ಪ್ರಸ್ತುತ RCEP ಒಪ್ಪಂದಕ್ಕೆ ಭಾರತ ಸಹಿ ಹಾಕಿಲ್ಲ. ಆದರೆ ಸಹಿ ಹಾಕುವುದೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿಲ್ಲ. ಇದರಿಂದ ಅಪಾಯದ ತೂಗುಕತ್ತಿ ನೆತ್ತಿಯ ಮೇಲಿದೆ ಎಂಬ ಭೀತಿಯೂ ಇದೆ. ಒಂದು ವೇಳೆ ದೇಶವಿರುವ ಆರ್ಥಿಕ ಸಾಮರ್ಥ್ಯದ ಸ್ಥಿತಿಯಲ್ಲಿ ಈ ಒಪ್ಪಂದಕ್ಕೇನಾದರೂ ಒಪ್ಪಿಕೊಂಡರೆ ಏನೆಲ್ಲ ಆಗಬಹುದು ಎಂಬುದನ್ನು ಲೇಖಕರು ಪರಿಪರಿಯಾಗಿ ವಿವರಿಸಿದ್ದಾರೆ. ಮುಕ್ತ ವ್ಯಾಪಾರ ನೀತಿಯಿಂದ ಅಮೆರಿಕಾದಂಥ ಆರ್ಥಿಕ ಬಲಿಷ್ಠ ರಾಷ್ಟ್ರದಲ್ಲಿ ಉಂಟಾಗಿರುವ ಸ್ಥಿತಿಯನ್ನೂ ವಿವೇಚಿಸಿದ್ದಾರೆ.

ಲೇಖಕರು: ಬಸವರಾಜು ಬಿ.ಸಿ.

ಚೈನಾದಿಂದ 2000ನೇ ಇಸವಿಯಿಂದೀಚೆಗೆ ಅಮೆರಿಕಾ ರಾಷ್ಟ್ರಕ್ಕೆ ಪಾದರಕ್ಷೆಗಳು, ನೀರು ನಿರೋಧಕ ಉಡುಪುಗಳು ನಿರಂತರವಾಗಿ, ಅನಿಯಮಿತ ಪ್ರಮಾಣದಲ್ಲಿ ರಫ್ತಾಗುತ್ತಿವೆ. ಮಾರುಕಟ್ಟೆಯಲ್ಲಿ ಅಗ್ಗದಲ್ಲಿ ದೊರೆಯುವ ಈ ಉತ್ಪನ್ನಗಳಿಗೆ ಸರಿಸಮವಾದ ಬೆಲೆಯಲ್ಲಿ ಅಥವಾ ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ನೀಡಲಾಗದ ಕಾರಣ ಅಲ್ಲಿನ ಸ್ಥಳೀಯ ಕಂಪನಿಗಳು ಬಸವಳಿದಿವೆ.
ಇದರ ಪರಿಣಾಮವಾಗಿ 2000 ಮತ್ತು 2012 ರ ನಡುವೆ ಅಮೆರಿಕಾದ ಬ್ರೂಸ್ಟನ್, ಟೆನಿಸಿ ಮತ್ತು ಮೆಕೆಂಜಿ ನಗರಗಳಲ್ಲಿದ್ದ ಪಾದರಕ್ಷೆ ಮತ್ತು ನೀರು ನಿರೋಧಕ ಉಡುಪು ತಯಾರಿಕಾ ಕಾರ್ಖಾನೆಗಳು ನಷ್ಟಕ್ಕೀಡಾಗಿ ಬಾಗಿಲು ಮುಚ್ಚಿದವು. ಇಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಕಾರ್ಮಿಕರು ನಿರುದ್ಯೋಗಿಗಳಾದರು. ಇಂಥ ಸಂದರ್ಭಗಳಲ್ಲಿ ಇಂಥವರಿಗೆ ನೆರವಾಗುವ ಅಲ್ಲಿಯ TAA ( Trade Adjustment Assistance) ವ್ಯವಸ್ಥೆಯೂ ಬದುಕು ಕಟ್ಟಿಕೊಳ್ಳಲು ನೆರವಾಗಲು ವಿಫಲವಾಗಿವೆ.
ಹೀಗೆ ಲಕ್ಷಾಂತರ ಮಂದಿ ನಿರುದ್ಯೋಗಿಗಳಾದ ಪರಿಣಾಮ ಅವರೆಲ್ಲ ಕೆಲಸ ಮಾಡುತ್ತಿದ್ದ ಸ್ಥಳಗಳಲ್ಲಿದ್ದ ಹೋಟೆಲುಗಳು, ಶಾಪಿಂಗ್ ಮಳಿಗೆಗಳು, ಇನ್ನಿತರ ವ್ಯಾಪಾರ ಕೇಂದ್ರಗಳು ಕ್ರಮೇಣ ಮುಚ್ಚಿಹೋಗಿವೆ. ಚೈನಾ ಉತ್ಪನ್ನಗಳ ಬೆಲೆ ಜೊತೆ ಸ್ಪರ್ಧಿಸಲಾರದ ಬೇರೆಬೇರೆ ಸ್ಥಳೀಯ ಕಂಪನಿಗಳು ಸಹ ಕಾಲಕಾಲಕ್ಕೆ ತಮ್ಮ ಕಾರ್ಮಿಕರ ಸಂಬಳ-ಸಾರಿಗೆ ಪರಿಷ್ಕರಿಸಲಾಗದೇ ಬಸವಳಿದಿವೆ. ಇಂಥವುಗಳಲ್ಲಿ ಸಾಕಷ್ಟು ಕಂಪನಿಗಳು ಮುಚ್ಚಿಹೋದ ಕಾರಣ ಬಿಕೋ ಎನ್ನುತ್ತಿರುವ ಈ ನಗರಗಳನ್ನು ಅರ್ಥಶಾಸ್ತ್ರಜ್ಞರು ದೆವ್ವಗಳ ನಗರ ಎಂದು ಕರೆಯುವ ದುಸ್ಥಿತಿ ಉಂಟಾಗಿದೆ.


