ವರ್ಷಗಳು ದಾಟುತ್ತಾ ಸಾಗಿದರೆ ಕಾಯಕನಿಷ್ಠ ಸಂಸ್ಥೆಗಳು ಮಾಡಿದ ಕಾರ್ಯಕ್ರಮಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಪರಿಸರ ಸಂರಕ್ಷಣೆ ಧೈಯ ಇಟ್ಟುಕೊಂಡು ರಚನೆಯಾದ “ಹೊಂಬೇವು” ಸಂಸ್ಥೆ ಈಗ ಮೂರನೇ ವರ್ಷಕ್ಕೆ ಅಡಿಯಿರಿಸಿದೆ. ಇಂಥ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಕರ್ತರು ಮಾಡಿದ, ಮಾಡುತ್ತಿರುವ ಅನನ್ಯ ಕಾರ್ಯಗಳತ್ತ ಒಂದು ಕಿರು ಅವಲೋಕನ ಇಲ್ಲಿದೆ.
ಹೊಂಬೇವು ಸಂಸ್ಥೆಗೆ ಈಗ ವರ್ಷ ಮೂರಾದರೂ ಇದರ ರಚನೆ ಕನಸು ಕಂಡು ನನಸು ಮಾಡಿದ ಅದರ ಅಧ್ಯಕ್ಷೆ ಶೈಲಜಾ ಗೌಡಟ್ಟಿ ಅವರು ಕಳೆದ ಮೂರು ದಶಕಗಳಿಂದ ಪರಿಸರ ಸಂರಕ್ಷಣೆ ಕಾಯಕವನ್ನು ಶ್ರದ್ಧೆಯಿಂದ ಮಾಡಿಕೊಂಡು ಬಂದಿದ್ದಾರೆ. ಬೆಂಗಳೂರು ಮಲ್ಲೇಶ್ವರದ 15ನೇ ಕ್ರಾಸಿನಲ್ಲಿ ರೈಲ್ವೆ ನಿಲ್ದಾಣ ಇದೆ. ಇಲ್ಲಿಂದ ಸ್ವಲ್ಪ ಮುಂದೆ ಕ್ಲೂನಿ ಕಾನ್ವೆಂಟ್ ರಸ್ತೆಯಲ್ಲಿ 20 ವರ್ಷಗಳ ಹಿಂದೆ ಬಿಬಿಎಂಪಿ ನೆಟ್ಟು ಅನಾಥವಾಗಿ ಮಾಡಿದ ಹೊಂಗೆ ಗಿಡಗಳನ್ನು ಸ್ವಂತ ತಾವೇ ಬಿಂದಿಗೆ ಹಿಡಿದು, ನೀರೆರೆದು ಪೋಷಿಸಿದರು. ಆ ಶ್ರಮದ ಪರಿಣಾಮ ಆ ರಸ್ತೆ ಹೊಂಗೆಮರಗಳ ತಂಪು ನೀಡುವ ಸುಂದರ ರಸ್ತೆಯಾಗಿದೆ. ಇದೊಂದು ಪುಟ್ಟ ಉದಾಹರಣೆಯಷ್ಟೆ !
ಹೊಂಬೇವು ಉದ್ಘಾಟನಾ ಸಮಾರಂಭ ಸಂದರ್ಭದ ಚಿತ್ರ
ಯಾರು ಕರೆಯಲಿ, ಕರೆಯದಿರಲಿ ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿಯುತ್ತಾರೆ ಎಂಬುದು ಪರಿಸರ ಬಳಗದವರ ಮೆಚ್ಚುಗೆಯ ಮಾತು. ಶಾಲೆಗಳಲ್ಲಿ ಪ್ಲಾಸ್ಟಿಕ್ ಬಗ್ಗೆ ಅರಿವು ಮೂಡಿಸುವುದು, ಸ್ವತಃ ಪ್ಲಾಸ್ಟಿಕ್ ತೆರವು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು,, ಸ್ಥಳಾವಕಾಶ ಇರುವ ಶಾಲಾ ಆವರಣಗಳಲ್ಲಿ ಗಿಡಗಳನ್ನು ನೆಟ್ಟು ಅವುಗಳಿಗೆ ನೀರೆರೆದು ಪೋಷಿಸುವುದು, ದೂರದ ಗ್ರಾಮೀಣ ಪ್ರದೇಶಗಳಿಗೂ ತೆರಳಿ ಜಾಗತಿಕ ತಾಪಮಾನದ ಪರಿಣಾಮಗಳನ್ನು ವಿವರಿಸಿ ಗ್ರಾಮಸ್ಥರನ್ನು ಒಟ್ಟುಗೂಡಿಸಿ ಗಿಡಗಳನ್ನು ನೆಡುವುದು, ಔಷಧ ಸಸ್ಯಗಳಿರುವ “ನಕ್ಷತ್ರವನ” ರಚನೆ ಕಾರ್ಯಕ್ರಮಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿಯುತ್ತಾ ಬಂದಿದ್ದಾರೆ.
