ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ (ಜಿಕೆವಿಕೆ) ಆವರಣದಲ್ಲಿ ನವೆಂಬರ್ 11, 12 ಮತ್ತು 13ರಂದು ವಿಭಿನ್ನ ಕೃಷಿಮೇಳ ನಡೆಯಲಿದೆ. ಭಾಗವಹಿಸಲು ಇಚ್ಛಿಸುವವರು ಇದರ ವಿವರಗಳನ್ನು ತಿಳಿಯುವುದು ಅತ್ಯವಶ್ಯಕ. ಇಲ್ಲದೇ ಇದ್ದರೆ ಸ್ಥಳಕ್ಕೆ ತೆರಳಿದ ನಂತರ ನಿರಾಶೆಯಿಂದ ಹಿಂದಿರುಗುವಂಥ ಪ್ರಸಂಗ ಎದುರಾಗಬಹುದು. ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ ಕೆಲವು ವಿವರಗಳನ್ನು ನೀಡಲಾಗಿದೆ.
ಕೊರೊನಾ (ಕೋವಿಡ್-19) ಲಾಕ್ಡೌನ್ ಅವಧಿಯಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳ ಕಾರ್ಯಾಚರಣೆ ಸ್ಥಗಿತವಾಗಿತ್ತು. ಆದರೆ ಕೃಷಿಕರು ಆಹಾರ ಉತ್ಪಾದನೆಯ ಯೋಧರಾಗಿ ದಣಿವರಿಯದೇ ತಮ್ಮ ಕಾಯಕದಲ್ಲಿ ನಿರತರಾಗಿದ್ದರು. ಸಂದಿಗ್ಧ ಪರಿಸ್ಥಿಯಲ್ಲೂ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಎಂದಿನಂತೆ ನಿರ್ವಹಿಸಿ, ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಆಹಾರದ ಅಭಾವ ಪರಿಸ್ಥಿತಿ ಸೃಷ್ಠಿಯಾಗದಂತೆ ಶ್ರಮಿಸಿದರು.
ಅವಿರತ ದುಡಿಯುವ ಕೃಷಿಕರಿಗೆ ಕೃಷಿ ತಂತ್ರಜ್ಞಾನಗಳು ಸಕಾಲದಲ್ಲಿ ತಲುಪುವಂತಾಗಲು ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಕೃಷಿಮೇಳವನ್ನು ಕಳೆದ ಕೃಷಿಮೇಳಗಳಿಗಿಂತ ವಿಭಿನ್ನವಾಗಿ ನಡೆಸಲು ಯೋಜನೆ ರೂಪಿಸಲಾಗಿದೆ. ಇದನ್ನು ಭೌತಿಕವಾಗಿ ಮತ್ತು ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಫೇಸ್ಬುಕ್, ಟ್ಟಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಮೂಲಕವೂ ನೇರವಾಗಿ ವೀಕ್ಷಿಸಬಹುದು.
ಕೃಷಿಮೇಳಕ್ಕೆ 18ಕ್ಕೆ ಮೇಲ್ಪಟ್ಟು 60 ವರ್ಷ ವಯೋಮಾನದ ಮಿತಿಯೊಳಗೆ ಇರುವವರಿಗೆ ಮಾತ್ರ ಪ್ರವೇಶಾವಕಾಶವಿರುತ್ತದೆ. ಭಾಗವಹಿಸುವವರು ಮುಖ ಕವಚ (ಮಾಸ್ಕ್) ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ವಸ್ತುಪ್ರದರ್ಶನದ ಆವರಣ ಪ್ರವೇಶಕ್ಕೂ ಮುನ್ನ ದೈಹಿಕ ತಾಪಮಾನ ಪರೀಕ್ಷೆ ನಡೆಸಲಾಗುತ್ತದೆ.
ಭೌತಿಕವಾಗಿ ಕೃಷಿ ಮೇಳಕ್ಕೆ ಹಾಜರಾಗಲು ಸಾಧ್ಯವಿಲ್ಲದವರು ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಫೇಸ್ಬುಕ್, ಟ್ಟಿಟ್ಟರ್ ಮತ್ತು ಇನ್ಸ್ಟಾಗ್ರಾಮ್ (ಬೆಳಿಗ್ಗೆ 10 ಗಂಟೆಯಿಂದ ಸಂಜೆ 3 ಗಂಟೆಯವರೆಗೆ) ನೇರವಾಗಿ ವೀಕ್ಷಿಸಬಹುದು.
ಕೃ.ವಿ.ವಿ, ಬೆಂಗಳೂರಿನ ಮಳಿಗೆಗಳನ್ನು ಹೊರತುಪಡಿಸಿ ಖಾಸಗಿ ಕೃಷಿ ಪರಿಕರಗಳ ಮಳಿಗೆಗಳು ಮತ್ತು ಮಾರಾಟದ ವ್ಯವಸ್ಥೆವಿರುವುದಿಲ್ಲ. ರಿಯಾಯಿತಿ ದರದಲ್ಲಿ ಪಂಕ್ತಿ ಊಟದ ಬದಲು ತಟ್ಟೆ ಊಟ (ಬಫೆಟ್) ಮಾದರಿಯಲ್ಲಿ ಲಘು ಉಪಹಾರದ ವ್ಯವಸ್ಥೆ ಇರುತ್ತದೆ.
ಬೆಳಿಗ್ಗೆ 10-00 ರಿಂದ 10-45 ಮತ್ತು ಸಂಜೆ 2-00 ರಿಂದ 3-00 ಗಂಟೆ ಸಮಯದಲ್ಲಿ ರೈತರ ಪ್ರಶ್ನೆಗಳಿಗೆ ತಜ್ಞರಿಂದ ನೇರ ಉತ್ತರ ನೀಡಲಾಗುತ್ತದೆ. ರೈತರು ತಮ್ಮ ಪ್ರಶ್ನೆಗಳನ್ನು ಮೊಬೈಲ್ ಸಂಖ್ಯೆ 9482477812ಕ್ಕೆ ಸಂದೇಶ / ವಾಟ್ಸಪ್ಟ್ ಸಂದೇಶ / ವಾಟ್ಸಪ್ಟ್ ಕರೆಗಳ ಮೂಲಕ ತಿಳಿಸಬಹುದು.

