿಗಳಲ್ಲಿ ಇಳುವರಿ ಉತ್ತಮವಾಗಿಯೇ ಇದೆ. ಇವುಗಳಿಗೆ ಹೆಚ್ಚು ಗಮನ ಮತ್ತು ಗೊಬ್ಬರ ನೀಡಿ ಬೆಳೆಸುತ್ತಿರುವ ತೋಟಗಳಿಗೆ ಹೋಲಿಸಿದರೆ ಇಲ್ಲಿನ ಇಳುವರಿ ಪ್ರಮಾಣ ಅತ್ಯುತ್ತಮವಾಗಿದೆ ಎಂದು ಹೇಳಬಹುದು. ಇದಕ್ಕೆ ಕಾರಣ ತೋಟದ ಮಣ್ಣಿನ ಫಲವತ್ತತೆ ಹೆಚ್ಚಿಸಲು ಒದಗಿಸುತ್ತಿರುವ ಸಾವಯವ ಗೊಬ್ಬರಗಳೇ ಆಗಿವೆ.

ಇಡೀ ತೋಟದ ನಿರ್ವಹಣೆ ಮಾಡಿ ಉಳಿತಾಯ ಮಾಡುವಷ್ಟು ಆದಾಯವನ್ನು ಕಾಳುಮೆಣಸು ಮಾರಾಟದಿಂದ ಪಡೆಯುತ್ತಿದ್ದಾರೆ. ಇದಕ್ಕೆ ಕಾರಣ ಅವುಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿರುವುದು, ಸಕಾಲಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು, ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ತೋಟದಲ್ಲಿ ಅಡ್ಡಾಡುವುದರಿಂದ ಯಾವ ಸಸ್ಯಗಳ ಆರೋಗ್ಯ ಹೇಗಿದೆ, ಅವುಗಳ ಪೋಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳೇನು ಎಂಬುದು ತಿಳಿಯುತ್ತಿದೆ.

ತೋಟದ ಪ್ರಧಾನ ಬೆಳೆಗಳಾದ ಅಡಕೆಗೆ ಅತ್ಯುತ್ತಮ ಗುಣಮಟ್ಟದ ಪೋಷಕಾಂಶ ಒದಗಿಸುತ್ತಿದ್ದಾರೆ. ಇದಕ್ಕೂ ಸಹ ಅವರು ಹೆಚ್ಚು ವೆಚ್ಚ ಮಾಡುತ್ತಿಲ್ಲ. ಇಲ್ಲಿಯ ಬಾಳೆ ಇಳುವರಿಯೂ ಅತ್ಯುತ್ತಮವಾಗಿದೆ. ಇದಕ್ಕೆ ಕಾರಣ ಒದಗಿಸುತ್ತಿರುವ ಗುಣಮಟ್ಟದ ಪೋಷಕಾಂಶಗಳೇ ಆಗಿವೆ.

ಖರ್ಚುವೆಚ್ಚ: ಕೃಷಿಯ ಪ್ರತಿಯೊಂದು ಹಂತದಲ್ಲಿಯೂ ವೆಚ್ಚವನ್ನು ಸಾಧ್ಯವಾದಷ್ಟೂ ತಗ್ಗಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಪ್ರಭಾಕರ್ ಅವರು ಹೆಚ್ಚು ಗಮನ ಹರಿಸಿದ್ದಾರೆ. ಮುಖ್ಯವಾಗಿ ಸಣ್ಣ ಪ್ರಮಾಣದ ರೈತರು ಕೃಷಿಕಾರ್ಯಗಳಿಗಾಗಿ ಕೃಷಿಕಾರ್ಮಿಕರ ಸಹಾಯ ಅಪೇಕ್ಷಿಸಿದರೆ ವೆಚ್ಚದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಬರುವ ಅತ್ಯಲ್ಪ ಆದಾಯವೂ ಕಡಿಮೆಯಾಗುತ್ತದೆ. ಇದನ್ನು ಮನಗಂಡಿರುವ ಪ್ರಭಾಕರ್ ಮತ್ತು ಇವರ ಕುಟುಂಬದವರು ತಾವೇ ಸಂಪೂರ್ಣ ತೋಟದ ಕೆಲಸಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ.