“ಸಂಘಟಿತವಾಗಿ- ಅಸಂಘಟಿತವಾಗಿ ಮಾಡುತ್ತಿರುವ ಕಾರ್ಯಗಳಿಗೆ ಸಾಂಸ್ಥಿಕ ರೂಪ ನೀಡಬೇಕೆನ್ನುವ ಆಲೋಚನೆ ಇತ್ತು. ಇದಕ್ಕೆ ನಮ್ಮ ಬಳಗದ ಗೆಳತಿಯರು ಸಹಕಾರ ನೀಡಿದರು. ಇದರಿಂದಾಗಿ ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕಿನ ಅಮ್ಮನಘಟ್ಟದ ಮಣ್ಣಿನ ಮನೆಯಲ್ಲಿ 2024ರ ಮೇ 9ರಂದು “ಹೊಂಬೇವು” ಉದ್ಘಾಟನೆಯಾಯಿತು. ಸಾಂಕೇತಿಕವಾಗಿ ನೂತನ ಸಂಸ್ಥೆಯ ಬ್ಯಾನರ್ ಅನಾವರಣ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪರಿಸರ ನಡಿಗೆ, ವೈವಿಧ್ಯ ಗಿಡಗಳನ್ನು ನೆಡುವಿಕೆ, ಪರಿಸರ ಸಂರಕ್ಷಣೆ ಅರಿವು ಮೂಡಿಸುವ ಗೀತೆಗಳ ಗಾಯನ, ವನಭೋಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ದೂರದ ಬೆಂಗಳೂರು, ಮಂಡ್ಯ ಸೇರಿದಂತೆ ಬೇರೆಬೇರೆ ಊರುಗಳಿಂದಲೂ ಬಳಗದವರು ಬಂದಿದ್ದರು ಎಂದು ಸಂಸ್ಥೆಯ ಅಧ್ಯಕ್ಷೆ ಶೈಲಜಾ ಗೌಡಟ್ಟಿ ಸ್ಮರಿಸಿದರು.
ಸಸಿಗಳನ್ನು ನೆಡುವ ಕಾರ್ಯಕ್ರಮ
“ಹೊಂಬೇವು” ಸಂಸ್ಥೆಯಾಗಿ ರೂಪುಗೊಳ್ಳಲು ಅನೇಕರು ಕಾರಣರು. ಖ್ಯಾತ ಗಾಯಕಿ ಪ್ರಭಾ ಇನಾಂದಾರ್, ಪರಿಸರ ಸಂರಕ್ಷಣೆ ಕಾಯಕದಲ್ಲಿ ತೊಡಗಿರುವ ಪ್ರೊಫೆಸರ್ ಸ್ವಾತಿ, ಗಗನ, ಲತಾ ಪದಾಧಿಕಾರಿಗಳಾಗಿಯೂ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ತಮ್ಮದೇ ಸಂಸ್ಥೆ ರಚನೆಯಾದ ನಂತರ ಮುಂಚಿನಿಂದಲೂ ಮಾಡುತ್ತಾ ಬಂದಿದ್ದ ಹಲವು ಕಾರ್ಯಕ್ರಮಗಳನ್ನು ಮುಂದುವರಿಸಿದರು. ಇದರಲ್ಲಿ ಬಹಳ ಮುಖ್ಯವಾಗಿ ಬೆಂಗಳೂರು ಜ್ಞಾನ ಭಾರತಿ ಆವರಣದ ಜೈವಿಕ ಉದ್ಯಾನವನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು, ಪ್ರತಿವಾರವೂ ಈ ಉದ್ಯಾನವನದಲ್ಲಿ ಪರಿಸರ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡು ಹೊಸಬರನ್ನು ಆಹ್ವಾನಿಸಿ ಅವರಲ್ಲಿಯೂ ಪರಿಸರದ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಉದ್ಯಾನವನದಲ್ಲಿನ ಜೀವ ವೈವಿಧ್ಯತೆ ಎಂದರೆ ವಿಧವಿಧವಾದ ಸಸ್ಯಗಳು, ಪಕ್ಷಿಗಳ ವಿವರಗಳನ್ನು ತಿಳಿಸಲಾಗುತ್ತಿದೆ ಎಂದು ಶೈಲಜಾ ಗೌಡಟ್ಟಿ ವಿವರಿಸಿದರು.
