ಕರ್ನಾಟಕ ಕೃಷಿಕ್ಷೇತ್ರ ಗಂಭೀರ ಸವಾಲು ಎದುರಿಸುತ್ತಿದೆ

0

ಕೃಷಿ ಎಂದರೆ ಕೇವಲ ಒಂದು ಉದ್ಯೋಗವಲ್ಲ. ಅದು ನಮ್ಮ ಸಂಸ್ಕೃತಿ, ನಮ್ಮ ಜೀವನ ಪದ್ಧತಿ ಮತ್ತು ನಮ್ಮ ಆರ್ಥಿಕತೆಯ ಜೀವನಾಡಿಯಾಗಿದೆ. ಇಂದು ನಮ್ಮರಾಜ್ಯದ ಕೃಷಿ ಕ್ಷೇತ್ರವು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಮಳೆಯ ಅನಿಶ್ಚಿತತೆ, ಮುಂಗಾರು ಮಳೆಯ ಕೊರತೆ, ದೀರ್ಘ ಕಾಲದ ಒಣ ಹವೆ, ಹೆಚ್ಚುತ್ತಿರುವ ತಾಪಮಾನ ಹಾಗೂ ಅಂತರ್ಜಲ ಮಟ್ಟ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದರು.

ಅವರು ಇಂದು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿನ ಗಾಂಧಿ ಕೃಷಿವಿಜ್ಞಾನ ಕೇಂದ್ರದ ಆವರಣದಲ್ಲಿ ಇಂದಿನಿಂದ ಆಯೋಜಿತವಾಗಿರುವ ಕೃಷಿಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಚಿವರು ವೈವಿದ್ಯಮಯ  ಬೆಳೆ ಸಂಗ್ರಹಾಲಯವನ್ನು ಉದ್ಘಾಟಿಸಿದರು.

ಅನೇಕ ಪ್ರದೇಶಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳು ಸರಿಯಾಗಿ ಬೆಳೆಯದೆ ಒಣಗುತ್ತಿವೆ. ಕೆರೆ-ಕಟ್ಟೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಕೊಳವೆ ಭಾವಿಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಒಂದು ಕಡೆ ರೈತರು ಬೀಜ, ಗೊಬ್ಬರ ಮತ್ತು ಕೃಷಿ ಯಂತ್ರೋಪಕರಣಗಳಿಗಾಗಿ ಬಂಡವಾಳ ಹೂಡಿಕೆ ಮಾಡುತ್ತಾರೆ. ಮತ್ತೊಂದುಕಡೆ ಮಳೆಯ ಕೊರತೆಯಿಂದ ಬೆಳೆ ನಷ್ಟ ಅನುಭವಿಸಬೇಕಾಗುತ್ತದೆ ಎಂದರು.

ಬರಗಾಲದ ಸಂದರ್ಭದಲ್ಲಿ ರೈತರಿಗೆ ಅಗತ್ಯವಾದ ಪರಿಹಾರ ಒದಗಿಸುವುದು (ಪ್ರತಿ ಎಕರೆಗೆ ರೂ.೫,೦೦೦ ವರೆಗೂ), ಬೆಳೆ ವಿಮೆ ಸೌಲಭ್ಯ ತಲುಪಿಸುವುದು, ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಮತ್ತು ಜಾನುವಾರುಗಳಿಗೆ ಮೇವು ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಬರಗಾಲ ಸಂದರ್ಭದಲ್ಲಿ ರೈತರನ್ನು ಸಂಕಷ್ಟಕ್ಕೆ ಒಂಟಿಯಾಗಿ ಬಿಡದೆ, ಸರ್ಕಾರ ರೈತರ ಬೆನ್ನಿಗೆ ನಿಲ್ಲುವ ಕಾರ್ಯ ನಮ್ಮ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.

