ಪರಿಸರ ಸಮಸ್ಯೆಗಳಿಗೆ ರಾಜಕೀಯ ನಾಯಕರೇ ಉತ್ತರದಾಯಿತ್ವ

0
“ಹವಾಮಾನ ನಿರೂಪಣೆಯನ್ನು ರಚಿಸುವುದು; ಸುಸ್ಥಿರ ಅಭಿವೃದ್ಧಿ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮದ ಕುರಿತ ಕಾರ್ಯಾಗಾರ” ಉದ್ಘಾಟನೆ

ರಾಜಕೀಯ ಸುದ್ದಿಗಳನ್ನು ವರದಿ ಮಾಡುವುದು ಸುಲಭ. ಆದರೆ ಪರಿಸರದ ವಿಷಯಗಳನ್ನು ಹಾಗೆ ವರದಿ ಮಾಡಲು ಹೋಗುವುದಿಲ್ಲ. ಅದಕ್ಕೆ ಅಧ್ಯಯನ ಅಗತ್ಯ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಮ್‌ ಅಭಿಪ್ರಾಯಪಟ್ಟರು

ಅವರು ಜುಲೈ ೧೫ರಂದು “ಹವಾಮಾನ ನಿರೂಪಣೆಯನ್ನು ರಚಿಸುವುದು; ಸುಸ್ಥಿರ ಅಭಿವೃದ್ಧಿ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮದ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಜನರಿಗೆ ಪರಿಸರದ ವಿಷಯಗಳು – ಸಮಸ್ಯೆಗಳನ್ನು ಅರ್ಥವಾಗುವ ಹಾಗೆ ನಿರೂಪಣೆ ಮಾಡುವುದು ಪತ್ರಕರ್ತರ ಜವಾಬ್ದಾರಿ. ಇಂಥ ಸಂದರ್ಭದಲ್ಲಿ ವಿಷಯಗಳನ್ನು ರಮ್ಯಗೊಳಿಸಬಾರದು ಎಂದು ಪ್ರತಿಪಾದಿಸಿದರು.

ಕಾಶ್ಮೀರದಲ್ಲಿ ಅಕಾಲದಲಿ ಹಿಮ ಬೀಳಲು ಆರಂಭಿಸಿದರೆ ಅಲ್ಲಿಗೆ ಹೋಗಿರುವ ಪ್ರವಾಸಿಗರಿಗೆ ಸೊಗಸು, ರಮ್ಯ ಎನಿಸುತ್ತದೆ. ಆದರೆ ವಾಸ್ತವದಲ್ಲಿ ಸ್ಥಳೀಯರಿಗೆ ಅದು ರಮ್ಯತೆಯ ವಿಷಯವಾಗಿರುವುದಿಲ್ಲ. ಸಮಸ್ಯೆಗಳ ಸರಮಾಲೆಯಾಗಿರುತ್ತದೆ. ದೈನಂದಿನ ಜೀವನಕ್ಕೆ ತೊಂದರೆಯಾಗುತ್ತದೆ. ಇಂಥ ಸಂದರ್ಭಗಳಲ್ಲಿ ಪತ್ರಕರ್ತರು ಪ್ರವಾಸಿಗರ ದೃಷ್ಟಿಯಿಂದ ಹಿಮ ಬೀಳುವಿಕೆಯನ್ನು ನೋಡಿ ಬರೆದರೆ ಅದು ರಮ್ಯತೆಯಾಗಿ ವಾಸ್ತವ ಮರೆಯಾಗುತ್ತದೆ ಎಂದು ಹೇಳಿದರು.

ಈ ದಿಶೆಯಲ್ಲಿ ಪತ್ರಕರ್ತರು ಪರಿಸರದ ವಿಷಯಗಳನ್ನು ವೈಜ್ಞಾನಿಕ ಹಾಗೂ ಮಾನವೀಯ ನೆಲೆಗಟ್ಟಿನಲ್ಲಿ ನೋಡಬೇಕು. ಇರುವ ಸಮಸ್ಯೆಯನ್ನು ಅರ್ಥೈಸಿಕೊಂಡು ವರದಿ ಮಾಡಬೇಕು. ಆಗಷ್ಟೇ ಜನರಿಗೆ ವಾಸ್ತವಾಂಶ ತಿಳಿಯಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.

