ಇಂಥ ನಿಂಗಪ್ಪ ಬರೀ ನೀರುಗಂಟೆಯಾಗಿರಲಿಲ್ಲ

0
ಲೇಖಕರು: ಎನ್.ಎನ್. ಮೂರ್ತಿ ಪ್ಯಾಟಿ

ಪ್ರತಿಬಾರಿ ನಿಟ್ಟಾಲಿಗೆ ಹೋದಾಗ ಮುಖ್ಯ ರಸ್ತೆಯಿಂದ ಎಡಕ್ಕೆ ಹೊರಳುತ್ತಿದ್ದಂತೆಯೇ ಹುಣಸಿಗಿಡದ ಕಟ್ಟೆಯ ಮೇಲೆ ಹೆಗಲಿಗೊಂಡು ಟಾವೆಲ್ ಹಾಕಿಕೊಂಡು ಕೂತ ಆಕೃತಿಯೊಂದು ಎದ್ದು ನಿಂತು ನಮಸ್ಕಾರ ಹೇಳುತ್ತದೆ. ವಯಸ್ಸು ಅರವತ್ತರ ಆಜುಬಾಜು.

ಕಾರು ನಿಲ್ಲಿಸುತ್ತಲೇ ಬಳಿ ಬಂದು ‘ಈಗ್ ಬಂದ್ರಾ?’ ಅಂತಾ ಕೆಂಪು ಹಲ್ಲುಗಳ ಮೂಲಕ ಸ್ವಾಗತ ತೋರುತ್ತಿದ್ದ ಅಜ್ಜನ ಹೆಸರು ನಿಂಗಪ್ಪ. ಕಳೆದ ಬಾರಿ ಹೋದಾಗ ಆತ ಕಾಣಲಿಲ್ಲ. ಏಕೆ ಅಂತ ವಿಚಾರಿಸಿದಾಗ ಆತನ ಕಾಲಿಗೆ ಗಾಯವಾಗಿದ್ದು, ಆತ ಮನೆ ಬಿಟ್ಟು ಹೊರಗೆ ಬಾರದೇ ಇರೋದರ ಬಗ್ಗೆ ಗೊತ್ತಾಯಿತು.

ಆತನ ಮಗ ಉಮೇಶನಿಗೆ ಫೋನ್ ಮಾಡಲಾಗಿ, ಇವತ್ತು ಕೊಂಚ ಉತ್ತಮ. ಹೀಗಾಗಿ ಆತನನ್ನು ಕಳಿಸಿಕೊಡೋದಾಗಿ ಹೇಳಿದ ನಾಲ್ಕೇ ನಿಮಿಷಕ್ಕೆ ಅಜ್ಜ ತೋಟಕ್ಕೆ ಎಂಟ್ರಿ ಕೊಟ್ಟ. ಬಲಗಾಲಿನ ಪಾದಕ್ಕೆ ಬ್ಯಾಂಡೇಜು. ಬಂದವನೇ ಫಾರ್ಮ್‌ಹೌಸ್‌ನ ಎದುರಿಗಿನ ಕಟ್ಟೆಯ ಮೇಲೆ ಕುಳಿತ. ಒಂದು ಕಪ್ ಚಾ ಕುಡಿದ ಅಜ್ಜ ಏನೇನೋ ಹತ್ತಾರು ಸುದ್ದಿ ಹೇಳಿದ್ದ. ಸುದ್ದಿ ಹೇಳುತ್ತಲೇ ಜೋರಾಗಿ ನಗೋ‌ ಶೈಲಿ ಆತನದ್ದು.

ಇಂಥ ನಿಂಗಪ್ಪ ಬರೀ ನೀರುಗಂಟೆಯಾಗಿರಲಿಲ್ಲ. ಕೃಷಿ ಸಂಬಂಧಿ, ವಿದ್ಯುತ್ ಸಂಬಂಧಿ, ಪೈಪ್ ಸಂಬಂಧಿ ಎಲ್ಲ ಕೆಲಸಗಳ ಬಗ್ಗೆಯೂ ಆತನಿಗೆ ಗೊತ್ತಿತ್ತು. ಪಂಪ್‌ ಕೈಕೊಟ್ಟರೆ, ಫ್ಯಾನ್ ತಿರುಗದೇ ಇದ್ದರೆ, ಸರ್ವೀಸ್ ವೈರ್ ಸುಟ್ಟರೆ, ಕರೆಂಟ್ ಕೈಕೊಟ್ಟರೆ, ನಳ ಬಾರದೇ ಇದ್ದರೆ ಅದಕ್ಕೆಲ್ಲ‌ ಮುಲಾಮು ಹಚ್ಚೋದು ಈ ನಿಂಗಪ್ಪಜ್ಜನಿಗೆ ಗೊತ್ತಿತ್ತು.