ಹೊಸ ತಳಿಗಳ ಗುಣ ಲಕ್ಷಣಗಳು, ಬಿತ್ತನೆ ವಿಧಾನ, ಗೊಬ್ಬರ ನಿರ್ವಹಣೆ ಮತ್ತು ಇಳುವರಿ ಸಾಮರ್ಥ್ಯದ ಕುರಿತು ರೈತರಿಗೆ ಸೂಕ್ತ ತರಬೇತಿ ನೀಡಬೇಕು. ಕರ್ನಾಟಕದ ಹೆಚ್ಚಿನ ಕೃಷಿ ಪ್ರದೇಶ ಮಳೆಯಾಶ್ರಿತವಾಗಿದೆ. ಇಂತಹ ಪ್ರದೇಶಗಳಲ್ಲಿ ಕೃಷಿಯನ್ನು ಲಾಭದಾಯಕವಾಗಿಸಲು ಒಣಭೂಮಿ ಕೃಷಿ ಪದ್ಧತಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಕೃಷಿ ವಸ್ತು ಪ್ರದರ್ಶನ ಮಳಿಗೆಗಳನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು. ನಂತರ ಮಾತನಾಡಿ  ಇಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿ ಹಾಗೂ ದೇಶದ ವಿವಿಧ ಕೃಷಿ ವಿಶ್ವವಿದ್ಯಾನಿಲಯಗಳು ಅಭಿವೃದ್ಧಿಪಡಿಸಿರುವ ಅಧಿಕ ಇಳುವರಿ ನೀಡುವ ಸುಧಾರಿತ ತಳಿಗಳು, ನೂತನ ಕೃಷಿ ತಂತ್ರಜ್ಞಾನಗಳು ಮತ್ತು ವೈಜ್ಞಾನಿಕ ಬೇಸಾಯ ಪದ್ಧತಿಗಳು ರೈತರ ಹೊಲಗಳನ್ನು ತಲುಪಿದ್ದು, ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಸಂಶೋಧನಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ ಕೃಷಿ ವಿಶ್ವವಿದ್ಯಾನಿಲಯಗಳ ವಿಸ್ತರಣಾ ಚಟುವಟಿಕೆಗಳ ಮೂಲಕ ರೈತರಿಗೆ ಯಶಸ್ವಿಯಾಗಿ ತಲುಪಿಸಲಾಗುತ್ತಿದೆ. ಇದರ ಫಲವಾಗಿ ರೈತರು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉತ್ತಮ ಇಳುವರಿ ಹಾಗೂ ಆದಾಯವನ್ನು ಪಡೆಯುತ್ತಿದ್ದಾರೆ ಎಂದರು.

ಸಮಾರಂಭದಲ್ಲಿ ಸಚಿವ ಕೃಷ್ಣ ಬೈರೇಗೌಡ, ಶಾಸಕ  ಎಸ್. ಆರ್. ವಿಶ್ವನಾಥ್, ಕೃಷಿ ಇಲಾಖೆ ಕಾರ್ಯದರ್ಶಿ    ಡಾ. ಕೆ.ವಿ. ತ್ರಿಲೋಕ್ ಚಂದ್ರ, , ವ್ಯವಸ್ಥಾಪನಾ ಮಂಡಳಿ ಸದಸ್ಯರಾದ  ನವೀನ್, ಎಮ್.ಓ.,  ಡಾ. ಕೆ.ಎಸ್. ರಾಜಶೇಖರಪ್ಪ, ಕುಲಸಚಿವ ಹಾಗೂ ಸದಸ್ಯ ಕಾರ್ಯದರ್ಶಿ ಡಾ. ಕೆ. ಮಧುಸೂದನ್, ಕುಲಪತಿ  ಡಾ: ಪಿ. ವೆಂಕಟರವಣ, ವಿಸ್ತರಣಾ ನಿರ್ದೇಶಕ ಡಾ. ಕೆ.ಪಿ. ರಘುಪ್ರಸಾದ್, ಸಂಶೋಧನಾ ನಿರ್ದೇಶಕ ಡಾ: ಮುಡಲಗಿರಿಯಪ್ಪ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೃಷಿ ಸಚಿವರು ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಅಭಿವೃದ್ಧಿಪಡಿಸಿದ ನೂತನ ತಳಿಗಳನ್ನು ಲೋಕಾರ್ಪಣೆಗೊಳಿಸಿದರು.

LEAVE A REPLY

Please enter your comment!
Please enter your name here