ಕೃಷಿ ಭೂಮಿಯಲ್ಲಿ ಇಂಗಾಲದ ಸಂಗ್ರಹಣೆ, ರೈತರಿಗೆ ಸಿಗಬೇಕಾದ ಮನ್ನಣೆ

3

ಲೇಖಕರು: ಪ್ರಶಾಂತ್ ಜಯರಾಮ್ ಕೃಷಿಕರು ಮತ್ತು ಕೃಷಿ ಸಲಹೆಗಾರರು, ಮೊಬೈಲ್ :9342434530

ಆರ್ಥಿಕ ಅಭಿವೃದ್ಧಿ ಸಾಧನೆ ಮಾತ್ರ ಅಭಿವೃದ್ಧಿಯ ಏಕೈಕ ಮಾನದಂಡ ಎಂಬ ಹುಚ್ಚು ಪೈಪೋಟಿಯಲ್ಲಿ ಪ್ರಮುಖವಾಗಿ ಸಾಗುತ್ತಿರುವ ಚೀನಾ, ಅಮೇರಿಕಾ,ಜಪಾನ್,ಯುರೋಪ್,ರಷ್ಯಾ,ಭಾರತ, ಇನ್ನಿತರೇ ದೇಶಗಳು ನೈಸರ್ಗಿಕ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಮುಂದಿನ 50 ರಿಂದ 60 ವರ್ಷದಲ್ಲಿ ಕಲ್ಲಿದ್ದಲು,ತೈಲಬಾವಿಗಳು, ಖನಿಜ ಸಂಪತ್ತು ಬರಿದಾಗುತ್ತದೆ.

ಕೈಗಾರಿಕೆ ಕ್ರಾಂತಿ, ಅತಿಯಾದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯಿಂದ ವಾತಾವರಣದಲ್ಲಿ ತಾಪಮಾನ ಏರಿಕೆ ಉಂಟಾಗುತ್ತಿದೆ. ಇದರ ಹೊಡೆತ ಪರಿಸರದಲ್ಲಿರುವ ಸಕಲ ಜೀವರಾಶಿಗಳ ಮೇಲೆ ಆಗುತ್ತಿದೆ. ಆರ್ಥಿಕವಾಗಿ ಇದರ ನೇರ ಬಲಿಪಶು ರೈತ ಮತ್ತು ಕೃಷಿ ಕ್ಷೇತ್ರವಾಗಿರುತ್ತದೆ.

ಹವಾಮಾನ ಬದಲಾವಣೆ ಹೆಸರಿನಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸುವ ಯೋಜನೆ ರೂಪಿಸಲು ಮತ್ತು ಹವಾಮಾನ ಬದಲಾವಣೆ ನಿಧಿಯ ಹಣಕಾಸು ಸೌಲಭ್ಯಗಳನ್ನು ಬಳಸಿಕೊಳ್ಳಲು ಬಂಡವಾಳಶಾಹಿ ಕಾರ್ಪೊರೇಟ್ ಕಂಪನಿಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ.

ಶೇ 50% ಕ್ಕೂ ಹೆಚ್ಚು ಕೃಷಿ ಭೂಮಿ ಹೊಂದಿರುವ ರೈತರನ್ನು ಕಾರ್ಬನ್ ಕ್ರೆಡಿಟ್ ಯೋಜನೆಯ ಮುಖ್ಯ ಪಾಲುದಾರರನ್ನಾಗಿ ಮಾಡಬೇಕಿದೆ. ಸಮಾಜದಲ್ಲಿ ಸುಸ್ಥಿರ ಅಭಿವೃದ್ಧಿ ಸಾದಿಸಲು ಕೃಷಿ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಕೃಷಿ ಕ್ಷೇತ್ರ ಮತ್ತು ರೈತರನ್ನು ಪರಿಗಣಿಸದೆ,ಬಹುರಾಷ್ಟ್ರೀಯ ಕಂಪನಿಗಳು ತಯಾರಿಕೆ ಮಾಡುವ ಸೋಲಾರ್ ಎನರ್ಜಿ,ವಿಂಡ್ ಎನರ್ಜಿ,ಬ್ಯಾಟರಿ ಚಾಲಿತ ವಾಹನ ತಯಾರಿಕೆಯನ್ನು ಪ್ರಮುಖವಾಗಿ ತೆಗೆದುಕೊಂಡು ಇವುಗಳ ಮೇಲೆ ಹೆಚ್ಚು ಹಣಕಾಸು ನೆರವು ನೀಡುತ್ತಿರುವುದು ಒಂದು ದೊಡ್ಡ ದಂಧೆಯಾಗಿದೆ.

