ಸಾವಯವ-ಸಹಜ ಕೃಷಿವಿಧಾನಗಳ ಬಗ್ಗೆ ಗೊಂದಲವೇಕೆ ?

ಅನೇಕ ವಿಜ್ಞಾನಿಗಳು ಮತ್ತು ರೈತ ವಿಜ್ಞಾನಿ ಕೃಷಿಕರು 'ಸಾವಯವ-ಸಹಜ' ಕೃಷಿವಿಧಾನಗಳ ಬಗ್ಗೆ ಗೊಂದಲಗೊಂಡಿದ್ದಾರೆ. ಯಾವುದು ಸಾವಯವ ಯಾವುದು ಸಹಜ ಎನ್ನುವುದರ ಬಗ್ಗೆ ಸಂಶಯಗೊಂಡಿದ್ದಾರೆ. ಇದರ ಬಗ್ಗೆ ನಾವೊಂದಷ್ಟು ಸ್ವಷ್ಟವಾಗಿ ತಿಳಿಯುವುದು ಸೂಕ್ತವೆನ್ನಿಸುತ್ತದೆ.

0
ಲೇಖಕರು: ಶಿವನಂಜಯ್ಯ ಬಾಳೇಕಾಯಿ

ಇತ್ತೀಚನ ವರ್ಷಗಳಲ್ಲಿ ಈ ಕೃಷಿವಿಧಾನಗಳ ಬಗ್ಗೆ ವಿಶ್ವದೆಲ್ಲೆಡೆ ಚರ್ಚೆ, ವಿಚಾರಗೋಷ್ಠಿ ನಡೆಯುತ್ತಿದೆ. ಅನೇಕ ರೈತರ ಹೊಲಗದ್ದೆಗಳು-ತೋಟಗಳು ಸಹಜ ಕೃಷಿಯ ಅತ್ಯಾಕರ್ಷಕ ತಾಣಗಳಾಗಿವೆ. ಇವುಗಳಲ್ಲಿ ಕೃಷಿ ವಿಶ್ವವಿದ್ಯಾಲಯದ ಬಿಳಿ ಕೊರಳುಪಟ್ಟಿಯ ಪ್ರಾಧ್ಯಾಪಕರುಗಳಿಗಿಂತ ರೈತಮಕ್ಕಳೇ ಪ್ರಯೋಗಶೀಲರಾಗಿ ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ. ಸಾವಯವ-ಸಜಹ ಕೃಷಿಪ್ರಚಾರದ ಗುರಿಯನ್ನು ಹೊಂದಿರುವ ಪತ್ರಿಕೆಗಳೂ ಪ್ರಚಾರದಲ್ಲಿವೆ. ಆಧುನಿಕ ಕೃಷಿಯ ಅಮಲಿನಲ್ಲಿ ಅಳಿದುಹೋಗುತ್ತಿರುವ ಭಾರತೀಯ ಪರಂಪರಾನುಗತ ಕೃಷಿ ಅನುಭವಗಳನ್ನು ಉಳಿಸಿ, ಬೆಳೆಸಿ ಮುಂದಿನ ತಲೆಮಾರಿನ ಜನಕ್ಕೆ ತಲುಪಿಸುವ ಉತ್ತಮ ಕೆಲಸವನ್ನು ಇವು ಮಾಡುತ್ತಿವೆ. ಸಾವಯವ-ಸಹಜ ಕೃಷಿಯ ರುಚಿಯನ್ನು ಆಸಕ್ತರಿಗೆ ತಲುಪಿಸುವಲ್ಲಿ ಇವು ದುಡಿಯುತ್ತಿವೆ.
ಇಷ್ಟಿದ್ದರೂ ಅನೇಕ ವಿಜ್ಞಾನಿಗಳು ಮತ್ತು ರೈತ ವಿಜ್ಞಾನಿ ಕೃಷಿಕರು ‘ಸಾವಯವ-ಸಹಜ’ ಕೃಷಿವಿಧಾನಗಳ ಬಗ್ಗೆ ಗೊಂದಲಗೊಂಡಿದ್ದಾರೆ. ಯಾವುದು ಸಾವಯವ ಯಾವುದು ಸಹಜ ಎನ್ನುವುದರ ಬಗ್ಗೆ ಸಂಶಯಗೊಂಡಿದ್ದಾರೆ. ಇದರ ಬಗ್ಗೆ ನಾವೊಂದಷ್ಟು ಸ್ವಷ್ಟವಾಗಿ ತಿಳಿಯುವುದು ಸೂಕ್ತವೆನ್ನಿಸುತ್ತದೆ.


