ಅಂಗೈಯಲ್ಲಿ ಆರೋಗ್ಯ; ಚಕ್ರಮುನಿ ಸೊಪ್ಪು ನೀಡುವ ಶಕ್ತಿ ಅಪಾರ

0
ಚಕ್ರಮುನಿ ಸೊಪ್ಪಿನ ಗಿಡ

ಆರೋಗ್ಯವನ್ನು ವೃದ್ಧಿಸುವಲ್ಲಿ ಅನೇಕ ಗಿಡ ಮೂಲಿಕೆಗಳು ನಮ್ಮ ಅರಿವಿಗೆ ಬಾರದೆ ಉಳಿದುಕೊಂಡು ಬಿಡುತ್ತವೆ. ಪ್ರತಿದಿನ ಕಣ್ಣೆದುರು ಕಂಡರೂ ಅದರ ಔಷಧೀಯ ಗುಣ ಮಾತ್ರ ನಮಗೆ ಗೊತ್ತಿರುವುದಿಲ್ಲ. ಅಂತಹ ಒಂದು ಗಿಡ ಚಕ್ರಮುನಿ ಗಿಡ ( Chakramuni Plant – Multi Vitamin Plant ) ಇದನ್ನು ಸ್ಥಳೀಯವಾಗಿ ಅಥವಾ ಗ್ರಾಂಥಿಕವಾಗಿ ಬಿಪಿ ಸೊಪ್ಪು ಎಂತಲೂ ಕರೆಯುತ್ತಾರೆ. ಇದರ ಮೂಲ ಮಲೇ‍ಷಿಯಾ. ಆದರೂ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಕೆಲವು ಪ್ರಾಂತ್ಯದ ರೈತರು ಇದನ್ನು ವಾಣಿಜ್ಯ ಬೆಳೆಯಾಗಿಯೂ ಬೆಳೆಯುತ್ತಾರೆ. ಈ ಬಿಪಿ ಸೊಪ್ಪು ಅಥವಾ ಚಕ್ರಮುನಿ ಗಿಡದ ಎಲೆಗಳಲ್ಲಿ ಯಥೇಚ್ಛವಾದ ಪ್ರೋಟೀನ್‌, ವಿಟಾಮಿನ್‌ಗಳು ಮತ್ತು ಜೀವಸತ್ವಗಳು ಅಡಕವಾಗಿದೆ. ಹೇರಳವಾದ ಪೋಷಕಾಂಶಗಳನ್ನು ಹೊಂದಿರುವ ಇದನ್ನು ಮಲ್ಟಿ ವಿಟಾಮಿನ್‌ ಪ್ಲಾಂಟ್‌ ಎಂತಲೂ ಕರೆಯುತ್ತಾರೆ.

ಡಾ. ಮಹಾಂತೇಶ್‌ ಜೋಗಿ ಅವರು ಚಕ್ರಮುನಿ ಗಿಡದ ಬಳಿ ಅದರ ಮಹತ್ವದ ವಿವರಣೆ ನೀಡುತ್ತಿರುವುದು

ಚಕ್ರಮುನಿ ಸೊಪ್ಪಿನಲ್ಲಿ ಮಿಟಮಿನ್‌ ಎ,ಬಿ,ಸಿ ಮತ್ತು ಕೆ ವಿಫುಲವಾಗಿದ್ದು,ದೇಹದಲ್ಲಿನ ಜೀವಕೋಶಗಳ ಅಭಿವೃದ್ಧಿಗೆ, ಸ್ನಾಯುಗಳ ರಚನೆ ಮತ್ತು ಬೆಳವಣಿಗೆಗೆ ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮವಾದ ಮೂಲಿಕೆಯಾಗಿದೆ. ಇದರ ಆರೋಗ್ಯ ಗುಣಗಳ ಬಗ್ಗೆ ಇಲ್ಲೊಂದಿಷ್ಟು ಮಾಹಿತಿ ಇದೆ ತಿಳಿದುಕೊಳ್ಳಿ.

ಚಕ್ರಮುನಿ ಸೊಪ್ಪಿನ ಸೇವನೆಯಿಂದ ದೇಹದಲ್ಲಿ ರಕ್ತದ ಉತ್ಪತ್ತಿಯಾಗುತ್ತದೆ. ಹೀಗಾಗಿ ರಕ್ತದ ಕೊರತೆ ಇದ್ದವರಿಗೆ ಇದು ಉತ್ತಮ ಮೂಲಿಕೆಯಾಗಿದೆ. ಮಹಿಳೆಯರಿಗೆ ಇದು ಹೆಚ್ಚು ಉಪಯುಕ್ತ ಏಕೆಂದರೆ ಮುಟ್ಟಿನ ದಿನಗಳಲ್ಲಿ ಅಧಿಕ ರಕ್ತಸ್ರಾವವಾದರೆ ಈ ಸೊಪ್ಪಿನ ಸೇವನೆಯಿಂದ ಸರಿದೂಗಿಸಿಕೊಳ್ಳಬಹುದಾಗಿದೆ. ಈ ಸೊಪ್ಪನ್ನು ಚಟ್ನಿ, ಪಲ್ಯವನ್ನು ಮಾಡುವ ಮೂಲಕ ಬಳಸಬಹುದಾಗಿದೆ. ರಕ್ತವನ್ನು ಶುದ್ಧೀಕರಿಸಲು ಕೂಡ ಇದು ಉಪಯುಕ್ತವಾಗಿದೆ.