ಉತ್ಪಾದನಾ ಮತ್ತು ಸೇವಾ ವಲಯದಲ್ಲಿ ಬಳಕೆಯಾಗುವ ಒಳಹರಿವಿನ ವೆಚ್ಚವನ್ನು ಪರಿಗಣಿಸಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ಒಳಹರಿವಿನ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಕೈಗಾರಿಕೆಗಳಲ್ಲಿ ತಾಂತ್ರಿಕತೆ ಮೂಲಕ ಬಳಕೆ ಮಾಡಿಕೊಳ್ಳುವ ಸೂರ್ಯನ ಶಕ್ತಿಯನ್ನು ಹಣದ ರೂಪದಲ್ಲಿ ಲೆಕ್ಕ ಹಾಕಲಾಗುತ್ತದೆ. ಕೃಷಿ ಕ್ಷೇತ್ರದಲ್ಲಿ ನೈಸರ್ಗಿಕವಾಗಿ ಆಗುವ ಸೂರ್ಯನ ಶಕ್ತಿಯ ಬಳಕೆಯನ್ನು ಕಡೆಗಣಿಸಲಾಗಿದೆ. ಹಣ ಮತ್ತು ಶಕ್ತಿಯ ಅಸಮಾನ ವಿನಿಮಯ ನೀತಿಯನ್ನು ಸರಿಪಡಿಸಬೇಕಿದೆ.

ಕಾರ್ಬನ್ ಕ್ರೆಡಿಟ್ ನಿಧಿಯನ್ನು ಕಾರ್ಪೊರೇಟ್ ಕಂಪನಿಗಳು ಕಬಳಿಸಿ,ರೈತರಿಗೆ ಮಣ್ಣು ಉಳಿಸಿ ಎನ್ನುವುದರಿಂದ ಹವಾಮಾನ ಬದಲಾವಣೆಯ ಸವಾಲುಗಳನ್ನು ಸರಿಪಡಿಸಲಾಗುವುದಿಲ್ಲ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಅತಿವೃಷ್ಟಿ, ಅನಾವೃಷ್ಟಿಗಳು ಸಂಭವಿಸುತ್ತಿದೆ. ಇದರಿಂದ ಭಾರತೀಯ ರೈತರಿಗೆ ಪ್ರತಿ ವರ್ಷ 05 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಬೆಳೆ ನಷ್ಟವಾಗುತ್ತಿದೆ,ಈ ನಷ್ಟವನ್ನು ಹವಾಮಾನ ಬದಲಾವಣೆ ನಿಧಿಯಿಂದ ರೈತರಿಗೆ ಪರಿಹಾರ ರೂಪದಲ್ಲಿ ಭರಿಸಬೇಕು.

ಮಾನವನ ಹಸಿವು ನೀಗಿಸಲು ಕೃಷಿ ಭೂಮಿಯಲ್ಲಿ ಬೆಳೆಯುವ ಆಹಾರ ಉತ್ಪಾದನೆಯಿಂದ ಆಗುವ ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ಕೃಷಿ ಕ್ಷೇತ್ರಕ್ಕೆ ಆಂಟಿಸುವುದು ಸಮಂಜಸವಲ್ಲ. ಪೆಟ್ರೋಲ್,ಡೀಸೆಲ್ ಬಳಕೆಯಿಂದ ವಾಹನದಿಂದ ಹೊರಸುವ ಅನಿಲದ ಲೆಕ್ಕವನ್ನು ವಾಹನದ ಮೇಲೆ ಹಾಕಲಾಗುತ್ತದೆ ಹೊರತು ತೈಲ ಕಂಪನಿಯ ಮೇಲೆ ಹಾಕುವುದಿಲ್ಲ,ಇದೇ ರೀತಿ ಆಹಾರ ಉತ್ಪಾದನೆ ಮಾಡುವ ಕೃಷಿ ಕ್ಷೇತ್ರದ ಮೇಲೆ ಹೊರೆ ಹಾಕುವ ಕ್ರಮವನ್ನು ಕೈ ಬಿಡಬೇಕು.