ಸಾವಯವ ಮತ್ತು ಸಹಜ ಕೃಷಿ ವಿಧಾನಗಳು ಮೂಲತಃ ಸಾವಯವ ಕೃಷಿವಿಧಾನಗಳು. ಇವುಗಳಲ್ಲಿ ಪ್ರಕೃತಿಯಲ್ಲಿ ಸುಲಭವಾಗಿ ವಿಘಟನೆಯಾಗುವ ಸಾವಯವ ಮೂಲದ ವಸ್ತುಗಳನ್ನು ಉಳಿಸಿ ಬೆಳೆ ತೆಗೆಯಲಾಗುತ್ತದೆ. ಅಂದರೆ ಬೆಳೆಗಳಿಗೆ ಅಗತ್ಯವಿರುವ ಸಸ್ಯಪೋಷಕಾಂಶಗಳನ್ನು ಸಾವಯವ ರೂಪದಲ್ಲಿ ಇಲ್ಲಿ ನೀಡಲಾಗುತ್ತದೆ. ಪ್ರಕೃತಿಯಲ್ಲಿನ ಸೂಕ್ಷ್ಮಾಣುಜೀವಿಗಳು ಮತ್ತು ಇತರ ಜೀವಿಗಳ ಕ್ರಿಯೆಗೆ ಒಳಗಾದ ಸಾವಯವ ಉಳಿಕೆಗಳು ನಿಧಾನವಾಗಿ ತಮ್ಮಲಿರುವ ಸಸ್ಯಪೋಷಕಾಂಶಗಳನ್ನು ಬೆಳೆಗಳಿಗೆ ಬಿಟ್ಟುಕೊಡುತ್ತವೆ. ಇದು ಪ್ರಕೃತಿ. ತಾನು ಬೆಳೆಸಿದ ಎಲ್ಲ ಸಸ್ಯಗಳಿಗೆ ಉಣಿಸುವ ವಿಧಾನ. ಪ್ರಕೃತಿಯ ರೀತಿ-ನೀತಿ. ಸಹಜಕೃಷಿ ಮೂಲಭೂತವಾಗಿ ಒಂದು ಸಾವಯವ ಕೃಷಿವಿಧಾನವಾದರೂ ಸಾಂಪ್ರದಾಯಕ ಸಾವಯವ ಕೃಷಿಗೂ ಸಹಜಕ್ಕೂ ಬಹಳ ಮುಖ್ಯವಾದ ವ್ಯತ್ಯಾಸಗಳಿವೆ.

ಸಹಜಕೃಷಿ, ಪುಕುವೋಕ ಸಂಸ್ಕರಿಸಿದ ಸಾವಯವ ಕೃಷಿ. ಇಲ್ಲಿ ಸಾವಯವದ ಅನೇಕ ಅನಗತ್ಯ ಶ್ರಮದ ಕೆಲಸಗಳಿಗೆ ಬಿಡುವು ನೀಡಲಾಗಿದೆ. ಸಾಂಪ್ರದಾಯಕ ಸಾವಯವದ ಉಳುಮೆ ಇಲ್ಲಿಲ್ಲ. ಕಳೆ ತೆಗೆಯಲು ಕುಂಟೆ ಬೇಡ. ಯಾವುದೇ ರೀತಿಯಲ್ಲಿ ಕಾಂಪೋಸ್ಟ್ ತಯಾರಿಸಿ ಅದನ್ನು ಬೆಳೆಗೆ ನೀಡುವ ಅಗತ್ಯವಿಲ್ಲ. ಬಿತ್ತುವ ಅರಗುವ, ಕುಂಟೆ ಹೊಡೆಯುವ ಹೀಗೆ ಅನೇಕ ಸಾವಯವದ ಬೇಕಿಲ್ಲದ ಕೆಲಸಗಳಿಗೆ ವಿದಾಯ ಹೇಳಲಾಗಿದೆ. ಪ್ರಕೃತಿಯ ಉಣಿಸುವ, ಬಿತ್ತುವ, ಕ್ರಿಯೆಯ ಹತ್ತಿರಕ್ಕೆ ನಡೆದು ಬೆಳೆಯ ಕೃಷಿ ಮಾಡುವುದೇ ಸಹಜ ಕೃಷಿ. ಒಟ್ಟಾರೆ ಸರಳೀಕರಿಸಿದ ಸಾವಯವ ಕೃಷಿವಿಧಾನವೇ ಸಹಜಕೃಷಿಯಾಗುತ್ತದೆ

