ತೋಟಗಳನ್ನು ಇಳಿಸಂಜೆಯ ಬಿಸಿಲಿನಿಂದ ರಕ್ಷಿಸೋಣ

0

ಜಗತ್ತಿನ ಶಕ್ತಿಯೇ ಸೂರ್ಯಕಿರಣ, ಇದರ ಕಾಸ್ಮಿಕ್ ಕಿರಣಗಳಿಂದ ಭೂಮಿಯ ಸಕಲ ಜೀವರಾಶಿಗಳೂ ಚೈತನ್ಯ ಪಡೆಯುತ್ತವೆ. ಈ ಕಿರಣಗಳ ಗರಿಷ್ಠ ಪ್ರಯೋಜನ ಪಡೆಯಬೇಕೆಂದರೆ ಇದರ ಸಂಪರ್ಕ ಪಡೆಯಬೇಕಾಗುತ್ತದೆ.  ಕೃಷಿಯಲ್ಲಿ ಇದರ ಸದುಪಯೋಗ ಬಹುಮಹಡಿ ಪದ್ಧತಿಯಿಂದ ದೊರೆಯುತ್ತದೆ.

ಎಲ್ಲ ಗಿಡಮರಗಳಿಗೂ ಒಂದೇ ಪ್ರಮಾಣದ ಸೂರ್ಯಶಕ್ತಿ ಆಗತ್ಯ ಇರುವುದಿಲ್ಲ. ಕೆಲವು ಸಸ್ಯಗಳಿಗೆ ಹೆಚ್ಚು: ಕೆಲವು ಸಸ್ಯಗಳಿಗೆ ಕಡಿಮೆ ಬೇಕಾಗುತ್ತದೆ, ಅನಾದಿ ಕಾಲದಿ೦ದಲೂ ಭಾರತೀಯ ಕೃಷಿಕರು ಇವುಗಳನ್ನೆಲ್ಲ ಅಧ್ಯಯನ ಮಾಡಿ, ಬಹುಮಹಡಿ ಕೃಷಿ ಪದ್ಧತಿಯನ್ನು ವಿನ್ಯಾಸಗೊಳಿಸಿ,  ಅಭಿವೃದ್ಧಿಪಡಿಸಿದ್ದಾರೆ.

ಮಲೆನಾಡಿನಲ್ಲಿ ಅಡಿಕೆ, ಬಾಳೆ, ಕರಿಮೆಣಸು, ಏಲಕ್ಕಿ ಮತ್ತು ಕೆಲವು ಔಷಧ ಸಸ್ಯಗಳಾದ ಪಚೋಲಿ, ಹಿಪ್ಪಲಿ ಇತ್ಯಾದಿ ಬಹಳ ಉತ್ತಮವಾಗಿ ಬೆಳವಣಿಗೆಯಾಗುತ್ತವೆ. ಬಯಲು ಸೀಮೆಯಲ್ಲಿ ದಾನ್ಯಗಳ ಜೊತೆಗೆ ಹರಳು, ತೋಟಗಾರಿಕೆ ಬೆಳೆಗಳ ಜೊತೆಗೆ ಧಾನ್ಯದ ಬೆಳೆಗಳನ್ನೂ ಬೆಳೆಯಬಹುದು. ಮಿಶ್ರಬೆಳೆ ಎಂದು ನಾವು ಏನು ಕರೆಯುತ್ತೇವೆಯೋ ಅದು ಕೂಡ ಬಹುಮಹಡಿ ಕೃಷಿಪದ್ಧತಿಗೆ ಹೊಂದಿಕೊಂಡಿದೆ

