“ಭಾರತ ಹಳ್ಳಿಗಳ ರಾಷ್ಟ್ರ” ಇದು ಶಾಲಾದಿನಗಳಿಂದಲೂ ಕಲಿತ ಪಾಠ. ಆದರೆ ಇಲ್ಲಿನ ಬಹುತೇಕ ಹಳ್ಳಿಗಳು ಹೇಗಿವೆ ? ಹೇಳುತ್ತಾ ಹೋದರೆ ಕೊರತೆಗಳ ಪಟ್ಟಿಯೇ ಕಾಣುತ್ತಾ ಹೋಗುತ್ತವೆ. ಗ್ರಾಮ ಪಂಚಾಯತಿಗಳು ಅಸ್ತಿತ್ವಕ್ಕೆ ಬಂದ ನಂತರ ಪರಿಸ್ಥಿತಿ ತಕ್ಕಮಟ್ಟಿಗೆ ಸುಧಾರಣೆಯಾಗಿದೆಯಾದರೂ ನೂರಕ್ಕೆ ನೂರು ಬದಲಾವಣೆ ಆಗಿದೆ ಎಂದು ಹೇಳಲು ಆಗುವುದಿಲ್ಲ. ಆದರೆ ಪರಿಸ್ಥಿತಿ ಶೋಚನೀಯವಾಗಿಯೇನೂ ಇಲ್ಲ. ಪಂಚಾಯತ್ ಪ್ರತಿನಿಧಿಗಳು, ಗ್ರಾಮೀಣಾಭಿವೃದ್ಧಿ ಇಲಾಖೆ ಪರಿಶ್ರಮದಿಂದ ನಿಧಾನವಾಗಿಯಾದರೂ ಸುಧಾರಣೆಯಾಗುತ್ತಿದೆ. ಈ ಹಾದಿಯಲ್ಲಿ ಸಂಪೂರ್ಣ ಸುಧಾರಣೆಯಾಗಿರುವ ಹಳ್ಳಿಯಿದೆ. ಅದು ಇಬ್ರಾಹಿಂಪುರ.
ತೆಲಂಗಾಣ ರಾಜ್ಯದ ಮೇಡಕ್ ಜಿಲ್ಲೆಯ ಸಿದ್ದಿಪೇಟ್ ಮಂಡಲದ ವ್ಯಾಪ್ತಿಯಲ್ಲಿ ಇಬ್ರಾಹಿಂಪು ಗ್ರಾಮವಿದೆ. ಇಲ್ಲಿನ ಜನಸಂಖ್ಯೆ 1700. ಮಧ್ಯಮ ಪ್ರಮಾಣದ ಹಳ್ಳಿ. ಕೆಲವೇ ವರ್ಷಗಳ ಹಿಂದೆ ಇಲ್ಲಿ ವಿಶೇಷತೆ ಏನೂ ಇರಲಿಲ್ಲ. ಆದರೀಗ ಅದೊಂದು ಆದರ್ಶ ಗ್ರಾಮ. ಸ್ಥಳೀಯ ಶಾಸಕರು, ಗ್ರಾಮ ಪಂಚಾಯತಿ, ಸರ್ಕಾರ ಮತ್ತು ಸ್ಥಳೀಯ ಜನತೆ ಒಟ್ಟಾಗಿ ಅಭಿವೃದ್ಧಿ ಮಂತ್ರ ಉಸಿರಾಡಿದರೆ ಹಳ್ಳಿಯೊಂದು ಹೇಗೆ ಮಾದರಿಯಾಗಬಹುದು ಎಂಬುದಕ್ಕೆ ಇಲ್ಲಿದೆ ಉದಾಹರಣೆ.
ಕರ್ನಾಟಕ ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆ ಇಬ್ರಾಹಿಂಪುರ ಅಧ್ಯಯನಕ್ಕೆ ಆಯ್ಕೆ ಮಾಡಿದ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳಲ್ಲಿ ನನ್ನ ಹೆಸರು ಇತ್ತು. ಹೋಗುವ ಮುನ್ನವೇ ಅದರ ಬಗ್ಗೆ ಓದಿಕೊಂಡಿದೆನಾದರೂ ಪ್ರತ್ಯಕ್ಷ ನೋಡಿದಾಗ ಆಗುವ ಅನುಭವವೇ ಬೇರೆ. ಅಲ್ಲಿಗೆ ಹೋಗಿ ನೋಡಿದಾಗ ನನ್ನ ಕಲ್ಪನೆಗೂ ಮೀರಿ ಆ ಗ್ರಾಮ ಅಭಿವೃದ್ಧಿಯಾಗಿತ್ತು.