ವ್ಯತ್ಯಾಸ: ಸಾಂಪ್ರದಾಯಕ ಸಾವಯವ ಮತ್ತು ಪುಕುವೋಕರ ಸಹಜಕೃಷಿಯ ವ್ಯತ್ಯಾಸಗಳನ್ನು ಕೆಳಕಂಡಂತೆ ಗುರುತಿಸಬಹುದು.

1.ಭೂಮಿಯ ಉಳುಮೆ ಸಾಂಪ್ರದಾಯಕ ಸಾವಯವದ ಜೀವಾಳ. ತೀರಾ ಅಗತ್ಯವಾದ ಕೃಷಿಕೆಲಸ. ಆದರೆ ಸಹಜಕೃಷಿಯಲ್ಲಿ ಉಳುಮೆ ನಿಷಿದ್ಧ; ಅನಗತ್ಯ ಕೆಲಸ

ಉಳುಮೆ ಕೆಲಸವನ್ನು ಸಹಜದಲ್ಲಿ ಮಣ್ಣಿನಲ್ಲಿಯ ಕೋಟ್ಯಾಂತರ ಸೂಕ್ಷ್ಮಾಣುಜೀವಿಗಳಿಗೆ, ಎರೇಹುಳುವಿನಂಥ ಅಸಂಖ್ಯ ಮಣ್ಣಿನ ಜೀವಿಗಳಿಗೆ ಬಿಡಲಾಗುತ್ತದೆ. ಸದ್ದಿಲ್ಲದ ಇವುಗಳ ಉಳುಮೆ ಯಾವುದೇ ಮಾನವ ನಿರ್ಮಿತ ನೇಗಿಲಿನ ಉಳುಮೆಗಿಂತ ಶ್ರೇಷ್ಠ; ಸಮರ್ಥ. ಯಾರು ಕಾಡಿನ ಉಳುಮೆ ಮಾಡುತ್ತಾರೆ? ಆದರೂ ಅಲ್ಲಿ ಮರಗಿಡ ಸೊಂಪಾಗಿ ಬೆಳೆಯುವುದಿಲ್ಲವೆ. ಅಲ್ಲಿಯ ಮಣ್ಣು ಬೆಣ್ಣೆಯಂತೆ ಮೃದುವಾಗಿಲ್ಲವೇ. ಹಾಗೆಯೇ ಜೀವಂತ ಬೇಲಿಯ ಕೆಳಗಿನ ಮಣ್ಣು ಕೈಯಲ್ಲಿ ಬಾಚುವಷ್ಟು ಮೃದು ಅಲ್ಲವೇ. ಇದಕ್ಕೆ ಕಾರಣ ಪ್ರಕೃತಿಯ ಸಹಜ ಉಳುಮೆ

2.ಬೆಳೆಗೆ ಅಗತ್ಯದ ಸಸ್ಯಪೋಷಕಾಂಶಗಳನ್ನು ಒದಗಿಸಲು ಸಾವಯವದಲ್ಲಿ ಕೊಟ್ಟಿಗೆಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಹಸಿರೆಲೆ ಗೊಬ್ಬರ, ಎರೆಗೊಬ್ಬರ ಮುಂತಾದ ಸಾವಯವ ವಸ್ತುಗಳಿಂದ ಹೊರಗಡೆ ತಯಾರಿಸಿದ ಗೊಬ್ಬರಗಳನ್ನು ನೀಡಲಾಗುತ್ತದೆ

