ಇಲ್ಲಿ ದುರಂತ ಘಟಿಸಲಿದೆ ಎಂದರೆ ಕಿವಿಗೆ ಹಾಕಿಕೊಳ್ಳುವವರೇ ಇಲ್ಲ !

0
ಲೇಖಕರು: ನಾಗರಾಜ ಕೂವೆ

ನನ್ನನ್ನು ಸೇರಿದಂತೆ ಈ ತಲೆಮಾರಿನ ಮಲೆನಾಡಿನ ಯುವ ಜನರಿಗೆ ಪಶ್ಚಿಮ ಘಟ್ಟಗಳ ಬಗೆಗೆ ಏನೇನೂ ಗೊತ್ತಿಲ್ಲ. ನಾವೆಲ್ಲಾ ಹೆಚ್ಚೆಂದರೆ ಒಂದಷ್ಟು ಕಾಡು ಸುತ್ತಿರಬಹುದು, ಅಲ್ಲಿ ಒಂದಿಷ್ಟು ಪ್ರಾಣಿ-ಪಕ್ಷಿಗಳನ್ನು ನೋಡಿರಬಹುದು. ಟ್ರೆಕ್ಕಿಂಗ್ ಹೆಸರಿನಲ್ಲಿ ರೋಚಕತೆಗೆ ನಾಲ್ಕೈದು ಗುಡ್ಡ ಹತ್ತಿಳಿದಿರಬಹುದು. ಪಶ್ಚಿಮ ಘಟ್ಟಗಳನ್ನು ಹೆದ್ದಾರಿಗಳ ಆಚೀಚೆ ಕಂಡಷ್ಟೇ ನೋಡಿದ್ದೇವಷ್ಟೇ. ಈಗಿನ ಅಭಿವೃದ್ಧಿಯ ವೇಗ ನೋಡಿದರೆ ಮುಂದಿನ ತಲೆಮಾರಿಗೆ ಇಷ್ಟೂ ಉಳಿಯುವುದಿಲ್ಲ ಅನ್ನುವುದು ದಿಟ.
ಬೈನಾಕ್ಯುಲರಿನ ದೂರದೃಷ್ಟಿ, ಭೂತಗನ್ನಡಿಯ ಸಮೀಪದೃಷ್ಟಿ, ಸೂಕ್ಷ್ಮದರ್ಶಕದ ಒಳನೋಟ, ಉಪಗ್ರಹಗಳ ಗರುಡನೋಟ, ಆಧುನಿಕ ಉಪಕರಣಗಳ ಕರಾರುವಾಕ್ಕು ಲೆಕ್ಕಾಚಾರ ಮೊದಲಾದವುಗಳಿಂದ ವಿಜ್ಞಾನಿಗಳು ‘ಇಲ್ಲಿ ದುರಂತ ಘಟಿಸಲಿದೆ’ ಎಂದರೆ ಕಿವಿಗೆ ಹಾಕಿಕೊಳ್ಳುವವರೇ ಇಲ್ಲ.
ಪರಿಸರದೊಂದಿಗೆ ಬದುಕುತ್ತಿರುವ ನೆಲಮೂಲದ ಜನರ ಜೀವನಾನುಭವಕ್ಕೂ ಇಂದು ಕಿಮ್ಮತ್ತಿಲ್ಲ. ಅದಿರಲಿ, ಹವಾಮಾನ ವೈಪರೀತ್ಯದಿಂದ ನಮ್ಮದೇ ಬದುಕು ಎಕ್ಕುಟ್ಟಿ ಹೋಗುತ್ತಿದ್ದರೂ ಅದನ್ನು ಕನಿಷ್ಠ ಗ್ರಹಿಸುವಷ್ಟು ವಿವೇಚನೆಯೂ ನಮ್ಮಲಿಲ್ಲ. ದುರಂತವೆಂದರೆ ನಮ್ಮ ಬದುಕಿಗೆ ಏನೇನೂ ಅಗತ್ಯವಿಲ್ಲದ ವಿಚಾರಗಳಲ್ಲಿ ನಾವು ಕಳೆದೇ ಹೋಗಿದ್ದೇವೆ.
ಕಹಿಯಾದರೂ ಸತ್ಯವೇನೆಂದರೆ, ನಮಗೆ ನಿನ್ನೆ-ನಾಳೆಗಳ ಪರಿವೇ ಇಲ್ಲ. ‘ಪಶ್ಚಿಮಘಟ್ಟ ಉಳಿಸಿ’ ಎಂಬ ಆಂದೋಲನ 1980 ರಲ್ಲೇ ನಡೆದಿತ್ತು ಎಂದು ಶೇ.99 ಯುವಜನರಿಗೆ ಗೊತ್ತೇ ಇಲ್ಲ. ಶಿವರಾಮ ಕಾರಂತರಂತವರು ಆಗಲೇ ಬೀದಿಗಿಳಿದಿದ್ದರು ಎಂದಾಗಲೀ; ‘ತುಂಗಾಮೂಲ ಉಳಿಸಿ’ ಎಂದು ಅನಂತಮೂರ್ತಿಯವರು ಇಪ್ಪತ್ತು ವರ್ಷದ ಹಿಂದೇ ಧ್ವನಿ ಎತ್ತಿದ್ದರು ಎಂದಾಗಲೀ ಹೇಳುವಂತಹ ಹಿರಿಯರು ಈಗಿಲ್ಲ.