ಸ್ಥಳೀಯವಾಗಿ ಅಭಿವೃದ್ಧಿ ಮಾಡಲ್ಪಟ್ಟ ತಳಿಯ ಅಡಿಕೆ ಸಸಿಗಳನ್ನೇ ನೆಟ್ಟು ಉತ್ತಮವಾಗಿ ಬೆಳೆಸಲಾಗಿದೆ. ಇವುಗಳಿಗೆ ಯಾವುದೇ ರೋಗಬಾಧೆಯೂ ಇಲ್ಲ. ಇದಕ್ಕೆ ಕಾರಣ ಅವುಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿತವಾಗಿರುವುದು. ಇದಕ್ಕೆ ಕಾರಣವಾದ ಮುಖ್ಯ ಅಂಶ ಏನೆಂದರೆ ಚೆನ್ನಾಗಿ ಕಳಿತ ಸಾವಯವ ಗೊಬ್ಬರವನ್ನು ಅವುಗಳಿಗೆ ಅವಶ್ಯಕ ಪ್ರಮಾಣದಲ್ಲಿ ಪೂರೈಸುತ್ತಿರುವುದೇ ಆಗಿದೆ.

ಕಾಂಪೋಸ್ಟ್: ಕೃಷಿತ್ಯಾಜ್ಯ ಮತ್ತು ಜಾನುವಾರುಗಳ ತ್ಯಾಜ್ಯವನ್ನು ಕಾಂಪೋಸ್ಟ್ ಗೊಬ್ಬರವಾಗಿ ಮಾಡುತ್ತಾರೆ. ಇದಕ್ಕಾಗಿ ಕಾಂಪೋಸ್ಟ್ ಗುಂಡಿಗಳನ್ನು ನಿರ್ಮಾಣ ಮಾಡಿದ್ದಾರೆ. ಇಲ್ಲಿ ನೀರು ಸೇರದಂತೆ ವ್ಯವಸ್ಥೆ ಮಾಡಿದ್ದಾರೆ. ಇಳಿಜಾರಿನಲ್ಲಿ ಕಾಂಪೋಸ್ಟ್ ಗುಂಡಿ ನಿರ್ಮಿಸಿದರೆ ಮಳೆನೀರು ಅಲ್ಲಿ ನಿಂತು ಗೊಬ್ಬರದ ಸತ್ವಗಳು ಹಾಳಾಗುತ್ತವೆ. ನೇರ ಬಿಸಿಲು ಬಿದ್ದರೂ ಗೊಬ್ಬರವನ್ನು ಕಳಿಯುವಂತೆ ಮಾಡುವ ಸೂಕ್ಷ್ಮಾಣುಗಳ ಚಟುವಟಿಕೆ ಉತ್ತಮವಾಗಿರುವುದಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಮಾಡಿದ್ದಾರೆ.

ಇಲ್ಲಿ ಅಡಕೆಯೊಂದಿಗೆ ತೆಂಗು ಸಹ ಪ್ರಧಾನ ಬೆಳೆಯಾದರೂ ಇದಕ್ಕೆ ಪ್ರತ್ಯೇಕವಾಗಿ ಗೊಬ್ಬರ ನೀಡದಿರುವುದು ಕೂಡ ಗಮನಾರ್ಹ ಸಂಗತಿ. ತೆಂಗಿನ ಬೇರುಗಳು ಮಣ್ಣಿನಾಳದಲ್ಲಿ ಬಹು ದೀರ್ಘ ಮತ್ತು ಬಲಿಷ್ಠವಾಗಿ ಬೆಳೆಯುತ್ತವೆ. ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಪಡೆದುಕೊಳ್ಳುತ್ತವೆ. ಅಡಿಕೆಗೆ ಒದಗಿಸುತ್ತಿರುವ ಮತ್ತು ತೋಟ ಫಲವತ್ತುಗೊಳಿಸಲು ನೀಡುತ್ತಿರುವ ಪೋಷಕಾಂಶಗಳನ್ನೇ ಬಳಸಿಕೊಂಡು ಇವು ಚೆನ್ನಾಗಿ ಬೆಳೆದಿವೆ.

ತೋಟದ ಮಣ್ಣಿನ ತೇವಾಂಶವನ್ನು ಸಾಧ್ಯವಾದಷ್ಟೂ ದೀರ್ಘಸಮಯ ಉಳಿಸಿಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ ಮುಚ್ಚಿಗೆ ವಿಧಾನ ಸಹಾಯಕ. ತೋಟದ ತ್ಯಾಜ್ಯಗಳನ್ನು ಇದಕ್ಕೆ ಬಳಸಿಕೊಳ್ಳುವುದು ಅಗತ್ಯ. ಇಲ್ಲಿ ಈ ವಿಧಾನವನ್ನೇ ಅನುಸರಿಸಲಾಗುತ್ತಿದೆ. ಅಡಿಕೆ ಮತ್ತು ತೆಂಗಿನ ಮರದ ತ್ಯಾಜ್ಯಗಳನ್ನು ಸಣ್ಣದಾಗಿ ಕತ್ತರಿಸುತ್ತಾರೆ. ಅವುಗಳನ್ನು ಈ ಮರಗಳ ಬುಡಗಳ ಸುತ್ತಲೂ ಹಾಕುತ್ತಾರೆ.

