ಹವಾಮಾನ ಬದಲಾವಣೆ; ಅರಿವಿನ ವಿಸ್ತರಣೆ

0

ಜಾಗತಿಕ ತಾಪಮಾನದಿಂದ ಆಗುತ್ತಿರುವ ಹವಾಮಾನ ಬದಲಾವಣೆಗಳು ಎಲ್ಲಿಯೋ ಇಲ್ಲ. ನಮ್ಮ ಜೊತೆಗೆ ಬಂದು ಕುಳಿತಿವೆ ಅಥವಾ ನಾವು ಅವುಗಳ ನಡುವೆ ಕುಳಿತಿದ್ದೇವೆ. ಇವೆಲ್ಲ ಏಕೆ ಘಟಿಸಿವೆ, ಘಟಿಸುತ್ತಿವೆ ಎಂಬುದು ಜನಸಾಮಾನ್ಯರಿಗೂ ತಿಳಿಯಬೇಕು. ಸರಳವಾಗಿ ಹೇಳುವುದಾದರೆ ಅವರಿಗೆ ತಿಳಿಯುವಂಥ ಭಾಷೆಯಲ್ಲಿ ಸರಳವಾಗಿ ಹೇಳಬೇಕು. ಹೀಗೆ ಹೇಳುವವರು ಯಾರು ? ಪತ್ರಕರ್ತರು.

ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ವಿಜ್ಞಾನ ಮತ್ತು ಪರಿಸರ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ “ಪರಿಸರ ನಿರ್ವಹಣೆ ಮತ್ತು ನೀತಿ ನಿರೂಪಣಾ ಸಂಸ್ಥೆ” ಪತ್ರಕರ್ತರಿಗಾಗಿ ಕಾರ್ಯಾಗಾರ ಆಯೋಜಿಸಿದೆ. ಇದರ ಶೀರ್ಷಿಕೆ “ಹವಾಮಾನ ನಿರೂಪಣೆಗಳನ್ನು ರಚಿಸುವುದು; ಸುಸ್ಥಿರ ಅಭಿವೃದ್ಧಿ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮ”

ಕಾರ್ಯಾಗಾರದ ಶೀರ್ಷಿಕೆಯೇ ಎಲ್ಲವನ್ನೂ ಹೇಳುತ್ತಿದೆ. ಅಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿ ನಡುವಿನ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ಅರಿಯಬೇಕು. ಜನತೆಯೊಂದಿಗೆ ಮಾಧ್ಯಮಗಳ ಮೂಲಕ ನಿತ್ಯ ಒಡನಾಟವಿರುವ ಪತ್ರಕರ್ತರು ಸುಸ್ಥಿರ ಅಭಿವೃವೃದ್ಧಿ ಮತ್ತು ಸುಸ್ಥಿರ ಪರಿಸರ ನಡುವೆ ಇರುವ ಸಾವಯವ ಸಂಬಂಧ ಅರಿತರೆ ಅದನ್ನು ಜನತೆಗೆ ದಾಟಿಸಬಹುದು.

ಬೆಂಗಳೂರು ನಗರದಲ್ಲಿ ಆಯೋಜಿತವಾಗಿರುವ ಮೂರು ದಿನದ (2025ರ ಜುಲೈ 15 ರಿಂದ ಜುಲೈ 17) ಕಾರ್ಯಾಗಾರಕ್ಕೆ “ಕರ್ನಾಟಕ ಮಾಧ್ಯಮ ಅಕಾಡೆಮಿ” ಅಧ್ಯಕ್ಷೆ ಆಯೇಷಾ ಖಾನಂ ಚಾಲನೆ ನೀಡುತ್ತಾರೆ. ಈ ಸಂದರ್ಭದಲ್ಲಿ “ಪರಿಸರ ನಿರ್ವಹಣೆ ಮತ್ತು ನೀತಿ ನಿರೂಪಣಾ ಸಂಸ್ಥೆ” ಚುಟುಕಾಗಿ ಹೇಳುವುದಾದರೆ “ಎಂಪ್ರಿ”ಯ ಮುಖ್ಯಸ್ಥರು, ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಜಾಗೃತ ದಳ) ಶಾಶ್ವತಿ ಮಿಶ್ರಾ, ಕರ್ನಾಟಕ ಸರ್ಕಾರದ ಪರಿಸರ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ವಿಜಯ್‌ ಮೋಹನ್‌ ರಾಜ್‌, ಎಂಪ್ರಿ ಸಂಸ್ಥೆಯ ಸಂಶೋಧನಾ ವಿಭಾಗದ ನಿರ್ದೇಶಕ ಡಾ. ಪ್ರಮೋದ್‌ ಕಟ್ಟಿ, ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ ಅವರು ಉಪಸ್ಥಿತರಾಗಿರುತ್ತಾರೆ.