ಚಕ್ರಮುನಿ ಸೊಪ್ಪಿನ ಬಳಕೆಯಿಂದ ಮೂತ್ರಪಿಂಡಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದಾಗಿದೆ. ಈ ಸೊಪ್ಪಿನಲ್ಲಿರುವ ಜೀವಸತ್ವಗಳು ಮೂತ್ರಪಿಂಡದ ಸಮಸ್ಯೆಗಳನ್ನು ಪರಿಹರಿಸಲು ಸಹಾಯಕವಾಗಿದೆ. ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುವ ಮೂತ್ರಪಿಂಡದ ಕಲ್ಲು ಸೇರಿದಂತೆ ಹಲವು ಸಮಸ್ಯೆಗಳಿಗೆ ರಾಮಬಾಣವಾಗಿದೆ. ಹೀಗಾಗಿ ಚಕ್ರಮುನಿ ಸೊಪ್ಪನ್ನು ದಿನನಿತ್ಯದ ಅಡುಗೆಯಲ್ಲಿ ಬಳಸುವುದು ಹೆಚ್ಚು ಉಪಯುಕ್ತವಾಗಿದೆ.

ಚಕ್ರಮುನಿ ಗಿಡ

ಇತ್ತೀಚಿನ ದಿನಗಳಲ್ಲಿ ಸರಿಯಾದ ಆಹಾರ ಸೇವನೆ ಮಾಡದೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಚಕ್ರಮುನಿ ಸೊಪ್ಪು ಸಹಾಯಕವಾಗಿದೆ. ಅಲ್ಲದೆ ದೇಹದ ಉಷ್ಣತೆಯಿಂದ ಉಂಟಾಗುವ ಬಾಯಿಯ ಹುಣ್ಣುಗಳನ್ನು ನಿವಾರಿಸಲು ಈ ಸೊಪ್ಪು ಸಹಾಯಕವಾಗಿದೆ. ಚಕ್ರಮುನಿ ಸೊಪ್ಪಿನಲ್ಲಿ ಹೇರಳವಾದ ಕ್ಲೋರೋಫಿಲ್‌ ಅಂಶವಿದ್ದು ರಕ್ತಶುದ್ಧಿಗೆ ಸಹಾಯಕವಾಗಿದೆ. ಪದೇ ಪದೇ ಕಾಣಿಸಿಕೊಳ್ಳುವ ಶೀತ, ಕೆಮ್ಮಿನಂತಹ ಸಮಸ್ಯೆಗಳಿಂದ ದೂರವಿರಬಹುದು.

ಕೆಲವೊಮ್ಮೆ ದಂತ ಸಮಸ್ಯೆಯಿಂದ ಹಲ್ಲುಗಳ ನಡುವೆ ರಕ್ತಸ್ರಾವವಾಗುತ್ತದೆ. ಅದಕ್ಕೆ ಚಕ್ರಮುನಿ ಸೊಪ್ಪು ಉತ್ತಮ ಪರಿಹಾರವಾಗಿದೆ. ಹಲ್ಲು ನೋವಿಗೂ ಈ ಸೊಪ್ಪು ಉತ್ತಮ ಮನೆಮದ್ದಾಗಿದೆ. ಚಕ್ರಮುನಿ ಸೊಪ್ಪನ್ನು ಬಾಯಲ್ಲಿ ಹಾಕಿ ಜಗಿದರೆ ಹಲ್ಲು ನೋವು ಮತ್ತು ರಕ್ತಸ್ರಾವ ತಕ್ಷಣ ನಿಲ್ಲುತ್ತದೆ. ಅಲ್ಲದೆ ದಂತ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ. ಸುಲಭವಾಗಿ ಸಿಗುವ ಈ ಸೊಪ್ಪಿನಿಂದ ಹಲ್ಲಿನ ಆರೋಗ್ಯವನ್ನು ಉತ್ತಮಗೊಳಿಸಿಕೊಳ್ಳಬಹುದಾಗಿದೆ.

ಚಕ್ರಮುನಿ ಸೊಪ್ಪು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ ಸದಾಕಾಲ ಕಿರಿಕಿರಿ ಉಂಟುಮಾಡುವ ಸಂಧಿವಾತವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಚಕ್ರಮುನಿ ಸೊಪ್ಪಿನ ಶಾಖ ನೀಡಿದರೆ ಕೆಲವೇ ದಿನಗಳಲ್ಲಿ ಸಂಧಿವಾತವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಈ ಸೊಪ್ಪಿನ ಸೇವನೆಯಿಂದ ಕ್ಯಾನ್ಸರ್‌ ಕಾರಕ ಜೀವಕೋಶಗಳ ಬೆಳವಣಿಗೆಯನ್ನು ತಡೆಯಬಹುದಾಗಿದೆ. ಆದ್ದರಿಂದ ಈ ಸೊಪ್ಪು ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.
ಲೇಖಕರು: ಡಾ. ಮಹಾಂತೇಶ್‌ ಜೋಗಿ, ಡಾ. ವಾಸುದೇವ ನಾಯ್ಕ್‌, ಡಾ. ರಾಜು ತೆಗ್ಗಳ್ಳಿ, ಡಾ. ಶ್ರೀನಿವಾಸ್‌ ಬಿ.ವಿ., ಕೃಷಿ ಕಾಲೇಜು, ಕಲ್ಬುರ್ಗಿ

ಹೆಚ್ಚಿನ ಮಾಹಿತಿಗೆ: 8105453873

LEAVE A REPLY

Please enter your comment!
Please enter your name here