ಕೃಷಿಮೇಳದ ಸಿದ್ಧತೆಗಳನ್ನು ಪರಿಶೀಲಿಸುತ್ತಿರುವ ಕುಲಪತಿ ಡಾ. ರಾಜೇಂದ್ರ ಪ್ರಸಾದ್ ಅವರ ನೇತೃತ್ವದ ತಂಡ ಬೆಳೆ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸುತ್ತಿದ್ದಾರೆ.

ನೇಗಿಲಯೋಗಿಗಳಿಗೆ ಪುರಸ್ಕಾರ: ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ರಾಜ್ಯಮಟ್ಟ, ಜಿಲ್ಲಾಮಟ್ಟ ಮತ್ತು ತಾಲ್ಲೂಕು ಮಟ್ಟದ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಗುವುದು,

ರಾಜ್ಯಮಟ್ಟದ ಪ್ರಶಸ್ತಿಗಳು

1. ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ / ರೈತ ಮಹಿಳೆ ಪ್ರಶಸ್ತಿ
2. ಸಿ. ಬೆೈರೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ / ರೈತ ಮಹಿಳೆ ಪ್ರಶಸ್ತಿ
3. ಡಾ. ಎಂ.ಹೆಚ್. ಮರಿಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ
4. ಕೆನರಾ ಬ್ಯಾಂಕ್ ಪ್ರಾಯೋಜಿತ / ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿ
5. ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ / ರೈತ ಮಹಿಳೆ ಪ್ರಶಸ್ತಿ
6. ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ

ಜಿಲ್ಲಾ ಮಟ್ಟದ ಪ್ರಶಸ್ತಿಗಳು: ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ ಮತ್ತು ರೈತ ಮಹಿಳಾ ಪ್ರಶಸ್ತಿ; ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವ್ಯಾಪ್ತಿಗೆ ಒಳಪಡುವ 10 ಜಿಲ್ಲೆಗಳಲ್ಲಿ ಪ್ರಗತಿಪರ ರೈತ ಪ್ರಶಸ್ತಿ ಮತ್ತು ಪ್ರಗತಿಪರ ರೈತ ಮಹಿಳಾ ಪ್ರಶಸ್ತಿಗಳನ್ನು ಅರ್ಹ ಪ್ರಗತಿಪರ ರೈತ ಮತ್ತು ರೈತ ಮಹಿಳೆಯರಿಗೆ ನೀಡಲಾಗುವುದು.
ತಾಲ್ಲೂಕು ಮಟ್ಟದ ಪ್ರಶಸ್ತಿಗಳು: ತಾಲ್ಲೂಕು ಮಟ್ಟದ ಪ್ರಗತಿಪರ ಯುವ ರೈತ ಪ್ರಶಸ್ತಿ ಮತ್ತು ಯುವ ರೈತ ಮಹಿಳಾ ಪ್ರಶಸ್ತಿ; ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವ್ಯಾಪ್ತಿಗೆ ಒಳಪಡುವ 60 ತಾಲ್ಲೂಕುಗಳಲ್ಲಿ ಪ್ರಗತಿಪರ ಯುವ ರೈತ ಪ್ರಶಸ್ತಿ ಮತ್ತು ಪ್ರಗತಿಪರ ಯುವ ರೈತ ಮಹಿಳಾ ಪ್ರಶಸ್ತಿಗಳನ್ನು ಅರ್ಹ ಪ್ರಗತಿಪರ ಯುವ ರೈತ ಮತ್ತು ಪ್ರಗತಿಪರ ಯುವ ರೈತ ಮಹಿಳೆಯರಿಗೆ ನೀಡಲಾಗುವುದು.

ವಿಶ್ವವಿದ್ಯಾಲಯದ ಮಳಿಗೆಗಳ ಪ್ರದರ್ಶನ: ಈ ಮೊದಲೇ ಪ್ರಸ್ತಾಪಿಸಿದಂತೆ ಕೃಷಿಮೇಳದಲ್ಲಿ ಕೇವಲ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಮಳಿಗೆಗಳು ಮಾತ್ರ ಇರುತ್ತವೆ. ಸುಮಾರು 25 ಮಳಿಗೆಗಳಲ್ಲಿ ಕೃಷಿ ವಿಶ್ವವಿದ್ಯಾನಿಲಯದ ನೂತನ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗುವುದು. ಈ ಮಳಿಗೆಗಳಿಗೆ ದಿನಾಂಕ:11-11-2020 (ಬುಧವಾರ) ರಂದು ರಾಮನಗರ, ತುಮಕೂರು ಮತ್ತು ಹಾಸನ ಜಿಲ್ಲೆಯ ರೈತರು, ದಿನಾಂಕ:12-11-2020 (ಗುರುವಾರ) ರಂದು ಬೆಂಗಳೂರು (ನಗರ), ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ರೈತರು ಮತ್ತು ದಿನಾಂಕ:13-11-2020 (ಶುಕ್ರವಾರ) ದಂದು ಬೆಂಗಳೂರು (ಗ್ರಾಮಾಂತರ), ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಭೇಟಿ ನೀಡಬಹುದು.