ಸ್ಲರಿ ಬಳಕೆ: ಮುಚ್ಚಿಗೆ ಕೆಳಭಾಗದಲ್ಲಿ ಉಪಯುಕ್ತ ಸೂಕ್ಷ್ಮಾಣುಗಳು ಅಭಿವೃದ್ಧಿ ಹೊಂದುತ್ತವೆ. ಇವುಗಳು ಮಣ್ಣಿನ ಫಲವತ್ತತೆ ಹೆಚ್ಚಿಸಲು ಮತ್ತು ಸಸ್ಯಗಳು ಶೀಘ್ರ ಬೆಳವಣಿಗೆ ಹೊಂದುವಂತೆ ಮಾಡುತ್ತವೆ. ಇದೇ ಮುಚ್ಚಿಗೆ ಮೇಲೆ ಸ್ಲರಿಯನ್ನು ತುಸು ಪ್ರಮಾಣದಲ್ಲಿ ಹಾಕಿದರೆ ತ್ಯಾಜ್ಯಗಳು ಶೀಘ್ರ ಕಳಿತು ಮಣ್ಣಿನಲ್ಲಿ ಮಿಶ್ರಣವಾಗುತ್ತವೆ. ಹೀಗೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಪ್ರಮಾಣ ವೃದ್ಧಿಸುತ್ತಲೇ ಹೋಗುತ್ತದೆ. ಇಂಥ ಅಂಶಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ.

ಈ ತೋಟದಲ್ಲಿ ಬಾಳೇಗಿಡಗಳು ಸಾಕಷ್ಟಿವೆ. ಇವುಗಳ ಬೆಳವಣಿಗೆಯೂ ಉತ್ತಮವಾಗಿದೆ. ಬಾಳೆಗೊನೆಗಳ ಇಳುವರಿ ಸಹ ಸಮೃದ್ಧವಾಗಿದೆ. ಇದಕ್ಕೆ ಕಾರಣ ಇವುಗಳಿಗೆ ಒದಗಿಸುತ್ತಿರುವ ಸಾವಯವ ಪೋಷಕಾಂಶವೇ ಆಗಿದೆ. ನಿಯಮಿತ ಪ್ರಮಾಣದಲ್ಲಿ ಸೂಕ್ತ ಹಂತಗಳಲ್ಲಿ ಪೋಷಕಾಂಶಗಳನ್ನು ಒದಗಿಸಲಾಗುತ್ತದೆ. ಇದರಲ್ಲಿ ಕೂಳೆಬೆಳೆಗಳನ್ನು ಕೂಡ ತೆಗೆದುಕೊಳ್ಳುತ್ತಿರುವುದು ಸಹ ಲಾಭಾಂಶದ ಪ್ರಮಾಣವನ್ನು ಹೆಚ್ಚಿಸಿದೆ.

ಸಸ್ಯಗಳ ಬೆಳವಣಿಗೆಗೆ ನಿಯಮಿತವಾಗಿ ಪೋಷಕಾಂಶ ಒದಗಿಸುವುದು ಹೇಗೆ ಅಗತ್ಯವೋ ಹಾಗೆ ನೀರು ಪೂರೈಕೆ ಮಾಡುವುದು ಅತ್ಯಗತ್ಯ. ಇದನ್ನು ಅನಿಮಿಯತವಾಗಿ ಮಾಡಿದರೆ ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತದೆ. ಇದಲ್ಲದೇ ನೀರು ನೀಡುತ್ತಿರುವ ವಿಧಾನವೂ ಅಗತ್ಯ. ಈ ಅಂಶಗಳನ್ನು ಅರಿತು ಇಲ್ಲಿ ಸೂಕ್ತ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ತೋಟದಲ್ಲಿ ನೀರಿನ ಮೂಲಗಳಾಗಿ ಎರಡು ಬಾವಿಗಳಿವೆ. ಇದರ ನೀರನ್ನು ತುಂತುರು ನೀರಾವರಿ ಮುಖಾಂತರ ಸಸ್ಯಗಳಿಗೆ ಒದಗಿಸುತ್ತಾರೆ.