ಸಹಜ ಕೃಷಿಯಲ್ಲಿ ಬೆಳೆಗಳಿಂದ, ಕಳೆಗಳಿಂದ ದೊರೆಯುವ ಸಾವಯವ ಉಳಿಕೆಯನ್ನು ನೇರವಾಗಿ ಕೃಷಿಭೂಮಿಗೆ ಹೊದಿಕೆ ರೂಪದಲ್ಲಿ ಹಿಂತಿರುಗಿಸಲಾಗುತ್ತದೆ. ಈ ಸಾವಯವ ಉಳಿಕೆಯ ಮೇಲೆ ಕಡಿಮೆ ಪ್ರಮಾಣದ, ಕೋಳಿ, ಎರೆಗೊಬ್ಬರ ಮುಂತಾದವನ್ನು ಎರಚಿ) ಸಾವಯವ ಉಳಿಕೆ ಕೊಳೆಯಲು ಸಹಕಾರಿಯಾಗುವಂತೆ) ಅಲ್ಲಿಯೇ ಎಲ್ಲವೂ ಕೊಳೆತು ಗೊಬ್ಬರವಾಗುತ್ತದೆ. ಇಂಥ ಜಾಗದಲ್ಲಿ ಎರೆಹುಳುವಿನಂಥ ಮಣ್ಣಿನಜೀವಿಗಳು ಸಮೃದ್ದವಾಗಿದ್ದು ಇವು ಸಾವಯವ ವಸ್ತುವನ್ನು ತಿಂದು ಕರಗಿಸಿದಾಗ ಸಸ್ಯಪೋಷಕಾಂಶಗಳು ಬೆಳೆಗೆ ಲಭ್ಯವಾಗುತ್ತವೆ. ಜತೆಗೆ ಭೂಮಿಯ ಉಳುಮೆ ಸಹಜ ರೀತಿಯಲ್ಲಿ ನಡೆದು ಮಣ್ಣು ಸದಾ ಬ್ರೇಡಿನಂತೆ ಮೃದುವಾಗಿರುತ್ತದೆ

3. ಸಾಂಪ್ರದಾಯಕ ಕೃಷಿಯಲ್ಲಿ ಕಳೆಯನ್ನು ಬೆಳೆಯ ಶತ್ರು ಎಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿಯೇ ಅಲ್ಲಿ ಉಳುಮೆ, ಹರಗುವುದು, ಕಳೆಕೀಳುವುದು ಮುಂತಾದ ಶ್ರಮಬೇಡುವ ಕೆಲಸಗಳಿವೆ.

ಸಹಜದಲ್ಲಿ ಪರಿಪೂರ್ಣ ಹಂತದಲ್ಲಿ ಅಲ್ಲಿಯ ಸ್ಯವೈವಿಧ್ಯ ಮತ್ತು ಜೀವಜಾಲದ ಸಮತೋಲನದಿಂದಾಗಿ ರೋಗ ಮತ್ತು ಕೀಟಗಳ ಬಾಧೆ ಸ್ವಯಂ ನಿಯಂತ್ರಣದಲ್ಲಿರುತ್ತದೆ. ಪರಿಸರವನ್ನು ಕೆಡಿಸಿ ಅದರಿಂದ ಹೊರಹೊಮ್ಮುವ ರೋಗ-ಕೀಟಬಾಧೆಗಳನ್ನು ನಿಯಂತ್ರಿಸುವುದು ಸಹಜ ಕೃಷಿ ನೀತಿ ಅಲ್ಲ

4.ಸಾವಯವದಲ್ಲಿ ವಿಫುಲವಾದ ಕೃಷಿ ಕೆಲಸವಿದೆ. ಅವು ಅತಿಮಾನವ ಶ್ರಮ ಬೇಡುತ್ತವೆ. ಬಂಡವಾಳ ಹೂಡಿಕೆಯಲ್ಲಿಯೂ ಇದು ಮುಂದಿದೆ. ಇದು ರೈತರನ್ನು ಕತ್ತೆ ದುಡಿತಕ್ಕೆ ಹಚ್ಚುತ್ತದೆ.

