
ಹೌದು ಕಾಫಿಗೆ ಉತ್ತಮ ಬೆಲೆ ಬಂದಿದೆ. ಆದರೆ ಪತ್ರಿಕೆಯವರು ಮತ್ತು ಇನ್ನೂ ಕೆಲವರು ಹೇಳುವಂತೆ ಹುಚ್ಚು ಬೆಲೆ ಅಲ್ಲ. ಬ್ರೆಜಿಲ್, ವಿಯೆಟ್ನಾಂ ಸೇರಿದಂತೆ ಎಲ್ಲ ಕಡೆ ಕಡಿಮೆ ಬೆಳೆಯಾಗಿರುವುದು ಮತ್ತು ಡಾಲರ್ ಎದುರು ರೂಪಾಯಿ ಬೆಲೆ ಇಳಿದಿರುವುದು ಸೇರಿ ಕಾಫಿಗೆ ಈಗಿನ ಬೆಲೆ ಬಂದಿದೆ
ಕಾಫಿಗೆ ಹುಚ್ಚು ಬೆಲೆ ಬಂದದ್ದು ಒಮ್ಮೆ 1994 ಸಮಯದಲ್ಲಿ. ಆಗ ಕೆಲವರು ಬೆಳೆಗಾರರೂ ತಲೆ ಕೆಟ್ಟವರಂತೆ ಖರ್ಚು ಮಾಡಿ ಮತ್ತೆ ಸೋತಿದ್ದರು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಅಂದಿನ ಪೀಳಿಗೆಯವರು ಹಿಂದೆ ಸರಿದು ಯುವಕರು ಕಾಫಿ ಬೆಳೆಯಲ್ಲಿ ಇದ್ದಾರೆ. ಅವರು ಖಂಡಿತವಾಗಿಯೂ ಹೆಚ್ಚು ಎಚ್ಚರಿಕೆಯಿಂದ ಇದ್ದಾರೆ. ತೋಟಗಳ ಅಭಿವೃದ್ಧಿಯತ್ತ ಗಮನ ಕೊಟ್ಟಿದ್ದಾರೆ. ಇದು ಒಳ್ಳೆಯ ಅಂಶ.

1973 – 74 ರಲ್ಲಿ ಕಾಫಿಬೋರ್ಡ್ ಇತ್ತು. ಆಗೊಮ್ಮೆ ಇದಕ್ಕೆ ಸಮಾನವಾದ ಬೆಲೆ ಬಂದಿತ್ತು. ಆಗ ಬೋರ್ಡ್ ಇದ್ದುದರಿಂದ ಕಾಫಿಯ ಹಣ ಕಂತುಗಳಲ್ಲಿ ಬರುತ್ತಿತ್ತು, ಒಂದೇ ವರ್ಷ ಎಲ್ಲಾ ಹಣ ಬೆಳೆಗಾರರ ಕೈಸೇರುತ್ತಿರಲಿಲ್ಲ.
ಈಗ ಒಳ್ಳೆಯ ಬೆಲೆ ಬಂದಿದೆ. ಕಳೆದ ಕೆಲವು ವರ್ಷಗಳಿಂದ ಕಾಫಿ ಕೃಷಿಕರು ಸೋತು ಹೋಗಿದ್ದರು. ಮೆಣಸಿದ್ದವರಿಗೆ ಮಾತ್ರ ತೋಟದಿಂದ ಬದುಕು ಸಾಧ್ಯ ಎನ್ನುವ ಪರಿಸ್ಥಿತಿ ಇತ್ತು. ಈಗ ಮೆಣಸು ಹೆಚ್ಚೂ ಕಡಿಮೆ ನಾಶವಾಗುವ ಹಂತಕ್ಕೆ ಬಂದಿರುವಾಗ ಕಾಫಿ ಬೆಲೆ ಚೇತರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕೃಷಿ ಯಂತ್ರಗಳ ಕೊಳ್ಳುವಿಕೆ ಅತಿಹೆಚ್ಚು ಕಂಡುಬರುತ್ತಿದೆ. ನೀರಾವರಿ ಯಂತ್ರ ಗಳು, ಪೈಪುಗಳಿಗೂ ಹೆಚ್ಚಿನ ಬೇಡಿಕೆ ಉಂಟಾಗಿದೆ. ತೋಟಕ್ಕೆ ಸುಣ್ಣ ಹಾಕುವವರ ಸಂಖ್ಯೆ ಜಾಸ್ತಿ ಆಗಿದೆ. ಕೆಲವರು ಮನೆ ಕಟ್ಟುತ್ತಿದ್ದಾರೆ.