ಮಳೆನೀರು ಕೊಯ್ಲು: ತೋಟದಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿರಲು ಮತ್ತು ತೆರೆದ ಬಾವಿಗಳ ನೀರಿನ ಮಟ್ಟ ಕುಸಿಯದಿರಲು ಮಳೆನೀರು ಕೊಯ್ಲು ಅತ್ಯಗತ್ಯ. ಮಳೆಬಿದ್ದ ದಿನಗಳಲ್ಲಿ ನೀರು ವ್ಯರ್ಥ್ಯವಾಗಿ ಹೊರಗೆ ಹರಿದು ಹೋಗಲು ಬಿಡಬಾರದು. ಇದರಿಂದ ತೋಟದ ಮೇಲ್ಮಣ್ಣು ಸಹ ಕೊಚ್ಚಿಕೊಂಡು ಹೋಗುತ್ತದೆ. ಈ ಅಂಶಗಳ ಬಗ್ಗೆ ಕೃಷಿಕ ಪ್ರಭಾಕರ್ ಬಹಳ ಮಹತ್ವ ನೀಡಿದ್ದಾರೆ.

ಇಲ್ಲಿ ಕೃಷಿಹೊಂಡಗಳನ್ನು ಎರಡು ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಒಂದು ಮಳೆನೀರು ಕೊಯ್ಲಿಗಾದರೆ ಎರಡನೇಯದು ಮೀನು ಸಾಕಣೆ. ಈ ಬಗ್ಗೆ ಹೆಚ್ಚಿನ ಗಮನ ಹರಿಸಿರುವ ಪ್ರಭಾಕರ್ ಒಳನಾಡಿನಲ್ಲಿ ಸಾಕಣೆ ಮಾಡಲು ಅನುಕೂಲವಾದ ಮತ್ತು ಶೀಘ್ರ ಬೆಳವಣಿಗೆ ಹೊಂದುವ ಮೀನಿನ ಮರಿಗಳನ್ನು ಹೊಂಡದಲ್ಲಿ ಬಿಟ್ಟು ಬೆಳೆಸುತ್ತಾರೆ. ಅವುಗಳ ಬೆಳವಣಿಗೆಗೆ ಸೂಕ್ತವಾದ ಆಹಾರ ಒದಗಿಸುತ್ತಾರೆ. ಒಮ್ಮೆ ಬೆಳವಣಿಗೆಯಾದ ಮೀನುಗಳ ಮಾರಾಟದ ನಂತರ ತುಸು ಬಿಡುವು ನೀಡುತ್ತಾರೆ. ಮತ್ತೆ ಮೀನು ಸಾಕಣೆ ಆರಂಭಿಸುತ್ತಾರೆ.

ಎಲ್ಲೆಡೆ ನಾಟಿಕೋಳಿಗಳಿಗೆ ಬಹುಬೇಡಿಕೆ ಇದೆ. ಇದನ್ನು ಮನಗಂಡಿರುವ ಕೃಷಿಕ ಪ್ರಭಾಕರ್ ಅವರು ನಾಟಿಕೋಳಿಗಳ ಅಭಿವೃದ್ಧಿ ಹೊಂದಿದ ತಳಿಗಳಾದ ಸ್ವರ್ಣಧಾರಾ ಹೆಸರಿನ ತಳಿಯ ಕೋಳಿಗಳನ್ನು ಸಾಕಣೆ ಮಾಡುತ್ತಿದ್ದಾರೆ. ಇವುಗಳ ವೈಶಿಷ್ಟ ಎಂದರೆ ರೋಗ ನಿರೋಧಕ ಶಕ್ತಿ. ಶೀಘ್ರವಾಗಿ ಬೆಳವಣಿಗೆ ಹೊಂದುವುದು ಮತ್ತು ಮಾರುಕಟ್ಟೆಯಲ್ಲಿ ದೊರೆಯುವ ಸಿದ್ಧ ಕೋಳಿ ಆಹಾರವನ್ನೇ ಒದಗಿಸಬೇಕಾದ ಅವಶ್ಯಕತೆ ಇಲ್ಲದಿರುವುದು

