ನೈಋತ್ಯ ಮಾನ್ಸೂನ್ ಮೇ 31 ರಂದು ಕೇರಳಕ್ಕೆ ಆಗಮಿಸುವ ಸಾಧ್ಯತೆಯಿದೆ, ಶಾಖದಿಂದ ಬಳಲುತ್ತಿರುವ ಭಾರತಕ್ಕೆ ತಂಪು ಪರಿಹಾರ ನೀಡಲಿದೆ. ಭಾರತದ ಹವಾಮಾನ ಇಲಾಖೆ (IMD) ಮೇ 31 ರ ಸುಮಾರಿಗೆ ಕೇರಳದ ಮೇಲೆ ನೈಋತ್ಯ ಮಾನ್ಸೂನ್ ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಿದೆ.
ಮುಂಗಾರು ಮಳೆಯ ಮೇಲೆ ಭಾರತದ ಕೃಷಿ ಆರ್ಥಿಕತೆ ಅವಲಂಬಿತವಾಗಿದೆ. ಇಲ್ಲಿನ ಒಟ್ಟಾರೆ ಆರ್ಥಿಕತೆಯ ಮೇಲೆ ನಾಲ್ಕು ತಿಂಗಳು ಅವಧಿಯ ಮಳೆಗಾಲ ನಿರ್ಣಾಯವಾಗಿದೆ. ಭಾರತೀಯ ಹವಾಮಾನ ಇಲಾಖೆ ಡೈರೆಕ್ಟರ್ ಜನರಲ್ ಮೃತ್ಯುಂಜಯ್ ಮೊಹಾಪಾತ್ರ ಪ್ರಕಾರ, ಮುಂಗಾರು ಬರುವಿಕೆ ನಾಲ್ಕು ದಿನಗಳ ಆಚೀಚೆ ಇದ್ದರೂ ಐತಿಹಾಸಿಕ ದಿನದ ಸರಾಸರಿಗೆ ಹತ್ತಿರದಲ್ಲಿದೆ.
ಪ್ರಸ್ತುತ, ನೈಋತ್ಯ ಮುಂಗಾರು ಮಾರುತಗಳು ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಆಗ್ನೇಯ ಬಂಗಾಳ ಕೊಲ್ಲಿ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಭಾಗಗಳಲ್ಲಿ ಮೇ 19 ರ ಭಾನುವಾರದಿಂದ ಮುಂದಕ್ಕೆ ಚಲಿಸುವ ನಿರೀಕ್ಷೆಯಿದೆ.
ಕಳೆದ ಒಂದೂವರೆ ಶತಮಾನದಲ್ಲಿ ಕೇರಳದಲ್ಲಿ ಮಾನ್ಸೂನ್ ಆರಂಭವು ಗಮನಾರ್ಹವಾಗಿ ಏರಿಳಿತಗೊಂಡಿದೆ. ಬಹು ಹಿಂದೆ ಮೇ 11, 1918 ರಂದು ಆಗಮಿಸಿತ್ತು. ಹೆಚ್ಚು ವಿಳಂಬಿತ ವರ್ಷವೆಂದರೆ 1972. ಆ ವರ್ಷದ ಜೂನ್ 18ರಂದು ಮುಂಗಾರು ಕಾಲಿರಿಸಿತ್ತು. ಕಳೆದ ವರ್ಷ ಅಂದರೆ 2023ರಲ್ಲಿ ಜೂನ್ 8 ರಂದು ಮುಂಗಾರು ಮಳೆ ಕೇರಳಕ್ಕೆ ಆಗಮಿಸಿತ್ತು.
ಈ ವರ್ಷದ ಮುಂಗಾರು ಮಾರುತಗಳ ಮುನ್ಸೂಚನೆಯು ದೇಶದ ಹಲವಾರು ಭಾಗಗಳಲ್ಲಿ ಆಗಿರುವ ಶಾಖದ ಅಲೆಗಳ ಹೊಡೆತಕ್ಕೆ ಪರಿಹಾರ ತರಲಿದೆ. ಸುಡುವ ತಾಪಮಾನವು ಸಾರ್ವಜನಿಕ ಆರೋಗ್ಯ, ಜೀವನೋಪಾಯದ ಮೇಲೆ ಪರಿಣಾಮ ಬೀರಿದೆ. ಫ್ಯಾನ್, ಏರ್ ಕೂಲರ್, ಏರ್ ಕಂಡೀಶನ್ ಅತೀ ಬಳಕೆಯಿಂದಾಗಿ ವಿದ್ಯುತ್ ಸರಬರಾಜಿನ ಮೇಲೂ ಅತೀವ ಒತ್ತಡ ಬಿದ್ದಿದೆ. ಹಲವೆಡೆ ಜಲಮೂಲಗಳು ಬತ್ತಿ, ಬರಗಾಲದಂತಹ ಪರಿಸ್ಥಿತಿಗಳ ಆತಂಕವನ್ನು ಹೆಚ್ಚಿಸಿದೆ.