ಹಾಗೆಯೇ ಕಾರ್ಮಿಕರ ಕೂಲಿ ಹೆಚ್ಚಳವಾಗಿದೆ. ಇದು ಸಹಜ ಅವರ ದುಡಿಮೆಯ ಪಾಲು ಅವರಿಗೆ ದಕ್ಕಬೇಕು. ಕೂಲಿ ಕಾರ್ಮಿಕರು ಸರಿಯಾಗಿ ದುಡಿಯುವುದಿಲ್ಲ ಎನ್ನುವುದು ದಶಕಗಳಿಂದ ಕೇಳಿಬರುವ ಮಾತು. ಆದರೆ ಯಾರ ತೋಟವೂ ಹಾಳು ಬಿದ್ದಿಲ್ಲ. ಹಾಗೇನಾದರೂ ಆಗಿದ್ದರೆ ಅದಕ್ಕೆ ಬೇರೆ ಕಾರಣಗಳು ಇವೆ .ಅದು ಮುಖ್ಯವಾಗಿ ಕಾರ್ಮಿಕರ ಕೊರತೆ ಯಿಂದ ಎನ್ನಬಹುದು
ಕಾಫಿ ಬೆಳೆಯಲ್ಲಿ ಮುಖ್ಯವಾಗಿ ಎರಡು ವಿಧ. ರೊಬಸ್ಟ ಮತ್ತು ಅರೆಬಿಕಾ. ರೊಬಸ್ಟ್ ಗಟ್ಟಿ ಯಾದ ತಳಿ ಹೆಚ್ಚಿನ ರೋಗ,ತೊಂದರೆಗಳು ಇಲ್ಲ ಎಂಟು ವರ್ಷ ಚೆನ್ನಾಗಿ ಸಾಕಿದರೆ ನೂರು ವರ್ಷ ಉಳಿಯಬಲ್ಲದು. ಆದರೆ ಹೂವು ಮತ್ತು ಫಸಲಿನಲ್ಲಿ ಬಹು ಸೂಕ್ಷ್ಮ. ಸರಿಯಾದ ಸಮಯಕ್ಕೆ ಅಂದರೆ ಫೆಬ್ರವರಿ 15 ರಿಂದ ಮಾರ್ಚ್ 15 ನಡುವೆ ಮಳೆ ಅಥವಾ ನೀರಾವರಿ ದೊರೆತರೆ ಒಳ್ಳೆಯ ಹೂವಾಗುತ್ತದೆ. ಹೂವಾದರೆ ಸಾಲದು; ಹೂ ಅರಳುವಾಗ ಜೇನ್ನೊಣಗಳು ಇಲ್ಲವೇ ಒಳ್ಳೆಯ ಗಾಳಿ ಅಥವಾ ಕೆಲವು ಜಾತಿಯ ಇರುವೆ ಕೀಟಗಳು ಬೇಕು. ಹಾಗಾದರೆ ಚೆನ್ನಾಗಿ ಕಾಯಿ ಕಟ್ಟುತ್ತದೆ. ಯಾಕೆಂದರೆ ರೊಬಸ್ಟ ಶೇ ಕಡ ನೂರರಷ್ಟು ಪರಕೀಯ ಪರಾಗ ಸ್ಪರ್ಷ ದ ತಳಿ.

ಅರೆಬಿಕಾ ತಳಿ ಎರಡೂ ರೀತಿಯಲ್ಲಿ ಪರಾಗಸ್ಪರ್ಶ ವಾಗಿ ಕಾಯಿ ಕಟ್ಟ ಬಲ್ಲದು ಮತ್ತು ಮೇ ಕೊನೆಯ ತನಕ ಅದಕ್ಕೆ ಹೂವಾಗುವ ಸಮಯ ಇದೆ. ಆದರೆ ಹವಾಮಾನ ವೈಪರೀತ್ಯಗಳಿಂದ ಅರೆಬಿಕಾ ತೋಟಗಳು ಸಂಪೂರ್ಣ ನಾಶವಾಗುವ ಕಡೆಗೆ ಸಾಗಿವೆ.
