ಸಿರಿಧಾನ್ಯ ಸೇವಿಸಿ; ರೋಗನಿರೋಧಕ ಶಕ್ತಿ ವೃದ್ಧಿಸಿ

ಸಿರಿಧಾನ್ಯಗಳನ್ನು ಎಲ್ಲಾ ವಯೋಮಾನದವರು ಉಪಯೋಗಿಸಬಹುದು. ಅಲ್ಲದೇ ಪ್ರಮುಖವಾಗಿ ಮಧುಮೇಹ ರೋಗ ನಿಯಂತ್ರಣಕ್ಕೂ ಸಿರಿಧಾನ್ಯ ಬಳಕೆ ಹೆಚ್ಚು ಪರಿಣಾಮಕಾರಿ. ಇದರಲ್ಲಿರುವ ಕ್ಷಾರೀಯ ಗುಣ ನಾರಿನಾಂಶ ಮಲಬದ್ಧತೆ, ಡಯಾಬಿಟೀಸ್‌, ಬೊಜ್ಜು ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳನ್ನು ನಿಯಂತ್ರಿಸಬಲ್ಲದಾಗಿದೆ. ಸಿರಿಧಾನ್ಯಗಳ ಸೇವನೆಯಿಂದ ದೇಹದಲ್ಲಿ ನ್ಯೂರೋ ಟ್ರಾನ್ಸ್ ಮೀಟರ್ ನಂತೆ ಕಾರ್ಯನಿರ್ವಹಿಸುವ ಸೆರೆಟೋನಿನ್ ಉತ್ಪತ್ತಿಯಾಗಿ ಮಾನಸಿಕ ಒತ್ತಡವೂ ಕಡಿಮೆಯಾಗಲಿದೆ

0

ಕೊರೊನಾ ಮಹಾಮಾರಿ ಸೋಂಕು ಹರಡುವುದಕ್ಕೆ ರೋಗನಿರೋಧಕ ಶಕ್ತಿಯ ಕೊರತೆಯೂ ಒಂದು ಪ್ರಮುಖ ಕಾರಣ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇಂಥ ರೋಗನಿರೋಧಕ ಶಕ್ತಿ ಹೆಚ್ಚಿಸಲು ನಾವು ಸೇವಿಸುವ ಆಹಾರವೇ ಮೊದಲ ಔಷಧ. ಇದಕ್ಕಾಗಿ ನಾವು ಸೇವಿಸುವ ಆಹಾರ ಪದಾರ್ಥಗಳ ಗುಣ ಏನು? ಅವುಗಳಿಂದೇನು ಪ್ರಯೋಜನ? ಯಾವ ಪದಾರ್ಥ ಯಾವ ರೀತಿ ಔಷಧಿಯಾಗಬಲ್ಲದು ಎಂಬುದನ್ನು ತಿಳಿಯುವುದು ಮುಖ್ಯ.

ಈ ನಿಟ್ಟಿನಲ್ಲಿ ಸಿರಿಧಾನ್ಯಗಳ ಮಹತ್ವವೂ ಹೆಚ್ಚಾಗಿದೆ. ಕಿರು ಧಾನ್ಯಗಳೆಂದು ಈ ಹಿಂದೆ ಕರೆಯಿಸಿಕೊಳ್ಳುತ್ತಿದ್ದ ಬೆಳೆಗಳು ಪ್ರಸ್ತುತ “ಸಿರಿಧಾನ್ಯ”ಗಳೆಂದು ಕರೆಯಲ್ಪಡುತ್ತಿವೆ. ಅಲ್ಲದೇ ರಾಜ್ಯ ಸರ್ಕಾರ ಕೂಡ ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ.

ಬಡವರ ಆಹಾರ, ಬರಗಾಲ ಮಿತ್ರವೆಂದು ದಶಕಗಳ ಹಿಂದೆ ಬೆಳೆಯುತ್ತಿದ್ದ ಬೆಳೆಗಳು ಇಂದು ಶ್ರೀಮಂತರ ಬಹುಬೇಡಿಕೆಯ ಸಿರಿ ಧಾನ್ಯಗಳಾಗಿವೆ.  ಈ ಬೆಳೆಗಳು ಕಡಿಮೆ ಮಳೆ, ಕಡಿಮೆ ಫಲವತ್ತತೆ ಇರುವ ಭೂಮಿಯಲ್ಲಿ ಸಮೃದ್ಧವಾಗಿ ಬೆಳೆಯುತ್ತವೆ. ಇವುಗಳು ಪೋಷಕಾಂಶಗಳ ಆಗರ. ಆಯುರ್ವೇದದಲ್ಲಿಯೂ ಈ ಸಿರಿಧಾನ್ಯಗಳಿಗೆ ಮಹತ್ತರ ಪಾತ್ರವನ್ನೂ ನೀಡಲಾಗಿದೆ.