ಬೆಂಗಳೂರು ಆಕಾಶವಾಣಿ ಆವರಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ
ಬೇರೆಬೇರೆ ಸಮಾರಂಭಗಳಿಗೆ ಹೋದಾಗ ಪ್ಲಾಸ್ಟಿಕ್ ತಟ್ಟೆ, ಲೋಟಗಳ ಬಳಕೆ, ಅವುಗಳನ್ನು ಎಲ್ಲೆಂದರಲ್ಲಿ ಎಸೆಯವುದನ್ನು ಕಂಡಿದ್ದೆ. ಇದರಿಂದ ಬೇಸರವಾಗುತ್ತಿತ್ತು. ಇದನ್ನು ನನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ತಡೆಯಬೇಕೆಂದು ಹೊಂಬೇವು ಸಂಸ್ಥೆ ಮೂಲಕ “ಪ್ಲೇಟ್ ಬ್ಯಾಂಕ್” ಸ್ಥಾಪಿಸಿದೆ. ಇದರಲ್ಲಿ ಸದ್ಯ 200 ಸ್ಟಿಲ್ ತಟ್ಟೆಗಳು, 200 ಲೋಟಗಳು ಇವೆ. ಇವುಗಳನ್ನು ಯಾರು ಬೇಕಾದರೂ ಉಚಿತವಾಗಿ ತೆಗೆದುಕೊಂಡು ಹೋಗಿ ಬಳಸಿ , ಸ್ವಚ್ಚಗೊಳಿಸಿ ವಾಪಸ್ಸು ತಂದುಕೊಂಡಬೇಕು. ಆಸಕ್ತರು ತೆಗೆದುಕೊಂಡು ಹೋಗಿ ತಂದು ಕೊಡುತ್ತಿದ್ದಾರೆ ಎಂದು ಹೇಳಿದರು.
ಜ್ಞಾನಭಾರತಿ ಬಯೋಪಾರ್ಕ್ ಆವರಣದಲ್ಲಿ ಪರಿಸರ ನಡಿಗೆ ಕಾರ್ಯಕ್ರಮ
ಹೊಂಬೇವು ಸ್ಥಾಪನೆಯಾದ ನಂತರ ಬೆಂಗಳೂರಿನ ಆಕಾಶವಾಣಿ ಕೇಂದ್ರದ ಆವರಣದಲ್ಲಿ ವೈವಿಧ್ಯಮಯ ಗಿಡಗಳನ್ನು ನೆಟ್ಟಿದ್ದಾರೆ. ಇವುಗಳಲ್ಲಿ ಬಗೆಬಗೆಯ ಹೂವಿನ ಗಿಡಗಳೂ ಇವೆ ಎಂಬುದು ವಿಶೇಷ. ಬೇರೆಬೇರೆ ಕಾರ್ಯಕ್ರಮಗಳಲ್ಲಿ ಹೊಂಬೇವು ವತಿಯಿಂದ ಉಚಿತವಾಗಿ ಬಟ್ಟೆ ಬ್ಯಾಗುಗಳನ್ನು ವಿತರಿಸಲಾಗುತ್ತಿದೆ. ಈ ನಂತರ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕಾರೇಕುರ್ಚಿಯ ಶ್ರೀ ದೊಣೇಗಂಗಾ ಕ್ಷೇತ್ರದ ಆವರಣದಲ್ಲಿ “ನಕ್ಷತ್ರವನ” ಪರಿಕಲ್ಪನೆಯ ವನದಲ್ಲಿ ಪೂರಕವಾದ ಔಷಧ ಸಸ್ಯಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಬೆಂಗಳೂರಿನ “ಗಾನಸಿರಿ ಟ್ರಸ್ಟ್” ಸಹಯೋಗವೂ ದೊರಕಿತ್ತು ಎಂದು ಶೈಲಜಾ ಅವರು ವಿವರಿಸಿದರು.