ರಾಜಕೀಯ ನಾಯಕರು, ವಿಶ್ವ ನಾಯಕರು ಪರಿಸರ ಸಂಬಂಧಿ ವಿಷಯಗಳನ್ನು ಹೇಗೆ ನಿರೂಪಣೆ ಮಾಡುತ್ತಾರೆ ಎಂಬುದನ್ನು ಗಮನಿಸಬೇಕು. ನಿರ್ದಿಷ್ಟ ಸಮಸ್ಯೆ, ಪ್ರಕರಣವನ್ನು ಅಧ್ಯಯನ ಮಾಡಿ ಜನತೆಗೆ ವರದಿ ಮಾಡಬೇಕು ಎಂದರು.

ಪರಿಸರ ಸಮಸ್ಯೆಗಳಿಗೆ ಉತ್ತರ ಹೇಳುವ ಜವಾಬ್ದಾರಿ ರಾಜಕಾರಣಿಗೆ ಇರುತ್ತದೆ. ಏಕೆಂದರೆ ಅವರು ನೀತಿ – ನಿರೂಪಣೆಗಳನ್ನು ಮಾಡುತ್ತಾರೆ. ಕಾನೂನುಗಳನ್ನು ಮಾಡುವ ಅಧಿಕಾರ ಹೊಂದಿರುತ್ತಾರೆ. ಇಂಥ ಸಂದರ್ಭದಲ್ಲಿ ಪರಿಸರ ವಿರೋಧಿ ಯೋಜನೆಗಳ ಬಗ್ಗೆ ಅವರನ್ನು ಪತ್ರಕರ್ತರು ಪ್ರಶ್ನೆ ಮಾಡಬೇಕು ಎಂದು ಹೇಳಿದರು.

ಕರ್ನಾಟಕ ಸರ್ಕಾರದ ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ವಿಜಯ್‌ ಮೋಹನ್‌ ರಾಜ್‌,  ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ, ಪರಿಸರ ನಿರ್ವಹಣೆ ಮತ್ತು ನೀತಿ ನಿರೂಪಣೆ ಸಂಸ್ಥೆ (ಎಂಪ್ರಿ) ಯ ನಿರ್ದೇಶಕ ಡಾ. ಪ್ರಮೋದ ಕಟ್ಟಿ ಹಾಜರಿದ್ದರು. ಎಂಪ್ರಿಯ ನಿರ್ದೇಶಕ ಟಿ.ಮಹೇಶ್‌ ಸ್ವಾಗತಿಸಿದರು.

ಕರ್ನಾಟಕ ಸರ್ಕಾರದ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ “ಪರಿಸರ ನಿರ್ವಹಣೆ ಮತ್ತು ನೀತಿ ನಿರೂಪಣೆ ಸಂಸ್ಥೆ” (ಎಂಪ್ರಿ)ಯು ಪತ್ರಕರ್ತರಿಗಾಗಿ “ಹವಾಮಾನ ನಿರೂಪಣೆಯನ್ನು ರಚಿಸುವುದು; ಸುಸ್ಥಿರ ಅಭಿವೃದ್ಧಿ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮದ ಕುರಿತ ಕಾರ್ಯಾಗಾರ” ಆಯೋಜಿಸಿದೆ. ಕರ್ನಾಟಕದ ಬೇರೆಬೇರೆ ಜಿಲ್ಲೆಗಳಿಂದ ಬಂದಿರುವ ಪತ್ರಕರ್ತರು ಭಾಗವಹಿಸಿದ್ದಾರೆ.

LEAVE A REPLY

Please enter your comment!
Please enter your name here