ಹವಾಮಾನ ವೈಫರೀತ್ಯಕ್ಕೆ ಕೃಷಿ ಕ್ಷೇತ್ರ ಶೇಕಡಾ 14% ಕಾರಣವಾಗುತ್ತಿದೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ವಾಸ್ತವವಾಗಿ ನೋಡುವುದಾದರೆ ಭಾರತ ದೇಶದ ಒಟ್ಟಾರೆ ಹಸಿರು ಮನೆ ಅನಿಲ ಹೊರಸೂಸುವಿಕೆ ಪ್ರಮಾಣ 3.4 ಗಿಗಾ ಟನ್. ಭಾರತ ದೇಶದ 155 ದಶಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆಯಲಾಗುತ್ತಿರುವ ಬೆಳೆಗಳಿಂದ ಸುಮಾರು 01 ಗಿಗಾ ಟನ್ (1000 ಮಿಲಿಯನ್ ಟನ್ ) ಕಾರ್ಬನ್ ಡೈಆಕ್ಸೈಡ್ ವಾತಾವರಣದಿಂದ ಕಡಿಮೆಗೊಳಿಸಲು ಸಹಾಯ ಮಾಡುತ್ತದೆ.

ಒಂದು ಕರ್ಬನ್ ಕ್ರೆಡಿಟ್ ಅಂದರೆ ವಾತಾವರಣದಲ್ಲಿನ 01 ಟನ್ ಕಾರ್ಬನ್ ಡೈಆಕ್ಸೈಡ್ ಕಡಿಮೆಗೊಳಿಸುವುದು. 01 ಕರ್ಬನ್ ಕ್ರೆಡಿಟ್ ಇಂದಿನ ಮೌಲ್ಯ 100 ಡಾಲರ್ (ರೂ 8000/), ಇದನ್ನು 190 ಡಾಲರ್ ಗೆ ಹೆಚ್ಚು ಮಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಕಾರ್ಬನ್ ಕ್ರೆಡಿಟ್ ಮಾರುಕಟ್ಟೆ ಲೆಕ್ಕಚಾರದಂತೆ ವಾರ್ಷಿಕವಾಗಿ ಭಾರತ ದೇಶದ ಕೃಷಿ ಭೂಮಿಯಲ್ಲಿ 100 ಬಿಲಿಯನ್ ಡಾಲರ್ ಮೌಲ್ಯದ ಇಂಗಾಲದ ಆದಾಯ ವೃದ್ದಿಯಾಗುತ್ತಿದೆ. ಪ್ರತಿ ಎಕರೆ ಪ್ರದೇಶಕ್ಕೆ ರೂ 21,500/ ಗಳನ್ನು ರೈತರಿಗೆ ಸಂದಾಯ ಮಾಡಬಹುದು.

ಶತಕೋಟಿ ಡಾಲರ್ ವ್ಯಯ ಮಾಡಿ ಹವಾಮಾನ ವೈಫರೀತ್ಯ ಸಮಸ್ಯೆಗೆ ಸುಸ್ಥಿರ ಮಾದರಿ ಸೃಷ್ಟಿ ಮಾಡುವುದಾಗಿ ಬಂಡವಾಳಶಾಹಿಗಳ ಪಾಲಾಗುತ್ತಿರುವ ಹಣವನ್ನು ಕೃಷಿ ಕ್ಷೇತ್ರದ ಮೇಲೆ ವಿನಿಯೋಗ ಮಾಡಿ “ರೈತರಿಗೆ ಸಂದಾಯವಾಗಲಿ,ಇಂಗಾಲದ ಆದಾಯ’ ಎಂಬ ಯೋಜನೆಯನ್ನು ರೂಪಿಸುವುದು ಸುಸ್ಥಿರ ಸಮಾಜ ನಿರ್ಮಿಸಲು ಸಹಕಾರಿಯಾಗುತ್ತದೆ.

ಪ್ರತಿಯೊಂದು ಬೆಳೆಯಲ್ಲಿ ಆಗುವ ಇಂಗಾಲದ ಜಮೆಯನ್ನು ಲೆಕ್ಕ ಹಾಕಿ, ಆ ಪ್ರಕಾರ ನೀಡಬಹುದಾದ ಕಾರ್ಬನ್ ಕ್ರೆಡಿಟ್ ಮತ್ತು ಅದಕ್ಕೆ ಅನುಗುಣವಾಗಿ ರೈತರಿಗೆ ಸಂದಾಯ ಮಾಡಬಹುದಾದ ಮೌಲ್ಯವನ್ನು ಮುಂದಿನ ದಿನಗಳಲ್ಲಿ ರೈತರಿಗೆ ಮಾಹಿತಿ ನೀಡುವುದು ಮತ್ತು ಅದನ್ನು ಕಾರ್ಯಗತಗೊಳಿಸಲು ಬೇಕಾದ ರೂಪುರೇಷಗಳನ್ನು ಸಿದ್ದಪಡಿಸಬೇಕು.