ಇದೆಲ್ಲಿ ಆಗಿದ್ದು ಎಲ್ಲಿ? ವಿಶ್ವದ ಸೂಪರ್ ಎಕನಾಮಿಕ್ ಪವರ್ ಎನಿಸಿರುವ ಅಮೆರಿಕಾದಲ್ಲಿ. ಇವತ್ತು ಅಲ್ಲಿನ ನಾಮಿನಲ್ ಜಿಡಿಪಿ 20.7 ಟ್ರಿಲಿಯನ್ ಡಾಲರುಗಳು. ಅದೇ ಭಾರತದ್ದು ಕೇವಲ 2.72 ಟ್ರಿಲಿಯನ್ ಡಾಲರುಗಳು. ಇದರ ಹಿನ್ನೆಲೆಯಲ್ಲಿ ಯೋಚನೆ ಮಾಡಲೇಬೇಕಿದೆ. ಆರ್ಥಿಕ ಶಕ್ತಿಶಾಲಿ ಎನಿಸಿರುವ ದೇಶವೇ ಚೈನಾ ಉತ್ಪನ್ನಗಳ ಹೊಡೆತದಿಂದ ತನ್ನ ಉದ್ಯಮಗಳನ್ನು ಮತ್ತು ಅಲ್ಲಿಯ ಕಾರ್ಮಿಕರನ್ನೂ ರಕ್ಷಿಸಲು ಆಗಿಲ್ಲ. ಹೀಗಿರುವಾಗ ಭಾರತಕ್ಕೆ RCEP ಆಘಾತವನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆಯೇ ?