ಪಪ್ಪಾಯಿ, ಸಪೋಟಾ, ಮಾವು, ಸೀಬೆ ಬೆಳೆಗಳ ಮಧ್ಯೆ ಸಹ ಬೇರೆಬೇರೆ ಬೆಳೆಗಳನ್ನು ಬೆಳೆಯ ಬಹುದು. ಮುಖ್ಯವಾಗಿ ನಾವು ಗಮನಿಸಬೇಕಾಗಿರುವುದು ಹಲವು ಹಂತಗಳಲ್ಲಿ ಕಾಸ್ಮಿಕ್ ಕಿರಣಗಳ ಪ್ರಯೋಜನ ಪಡೆಯುವುದು ಸಾಧ್ಯ ಆಗದೇ ಇದ್ದಾಗ ಈ ಕಿರಣಗಳು ಗರಿಷ್ಟ ಪ್ರಮಾಣದಲ್ಲಿ ಮಣ್ಣಿಗೆ ನೇರವಾಗಿ ತಾಕುತ್ತವೆ. ಇದರಿಂದ ಅವುಗಳ ಹೆಚ್ಚಿನ ಶಕ್ತಿ ವ್ಯಯವಾಗುತ್ತದೆ. ಇದನ್ನು ತಡೆಗಟ್ಟಲು ಪ್ರಯತ್ನಿಸ ಬೇಕು. ಎಷ್ಟೇ ಪ್ರಯತ್ನಿಸಿದರೂ ನೂರಕ್ಕೆ ನೂರರಷ್ಟು ತಡೆಯಲು ಆಗುವುದಿಲ್ಲ,

ಬಹುಮಹಡಿ ಕೃಷಿ ಪದ್ಧತಿ ಅನುಸರಿಸಿದ ಸಂದರ್ಭದಲ್ಲಿ ಕಾಸ್ಮಿಕ್ ಕಿರಣಗಳ ಗರಿಷ್ಠ ಪ್ರಯೋಜನ ಪಡೆಯಲು ಸಾಧ್ಯ.  ಏಕಬೆಳೆ ಪದ್ಧತಿ ಅನುಸರಿಸಿದಾಗ ಇದರ ಬಳಕೆ ಸಾಧ್ಯ ಆಗುವುದಿಲ್ಲ ಪೂರ್ವಾಹ್ನದ ಸೂರ್ಯ ಕಿರಣಗಳಿಂದ ದೊರೆಯುವ ಪ್ರಯೋಜನ ಅಪರಾಹ್ನ, ಸಂಜೆ ಅಥವಾ ಇಳಿಬಿಸಿಲಿನ ಕಿರಣಗಳಿಂದ ದೊರೆಯುವುದಿಲ್ಲ, ಇವುಗಳ ದುಷ್ಪರಿಣಾಮ ಸಸ್ಯಗಳ  ಮೇಲೆ ಉಂಟಾಗುತ್ತದೆ.  ಈ ಕಾರಣದಿಂದಲೇ ಭಾರತೀಯ ಕೃಷಿಕರು ಪಶ್ಚಿಮ ದಿಕ್ಕಿನಲ್ಲಿ ಗಿಡಮರಗಳನ್ನು ಬೆಳೆಸುವುದನ್ನು ರೂಢಿಸಿಕೊಂಡರು.

ವಿಶೇಷವಾಗಿ ಕೆಲವಾರು ಗಿಡ-ಮರಗಳಿಗೆ ಬಿಸಿಲಿನ ದುಷ್ಪರಿಣಾಮ ತಡೆಗಟ್ಟುವ ಶಕ್ತಿ ಇದೆ. ಅಲಂಕಾರಕ್ಕೆ ಬೆಳೆಸುವ ಆಶೋಕ ವೃಕ್ಷವನ್ನು ಬೇಲಿಯಲ್ಲಿ ಬೆಳೆಸಬಹುದು. ಇವುಗಳು   ಇಳಿಬಿಸಿಲಿನ ದುಷ್ಪರಿಣಾಮದಿಂದ ಇತರ ಸಸ್ಯಗಳು ಬಳಲದಂತೆ ತಡೆಯುವ ದಟ್ಟವಾದ ಪರದೆ. ಈ ವೃಕ್ಷಗಳನ್ನು ಹತ್ತಿರ ಹತ್ತಿರದಲ್ಲಿ ಬೆಳೆಸಬಹುದು, ಅಡಿಕೆ, ಕಾಫಿ ಬಾಳೆ ಇತ್ಯಾದಿಗಳಿರುವ ತೋಟದ ಪಶ್ಚಿಮ ದಿಕ್ಕಿನಲ್ಲಿ ಬೇಲಿಯಾಗಿ ಬೆಳೆಸಲು ಅಶೋಕ ಗಿಡಗಳು ಸೂಕ್ತ.