ತೆಲಂಗಾಣದ ರಾಜಧಾನಿ ಹೈದ್ರಾಬಾದಿನಿಂದ ಇಬ್ರಾಹಿಂಪುರ 100 ಕಿಲೋ ಮೀಟರ್ ದೂರವಿದೆ. ಅಲ್ಲಿ ಅಧಿಕಾರಿಗಳ ತಂಡ ಹೋಗಿ ಇಳಿದಾಗ ಸಾಂಪ್ರದಾಯಿಕ ಸ್ವಾಗತ ದೊರೆಯಿತು. ಊರೊಳಗೆ ಹೋಗುತ್ತಿದ್ದಂತೆ ಅಚ್ಚರಿ. ಎಲ್ಲಿಯೂ ಕಸವಾಗಲಿ, ಪ್ಲಾಸ್ಟಿಕ್ ಬಾಟಲುಗಳಾಗಲಿ, ಕೊಚ್ಚೆಯಾಗಲಿ ಕಾಣಲಿಲ್ಲ. ನೆರೆರಾಜ್ಯಗಳ ಅಧಿಕಾರಿಗಳು ಬರುತ್ತಾರೆ ಎಂದೇನೂ ಹೀಗೆ ಮಾಡಿರಲಿಲ್ಲ. ಆ ಊರು ಇದ್ದಿದ್ದೇ ಹಾಗೆ. ಕಾಲ್ನಡಿಗೆಯಲ್ಲಿ ಊರು ಸುತ್ತಿದೆವು. ಗ್ರಾಮಸ್ಥರೊಂದಿಗೆ, ಪಂಚಾಯತ್ ಪ್ರತಿನಿಧಿಗಳೊಂದಿಗೆ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿದೆವು. ಎಲ್ಲರಲ್ಲಿಯೂ ಒಂದೇ ಸಂಕಲ್ಪ ಅದು ಗ್ರಾಮಾಭಿವೃದ್ಧಿ.
ಸೊಳ್ಳೆಗಳಿಲ್ಲದ ಊರು: ಹೀಗೆಂದರೆ ನಿಮಗೆ ಅಚ್ಚರಿಯಾಗುತ್ತದೆ ಅಲ್ಲವೇ… ಹೌದು ಈ ಊರಲ್ಲಿ ಸೊಳ್ಳೆ ಇಲ್ಲ, ಚರಂಡಿಗಳೇ ಇಲ್ಲ, ಹುಡುಕಿದರೂ ಒಂದು ಪ್ಲಾಸ್ಟಿಕ್ ಬ್ಯಾಗ್ ಸಿಗಲ್ಲ. ಸಮುದಾಯ ಸಹಭಾಗಿತ್ವ ಮತ್ತು ಅಧಿಕಾರಿಗಳ ಇಚ್ಚಾಶಕ್ತಿ ಇದ್ದರೆ ಈ ರೀತಿಯ ಸ್ವರ್ಗ ಸೃಷ್ಟಿಸಬಹುದು ಎಂಬ ಮಾತನ್ನು ಪದೇಪದೇ ಹೇಳಿದರೆ ತಪ್ಪಾಗುವುದಿಲ್ಲ. ಇಲ್ಲಿನ ಅಭಿವೃದ್ಧಿಗೆ ಮಾದರಿ ಗ್ರಾಮವೆಂದು ಹೆಸರು ಪಡೆಯುವುದಕ್ಕೆ ಸ್ಥಳೀಯ ಶಾಸಕ (ಸಿದ್ದಿಪೇಟ್) ಹರೀಶ್ ರಾವ್ ಅವರ ಇಚ್ಛಾಶಕ್ತಿಯೂ ಕಾರಣ. ಪ್ರತಿಹಂತದಲ್ಲಿಯೂ ಅವರ ಮಾರ್ಗದರ್ಶನವಿದೆ.
ಕಸ ಕಾಣದ ಹಾದಿಗಳು: ಊರಿನ ಯಾವ ರಸ್ತೆಯಲ್ಲಿಯೂ ಕಸ ಕಾಣುವುದಿಲ್ಲ. ಗ್ರಾಮಸ್ಥರು ತಮ್ಮತಮ್ಮ ಮನೆಗಳ ಮುಂದಿನ ರಸ್ತೆ, ಆವರಣವನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಾರೆ. ಒಣಕಸ – ಹಸಿಕಸ ವಿಂಗಡಣೆ ಕಾರ್ಯವೂ ವ್ಯವಸ್ಥಿತವಾಗಿ ನಡೆಯುತ್ತದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಜಾಗೃತಗೊಂಡಿದ್ದಾರೆ.