ಈ ಆಸಿಯಾನ್, ಜಪಾನ್, ದಕ್ಷಿಣ ಕೊರಿಯಾ ರಾಷ್ಟ್ರಗಳ ಜತೆ ಭಾರತದ್ದು ಒಂದು ಮಟ್ಟದ ಮುಕ್ತ ವ್ಯಾಪಾರ ಒಪ್ಪಂದ (ಆರ್.ಸಿ.ಇ.ಪಿ. ಅಲ್ಲ) ಇದೆ. ಈ ದೇಶಗಳಿಂದ ಆಮದಾಗುವ ಹಲವು ವಸ್ತುಗಳಿಗೆ ಆಮದು ತೆರಿಗೆ ಕಡಿಮೆ ಮಾಡಲಾಗಿದೆ. ಇಲ್ಲಿಂದ ರಫ್ತು ಆಗುವುದಕ್ಕಿಂತಲೂ ಹೆಚ್ಚಾಗಿ ಅಲ್ಲಿಂದಲೇ ಆಮದು ಮಾಡಿಕೊಳ್ಳುತ್ತಿದ್ದೇವೆ. 2018 ರಲ್ಲಿ 51 ಟ್ರಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳು ಆಮದಾಗಿವೆ.
ಚೀನಾ ಜತೆಯಂತೂ ಯಾವುದೇ ಮುಕ್ತ ವ್ಯಾಪಾರ ಒಪ್ಪಂದವಿಲ್ಲದೆಯೂ 53 ಟ್ರಿಲಿಯನ್ ಡಾಲರ್ ಟ್ರೇಡ್ ಡಿಫಿಸಿಟ್ ಇದೆ. ಇದರರ್ಥ ಏನು? ಭಾರತಕ್ಕೆ ಆ ರಾಷ್ಟ್ರಗಳ ಉತ್ಪನ್ನಗಳು ಬಂದು ಬೀಳುತ್ತಿವೆಯೇ ಹೊರತು ಇಲ್ಲಿನ ಉತ್ಪನ್ನಗಳು ಅಲ್ಲಿಗೆ ಹೊಗುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿವೆ. ಇದರಿಂದ ಇಲ್ಲಿನ ವಿವಿಧ ಕ್ಷೇತ್ರದ ಸಣ್ಣ ಮತ್ತು ಮದ್ಯಮ ಉದ್ಯಮಗಳು ಹೊಡೆತ ತಿಂದಿವೆ. ಸಹಸ್ರಾರು ಮಂದಿಯನ್ನು ಕೆಲಸದಿಂದ ತೆಗೆಯಲಾಗಿದೆ. ಇದೂ ನಿರುದ್ಯೋಗ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಹಾಗಾಗಿ, ಇತ್ತೀಚಿನ ಐದು ವರ್ಷಗಳಲ್ಲಿ ಅತಿಯಾಗಿ ಹೆಚ್ಚಿರುವ ನಿರುದ್ಯೋಗ ಸಮಸ್ಯೆಗೆ ಇದೂ ಒಂದು ಪ್ರಮುಖ ಕಾರಣ.
ಆಮದು ಸುಂಕ ಕಡಿಮೆಯಾಗಿರುವುದರಿಂದ ಆಮದು ಉತ್ಪನ್ನಗಳ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಯಿಂದ ಇಲ್ಲಿನ ಬೊಕ್ಕಸಕ್ಕೆ ಸಂದಾಯವಾಗುತ್ತಿದ್ದ ಹಣದಲ್ಲಿ ಒಟ್ಟು 5.5 ಬಿಲಿಯನ್ ಡಾಲರ್ ಅಂದ್ರೆ, ಸುಮಾರು 37000 ಕೋಟಿ ರೂಪಾಯಿಗಳ ಕೊರತೆ ಉಂಟಾಗಿದೆ.