ಅಡಕೆ, ಕಾಫಿ ಬೆಳೆಗಳಿಗೆ ಇಳಿಬಿಸಿಲಿನ ಪ್ರಖರತೆಯಿಂದ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗುತ್ತದೆ. ಇವುಗಳ ಕಾಂಡ ಕತ್ತರಿಸಿ ತೆಗೆದಂತೆ ಸೀಳುತ್ತದೆ. ನೆರಳು ನೀಡುವಂಥ ಮರಗಳನ್ನು ಪಶ್ಚಿಮ ದಿಕ್ಕಿನಲ್ಲಿ ಬೆಳೆಸಿರದಿದ್ದರೆ ಈ ಸಸ್ಯಗಳ ಕಾಂಡಗಳಿಗೆ ದಟ್ಟವಾಗಿ ಬಿಳಿಸುಣ್ಣ ಹಚ್ಚುವುದು ಕೂಡ ಸೂಕ್ತ ಪರಿಹಾರ ಕ್ರಮ

ಬಿಳಿಬಣ್ಣಕ್ಕೆ  ಇಳಿ ಬಿಸಿಲಿನ ಶಾಖ ಹೀರಿಕೊಳ್ಳದೆ ಇರುವ ಗುಣ ಇದೆ. ಬೇರೆ ಯಾವ ಬಣ್ಣಬಳಿದರೂ ಪ್ರಯೋಜನ ಇಲ್ಲ, ಗೋಣಿಮರವನ್ನು ಜಮೀನ ತೋಟದ ಪಶ್ಚಿಮ ದಿಕ್ಕಿನಲ್ಲಿ ಬೆಳೆಸುವುದರಿಂದಲೂ ಇಳಿ ಬಿಸಿಲಿನ ಪ್ರಖರತೆ ತಡೆಯಬಹುದು. ಸಿಲ್ವರ್ ಓಕ್ ಮರ, ಗಾಳಿಮರ ಕೂಡ ಸೂಕ್ತ, ಗಾಳೆಮರದಿಂದ ಮತ್ತಷ್ಟು ಪ್ರಯೋಜನ ಇದೆ. ಇದರ ಎಲೆಗಳಲ್ಲಿ ಪೊಟ್ಯಾಷ್ ಅಂಶ ಇದೆ. ಆದ್ದರಿಂದ ಈ ಮರದಿಂದ ಉದುರಿದ ಎಲೆಗಳನ್ನು ಇತರ ಸಸ್ಯಗಳಿಗೆ ಮುಚ್ಚಿಗೆಯಾಗಿ ನೀಡಿದಾಗ ಅವುಗಳಿಗೆ ಸಹಜವಾಗಿ ಪೊಟ್ಯಾಷ್ ದೊರೆತಂತೆ ಆಗುತ್ತದೆ.

ಜಲ ಸಂರಕ್ಷಣೆ
ಇಳಿಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಸಸ್ಯಗಳಿಗೆ ಹೆಚ್ಚಿನ ನೀರು ಅಗತ್ಯವಾಗುತ್ತದೆ. ಆದ್ದರಿಂದ ಅವುಗಳು ತಮ್ಮಲ್ಲಿ ಅಪತ್ಕಾಲಕ್ಕೆ ಕೂಡಿಟ್ಟುಕೊಂಡ ಜಲವನ್ನು ಬಳಸಿಕೊಳ್ಳುತ್ತವೆ. ತೋಟಗಳನ್ನು ಇಳಿಬಿಸಿಲಿನಿಂದ ರಕ್ಷಿಸುವ ಕ್ರಮ ಅನುಕರಿಸಿದಾಗ ಅವುಗಳ ನೀರಿನ ಬಳಕೆ ಗಣನೀಯವಾಗಿ ಕಡಿಮೆಯಾಗುತ್ತದೆ. ಇದಲ್ಲದೇ ತೋಟ ಸದಾ ತಂಪಾಗಿರುತ್ತದೆ.

LEAVE A REPLY

Please enter your comment!
Please enter your name here