ರೊಬಸ್ಟ ಈಗ ಅಂದರೆ ಮಾರ್ಚ್ ನಲ್ಲಿ ಹೂವಾದರೆ ಮುಂದಿನ ಜನವರಿ ಯಲ್ಲಿ ಕೊಯ್ಲಿಗೆ ಬರುತ್ತದೆ ( ಹತ್ತು ತಿಂಗಳ ಬೆಳೆ) ಕೊಯ್ಲು ಆದ ಕೂಡಲೇ ಮರಗಸಿ ಅಂದರೆ ನೆರಳಿನ ನಿಯಂತ್ರಣ ಮಾಡಬೇಕು. ರೊಬಸ್ಟಕ್ಜೆ ಚದುರಿದ ನೆರಳು ಸಾಕು. ಹೆಚ್ಚು ನೆರಳಿದ್ದರೆ ಫಸಲು ಬರುವುದಿಲ್ಲ. ಗಿಡ ಕಸಿ ಅಂದರೆ ಪ್ರೂನಿಂಗ್ ಆಗಬೇಕು. ಸುಣ್ಣ ಹಾಕುವುದಿದ್ದರೆ ಹಾಕಬೇಕು. ನಂತರ ಮಳೆಯನ್ನೇ ನಂಬುವುದು ಕಷ್ಟ ಅಲ್ಪಸ್ವಲ್ಪ ಮಳೆ ಬಂದರೆ ಮೊಗ್ಗು ಕರಟಿಹೋಗುತ್ತದೆ. ಆದ್ದರಿಂದ ಸಾಧ್ಯ ವಾದವರೆಲ್ಲ ತುಂತುರು ( ಸ್ಪಿಂಕ್ಲರ್ ) ನೀರಾವರಿ ಗೆ ಆದ್ಯತೆ ಕೊಡುತ್ತಾರೆ.
ಒಮ್ಮೆ ನೀರು ಕೊಟ್ಟರೆ ಸಾಲದು ಮತ್ತೆ ಮಳೆ ಬರುವ ತನಕ ಹತ್ತು ಹನ್ನೆರಡು ದಿನಗಳಿಗೊಮ್ಮೆ ನೀರು ಕೊಡದಿದ್ದರೆ ಹೀಚು ಉದುರುತ್ತದೆ. ಮಳೆ ಬಂತೋ ಗೊಬ್ಬರ ಹಾಕುವ ಕೆಲಸ. ಇದೆಲ್ಲ ಕೆಲಸಗಳಿಂದ ಕಾಫಿ ಕೃಷಿಕರಿಗೆ ದೊಡ್ಡ ಮಳೆಗಾಲ ಮಾತ್ರ ಸ್ವಲ್ಪ ಬಿಡುವು.
ಮುಖ್ಯವಾಗಿ ಗಮನಿಸಬೇಕಿರುವುದು ಕಾಫಿಗೆ ಬೆಲೆ ಬಂದಾಗ ಹಿಂದೆ ಕಾಣುತ್ತಿದ್ದ ಹುಚ್ಚಾಟ ಈಗ ಖಂಡಿತ ಇಲ್ಲ ! ದಾರಿಯುದ್ದಕ್ಕೂ ತೋಟಗಳಲ್ಲಿ ಹೂ ಕಾಣಿಸುತ್ತದೆ. ನೀರಿಲ್ಲದ್ದರೆ ಪಕ್ಕದವರಿಗೆ ಹಣ ಕೊಟ್ಟು ನೀರು ಪೂರೈಸುತ್ತಾರೆ. ಕಾಫಿ ಹೂವು ಅರಳಿದಾಗ ಕೃಷಿಕರ ಮುಖವೂ ಈಗ ಅರಳುತ್ತಿದೆ. ಈ ಅರಳುವಿಕೆ ಸುಸ್ಥಿರವಾಗಿ ಇರಲಿ ಎಂಬುದೇ ಎಲ್ಲರ ಹಾರೈಕೆ