ರೈತರ ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ವೈಜ್ಞಾನಿಕ ಸಲಹೆ: ತಜ್ಞ ವಿಜ್ಞಾನಿಗಳ ತಂಡ ಭೌತಿಕವಾಗಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಕೃಷಿ ಸಂಬಂಧಿ ಪ್ರಶ್ನೆಗಳಿಗೆ ಸೂಕ್ತ ಸಲಹೆಗಳನ್ನು ನೀಡುತ್ತಾರೆ.

ವಿಶೇಷ ಸೌಕರ್ಯ: ಜಿ.ಕೆ.ವಿ.ಕೆ ಯ ಮಹಾದ್ವಾರದಿಂದ ಕೃಷಿ ಮೇಳದ ಸಭಾಂಗಣಕ್ಕೆ ತಲುಪಲು ಬಸ್ಸುಗಳಲ್ಲಿ ಉಚಿತ ಸಾರಿಗೆ ವ್ಯವಸ್ಥೆ. ಸ್ವಂತ ವಾಹನಗಳಲ್ಲಿ ಬಂದವರಿಗೆ ಪ್ರತ್ಯೇಕ ವಾಹನ ನಿಲುಗಡೆ ವ್ಯವಸ್ಥೆ.

ಕೃಷಿಮೇಳ -2020 ಸಿದ್ಧತೆಗಳನ್ನು ಪರಿಶೀಲಿಸುತ್ತಿರುವ ಕುಲಪತಿ ಡಾ. ರಾಜೇಂದ್ರ ಪ್ರಸಾದ್ ನೇತೃತ್ವದ ತಂಡ ಬೆಳೆತಾಕುಗಳನ್ನು ವೀಕ್ಷಿಸುತ್ತಿರುವುದು

ನೂತನ ತಳಿಗಳು: ಪ್ರತಿವರ್ಷದಂತೆ ಈ ವರ್ಷವೂ ಅಧಿಕ ಇಳುವರಿ ನೀಡುವ ನೂತನ ತಳಿಗಳನ್ನು ಲೋಕಾರ್ಪಣೆ ಮಾಡಲಾಗುತ್ತದೆ. ಈ ತಳಿಗಳ ಬೆಳೆಗಳಿರುವ ತಾಕುಗಳಿಗೆ ಕೃಷಿಕರು ಭೇಟಿಕೊಟ್ಟು ಅಲ್ಲಿರುವ ತಜ್ಞರಿಂದ ಹೆಚ್ಚಿನ ಮಾಹಿತಿ ಪಡೆಯಬಹುದು.

ನೆಲಗಡಲೆಯಲ್ಲಿ ಜಿಕೆವಿಕೆ 27, ಅಲಸಂದೆಯಲ್ಲಿ ಕೆ.ಸಿ.-8, ಮತ್ತು ಮೇವಿನ ಬೆಳೆಯಲ್ಲಿ ಅಲಸಂದೆ ಎಂ.ಎಫ್.ಸಿ.- 09-3 (ಎಂ.ಎಫ್.ಸಿ-3). ಮೂರು ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗುವುದು.

1.ನೆಲಗಡಲೆ ತಳಿ: ಜಿಕೆವಿಕೆ 27. ಅವಧಿ 110-115 ದಿನಗಳು . ಇಳುವರಿ. 12 -13 ಕ್ವಿಂಟಾಲ್/ಎಕರೆ ಶಿಫಾರಸ್ಸು ಮಾಡಿದ ವಲಯ ವಲಯ – 5 .ವಿಶೇಷ ಗುಣಗಳು ಮುಂಗಾರು (ಜೂನ್- ಜುಲೈ) ಮತ್ತು ಬೇಸಿಗೆ (ಡಿಸೆಂಬರ್-ಜನವರಿ) ಬಿತ್ತನೆಗೆ ಸೂಕ್ತವಾದ ತಳಿ ಬರ ನಿರೋಧಕ ತಳಿ ಎಲೆ ಚುಕ್ಕೆ ಮತ್ತು ಎಲೆ ತುಕ್ಕು ರೋಗಗಳಿಗೆ ನಿರೋಧಕತೆ ಹೊಂದಿದೆ