ಕರ್ನಾಟಕದಲ್ಲಿ ಈಗಿರುವ ಯುವ ತಲೆಮಾರಿನ ಕೆಲವರಿಗಾದರೂ ಅಲ್ಪಸ್ವಲ್ಪ ಪರಿಸರ ಪ್ರೀತಿ ಹುಟ್ಟಿದ್ದರೆ ಅದು ಪೂರ್ಣಚಂದ್ರ ತೇಜಸ್ವಿಯವರ ಬರಹಗಳಿಂದ. ‘ಅಂತವರೊಬ್ಬರು ಇಲ್ಲಿ ಬದುಕಿದ್ದರು…’ ಎಂದು ಯುವಜನರಿಗೆ ಹೇಳುವವರೂ ನಮ್ಮ ಮೂಡಿಗೆರೆಯಲ್ಲೇ ಇಲ್ಲ.
ಕುವೆಂಪುರವರ ಪ್ರಕೃತಿ ಪ್ರೇಮದ ಬಗ್ಗೆ ಹೇಳುವುದಕ್ಕೆ ಮಲೆನಾಡಿನಲ್ಲಿ ಅವರ ತತ್ವಗಳನ್ನು ಪಾಲಿಸುವವರೇ ಇಲ್ಲಬಿಡಿ. ಹಿಂದಿನದ್ದೆಲ್ಲಾ ಹೇಳಿ, ಮುಂದಿನ ವಿವೇಕದ ಮಾರ್ಗ ತೋರಿಸಬಹುದಾದ ‘ಪ್ರಜ್ಞಾವಂತ ಹಿರಿಯರು’ ಮಲೆನಾಡಿನಲ್ಲಿ ಇವತ್ತು ಯಾರೂ ಇಲ್ಲ.
ಈ ಪಶ್ಚಿಮ ಘಟ್ಟಗಳ ಸುಮಾರು 350 ಕೋಟಿ ವರ್ಷಗಳ ವಿಕಾಸಯಾತ್ರೆಯಲ್ಲಿ ತೀರಾ ಇತ್ತೀಚೆಗೆ ಅಲ್ಲಿ ಕಾಲಿಟ್ಟಿರುವ ಮಾನವನ ಪಾತ್ರ ಏನು? ಎಂಬುದನ್ನು ನಾವು ಪುನಃ ಯೋಚಿಸಬೇಕಿದೆ. ಅನಗತ್ಯ ಪರಿಸರ ನಾಶದ ತುತ್ತತುದಿಯಲ್ಲಿ ನಾವಿರುವಾಗ ಪ್ರಕೃತಿ ಮತ್ತು ಬಡಜನರ ಬಗ್ಗೆ ಯೋಚಿಸುವ ನನ್ನಂತಹ ಕೆಲವರಿಗೆ ಆಗುವ ದುಃಖ, ನಿರಾಶೆ, ಹತಾಶೆಗಳು ಅಪಾರ. ಹೀಗಿರುವಾಗ ‘ಭೂಮಿಗೆ ಅದೇನೇ ಸಂಕಷ್ಟಗಳು ಬಂದರೂ ಅದನ್ನು ಸರಿಪಡಿಸಿಕೊಳ್ಳುವ ಸಾಮರ್ಥ್ಯ ಈ ಮಳೆಕಾಡುಗಳ ಅತೀ ಸಂಕೀರ್ಣ ಜೀವವ್ಯವಸ್ಥೆಗೆ ಇದೆ’ ಎಂಬ ವಿಜ್ಞಾನದ ಮಾತುಗಳು ಒಂದಷ್ಟು ಜನರಿಗಾದರೂ ತಲೆಗೆ ಹೋದೀತು, ಮಲೆನಾಡಿಗರಿಗೆ ಜೀವವೈವಿಧ್ಯದ ಸಂರಕ್ಷಣೆಯ ಬಗ್ಗೆ ಅರಿವು ಮೂಡೀತು ಎಂಬ ಭರವಸೆಯಲ್ಲಿ ನನ್ನಂತಹ ಕೆಲವರು ಸುಮ್ಮನೆ ಬದುಕುತ್ತಿದ್ದೇವೆ. ಇವತ್ತು ಇಲ್ಲಿ ಜೀವವೈವಿಧ್ಯ ಸಂರಕ್ಷಣೆಗೆ ನಾವು ವಹಿಸಬಹುದಾದ ಪಾತ್ರವನ್ನು ಗಂಭೀರವಾಗಿ ಹುಡುಕಿಕೊಳ್ಳಬೇಕಿದೆ.

ಚಿತ್ರ – ಪ್ರವೀಣ್ ಹಳ್ಳುವಳ್ಳಿ

LEAVE A REPLY

Please enter your comment!
Please enter your name here