ಸಿರಿ ಧಾನ್ಯಗಳಲ್ಲಿ ಪ್ರಮುಖವಾಗಿ ರಾಗಿ, ನವಣೆ, ಬರಗು ಊದಲು, ಸಾಮೆ,ಅರಕ  ಪ್ರಮುಖ, 2015-16 ರಿಂದ ರಾಜ್ಯದಲ್ಲಿ ಸಿರಿಧಾನ್ಯಗಳನ್ನು ಸರ್ಕಾರ ಪ್ರೋತ್ಸಾಹಿಸುತ್ತಾ ಬಂದಿದೆ. ಇತ್ತೀಚೆಗೆ ಸಿರಿಧಾನ್ಯ ಬಗೆಗಿನ ಜಾಗೃತಿ ಹಾಗೂ ಅವುಗಳ ಮಹತ್ವದಿಂದಾಗಿ ಬಳಕೆಯೂ ಹೆಚ್ಚುತ್ತಿದೆ. ಇಂತಹ ಸಿರಿಧಾನ್ಯಗಳು ಕೊರೊನಾ ಸೋಂಕಿನಿಂದ ರಕ್ಷಿಸುವ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಕಾರಿ.

ಸಿರಿಧಾನ್ಯಗಳು ಪೋಷಕಾಂಶಗಳ ಖನಿಜವಾಗಿದ್ದು, ಶೇಕಡಾವಾರು ಪ್ರೋಟೀನ್‌ 5.8- 12.5, ಪಿಷ್ಟ 63.1 – 78.5, ನಾರಿನಾಂಶ 3.5 – 14.0, ಕೊಬ್ಬು 2.3 – 6.4 ಹೊಂದಿವೆ, ಅಧಿಕ ಪ್ರಮಾಣದಲ್ಲಿ ಕ್ಯಾಲ್ಷಿಯಂ, ಕಬ್ಬಿಣ, ರಂಜಕ ಖನಿಜ ಹೊಂದಿದ್ದು, ಥೈಮಿನ್‌ ಮತ್ತು ನೈಸಿನ ವಿಟಮಿನ್‌ಗಳನ್ನು ಸಹ  ಹೊಂದಿವೆ. ಇವುಗಳು ರೋಗ ನಿರೋಧಕ ಶಕ್ತಿ ವೃದ್ಧಿಸಲು ಸಹಕಾರಿಯಾಗಲಿವೆ.

ಸಿರಿಧಾನ್ಯಗಳನ್ನು ಎಲ್ಲಾ ವಯೋಮಾನದವರು ಉಪಯೋಗಿಸಬಹುದು. ಅಲ್ಲದೇ ಪ್ರಮುಖವಾಗಿ ಮಧುಮೇಹ ರೋಗ ನಿಯಂತ್ರಣಕ್ಕೂ ಸಿರಿಧಾನ್ಯ ಬಳಕೆ ಹೆಚ್ಚು ಪರಿಣಾಮಕಾರಿ. ಇದರಲ್ಲಿರುವ ಕ್ಷಾರೀಯ ಗುಣ ನಾರಿನಾಂಶ ಮಲಬದ್ಧತೆ, ಡಯಾಬಿಟೀಸ್‌, ಬೊಜ್ಜು ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳನ್ನು ನಿಯಂತ್ರಿಸಬಲ್ಲದಾಗಿದೆ. ಸಿರಿಧಾನ್ಯಗಳ ಸೇವನೆಯಿಂದ ದೇಹದಲ್ಲಿ ನ್ಯೂರೋ ಟ್ರಾನ್ಸ್ ಮೀಟರ್ ನಂತೆ ಕಾರ್ಯನಿರ್ವಹಿಸುವ ಸೆರೆಟೋನಿನ್ ಉತ್ಪತ್ತಿಯಾಗಿ ಮಾನಸಿಕ ಒತ್ತಡವೂ ಕಡಿಮೆಯಾಗಲಿದೆ

ಲೇಖಕರು: ಡಾ. ಎ.ಬಿ. ಪಾಟೀಲ, ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ

LEAVE A REPLY

Please enter your comment!
Please enter your name here