ರಸ್ತೆಬದಿ ಗಿಡ ನೆಟ್ಟು, ನೀರೆರೆದು ಪೋಷಿಸುವ ಕಾರ್ಯಕ್ರಮ
ಇವುಗಳ ಜೊತೆಗೆ ಪರಿಸರಕ್ಕೆ ಸಂಬಂಧಿಸಿದ ಎಲ್ಲ ದಿನಾಚರಣೆಗಳ ಸಂದರ್ಭದಲ್ಲಿಯೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಮಾತ್ರವಲ್ಲದೇ ದೂರದ ಗ್ರಾಮೀಣ ಪ್ರದೇಶಗಳಿಗೂ ತೆರಳಿ ಸ್ಥಳೀಯರ ಸಹಕಾರದೊಂದಿಗೆ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ಲೇಟ್ ಬ್ಯಾಂಕ್” ನಲ್ಲಿರುವ ಸ್ಟೀಲ್ ತಟ್ಟೆಗಳು, ಲೋಟಗಳ ಸಂಖ್ಯೆಯನ್ನು ಹೆಚ್ಚಿಸುವುದು, ರಾಜ್ಯದ್ಯಂತ ಶಾಲಾ ಕಾಲೇಜುಗಳಿಗೆ ತೆರಳಿ ಪರಿಸರ ಆಂದೋಲನ ನಡೆಸುವುದು, ಪರಿಸರಕ್ಕೆ ಬಾಧಕವಾದ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು, ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಉಳಿದಿರುವ ಮರಗಳ ಬುಡದವರೆಗೂ ಕಾಂಕ್ರಿಟ್, ಡಾಂಬರು ಮೆತ್ತಿದ್ದಾರೆ. ಇದು ಮರಗಳ ಬೆಳವಳಿಗೆಗೆ ಮಾರಕ. ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಮರಗಳ ಬುಡದ ಸುತ್ತ ಇರುವ ಡಾಂಬರು, ಕಾಂಕ್ರಿಟು ತೆರವುಗೊಳಿಸುವ ಯೋಜನೆ ಇದೆ. ಇಂಥ ಅನೇಕ ಕಾರ್ಯಕ್ರಮಗಳನ್ನು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದು ಶೈಲಜಾ ಗೌಡಟ್ಟಿ ಹೇಳಿದರು.
“ಪರಿಸರ ಸಂರಕ್ಷಣೆ ಎನ್ನುವುದು ಕೇವಲ ಕೆಲವೇ ಪರಿಸರವಾದಿಗಳ ಕೆಲಸವಲ್ಲ. ಪ್ರತಿಯೊಬ್ಬ ಪ್ರಜೆಯೂ ಪರಿಸರವಾದಿಯಾಗಬೇಕು. ಆಗಲೇ ಪರಿಸರ ಸಮತೋಲನದ ಕಾರ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು, ಸಮರೋಪಾದಿಯಲ್ಲಿ ವೈವಿಧ್ಯ ಸಸಿಗಳನ್ನು ನೆಟ್ಟು ಪೋಷಿಸುವ ಸಲುವಾಗಿ ಸಮಾನ ಮನಸ್ಕರ ಜೊತೆಗೂಡಿ ಸ್ಥಾಪಿಸಿದ “ಹೊಂಬೇವು” ಈಗ ಮೂರನೇ ವರ್ಷಕ್ಕೆ ಅಡಿಯಿರಿಸಿರುವುದು ಸಂತಸದ ಸಂಗತಿ ಎನ್ನುತ್ತಾರೆ.
ಪರಿಸರ ಅರಿವು ಕಾರ್ಯಕ್ರಮ
ಪರಿಸರ ಎಂದರೆ ಎಲ್ಲಿಯೋ ದೂರದಲ್ಲಿರುವ ಕಾಡುಮೇಡು, ನದಿ ಮಾತ್ರವಲ್ಲ. ನಾವು ವಾಸಿಸುವ ಪ್ರದೇಶವೂ ಪರಿಸರ. ಇದನ್ನು ಉತ್ತಮವಾಗಿ ಇಟ್ಟುಕೊಳ್ಳುವುದು, ನಗರ-ಗ್ರಾಮೀಣ ಪ್ರದೇಶಗಳ ವಸತಿ ಸ್ಥಳಗಳಲ್ಲಿ ಎಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ನೆರಳಿನ ಜೊತೆಗೆ ಮಾಲಿನ್ಯವನ್ನು ಹೀರಿಕೊಂಡು ಉತ್ತಮ ಆಮ್ಲಜನಕ ನೀಡುವ ಸಸಿಗಳನ್ನು ನೆಡಬೇಕು. ಇವುಗಳನ್ನು ನೆಟ್ಟರೆ ಮಾತ್ರ ನಮ್ಮ ಕರ್ತವ್ಯ ಮುಗಿದು ಹೋಗುವುದಿಲ್ಲ. ಇವುಗಳನ್ನು ಪೋಷಿಸಿ, ಮರವಾಗಿ ಬೆಳೆಸುವುದು ಅರಣ್ಯ ಇಲಾಖೆ, ಸ್ಥಳೀಯ ಪುರಸಭೆ, ನಗರಸಭೆ, ಪಾಲಿಕೆ ಕೆಲಸ ಎಂದು ಭಾವಿಸಬಾರದು. ನಿವಾಸಿಗಳೇ ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು” ಎಂದು ಶೈಲಜಾ ಗೌಡಟ್ಟಿ ಹೇಳುತ್ತಾರೆ.