ಸರಾಸರಿಗಿಂತ ಹೆಚ್ಚಿನ ಮುಂಗಾರು ಮುನ್ಸೂಚನೆಯು ಭಾರತದ ಕೃಷಿ ವಲಯಕ್ಕೆ ವಿಶೇಷವಾಗಿ ಸಕಾರಾತ್ಮಕ ಸುದ್ದಿಯಾಗಿದೆ. ದೇಶದ ಅರ್ಧದಷ್ಟು ನಿವ್ವಳ ಕೃಷಿ ಭೂಮಿ ಮುಂಗಾರು ಮಳೆಯ ಮೇಲೆ ಅವಲಂಬಿತವಾಗಿದೆ. ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಬಳಸಲಾಗುವ ಜಲಾಶಯಗಳನ್ನು ಭರ್ತಿ ಮಾಡಲು ಸಕಾಲಿಕ ಮಳೆಯು ಅತ್ಯಗತ್ಯವಾಗಿದೆ.
ಮುಂಗಾರು ಹಂಗಾಮಿನಲ್ಲಿ ಜೂನ್ ಮತ್ತು ಜುಲೈ ತಿಂಗಳುಗಳು ಕೃಷಿಗೆ ಅತ್ಯಂತ ನಿರ್ಣಾಯಕ ತಿಂಗಳುಗಳಾಗಿವೆ, ಏಕೆಂದರೆ ಹೆಚ್ಚಿನ ಖಾರಿಫ್ ಬೆಳೆಗಳಾದ ಅಕ್ಕಿ ಮತ್ತು ದ್ವಿದಳ ಧಾನ್ಯಗಳನ್ನು ಈ ಅವಧಿಯಲ್ಲಿ ಬಿತ್ತಲಾಗುತ್ತದೆ.
ದುರ್ಬಲ ಮಾನ್ಸೂನ್‌ಗಳಿಗೆ ಸಂಬಂಧಿಸಿದ ಹವಾಮಾನ ಮಾದರಿಯಾದ ಎಲ್ ನಿನೊ ಪ್ರಸ್ತುತ ಜಾರಿಯಲ್ಲಿದ್ದರೆ, ವಿಜ್ಞಾನಿಗಳು ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಲಾ ನಿನಾಗೆ ಸ್ಥಳಾಂತರಗೊಳ್ಳುವ ಮುನ್ಸೂಚನೆ ನೀಡಿದ್ದಾರೆ. ಲಾ ನಿನಾದ ತಂಪಾದ ಪೆಸಿಫಿಕ್ ನೀರು ವಿಶಿಷ್ಟವಾಗಿ ಹೇರಳವಾದ ಮುಂಗಾರು ಮಳೆಯನ್ನು ತರುತ್ತದೆ.
ಐಎಮ್‌ಡಿಯು ಆಗಸ್ಟ್ ವೇಳೆಗೆ ಹಿಂದೂ ಮಹಾಸಾಗರದ ದ್ವಿಧ್ರುವಿ (ಐಒಡಿ) ಅಭಿವೃದ್ಧಿಗೊಳ್ಳುವ ನಿರೀಕ್ಷೆಯನ್ನು ಹೊಂದಿದೆ. ದ್ವಿಧ್ರುವಿಯು ( IOD) ಪಶ್ಚಿಮಕ್ಕೆ ಹೋಲಿಸಿದರೆ ಪೂರ್ವ ಹಿಂದೂ ಮಹಾಸಾಗರದಲ್ಲಿ ತಂಪಾದ ನೀರಿನ ಹವಾಮಾನಕ್ಕೆ ಅನುಕೂಲ ಮಾಡುತ್ತದೆ. ಇದು ಐತಿಹಾಸಿಕವಾಗಿ ದಕ್ಷಿಣ ಭಾರತದಲ್ಲಿ ಹೆಚ್ಚಿದ ಮಳೆಗೆ ಕೊಡುಗೆ ನೀಡುತ್ತದೆ.
ಮಾನ್ಸೂನ್ ಮೇಲೆ ಪ್ರಭಾವ ಬೀರುವ ಇನ್ನೊಂದು ಅಂಶವೆಂದರೆ ಉತ್ತರ ಗೋಳಾರ್ಧ ಮತ್ತು ಯುರೇಷಿಯಾದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಹಿಮದ ಹೊದಿಕೆ. ಈ ಪ್ರದೇಶಗಳಲ್ಲಿ ಹಿಮದ ಹೊದಿಕೆ ಮಟ್ಟಗಳು ಮತ್ತು ಭಾರತೀಯ ಮಾನ್ಸೂನ್‌ನ ಶಕ್ತಿಯ ನಡುವಿನ ” ಸಂಬಂಧ”ವನ್ನು (inverse relationship) ವನ್ನು ಅಂಕಿಅಂಶಗಳು ಹೇಳುತ್ತವೆ.