ಕೆಲವರು ಭಾರತದಲ್ಲಿ ಆಗಿರುವ ಆರ್ಥಿಕ ಹಿಂಜರಿತಕ್ಕೆ ಕೇಂದ್ರ ಸರ್ಕಾರ ಕಾರಣವಲ್ಲ ಎಂದು ವಾದಿಸುತ್ತಿದ್ದಾರೆ. ವಾಸ್ತವವಾಗಿ ಇದು ಉಂಟಾಗಲು ಮುಖ್ಯ ಕಾರಣ ಡಿಮಾನಿಟೈಸೇಷನ್ ಮತ್ತು ಜಿ.ಎಸ್.ಟಿ. ತಪ್ಪಾದ ಅಳವಡಿಕೆ. ಆದ್ದರಿಂದ ವಾಸ್ತವ ಕಾರಣ ಮರೆಮಾಚಿ ಜನರನ್ನು ಯಾಮಾರಿಸುವುದು ಖಂಡನೀಯ.
ಕೆಲವು ವಸ್ತುಗಳಿಗೆ ಕೆಲ ಮಟ್ಟಿಗಿನ ತೆರಿಗೆ ವಿನಾಯಿತಿ ಕೊಟ್ಟಿದ್ದರಿಂದಲೇ ಇಷ್ಟೊಂದು ತೊಂದರೆಯಾಗಿದೆ. ಹೀಗಿರುವಾಗ ಶೇಕಡ ತೊಂಬತ್ತರಷ್ಟು ಉತ್ಪನ್ನಗಳಿಗೆ ಪೂರ್ಣ ಪ್ರಮಾಣದ ತೆರಿಗೆ ವಿನಾಯಿತಿ ಇರುವ RCEP ಒಪ್ಪಿಕೊಂಡರೆ ಇನ್ನೆಂಥ ದುಸ್ಥಿತಿ ಉಂಟಾಗಬಹುದು ಊಹಿಸಿಕೊಳ್ಳಿ. ಅದರಲ್ಲಿಯೂ ಅಮೆರಿಕಾದಲ್ಲಿಯೇ ಕೈಗಾರಿಕೆಗಳು ಮುಗ್ಗರಿಸುವಂತೆ ಮಾಡಿರುವ ಚೈನಾ ಸಹ ಇರುತ್ತದೆ ಎಂದರೆ ಈ ಒಪ್ಪಂದ ಎಷ್ಟು ಅಪಾಯಕಾರಿ ಎಂಬುದನ್ನು ಅರಿಯಬೇಕು.
ಒಂದುವೇಳೆ RCEP ಒಪ್ಪಿಕೊಂಡರೆ ನ್ಯೂಜಿಲ್ಯಾಂಡ್ ಹಾಲು ಮತ್ತು ಹಾಲಿನ ಉತ್ಪನ್ನಗಳು, ಆಸ್ಟ್ರೇಲಿಯಾದ ಸಕ್ಕರೆ, ಗೋಧಿ, ಹಾಲು, ಮಲೇಶಿಯಾ, ಇಂಡೋನೇಶಿಯಾ ದೇಶದ ಕಾಫಿ, ಅಡಿಕೆ, ಮಣಸು ಇತ್ಯಾದಿ, ಚೈನಾದಿಂದ ಎಲ್ಲ ರೀತಿಯ ತಯಾರಿಕಾ ಉತ್ಪನ್ನಗಳು (ಯಂತ್ರಗಳು, ಬಿಡಿಭಾಗಗಳು, ಕಾರುಗಳು ಇನ್ನೂ ಹತ್ತು ಹಲವು) ಬಾಂಗ್ಲಾದಿಂದ ಗಾರ್ಮೆಂಟ್ಸ್ ಉತ್ಪನ್ನಗಳು ಆಮದಾಗುತ್ತವೆ.
.
ಜಪಾನ್, ಕೊರಿಯಾ ಕಂಪನಿಗಳು ಔಷಧಗಳ ಮೇಲಿನ ಪೇಟೆಂಟ್ ಅವಧಿಯನ್ನು ನಲವತ್ತು ವರ್ಷಗಳಿಗೆ ಏರಿಸುವ ಬೇಡಿಕೆ/ಒತ್ತಡ ಮುಂದಿಟ್ಟಿವೆ. ಆಗ ಭಾರತದಲ್ಲಿ ಜೆನೆರಿಕ್ ಮೆಡಿಸಿನ್ ಮಾರಲು ಸಾಧ್ಯವಾಗದೇ ಕೋಟ್ಯಂತರ ಬಡ ರೋಗಿಗಳು ಕಡಿಮೆ ಬೆಲೆಯಲ್ಲಿ ದೊರೆಯುತ್ತಿರುವ ಔಷಧ ಖರೀದಿಯಿಂದ ವಂಚಿತರಾಗುತ್ತಾರೆ.


ಖಚಿತವಾಗಿ ಹೇಳುವುದಾದರೆ RCEPಗೆ ಒಪ್ಪಿದರೆ ನಮ್ಮ ರೈತರು ಮತ್ತು ಸಣ್ಣ, ಮಧ್ಯಮ ಉದ್ಯಮಗಳಿಗೆ ಮಾರಣಾಂತಿಕ ಪೆಟ್ಟು ಬೀಳುತ್ತದೆ. ನಮ್ಮ ದೇಶದ ಒಟ್ಟು ಉದ್ಯೋಗಿಗಳಲ್ಲಿ ಶೇಕಡ ತೊಂಬತ್ತರಷ್ಟು (ಸುಮಾರು ನಲವತ್ತು ಕೋಟಿ) ಜನ ಈ ಅಸಂಘಟಿತ ವಲಯದಲ್ಲೇ ಇದಾರೆ. ಇದನ್ನು ಗಮನಿಸಿದಾಗ ಈ ಒಪ್ಪಂದ ಎಷ್ಟು ಆಘಾತ ನೀಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಮುಖ್ಯವಾದ ವಿಷಯವೇನೆಂದರೆ ನಾವು ಉದ್ಯಮ ವಲಯಗಳಲ್ಲಿ ಪ್ರಬಲ ಸ್ಪರ್ಧಿಗಳಾಗುವ ತನಕ ಇಂಥ ಒಪ್ಪಂದಗಳಿಂದ ದೂರವಿರುವುದು ಒಳ್ಳೆಯದು.

LEAVE A REPLY

Please enter your comment!
Please enter your name here