ಸಹಜಕೃಷಿಯಲ್ಲಿ ಕಡಿಮೆ ಶ್ರಮವಿದೆ. ಬಂಡವಾಳದ ಬೇಡಿಕೆಯೂ ಕಡಿಮೆ ಇದೆ.

5.ಸಾಂಪ್ರದಾಯಕ ಸಾವಯವದಲ್ಲಿ ಉಳುಮೆ ಇರುವುದರಿಂದ ಕೃಷಿಭೂಮಿಯ ಎಲ್ಲಭಾಗವನ್ನು ಮಿಶ್ರಬೆಳೆಗಳಿಂದ ದುಡಿಸಿಕೊಳ್ಳಲಾಗುವುದಿಲ್ಲ. ಇಲ್ಲಿಯ ಎಲ್ಲ ನೀರು, ಸೌರಶಕ್ತಿಯ ಬಳಕೆ ಸಾಧ್ಯವಿಲ್ಲ. ಒಟ್ಟಾರೆ ಒಂದು ನಿರ್ದಿಷ್ಟ ಕೃಷಿ ಭೂ ಪ್ರದೇಶದ ಗರಿಷ್ಠ ಪ್ರಮಾಣದ ಬಳಕೆ ಸಾಧ್ಯವಾಗದೇ ಉತ್ಪನ್ನವೂ ಕಡಿಮೆಯಾಗಿ ಆದಾಯದಲ್ಲಿ ಗರಿಷ್ಠತೆ ಇರಲು ಸಾಧ್ಯವಿಲ್ಲ

ಅದೇ ಸಹಜದಲ್ಲಿ ಇವೆಲ್ಲವೂ ಸಾಧ್ಯ. ಆದ್ದರಿಂದ ಇಲ್ಲಿ ಉತ್ಪಾದನೆ ಮುಂದಿದ್ದು ಲಾಭದ ದೃಷ್ಟಿಯಿಂದಲೂ ಇದು ಸಾವಯವಕ್ಕಿಂತ ಮುಂದಿರುತ್ತದೆ.

6. ಉಳುಮೆ ಇರುವ ಸಾವಯವದಲ್ಲಿ ಜಾನುವಾರು ಸಾಕಾಣೆ, ಕುರಿ ಮುಂತಾದ ಪೂರಕ ಪ್ರಾಣಿಗಳನ್ನು ಸಾಕಿ ಬೆಳೆಸುವುದು ತೊಡಕಿನ ಕೆಲಸ. ಇಲ್ಲಿ ಹಸಿರುಹುಲ್ಲಿನ ಅಭಾವವಿರುತ್ತದೆ
ಸಹಜ ತೋಟದಲ್ಲಿ ಹಸಿರು ಹುಲ್ಲಿನ ಸವಲತ್ತು ಇರುವುದರಿಂದ ಇಲ್ಲಿ ಹಿತಮಿತವಾಗಿ ಕೃಷಿಗೆ ಒತ್ತಾಸೆ ನೀಡುವ ಸಾಕುಪ್ರಾಣಿಗಳನ್ನು ಸಾಕಿ ಅವುಗಳಿಂದಲೂ ಆಥರ್ಿಕ ಉನ್ನತಿ ಸಾಧಿಸಬಹುದು

7. ಸಾವಯವದಲ್ಲಿ ಹೊರಗೆ ಸಿದ್ದಪಡಿಸಿದ ಗೊಬ್ಬರವನ್ನು ನೀಡುವುದರಿಂದ ಬೆಳೆಗಳು ನೇರವಾಗಿ ಈ ಗೊಬ್ಬರವನ್ನು ಸಸ್ಯಪೋಷಕಾಂಶಗಳ ಸರಬರಾಜಿನಲ್ಲಿ ಏರುಪೇರಾಗಬಹುದು. ಇದು ಬೆಳೆಗಳ ಇಳುವರಿ ಮೇಲೆ ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಪ್ರತಿಬೆಳೆಯಲ್ಲಿಯೂ ಸಮಾನವಾದ ಇಳುವರಿ ಪಡೆಯಲು ಸಾಧ್ಯವಿಲ್ಲ. ಇದರಲ್ಲಿ ಪೋಷಕಾಂಶಗಳು ದೊರೆಯುವುದರಲ್ಲಿಯೂ ಏರುಪೇರಾಗುವುದರಿಂದ ಬೆಳೆ ಸುಲಭವಾಗಿ ರೋಗ ಮತ್ತು ಕೀಟಬಾಧೆಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ
ಸಹಜದಲ್ಲಿ ಸಾವಯವ ಉಳಿಕೆಯನ್ನು ನೇರವಾಗಿ ಬಳಸುವುದರಿಂದ ಅವುಗಳಿಂದ ಸಸ್ಯಪೋಷಕಾಂಶಗಳು ನಿರಂತರವಾಗಿ ನಿಯಂತ್ರಿತವಾಗಿ ದೊರೆಯುತ್ತದೆ. ಆದ್ದರಿಂದ ಬೆಳೆಯಲ್ಲಿ ಸಮತೋಲನವಿದ್ದು ರೋಗ ಕೀಟ ಬಾಧೆಯಿಂದ ಬೆಳೆಗೆ ತೀರಾ ತೊಂದರೆ ಇರುವುದಿಲ್ಲ.

