ಚಳಿ ತುಂಬ ಜಾಸ್ತಿ ಇದೆ ; ಕಾರಣವೇನು ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದ ಗಾಳಿಯಲ್ಲಿ ತೇವಾಂಶ ಅಧಿಕವಾಗುತ್ತದೆ. ಇದು ಪ್ರಸ್ತುತದ ಚಳಿಗಾಲದ ಹವಾಮಾನದ ಜೊತೆಗೆ ಸೇರಿಕೊಂಡಾಗ ತಂತಾನೇ ವಾತಾವರಣದಲ್ಲಿ ತಂಪು ಹೆಚ್ಚಾಗುತ್ತದೆ. ಇದು ಚಳಿಯನ್ನು ತೀವ್ರಗೊಳಿಸುತ್ತದೆ ಎಂದು ಹವಾಮಾನ ಹಾಗೂ ಬೇಸಾಯತಜ್ಞ ಡಾ. ತಿಮ್ಮೇಗೌಡ ಹೇಳಿದರು.
ಚಳಿಗಾಲದಲ್ಲಿ ಈ ಸಲದ ಬೆಂಗಳೂರು ನಗರದ ವಾತಾವರಣವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ ಕನಿಷ್ಟ ಉಷ್ಣಾಂಶ 12ರಿಂದ 14 ಗರಿಷ್ಠ 19 ರಿಂದ 21 ಡಿಗ್ರಿ ಸೆಲ್ಸಿಯಸ್ ಇದೆ. ಈಗ ಚಳಿ ಜಾಸ್ತಿಯಾಗಿರುವುದರಿಂದ ಬೆಳೆಗಳ ಮೇಲೆ ಹೆಚ್ಚು ಪರಿಣಾಮ ಉಂಟಾಗುವುದಿಲ್ಲ. ಏಕೆಂದರೆ ಪ್ರಸ್ತುತದ ವಾಯುಭಾರ ಕುಸಿತದ ಪರಿಣಾಮ ನಾಲ್ಕುದಿನಗಳ ತನಕ ಸೀಮೀತ.
ಚಳಿಗಾಲದಲ್ಲಿ ಉತ್ತರ ಭಾರತದಲ್ಲಿ ಚಳಿ ಹೆಚ್ಚುತ್ತಾ ಹೋಗುತ್ತದೆ. ವಾತಾವರಣದಲ್ಲಿ 15 ದಿನಗಳಿಗೂ ಹೆಚ್ಚು ಸಮಯ ತೀವ್ರ ತಂಪು ವಾತಾವರಣವಿದ್ದಾಗ ಬೆಳೆಗಳ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ.
ಚಳಿಗಾಲದಲ್ಲಿ ದಕ್ಷೀಣ ಭಾರತದಲ್ಲಿ ಇಂಥ ತೀವ್ರ ತಂಪಿನ ವಾತಾವರಣ ಸಾಮಾನ್ಯವಾಗಿ ಕಡಿಮೆ. ಈ ಅವಧಿಯಲ್ಲಿ ತುಂತುರು ಮಳೆ ಇರುತ್ತದೆ. ಇದು ಸಹ ಚಳಿಯನ್ನು ಹೆಚ್ಚು ಮಾಡುತ್ತದೆ. ಅತೀ ಹೆಚ್ಚು ಎಂದರೆ 5 ಮಿಲಿ ಮೀಟರ್ ಮಳೆಯಾಗಬಹುದು. ಈ ರೀತಿಯ ವಾತಾವರಣ ಇನ್ನೂ ಎರಡು ದಿನ ಇರುತ್ತದೆ.
ಚಳಿಗಾಲದಲ್ಲಿ ಕೃಷಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಕೆಲವರಿಗೆ ಚಳಿ ಹೆಚ್ಚಾದರೆ ಸಹಿಸಲು ಆಗುವುದಿಲ್ಲ. ಇಂಥವರು ಸೇರಿದಂತೆ ಸಾಮಾನ್ಯ ಆರೋಗ್ಯವಂತರು ವೈರಲ್ ಫೀವರ್ ಬಾರದಂತೆ ರೋಗ ನಿರೋಧಕ ಶಕ್ತಿ ಕಾಪಾಡಿಕೊಳ್ಳಬೇಕು.
ಚಳಿಗಾಲದಲ್ಲಿ ತುಟಿ ಒಡೆಯುವುದು, ಚರ್ಮ ಬಿರುಕು ಬಿಡುವುದು ಉಂಟಾಗುತ್ತದೆ. ಕೊಬ್ಬರಿ ಎಣ್ಣೆ ಅಥವಾ ವಾಸಲಿನ್ ಹಚ್ಚುವುದು ಅಗತ್ಯ. ಚಳಿ ತೀವ್ರ ಹೆಚ್ಚಿದ್ದಾಗ ಗಾಯಗಳು ಮಾಯುವುದು ನಿಧಾನ. ಆದ್ದರಿಂದ ಕಬ್ಬಿಣದ, ಚೂಪಾದ ಮರದ ಉಪಕರಣ ಬಳಸುವಾಗ ಹೆಚ್ಚು ಎಚ್ಚರ ವಹಿಸಬೇಕು.
ಚಳಿಗಾಲದಲ್ಲಿ ಬೆಚ್ಚಗಿ ಉಡುಪುಗಳನ್ನು ಧರಿಸಬೇಕು. ತಣ್ಣೀರಿನಲ್ಲಿ ಸ್ನಾನ ಮಾಡಬಾರದು. ಮುಂಜಾವು ವೇಳೆ ಇಬ್ಬನಿಗೆ ಒಡ್ಡಿಕೊಳ್ಳಬಾರದು. ಆಗಾಗ ಬೆಚ್ಚಗಿನ ಪಾನೀಯ ಸೇವನೆ (ಕಾಫಿ, ಗಂಜಿ, ಕಷಾಯ) ಸೇವನೆ, ಬಿಸಿಯಾಗಿರುವಾಗಲೇ ಆಹಾರ ಸೇವನೆ ಮಾಡುವುದು ಸೂಕ್ತ.