ಬಯಲು ಶೌಚಮುಕ್ತ: ಸರ್ಕಾರಗಳು-ಅಧಿಕಾರಿಗಳು ಎಷ್ಟೇ ಶ್ರಮಿಸಿದರೂ ಎಲ್ಲ ಹಳ್ಳಿಗಳಿನ್ನೂ ಸಂಪೂರ್ಣ ಬಯಲುಮುಕ್ತ ಶೌಚಾಲಯಗಳಾಗಿಲ್ಲ. ಇಬ್ರಾಹಿಂಪುರ ಈ ದಿಶೆಯಲ್ಲಿಯೂ ಮಾದರಿಯಾಗಿದೆ. ಅಲ್ಲಿರುವ ಪ್ರತಿಮನೆಯೂ ಶೌಚಾಲಯ ಹೊಂದಿರುವ ಜೊತೆಗೆ ಗ್ರಾಮದಲ್ಲಿ ಸಮುದಾಯ ಶೌಚಾಲಯಗಳು ಇವೆ. ಇಲ್ಲಿಯೂ ಸ್ವಚ್ಛತೆ ಕಾಪಾಡಿಕೊಂಡಿದ್ದಾರೆ.
ಚರಂಡಿ: ತೆರೆದ ಚರಂಡಿಗಳು ಹೆಚ್ಚಿದ್ದಷ್ಟು ಕಸ-ಕೊಚ್ಚೆ ಸಂಗ್ರಹಣೆ ಇರುತ್ತದೆ. ಇಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗಲು ನಿರ್ಮಿಸಿರುವ ಚರಂಡಿ ಮಾತ್ರ ಇದೆ. ಇದು ಸಹ ಸೊಳ್ಳೆಮುಕ್ತತೆಗೆ ಕಾರಣವಾಗಿರಬಹುದು. ಕಸವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲು ಕ್ರಮಬದ್ಧ ವ್ಯವಸ್ಥೆಯಿರುವುದರಿಂದ ಹೆಚ್ಚಿನ ಚರಂಡಿಗಳ ಅಗತ್ಯವಿಲ್ಲ.
ಇಂಗುಗುಂಡಿ: ಸಾರ್ವಜನಿಕ ಕೊಳಾಯಿಗಳಲ್ಲಿ ವ್ಯರ್ಥವಾಗಿ ನೀರು ಹರಿದು ಹೋಗುವುದು ಅಲ್ಲಲ್ಲಿ ಕಾಣುತ್ತೇವೆ. ಆದರೆ ಈ ಊರಿನಲ್ಲಿ ಈ ದೃಶ್ಯ ಹುಡುಕಿದರೂ ಸಿಗದು. ಹನಿಹನಿ ನೀರನ್ನು ಮುತುವರ್ಜಿಯಿಂದ ಬಳಸುತ್ತಾರೆ. ಇದಲ್ಲದೇ ಅಂತರ್ಜಲ ಮಟ್ಟ ಹೆಚ್ಚಿಸಲು ಪ್ರತಿಯೊಂದು ಮನೆಯಲ್ಲಿಯೂ ಇಂಗುಗುಂಡಿ ಮಾಡಲಾಗಿದೆ. ಬಿದ್ದ ಹನಿನೀರು ಇಲ್ಲಿ ನಿಧಾನವಾಗಿ ಸೇರುತ್ತದೆ. ಇದರಿಂದಾಗಿ ಇಬ್ರಾಹಿಂಪುರ ಮತ್ತು ಸುತ್ತಲಿನ ಸ್ಥಳಗಳಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿದೆ ಎಂದು ಹೇಳಲಾಗುತ್ತದೆ. ಇದಿಷ್ಟೇ ಅಲ್ಲ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೂ ಇಲ್ಲಿ ಆದ್ಯತೆ ನೀಡಲಾಗಿದೆ. ಇದರಿಂದಾಗಿ ಕಾಲರಾದಂಥ ಸಾಂಕ್ರಾಮಿಕ ರೋಗಗಳ ಸುಳಿವೂ ಇಲ್ಲಿಲ್ಲ.