ಈ ವ್ಯತ್ಯಾಸಗಳ ಪಟ್ಟಿಯನ್ನು ಹೀಗೆ ಬೆಳೆಸಬಹುದಾದರೂ ಇವೆರಡೂ ಮುಖ್ಯವಾಗಿ ಪ್ರಕೃತಿಗೆ ಹತ್ತಿರದ ಸಾವಯವ ಕೃಷಿವಿಧಾನಗಳು. ಸಾವಯವದಲ್ಲಿ ಕೆಲಸ ಹೆಚ್ಚಿದ್ದರೆ ಸಹಜದಲ್ಲಿ ಕಡಿಮೆ ಸಾವಯವದ ಅನಗತ್ಯ ಕೆಲಸಗಳಿಗೆ ವಿದಾಯ ಹೇಳಿದರೆ ಅದು ಸಹಜವಾಗಿರುತ್ತದೆ

ರಸಕೃಷಿಯಿಂದ ಸಾವಯವ ಕೃಷಿಗೆ ಹೊರಳಬಯಸುವವರು ಮೊದಲು ಸಾವಯವ ಕೃಷಿಯಲ್ಲಿ ತೊಡಗಬೇಕು. ಮೊದಲು ಉಳುಮೆ ಕೈ ಬಿಟ್ಟರೆ ಸಾಕು. 4-6 ವರ್ಷಗಳು ಬೆಳೆಗಳಿಗೆ ಧಾರಾಳವಾಗಿ ಸಾವಯವ ಗೊಬ್ಬರ ನೀಡುತ್ತಾ ನಂತರದ ವರ್ಷಗಳಲ್ಲಿ ಇದನ್ನು ಸಂಪೂರ್ಣವಾಗಿ ಬಿಡಲು ಸಾಧ್ಯವಾಗುವುದಿಲ್ಲವಾದರೂ ಕಡಿಮೆ ಮಾಡುತ್ಥಾ ಸಾಗಬಹುದು. ಇದನ್ನು ಮತ್ತಷ್ಟು ಕಡಿಮೆಗೊಳಿಸಿ ಸಾವಯವದ ದಾರಿ ತುಳಿಯಬಹುದು

ಒಟ್ಟಾರೆ ಸಾವಯವ ಮತ್ತು ಸಹಜ ಕೃಷಿಗಳು ವಿರೋಧಿ ಪದ್ದತಿಗಳಲ್ಲ. ಇವು ಒಂದಕ್ಕೊಂದು ಪೂರಕ. ಸಾವಯವದ ಕೊನೆಯ ಆದರ್ಶ ಹಂತವೇ ಸಹಜ.

ಶಿವನಂಜಯ್ಯ ಬಾಳೇಕಾಯಿ ಅವರು ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಸಾವಯವ ಕೃಷಿಯಲ್ಲಿಯೂ ಪ್ರಾಯೋಗಿಕ ಅನುಭವ ಪಡೆದವರು. ನಂತರ ಸಹಜಕೃಷಿ ತತ್ವಗಳಿಗೆ ಆಕರ್ಷಿತರಾಗಿ ಗಮನಾರ್ಹ ಸಾಧನೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here