ರೈತರು ತಮ್ಮ ಕೃಷಿ ಜಮೀನಿನಲ್ಲಿರುವ ಮರ,ಬೆಳೆಗಳ ಮೂಲಕ ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ ಅನ್ನು ಹೊರತೆಗೆಯುತ್ತಾರೆ. ಇದರಿಂದ ರೈತರು ಕಾರ್ಬನ್ ಕ್ರೆಡಿಟ್ ಗಳಿಸುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಬೆಳೆ ಮತ್ತು ಬೆಳೆ ಪದ್ಧತಿಗಳಿಗೆ ಅನುಗುಣವಾಗಿ ಬೆಳೆಯ ತ್ಯಾಜ್ಯ ಮತ್ತು ಮಣ್ಣಿನಲ್ಲಿ ಇಂಗಾಲ ಶೇಖರಣೆ ಮಾಡುವುದರಿಂದ,ಪ್ರತಿ ಎಕರೆಗೆ ಬಹು ಕಾರ್ಬನ್ ಕ್ರೆಡಿಟ್‌ಗಳನ್ನು ಗಳಿಸುವ ಮೂಲಕ  ಹೆಚ್ಚುವರಿ ಆದಾಯ ಪಡೆಯುವ ಅವಕಾಶ ರೈತರಿಗಿದೆ.

ಹವಾಮಾನ ಬದಲಾವಣೆ ವಿಶ್ವಾದ್ಯಂತ ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಅನೇಕ ದೇಶಗಳು ಈ ಸಮಸ್ಯೆಯನ್ನು ಎದುರಿಸಲು ವಿಭಿನ್ನ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿವೆ.ಕೃಷಿ ಕ್ಷೇತ್ರದಲ್ಲಿ, ರೈತರ ಜಮೀನಿನಲ್ಲಿ ಆಗುವ ಕಾರ್ಬನ್ ಕ್ರೆಡಿಟ್ ಪರಿಶೀಲಿಸಿ ಅದನ್ನು ವ್ಯವಸ್ಥೆಯಲ್ಲಿ ಕಾನೂನು ಬದ್ಧಗೊಳಿಸುವ ವಿನ್ಯಾಸಗಳನ್ನು ರಚನೆ ಮಾಡಿ ಕಾಯ್ದೆ ಜಾರಿ ಮಾಡುವುದು ಅತೀ ಅವಶ್ಯಕವಾಗಿ ಆಗಬೇಕಿದೆ,

ಕಾರ್ಬನ್ ಕ್ರೆಡಿಟ್ ಯೋಜನೆಗಳು ಮತ್ತು ಅದಕ್ಕೆ ಬಳಕೆಯಾಗುತ್ತಿರುವ ಹಣ ದೈತ್ಯ ಕಾರ್ಪೊರೇಟ್ ಕಂಪನಿಗಳ ವಶವಾಗುತ್ತಿದೆ.ಇದರಲ್ಲಿ ಬಹುತೇಕ ಪಾಲು ಸೋಲಾರ್ ಪಾರ್ಕ್,ವಿಂಡ್ ಎನರ್ಜಿ,ಬ್ಯಾಟರಿ ಚಾಲಿತ ವಾಹನ ತಯಾರಿಕೆ ಇವುಗಳಿಗೆ ವಿನಿಯೋಗವಾಗುತ್ತಿದೆ ಮತ್ತು ಇವುಗಳನ್ನು ಶುದ್ಧ ಮತ್ತು ಹಸಿರಿನ ಶಕ್ತಿ ಮೂಲ ಎಂದು ಕರೆಯಲಾಗುತ್ತಿದೆ.ಸೋಲಾರ್ ಮತ್ತು ಬ್ಯಾಟರಿ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳು ಆಳವಾದ ಗಣಿಗಾರಿಕೆ ಮೂಲದಿಂದ ಬಂದದಾಗಿರುತ್ತದೆ.  ಇವುಗಳ ನಿರ್ವಹಣೆ ಮತ್ತು ವಿಲೇವಾರಿ ಮುಂದಿನ ದಿನಗಳಲ್ಲಿ ಬಹು ದೊಡ್ಡ ಸಮಸ್ಯೆಯಾಗುವುದರ ಬಗ್ಗೆ ಜಾಣ ಮೌನ ವಹಿಸಲಾಗಿದೆ. ಹವಾಮಾನ ಬದಲಾವಣೆಯನ್ನು ಸುಧಾರಣೆ ಮಾಡಬೇಕಾದರೆ ಕೃಷಿ ಕ್ಷೇತ್ರ ಮತ್ತು ರೈತರ ಪಾಲ್ಗೊಳ್ಳುವಿಕೆ ಅತೀ ಮುಖ್ಯ.  ಜೊತೆಗೆ ಇದರ ಫಲ ರೈತರಿಗೆ ಸಲ್ಲುವ ಕೆಲಸವಾಗಬೇಕು.