ಸಮುದಾಯ ಕುರಿ ಸಾಕಣೆ ಕೇಂದ್ರ: ಇಲ್ಲಿನ ಹೆಚ್ಚಿನ ಮನೆಗಳವರು ಕುರಿಗಳನ್ನು ಸಾಕುತ್ತಾರೆ. ಪ್ರತಿಯೊಂದು ಮನೆಯ ಮುಂದೆಯೂ ಕುರಿದೊಡ್ಡಿ ಇದ್ದರೆ ಸ್ವಚ್ಚತೆ ನಿರ್ವಹಣೆ ಕಷ್ಟ. ಆದ್ದರಿಂದಲೇ ಗ್ರಾಮದ ಹೊರಭಾಗದಲ್ಲಿ ಸಮುದಾಯ ಕುರಿ ಸಾಕಣೆ ಕೇಂದ್ರವಿದೆ. ಕುರಿಗಳನ್ನು ಮೇಯಿಸಿಕೊಂಡು ಬಂದ ನಂತರ ಇಲ್ಲಿ ಬಿಡಲಾಗುತ್ತದೆ. ಸಾಕಷ್ಟು ವಿಶಾಲವಾಗಿರುವ ಜಾಗವಾದ್ದರಿಂದ ಪ್ರತಿಯೊಬ್ಬರು ತಾವು ಸಾಕುತ್ತಿರುವ ಕುರಿಗಳನ್ನು ಪ್ರತ್ಯೇಕವಾಗಿ ಕೂಡಿ ಹಾಕುತ್ತಾರೆ. ಪಶುವೈದ್ಯರು ನಿಯಮಿತವಾಗಿ ಭೇಟಿನೀಡಿ ಊರಿನ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಕುರಿಗಳ ಕಳ್ಳತನ ತಡೆಯುವುದಕ್ಕಾಗಿ ಊರಿನ ಪ್ರತಿ ಕುಟುಂಬದವರು ಪಾಳಿಯಲ್ಲಿ ಕಾವಲು ಇರುತ್ತಾರೆ. ಇದರ ಜೊತೆಗೆ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಸ್ಥಳೀಯ ಗ್ರಾಮ ಪಂಚಾಯಿತಿ ಸುಸಜ್ಜಿತ ಕಟ್ಟಡದಲ್ಲಿದೆ. ಇಲ್ಲಿನ ಎಲ್ಲ ದಾಖಲೆಗಳು ಗಣಕೀಕೃತವಾಗಿದೆ. ಕಂದಾಯ ಸಂಗ್ರಹಣೆಯೂ ಉತ್ತಮ ಮಟ್ಟದಲ್ಲಿದೆ. ಊರಿಗೆ ಭೂಷಣವೆಂಬಂತೆ ಸುಸಜ್ಜಿತ ಶಾಲೆಯಿದೆ. ನಗರ ಪ್ರದೇಶಗಳಲ್ಲಿಯೂ ಅಪರೂಪ ಎನಿಸುವ ಆಹ್ಲಾದಕರ ಪಾರ್ಕಿದೆ. ಊರಿನ ಎರಡೂ ಬದಿಗಳಲ್ಲಿಯೂ ಮರಗಳಿವೆ. ಗ್ರಾಮದೊಳಗೆ ಮತ್ತು ಗ್ರಾಮದ ಸುತ್ತಲೂ ಸಸಿಗಳನ್ನು ನೆಡುವುದಕ್ಕೆ ಗ್ರಾಮಸ್ಥರೂ ಕೈ ಜೋಡಿಸಿದ್ದಾರೆ. ಎರಡು ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಟ್ಟಿದ್ದಾರೆ. ಗಮನಾರ್ಹ ಸಂಗತಿಯೆಂದರೆ ನೆಟ್ಟ ಸಸಿಗಳಲ್ಲಿ ಬಹುತೇಕ ಉಳಿದು ಬೆಳೆದಿವೆ-ಬೆಳೆಯುತ್ತಿವೆ.
ರಾಷ್ಟ್ರೀಯ ಪ್ರಶಸ್ತಿ: ಇಬ್ರಾಹಿಂಪುರದ ಮಾದರಿ ಕಾರ್ಯಗಳಿಂದಾಗಿ ರಾಷ್ಟ್ರೀಯ ಗೌರವ್ ಗ್ರಾಮಸಭಾ ಪ್ರಶಸ್ತಿಯೂ ದೊರೆತಿದೆ. ಇವೆಲ್ಲದರ ಜೊತೆಗೆ ಮತ್ತೊಂದು ವಿಶೇಷ ಸಂಗತಿ ಇದೆ. ಮತದಾನ ಮಾಡುವ ಬಗ್ಗೆ ಸತತವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದಾಗಿ ವಿಧಾನಸಭಾ ಚುನಾವಣೆಯಲ್ಲಿ ಈ ಗ್ರಾಮದಲ್ಲಿ ಶೇಕಡ 97.6 ರಷ್ಟು ಮತದಾನ ಆಗಿದೆ. ಇಂಥ ಗ್ರಾಮಕ್ಕೆ ಭೇಟಿ ನೀಡಿದ್ದು ಭಾರಿ ಖುಷಿ ನೀಡಿತು. ಗ್ರಾಮೀಣಾಭಿವೃದ್ಧಿ ಕಾರ್ಯದಲ್ಲಿ ಮತ್ತಷ್ಟೂ ಮಗದಷ್ಟೂ ತೊಡಗಿಸಿಕೊಳ್ಳಲು ಹುರುಪು ನೀಡಿತು.