ಹವಾಮಾನ ಬದಲಾವಣೆ, ಪರಿಸರ ಸ್ಥಿರತೆ ಹಾಗೂ ಸಂಬಂಧಿತ ಅಭಿವೃದ್ಧಿ ವಿಷಯಗಳನ್ನು ಪರಿಣಾಮಕಾರಿಯಾಗಿ ವರದಿ ಮಾಡುವ ನಿಟ್ಟಿನಲ್ಲಿ ಪತ್ರಕರ್ತರ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶದಿಂದ ಪ್ರಸಕ್ತ ಕಾರ್ಯಾಗಾರ ರೂಪಿಸಲಾಗಿದೆ. ಇದು  ಪತ್ರಕರ್ತರು, ಸಂಶೋಧಕರು ಮತ್ತು ಹವಾಮಾನ ಕ್ಷೇತ್ರದ ಸಂವಹನ ತಜ್ಞರ ನಡುವೆ ಅರ್ಥಪೂರ್ಣ ಸಂವಾದಕ್ಕಾಗಿ ವೇದಿಕೆ ಕಲ್ಪಿಸಲಿದೆ

ವೈಜ್ಞಾನಿಕ ಅಧಿವೇಶನಗಳು, ಸಂವಾದಾತ್ಮಕ ಚರ್ಚೆಗಳು, ಅನುಭವ ಆಧರಿತ ಕ್ರಿಯಾಕಲಾಪಗಳು ಮತ್ತು ಕ್ಷೇತ್ರ ಭೇಟಿಗಳಲ್ಲಿ ಪಾಲ್ಗೊಳ್ಳುವಿಕೆಯ ಸಂದರ್ಭಗಳಲ್ಲಿ, ಹವಾಮಾನ ವಿಜ್ಞಾನ, ನೀತಿ ನಿರೂಪಣೆಯ ಚೌಕಟ್ಟುಗಳು ಮತ್ತು ಪರಿಸರ ಸವಾಲುಗಳ ಬಗ್ಗೆ ಶಿಬಿರಾರ್ಥಿಗಳು ಆಳವಾದ ಅರಿವು ಪಡೆಯಲಿದ್ದಾರೆ.

ಈ ಕಾರ್ಯಾಗಾರದಲ್ಲಿ  ಪರಿಸರ ಕುರಿತ ವಿವಿಧ ಆಯಾಮಗಳ ನೋಟ,  ಅಂತರ ವಿಷಯ ಅಧ್ಯಯನ ಮತ್ತು ಜವಾಬ್ದಾರಿಯುತ ವಿಷಯ ನಿರೂಪಣೆ ಶೈಲಿಗೆ ಆದ್ಯತೆ ನೀಡಲಾಗುತಿದೆ. ಹವಾಮಾನ ಬದಲಾವಣೆ ಮತ್ತು ಅದರ ಸಂಬಂಧಿತ ವಿಷಯಗಳನ್ನು ಖಚಿತತೆಯೊಂದಿಗೆ ಪರಿಣಾಮಕಾರಿ ಮಾದರಿಯಲ್ಲಿ ವರದಿ ಮಾಡಲು ಅಗತ್ಯವಿರುವ ಅಂಶಗಳನ್ನು ಪತ್ರಕರ್ತರಿಗೆ ತಿಳಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ.

LEAVE A REPLY

Please enter your comment!
Please enter your name here