ವಾತಾವರಣದಲ್ಲಿ ಸೇರಿರುವ ಇಂಗಾಲದ ಡೈ ಆಕ್ಸೈಡ್ ಕಡಿಮೆ ಮಾಡುವ ಉದ್ದೇಶದಿಂದ ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್ ಅನ್ನು ಭಾರತ ಸರ್ಕಾರ ಜಾರಿಗೆ ತರುತ್ತಿದೆ.ಇದನ್ನು ಹೊಂದಿದ ಯಾವುದೇ ಕಂಪನಿಯು ಅಷ್ಟು ಪ್ರಮಾಣದ ಕಾರ್ಬನ್ ಡೈ ಆಕ್ಸೈಡ್ ಅನ್ನು ಹೊರಸೂಸುವ ಅವಕಾಶ ಹೊಂದಿರುತ್ತವೆ.ಈ ಕಾರ್ಬನ್ ಕ್ರೆಡಿಟ್​ಗಳನ್ನು ಮಾರಾಟ ಮಾಡಲು ಮತ್ತು ಖರೀದಿ ಮಾಡಲು ಅವಕಾಶ ಮಾಡಿಕೊಡುವ ವ್ಯವಸ್ಥೆಯನ್ನು ಕಾರ್ಬನ್ ಟ್ರೇಡಿಂಗ್ ಎಂದು ಕರೆಯಲಾಗುತ್ತದೆ.

ಕಲ್ಲಿದ್ದಲು,ವಿದ್ಯುತ್,ಗಣಿಗಾರಿಕೆ, ಪೆಟ್ರೋಲಿಯಂ, ಎಲ್.ಪಿ.ಜಿ, ಇತ್ಯಾದಿ ಕಂಪನಿಗಳು ತಮ್ಮ ಅನಿವಾರ್ಯ ಹೊರಸೂಸುವಿಕೆಗಳನ್ನು ಸರಿದೂಗಿಸಲು ಕಾರ್ಬನ್ ಕ್ರೆಡಿಟ್​ಗಳನ್ನು ಖರೀದಿಸುವುದು ಅನಿವಾರ್ಯವಾಗುತ್ತದೆ.

ರೈತರಿಗೆ ಕಾರ್ಬನ್ ಕ್ರೆಡಿಟ್ ನೀಡುವ ಮತ್ತು ಅದನ್ನು ಸರ್ಕಾರ ಅಥವಾ ಮಧ‍್ಯವರ್ತಿ ಸಂಸ್ಥೆಗಳ ಮೂಲಕ ಅವಶ್ಯವಿರುವ ವ್ಯಕ್ತಿ/ಸಂಸ್ಥೆ/ಕಂಪನಿ/ಸರ್ಕಾರಕ್ಕೆ ಮಾರಾಟ ಮಾಡಿ, ರೈತರಿಗೆ ಹಣ ಸಂದಾಯವಾಗುವ ವ್ಯವಸ್ಥೆ ಜಾರಿಯಾಗಬೇಕು.

3 COMMENTS

  1. ಭಾಳ ಒಳ್ಳೆಯ ವಿಚಾರ. ಕಾರ್ಬನ್ ಕ್ರೆಡಿಟ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ, ತಾಂತ್ರಿಕ ವಿಚಾರಗಳು, ಅಂಕಿ ಅಂಶಗಳ ಸಮೇತ ಸರಣಿ ಬರಹಗಳನ್ನ ಬರೆಯಿರಿ ಸರ್…

    ನಮ್ಮ ರೈತರಿಗೆ ಈ ಕುರಿತು ಜಾಗೃತಿ ಮೂಡಿಸಬೇಕಿದೆ..

    ಈ ನಿಟ್ಟಿನಲ್ಲಿ ಈ ತರಹದ ಬರಹಗಳನ್ನ ಇನ್ನೂ ಹೆಚ್ಚುಹೆಚ್ಚು ಪ್ರಕಟಿಸಿರಿ…

  2. I endorse the view but who will bell the cat?
    Can u ppl give an English translation for this simultaneously so its easy for ppl like us who are very slow in reading Kannada

  3. ನಮ್ಮ ರೈತರು ಇನ್ನೂ ಅರ್ಥವನ್ನು ಮಾಡಿಕೊಳ್ಳಲು ಪ್ರಯತ್ನ ಮಾಡಿಲ್ಲ ನಾವು ಎಷ್ಟೋ ಹೇಳಿ ದರು ಇನ್ನೂ ಕಡಿಮೆ

LEAVE A REPLY

Please enter your comment!
Please enter your name here