2. ಅಲಸಂದೆ
ತಳಿ ಕೆಸಿ-8. ಅವಧಿ 80 – 85 ದಿನಗಳು . ಇಳುವರಿ (ಸುರಕ್ಷಿತ ನೀರಾವರಿ) 5.2 – 5.6 ಕ್ವಿಂಟಲ್ / ಎಕರೆ ಶಿಫಾರಸ್ಸು ಮಾಡಿದ ವಲಯ. ವಲಯ 5 . ವಿಶೇಷ ಗುಣಗಳು ಜುಲೈ – ಸೆಪ್ಟೆಂಬರ್ ಮತ್ತು ಜನವರಿ – ಫೆಬ್ರವರಿ ಬಿತ್ತನೆಗೆ ಸೂಕ್ತ ಬೀಜಗಳು ಮಧ್ಯಮ ದಪ್ಪ ಮತ್ತು ತಿಳಿ ಕಂದು ಬಣ್ಣದ್ದಾಗಿರುತ್ತವೆ .

3. ಮೇವಿನ ಅಲಸಂದೆ.
ತಳಿ ಎಂ.ಎಫ್.ಸಿ.-09-3 (ಎಂ.ಎಫ್.ಸಿ-3) ಅವಧಿ 80 – 85 ದಿನಗಳು. ಒಣ ಮೇವಿನ ಇಳುವರಿ 32-33 ಕ್ವಿಂ/ಎಕರೆ ಎಲೆಕಾಂಡ ಅನುಪಾತ. 0.78. ಕಚ್ಚಾ ಸಸಾರಜನಕ ಇಳುವರಿ 4.8 – 5.1 ಕ್ವಿಂ/ಎಕರೆ . ಶಿಫಾರಸ್ಸು ಮಾಡಿದ ವಲಯ ವಲಯ 5 ಮತ್ತು 6 . ವಿಶೇಷ ಗುಣಗಳು. ಹಳದಿ ಎಲೆ ನಂಜು, ತುಕ್ಕು ರೋಗಗಳಿಗೆ ನಿರೋಧಕತೆ ಹಾಗೂ ಎಲೆ ಚುಕ್ಕೆ ರೋಗಗಳಿಗೆ ಸಹಿಷ್ಣುತೆ ಹೊಂದಿದೆ ಪೊದೆಯಾಕಾರವಾದ ಬೆಳವಣಿಗೆ- ಹೆಚ್ಚು ರೆಂಬೆಗಳಿಂದ ಕೂಡಿದೆ.

ಸರಳ ರೀತಿಯಲ್ಲಿ ಹಿಂದಿನ ಕೃಷಿಮೇಳಗಳಿಗಿಂತ ವಿಶಿಷ್ಟವಾಗಿ ನಡೆಯಲಿರುವ ಕೃಷಿಮೇಳ ಕುರಿತು ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್, ವಿಸ್ತರಣಾ ನಿರ್ದೇಶಕ ಡಾ. ಎಂ. ಭೈರೇಗೌಡ, ಕೃಷಿ ಸಂಶೋಧನಾ ನಿರ್ದೇಶಕ ಡಾ. ವೈ.ಜಿ. ಷಡಕ್ಷರಿ, ಹಿರಿಯ ವಾರ್ತಾತಜ್ಞ ಡಾ. ಕೆ. ಶಿವರಾಮು ಅವರುಗಳ ವಿಡಿಯೋ ಸಂದರ್ಶನ ನಿಮ್ಮ ಮುಂದಿದೆ. 

6 COMMENTS

  1. We discussed recently, regarding half ltr less in araconut special new in your 5 ltr container. Accordingly we will measure in laboratory measure as you advised, which is under process. We will come back to you after some time.

LEAVE A REPLY

Please enter your comment!
Please enter your name here