ಸ್ವರ್ಣಧಾರಾ ತಳಿ ಕೋಳಿಗಳು ತೋಟದಲ್ಲಿ ಸಿಗುವ ಹುಳುಹುಪ್ಪಟ್ಟೆಗಳನ್ನು ಹಿಡಿದು ತಿನ್ನುತ್ತವೆ. ಇದರಿಂದ ತೋಟದಲ್ಲಿ ಕೀಟಗಳ ಬಾಧೆಯೂ ನಿಯಂತ್ರಿತವಾಗುತ್ತದೆ. ಸ್ಥಳೀಯವಾಗಿ ಲಭ್ಯ ಇರುವ ಧಾನ್ಯಗಳ ನುಚ್ಚನೇ ಅವುಗಳಿಗೆ ನಿಯಮಿತವಾಗಿ ನೀಡಿದರೂ ಸಾಲುತ್ತದೆ. ಒಂದೊಂದು ಕೋಳಿಯೂ ಬಹುಶೀಘ್ರವಾಗಿ ಗರಿಷ್ಠ ಐದೂವರೆ ಕೆಜಿ ತನಕ ಬೆಳವಣಿಗೆ ಹೊಂದುತ್ತವೆ. ಇದರಿಂದ ಕೃಷಿಕರು ಹೆಚ್ಚಿನ ಲಾಭಾಂಶ ಪಡೆಯುವುದು ಸಾಧ್ಯವಿದೆ.

ತೋಟದಲ್ಲಿ ಹಂದಿ ಸಾಕಣೆಯನ್ನೂ ಮಾಡಲಾಗುತ್ತಿದೆ. ಹಂದಿಗಳನ್ನು ಖರೀದಿಸಲು ರಾಜ್ಯ ಸರ್ಕಾರದ ಪಶು ಸಂಗೋಪನೆ ಇಲಾಖೆ ನೆರವು ದೊರೆತಿದೆ. ಇವುಗಳ ಸಾಕಣೆಗಾಗಿ ಪ್ರತ್ಯೇಕ ದೊಡ್ಡಿ ನಿರ್ಮಾಣ ಮಾಡಲಾಗಿದೆ. ಉತ್ತಮವಾದ ಆಹಾರವನ್ನು ನಿಯಮಿತವಾಗಿ ನೀಡುತ್ತಿರುವುದರಿಂದ ಇವುಗಳ ಬೆಳವಣಿಗೆಯೂ ಅತ್ಯುತ್ತಮವಾಗಿದೆ. ಇವುಗಳಿಗೆ ಬೇಡಿಕೆಯೂ ಅಧಿಕವಾಗಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭಾಂಶ ಪಡೆಯಲು ಸಾಧ್ಯವಿದೆ.

ಹೆಚ್.ಎಫ್ ಮತ್ತು ಮಿಶ್ರತಳಿ ಹಸುಗಳನ್ನು ಸಾಕಣೆ ಮಾಡುತ್ತಿದ್ದಾರೆ. ಮುಖ್ಯವಾಗಿ ಕಾಂಪೋಸ್ಟ್ ಗೊಬ್ಬರ ಮಾಡುವ ಸಲುವಾಗಿ ಇವುಗಳನ್ನು ಸಾಕಣೆ ಮಾಡುತ್ತಿದ್ದಾರೆ. ಗೊಬ್ಬರ ದೊರೆಯುವುದರ ಜೊತೆಗೆ ಹಾಲಿನ ಮಾರಾಟದಿಂದ ಉತ್ತಮ ಲಾಭಾಂಶವೂ ದೊರೆಯುತ್ತಿದೆ. ಹಸುಗಳಿಗೆ ಸಾಂಕ್ರಮಿಕ ರೋಗಗಳು ಬಾಧಿಸದಂತೆ ಮುಂಜಾಗ್ರತೆಯಿಂದ ಲಸಿಕೆಗಳನ್ನು ಹಾಕಿಸಿದ್ದಾರೆ.

ಕೃಷಿಕ ಪ್ರಭಾಕರ್ ಅವರು ಮಾಡುತ್ತಿರುವ ಕೃಷಿ ಅಭಿವೃದ್ಧಿ ಕಾರ್ಯಗಳಿಗೆ ಅವರ ಕುಟುಂಬದವರ ಸಂಪೂರ್ಣ ಸಹಕಾರವಿದೆ. ಇವರ ಪತ್ನಿ ಸುಂದರಿ ಅವರು ಸದಾ ನೆರವಿನ ಹಸ್ತ ಚಾಚಿರುತ್ತಾರೆ. ಮಕ್ಕಳು ಸಹ ಬಿಡುವಿನ ವೇಳೆಯಲ್ಲಿ ತೋಟದ ಕಾರ್ಯ ಮಾಡಲು, ಜಾನುವಾರು ಸಾಕಣೆ ಮಾಡಲು ಸಹಾಯ ಮಾಡುತ್ತಾರೆ. ಇವೆಲ್ಲದರಿಂದ ಕೃಷಿವೆಚ್ಚವನ್ನು ತಗ್ಗಿಸಲು ಸಾಧ್ಯವಾಗಿದೆ.

LEAVE A REPLY

Please enter your comment!
Please enter your name here