ಆರ್.ಸಿ.ಇ.ಪಿ. ಒಪ್ಪಂದ ಜಾರಿಯಾಗದಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಸಂಸದರ ನಿಯೋಗ ಕರೆದೊಯ್ಯಲಾಗುವುದೆಂದು ಮುಖ್ಯಮಂತ್ರಿ ಹೇಳಿದ್ದಾರೆ. ಸಂಸದರನ್ನು ಕರೆದುಕೊಂಡು ಹೋಗುವುದಕ್ಕೂ ಮೊದಲು ರೈತ ಮುಖಂಡರು, ಕೃಷಿಕ್ಷೇತ್ರದ ತಜ್ಞರು, ವಿರೋಧ ಪಕ್ಷಗಳ ಪ್ರಮುಖರ ಸಭೆ ಕರೆದು ಚರ್ಚಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಬೆಂಗಳೂರು ನಗರದ ಜಿಕೆವಿಕೆಯಲ್ಲಿ ನಡೆದ ಕೃಷಿಮೇಳದ ಎರಡನೇ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹಸಿವು ನಿವಾರಣೆಯಾಗದೆ ಹೋದರೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆಹಾರ ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳ ಉತ್ಪಾದನೆ ಹೆಚ್ಚಾಗಬೇಕು. ಇದಕ್ಕಾಗಿ ದೇಶದಲ್ಲಿ ಮತ್ತೊಂದು ಹಸಿರುಕ್ರಾಂತಿ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇತ್ತೀಚಿನ ದಿನಗಳಲ್ಲಿ ರೀಜನಲ್ ಕಾಂಪ್ರೈನ್ಸಿವ್ ಎಕಾನಾಮಿಕ್ ಪಾರ್ಟರ್ನರ್ ಷಿಪ್ ಬಗ್ಗೆ ಚರ್ಚೆ ನಡೆದಿವೆ. ಈಗಾಗಲೇ ತಮಗಿರುವ ಮಾಹಿತಿ ಪ್ರಕಾರ 27 ಸಭೆಗಳು ಈ ಬಗ್ಗೆ ನಡೆದಿವೆ. ನವೆಂಬರ್ 4 ರೊಳಗೆ ಇದಕ್ಕೊಂದು ಅಂತಿಮ ಸ್ವರೂಪ ದೊರೆಯಬಹುದು. ಈಗಾಗಲೇ ಉತ್ಪಾದನಾಕ್ಷೇತ್ರ, ಆರ್ಥಿಕ ಕ್ಷೇತ್ರದಲ್ಲಿ ಕುಸಿತ ಉಂಟಾಗುತ್ತಿದೆ. ಒಂದುವೇಳೆ ಈ ಒಪ್ಪಂದ ಜಾರಿಯಾದರೆ ದೇಶದಲ್ಲಿ ಪಶುಸಂಗೋಪನೆ ಅವಲಂಬಿಸಿರುವ ಹತ್ತು ಕೋಟಿ ಜನ ನಿರುದ್ಯೋಗಿಗಳಾಗುತ್ತಾರೆ. ಹೈನುಗಾರಿಕೆಯಲ್ಲದೇ ಗುಡಿ ಕೈಗಾರಿಕೆ ಮತ್ತಿತ್ತರ ಕ್ಷೇತ್ರಗಳ ಮೇಲೂ ಮಾರಕ ಪರಿಣಾಮ ಉಂಟಾಗುತ್ತದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಹೈನುಗಾರಿಕೆ ದೊಡ್ಡ ಉಪಕಸುಬು ಆಗಿದೆ. ಸುಮಾರು ಒಂದೂವರೆ ಕೋಟಿ ಮಂದಿ ಹೈನುಗಾರಿಕೆ ಮೇಲೆ ಅವಲಂಬಿತರು. ಇವರಲ್ಲಿ ಮಹಿಳೆಯರ ಸಂಖ್ಯೆಯೇ 28 ಲಕ್ಷ. ಪ್ರತಿದಿನ ರಾಜ್ಯದಲ್ಲಿ ಸುಮಾರು 78 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ದೇಶದ ಶೇ. 52ರಷ್ಟು ಜನ ಕೃಷಿಕಾರ್ಮಿಕರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಒಂದು ವೇಳೆ ಈ ಒಪ್ಪಂದ ಜಾರಿಯಾದರೆ ಮುಕ್ತ ಆಮದು ಉಂಟಾಗುತ್ತದೆ. ಆಮದು ಸುಂಕವೂ ಇರುವುದಿಲ್ಲ ಎಂದು ವಿವರಿಸಿದರು.
ಆರ್.ಸಿ.ಇ.ಪಿ.ಒಪ್ಪಂದ ಇನ್ನೂ ಆಗಿಲ್ಲ. ಆಗಬಹುದು.ಆಸ್ಟ್ರೇಲಿಯಾ, ನ್ಯೂಜಿಲೆಂಡ್ನಿಂದ ಹಾಲು ಹಾಲಿನ ಉತ್ಪಾದನೆ ಭಾರತಕ್ಕೆ ಏನಾದರೂ ಬಂದುಬಿಟ್ಟರೆ ನಮ್ಮ ದೇಶದ ಹೈನುಗಾರಿಕೆ, ಪಶುಸಂಗೋಪನೆಗೆ ದೊಡ್ಡ ಹೊಡೆತ. ಈಗ ಆಮದು ಸುಂಕವಿದ್ದೇ ಜಪಾನ್, ಚೀನಾ, ವಿಯೆಟ್ನಾಂ ದೇಶಗಳ ಜೊತೆ ನಮ್ಮ ದೇಶ ಸ್ಪರ್ಧೆ ಮಾಡಲು ಸಾಧ್ಯವಾಗಿಲ್ಲ ಎಂದರು.

