ಮುಂಗಾರು ಮಳೆ ವಿಸ್ತರಣೆಯಾಗುವ ಸಾಧ್ಯತೆ; ಹಸಿ ಬರದ ಆತಂಕ

2

ಸಾಮಾನ್ಯವಾಗಿ ಸೆಪ್ಟೆಂಬರ್‌ 15ರ ಒಳಗೆ ನೈರುತ್ಯ ಮುಂಗಾರು ಅವಧಿ ಮುಕ್ತಾಯವಾಗುತ್ತದೆ. ಈ ಬಾರಿ  ಅವಧಿ ನಂತರವೂ ಮುಂದುವರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಧಾನ್ಯದ ಬೆಳೆಗಳ ಕೊಯ್ಲು ಮೇಲೆ ದುಷ್ಪರಿಣಾಮವಾಗುವ ಸಾಧ್ಯತೆ ಇದೆ.

ದೇಶದ ಹಲವು ರಾಜ್ಯಗಳಲ್ಲಿ ದ್ವಿದಳ ಧಾನ್ಯಗಳು, ಜೋಳ,  ಅಕ್ಕಿ,  ಸೋಯಾಬೀನ್  ಮತ್ತು ಹತ್ತಿ ಬೆಳೆಗಳು ಸೆಪ್ಟೆಂಬರ್‌ ಮಧ್ಯಾಂತರ ಹಂತದಿಂದ ಕೊಯ್ಲು ಆಗಲು ಶುರುವಾಗುತ್ತವೆ. ಮುಂಗಾರು ಮಳೆ ವಿಸ್ತರಣೆಯಾದರೆ ಕಟಾವು ಪ್ರಕ್ರಿಯೆಗೆ ಹಿನ್ನೆಲೆಯಾಗುವುದರ ಜೊತೆಗೆ ಭಾರಿ ಪ್ರಮಾಣದ ಬೆಳೆ ನಷ್ಟವಾಗುವ ಸಾಧ್ಯತೆಯೂ ಇದೆ.

ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ನೈರುತ್ಯ ಮುಂಗಾರು ಸೆಪ್ಟೆಂಬರ್‌ ಕೊನೆ ತನಕ ವಿಸ್ತರಿತವಾಗುವ ಸಾಧ್ಯತೆ ಇದೆ ಭಾರತೀಯ ಹವಾಮಾನ ಇಲಾಖೆ ತಜ್ಞರು ಅಂದಾಜಿಸಿದ್ದಾರೆ. ಈ ಬಗ್ಗೆ ಅಂತರಾಷ್ಟ್ರೀಯ ಸುದ್ದಿಸಂಸ್ಥೆಯೊಂದರ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅದೂ ಅಲ್ಲದೇ  ಸೆಪ್ಟೆಂಬರ್‌ ಅವಧಿಯಲ್ಲಿ ವಾಡಿಕೆಯ ಸರಾಸರಿ ಮಳೆಗಿಂತ ಅಧಿಕ ಮಳೆ ಆಗುವ ಸಾಧ್ಯತೆ ಇದೆ.ವಿಶೇಷವಾಗಿ ದೇಶದ ಉತ್ತರ ಭಾಗದಲ್ಲಿ ಭಾರಿಯಿಂದ ಅತೀ ಭಾರಿ ಮಳೆ ಮುಂದುವರಿಯಬಹುದು. ಈ ವಿದ್ಯಮಾನ ಈಗಾಗಲೇ ಶುರುವಾಗಿದೆ. ಇದರಿಂದ ಸೆಪ್ಟೆಂಬರ್‌ ತಿಂಗಳಿನಲ್ಲಿ ಶುರುವಾಗುವ ಕೊಯ್ಲು ಪ್ರಕ್ರಿಯೆಗೆ ಹಾನಿಯುಂಟಾಗಬಹುದು. ಇದರಿಂದ ಈ ವರ್ಷದ ಒಟ್ಟಾರೆ ಧಾನ್ಯ ಸಂಗ್ರಹಣೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆ ಇದೆ.

ಈ ಬಾರಿಯ ಸೆಪ್ಟೆಂಬರ್‌ ತಿಂಗಳಿನಿಂದ ಲಾ ನಿನಾ ಹವಾಮಾನ ಪರಿಸ್ಥಿತಿಯೂ ಏರ್ಪಾಟಾಗುವ ಸಾಧ್ಯತೆ ಇದೆ. ಇದರ ಪ್ರಭಾವದಿಂದ ಏಶಿಯಾದ ರಾಷ್ಟ್ರಗಳಲ್ಲಿ ವಿಶೇಷವಾಗಿ ಭಾರತದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

ಮಳೆ ಹೆಚ್ಚಾಗುವುದರಿಂದ ದೇಶದ ಬಹುತೇಕ ಜಲಾಶಯಗಳು ತುಂಬಿ ತುಳುಕುತ್ತವೆ. 2024ರ ಜೂನ್‌ ನಿಂದ ಆಗಸ್ಟ್‌ ಕೊನೆ ತನಕ ದೇಶದ ಹಲವು ರಾಜ್ಯಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೆ ಈ ಹಂತದಲ್ಲಿ ಮಳೆ ವಿಸ್ತರಣೆಯಾದರೆ  ಕಟಾವಿಗೆ ಬರುವ ಬೆಳೆಗಳ ಮೇಲೆ ಹಾನಿ ಉಂಟಾಗಬಹುದು. ವಿಶೇಷವಾಗಿ ಕೊಯ್ಲು ಹಂತದಲ್ಲಿ  ಭಾರಿ ಮಳೆಯಾದರೆ ಭತ್ತದ ಪೈರುಗಳು ನೆಲಕ್ಕೆ ಒರಗುತ್ತವೆ. ಕಾಳು ಉದುರಿ ಹಾಳಾಗುತ್ತವೆ. ಮಳೆಯಲ್ಲಿ ಅವುಗಳ ಸಂಗ್ರಹಣೆಯೂ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಉತ್ತಮವಾಗಿ ಮುಂಗಾರು ಮಳೆಯಾಗಿದ್ದರೂ ಹಸಿ ಬರ ಕಾಡುವ ಸಾಧ್ಯತೆ ಇದೆ.

2 COMMENTS

  1. ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತೆ ರೈತರಿಗೆ ಈ ವರ್ಷವೂ (ಹಸಿ)ಬರಗಾಲವೇ.ಅಯ್ಯೋ ನಮ್ಮ ರೈತರ ಬದುಕು ನೆನೆದರೆ ಕಣ್ಣೀರು ಬರುತ್ತದೆ…

LEAVE A REPLY

Please enter your comment!
Please enter your name here