ಬೆಂಗಳೂರು: ಉತ್ತರ ಭಾರತದ ವಿವಿಧ ಪ್ರದೇಶಗಳಿಗೆ ಭಾರಿ ಪ್ರಮಾಣದಲ್ಲಿ ದಾಳಿ ಮಾಡಿರುವ ಮಿಡತೆಗಳಿಂದ ಕರ್ನಾಟಕಕ್ಕೆ ಅಪಾಯವಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.
ಮಿಡತೆಗಳಿಂದ ಉಂಟಾಗಿರುವ ಬೆಳೆ ವಿಪತ್ತು ನಿರ್ವಹಣೆ ಕುರಿತಂತೆ ತೋಟಗಾರಿಕೆ ಇಲಾಖೆ ಸಚಿವ ನಾರಾಯಣಗೌಡ ಅವರೊಂದಿಗೆ ಕೃಷಿ – ತೋಟಗಾರಿಕೆ – ಕಂದಾಯ ಮತ್ತಿತರ ಇಲಾಖೆಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಈಗಾಗಲೇ ಮಿಡತೆಗಳು ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ದಾಳಿ ಮಾಡಿವೆ. ಅವುಗಳು ಗಾಳಿ ಬೀಸಿದ ದಿಕ್ಕಿನಲ್ಲಿ ಸಾಗುವ ಪರಿಪಾಠ ಹೊಂದಿವೆ. ಪ್ರಸ್ತುತ ನೈರುತ್ಯ ದಿಕ್ಕಿನಿಂದ ಈಶಾನ್ಯ ದಿಕ್ಕಿನತ್ತ ಗಾಳಿ ಬೀಸುತ್ತಿದೆ. ಇನ್ನೂ ಎಂಟು ದಿನ ಇದೇ ದಿಕ್ಕಿನಲ್ಲಿ ಗಾಳಿ ಬೀಸುತ್ತದೆ ಎಂದು ಹವಾಮಾನ ತಜ್ಞರು ತಿಳಿದ್ದಾರೆ. ಇದರಿಂದ ಕರ್ನಾಟಕಕ್ಕೆ ಶೇಕಡ 99.9ರಷ್ಟು ಅಪಾಯವಿಲ್ಲ ಎಂದು ಹೇಳಿದರು.
ಒಂದುವೇಳೆ ಪ್ರಾಕೃತಿಕ ಕಾರಣಗಳಿಂದ ಗಾಳಿ ದಿಕ್ಕು ಬದಲಾದರೆ ಮಿಡತೆಗಳ ದಾಳಿ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ಕೆ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಘಟಕಗಳು ಸಹಕಾರ ನೀಡುತ್ತಿವೆ. ಕೇಂದ್ರ ಸರ್ಕಾರವೂ ಕೂಡ ವಿಪತ್ತು ನಿರ್ವಹಣೆಗೆ ಮೀಸಲಿಟ್ಟಿರುವ ನಿಧಿಯಲ್ಲಿ 200 ಕೋಟಿ ಬಳಸಲು ಅನುಮತಿಸಿದೆ ಎಂದರು.
ಕೃಷಿ – ತೋಟಗಾರಿಕೆ ಇಲಾಖೆಗಳ ನಿರ್ದೇಶಕರುಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಅವರು ಕೊಪ್ಪಳ, ಯಾದಗಿರಿ – ಗುಲ್ಬರ್ಗಾ – ಬೀದರ್ ಜಿಲ್ಲೆಗಳಿಗೆ ಭೇಟಿ ನೀಡಿ ಮಿಡತೆ ನಿರ್ವಹಣೆ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ರೈತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡುತ್ತಾರೆ. ಮಿಡತೆಗಳನ್ನು ನಿಯಂತ್ರಿಸಲು ಬಳಸಲು ಬೇಕಾದ ಕೀಟನಾಶಕಗಳನ್ನು ತಜ್ಞರು ಶಿಫಾರಸು ಮಾಡಿದ್ದಾರೆ. ಒಂದು ಲಕ್ಷ ಲೀಟರ್ ಕ್ಲೋರೋಫೆರಿಫಾಸ್ ದ್ರಾವಣ ದಾಸ್ತಾನಿದೆ ಎಂದು ಹೇಳಿದರು.
ಟ್ರಾಕ್ಟರ್, ಟ್ಯಾಂಕರ್, ಅಗ್ನಿಶಾಮಕ ಯಂತ್ರಗಳನ್ನು ಬಳಸಿ ದ್ರಾವಣ ಸಿಂಪಡಿಸಬಹುದು. ಇದಕ್ಕಾಗಿ ಅಪಾಯ ಸಾಧ್ಯತೆ ಸ್ಥಳಗಳನ್ನು ಗುರುತಿಸಿ ಸಕಲ ರೀತಿಯಲ್ಲಿಯೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಯಾ ಜಿಲ್ಲೆಗಳ ಕಮಿಟಿಗಳು ಕೀಟನಾಶಕ ಬಳಕೆ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ.
ಮಿಡತೆಗಳನ್ನು ನಿಯಂತ್ರಿಸುವ ಕಾರ್ಯದಲ್ಲಿ ಕೃಷಿಕರ ಸಹಕಾರವೂ ಅಗತ್ಯ. ಅವರು ದೂರದಲ್ಲಿ ಮಿಡತೆ ಹಿಂಡು ಕಂಡ ಕೂಡಲೇ ಜನ-ಜಾನುವಾರು –ಬೆಳೆಗಳಿಗೆ ಹಾನಿಯಾಗದ ರೀತಿ ಬೆಂಕಿ ಹಾಕುವುದು, ಜೋರು ಸದ್ದು ಮಾಡುವುದರ ಮೂಲಕ ಚೆದುರಿಸುವ ಕಾರ್ಯ ಮಾಡಬೇಕು ಎಂದರು.
ರಾಜ್ಯದ ಕೃಷಿ ಇಲಾಖೆ ಆಯುಕ್ತರು ಮಹಾರಾಷ್ಟ್ರ ಕೃಷಿ ಇಲಾಖೆ ಮುಖ್ಯಸ್ಥರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಪ್ರತಿ ತಾಸಿಗೊಮ್ಮೆ ಮಿಡತೆಗಳ ಮಾಹಿತಿ ತರಿಸಿಕೊಳ್ಳಲಾಗುತ್ತಿದೆ. ಅವುಗಳ ಹಾರಾಟದ ದಿಕ್ಕಿನತ್ತ ಗಮನ ಇಡಲಾಗಿದೆ. ಅವುಗಳ ನಿಯಂತ್ರಣಕ್ಕೆ ಬೇಕಾದ ಅಗತ್ಯ ಕ್ರಮಗಳ ಬಗ್ಗೆ ಕೀಟತಜ್ಞರು ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ವಿವರ ನೀಡಿದರು.