ಇತ್ತೀಚಿಗೆ ಯಾವುದೋ ಕೆಲಸ ಮಾಡಲು ಹೋದಾಗ ಜಾರಿ ಬಿದ್ದು ಬೆನ್ನು, ತಲೆಗೆ ಗಾಯ ಮಾಡಿಕೊಂಡಿದ್ದ. ಕೊನೆಗೆ ಆತನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆತನ ಮಗ ಉಮೇಶ ನನಗೆ ಹೇಳಲಾಗಿ, ವೈದ್ಯರೊಂದಿಗೆ ಮಾತನಾಡಿ ಆತನಿಗೆ ಒಳ್ಳೆಯ ಚಿಕಿತ್ಸೆ ನೀಡುವಂತೆ ಮಾಡಿಯಾಗಿತ್ತು. ಅಲ್ಲಿಂದ ಡಿಸ್ಚಾರ್ಜ್ ಆಗಿ ಹೋಗಿದ್ದ ಅಜ್ಜ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದ.

ಈ ಬಾರಿ ಊರಿಗೆ ಹೋದಾಗ ಮನೆಗೆ ಹೋಗಿ ಭೇಟಿ ಮಾಡಬೇಕೆಂದುಕೊಂಡಿದ್ದೆ. ಆದರೆ ಇಂದು ಮಧ್ಯಾಹ್ನ ಬಂದ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಲೇ ಇಲ್ಲ. ಅಜ್ಜನಿಗೆ ಹೃದಯಾಘಾತವಾಗಿ ಇಹಲೋಕ ತ್ಯಜಿಸಿಬಿಟ್ಟಿದ್ದಾನೆ. ‘ನಂಗ‌ ಸುಗರ್ ಇಲ್ಲ, ಬಿಪಿನೂ ಇಲ್ಲ. ಆರಾಂ ಅದೇನಿ ನೋಡ್ರಿ ಅಪ್ಪಾರಾ… ಈ ಕಾಲಿಂದು ಸಮಸ್ಯೆ ಕಡಿಮಿ ಆಗಿಬಿಟ್ರ ಸಾಕು, ಮತ್ತ ನಾ ಮೊದಲಿನಂಗ ಓಡ್ಯಾಡಿಕೊಂಡು ಇರ್ತೇನೆ. ಡಾಕ್ಟ್ರು ಅದೇನೋ ಹಾಲ್ಟು ಸ್ವಲ್ಪ ಈಕ್ ಆಗೈತಿ ಅಂದಾರ. ಅದಕ್ಕೆಲ್ಲ ತಲಿ ಕೆಡಿಸಿಕೊಂಡಿಲ್ಲ’ ಅಂದಿದ್ದ ಅಜ್ಜ ಇದೀಗ ಎಲ್ಲ ಬಿಟ್ಟು ಎದ್ದು ಹೋಗಿದ್ದಾನೆ.

ಪ್ರತಿಸಲ ಊರಿನಿಂದ ಮರಳುವಾಗ ಕಾರಿನ ಬಳಿ ಬರುತ್ತಿದ್ದ ಆತನಿಗೆ ಪ್ರೀತಿಯಿಂದ ಕೈಮುಚ್ಚಿ ನೀಡಿದ ನೋಟುಗಳನ್ನು ಅಷ್ಟೇ ಪ್ರೀತಿಯಿಂದ ಪಡೆದುಕೊಳ್ಳುತ್ತಿದ್ದ ಅಜ್ಜ, ಅದಕ್ಕೆ ನಸುನಕ್ಕು ಧನ್ಯವಾದ ಸಲ್ಲಿಸುತ್ತಿದ್ದ. ಇಂಥ ನಿಂಗಪ್ಪಜ್ಜ ಇದೀಗ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾನೆ. ಈ ಬಾರಿ ಊರಿಗೆ ಹೋದರೆ ಕಟ್ಟೆಯ ಮೇಲೆ ಕುಳಿತ ಅಜ್ಜ ಸಿಗೋದೇ ಇಲ್ಲ. ಮನಸ್ಸು ಭಾರವಾಗಿದೆ.

ಮಿಸ್ ಯೂ ನಿಂಗಪ್ಪಜ್ಜ…

ಹೋಗಿ ಬನ್ನಿ.. ಓಂ ಶಾಂತಿ…

LEAVE A REPLY

Please enter your comment!
Please enter your name here