ಒಂದೇ ಎಕರೆಯಲ್ಲಿ ನಲ್ವತ್ತು ವಿಧದ ಬೆಳೆ ಬೆಳೆಯುವಂತಹ ಕಾರ್ಯವನ್ನು ಬೆಂಗಳೂರು ವಿಶ್ವವಿದ್ಯಾಲಯ ಮಾಡಿದೆ. ಇದು ಶ್ಲಾಘನೀಯ ವಿಚಾರ. ಇಂಥ ಕಾರ್ಯಗಳು ಹೆಚ್ಚಾಗಬೇಕು. ಯುವಕರು ಕೃಷಿಕ್ಷೇತ್ರದತ್ತ ಹೆಚ್ಚು ಬರುವಂತಹ ಸ್ಥಿತಿ ನಿರ್ಮಾಣವಾಗಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವ ಸದಾನಂದಗೌಡ ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಕೃಷಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿ.ಬೈರೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ರವೀಶ್ , ಕ್ಯಾನ್ ಬ್ಯಾಂಕ್ ಪ್ರಶಸ್ತಿಗೆ ಶಿವಣ್ಣಗೌಡ, ಮಂಜುಳಾ ಪಿ. ಚಾಮರಾಜನಗರ-ಮೈಸೂರು ಜಿಲ್ಲಾ ಪ್ರಗತಿಪರ ಕೃಷಿಕರು ಪ್ರಶಸ್ತಿಗೆ ಸುಧಾ, ದಾಸಿ, ಮಹದೇವಶೆಟ್ಟಿ ಆಯ್ಕೆಯಾಗಿದ್ದರು. ಇವರುಗಳನ್ನು ಮತ್ತು ತಾಲೂಕುಮಟ್ಟದ ಯುವರೈತ ಮಹಿಳಾ ಪ್ರಶಸ್ತಿಗೆ ಆಯ್ಕೆಯಾಗಿದ್ದ ಉಮಾ,ನಂದಿನಿ,ಆರ್.ಭಾಗ್ಯ,ಕಾಮಾಕ್ಷಿ, ಕೆ.ಎಸ್.ನಂದಿನಿ, ಬಸವರಾಜೇಶ್ವರಿ, ಆರ್.ನಿರ್ಮಲ ,ಶೀಲಾ, ಅನುಶ್ರೀ, ಮಹಾಲಕ್ಷ್ಮೀ, ಯುವರೈತ ಪ್ರಶಸ್ತಿ ಪಡೆದ ಮಹೇಶ್ ಗೌಡ, ಪುಟ್ಟಸ್ವಾಮಿ, ಸುಪ್ರಿತ್, ಆರ್.ಗುರುಸ್ವಾಮಿ, ವೈ.ಆರ್.ನಂದೀಶ್, ಬಸಪ್ಪ, ಹೆಚ್.ಬಿ.ಮಂಜುನಾಥ್, ಸಂತೋಷ್, ಎನ್.ಮಹೇಶ್, ಆರ್.ಎಸ್.ರಮಾನಂದ ಇವರುಗಳನ್ನು ಸನ್ಮಾನಿಸಲಾಯಿತು.

ಉಪಮುಖ್ಯಮಂತ್ರಿ ಲಕ್ಷ್ಮಣ್ ಎಸ್ ಸವದಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್, ವಿಸ್ತರಣಾ ನಿರ್ದೇಶಕ ಡಾ. ಎಂ.ಎಸ್. ನಟರಾಜ್, ಕೃಷಿ ಸಂಶೋಧನಾ ನಿರ್ದೇಶಕ ಡಾ. ಷಡಾಕ್ಷರಿ ಪ್ರೇಮನಾಥ್ ಪ್ರತಿಷ್ಠಾನದ ಪ್ರೇಮನಾಥ್ ಮತ್ತಿತರರು ವೇದಿಕೆಯಲ್ಲಿದ್ದರು.

LEAVE A REPLY

Please enter your comment!
Please enter your name here