ಲೇಖಕರು: ಡಾ. ಅತೀಕ್ ಉರ್ ರೆಹಮಾನ್, ಹೆಚ್. ಎಂ., ಲಕ್ಷ್ಮಣ್ ನಾವಿ, ಡಾ. ತಸ್ಮಿಯಾ ಕೌಸರ್ ಮತ್ತು ದಯಾನಂದ ನಾಯ್ಕ, ಎಸ್., ಕೃ.ವಿ.ವಿ ಬೆಂಗಳೂರು.
ತೊಗರಿ ನಮ್ಮ ರಾಜ್ಯದ ಮಳೆಯಾಶ್ರಿತ ಪ್ರದೇಶದ ಬಹುಮುಖ್ಯ ದ್ವಿದಳ ಧಾನ್ಯ ಬೆಳೆ. ದೇಹದ ಬೆಳವಣಿಗೆಗೆ ಅವಶ್ಯಕವಾದ ಸಸಾರಜನಕವನ್ನು ಶೇ 20 ಮತ್ತು ಹೇರಳವಾಗಿ ಇತರ ಪೌಷ್ಟಿಕಾಂಶಗಳನ್ನು ಹೊಂದಿದ ಬೆಳೆ. ಹಾಗಾಗಿ ಇದು ದೇಶದ ಬಹುಪಾಲು ಜನಸಂಖ್ಯೆ ಅದರಲ್ಲೂ ಸಸ್ಯಾಹಾರಿಗಳಿಗೆ ಸಸಾರಜನಕದ ಪ್ರಮುಖ ಮೂಲ. ಆದ್ದರಿಂದ ಇದು ನಮ್ಮ ಆಹಾರ ಪದ್ಧತಿಯ ಅವಿಭಾಗ್ಯ ಅಂಗ.
ಇದನ್ನು ಹೆಚ್ಚಾಗಿ ಬೇಳೆಯಾಗಿ ಮತ್ತು ಹಸಿಕಾಯಿ ರೂಪದಲ್ಲೂ ಬಳಸಲಾಗುತ್ತದೆ. ಜಾನುವಾರುಗಳಿಗೂ ಇದು ಉತ್ತಮ ಆಹಾರ. ಈ ಸಂಧರ್ಭದಲ್ಲಿ ನಾವು ಆಹಾರ ಭದ್ರತೆ ಹೊಂದಿದ್ದರೂ ಸಸಾರಜನಕ ಅಪೌಷ್ಟಿಕತೆ ಕಾರಣ ಹೆಚ್ಚು ಪ್ರದೇಶದಲ್ಲಿ ಆಧಿಕ ಇಳುವರಿಯೊಂದಿಗೆ ದ್ವಿದಳ ಧಾನ್ಯಗಳನ್ನು ಬೆಳೆಯುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ತೊಗರಿಯ ಅಧಿಕ ಇಳುವರಿಗೆ ಸುಧಾರಿತ ಬೇಸಾಯ ಕ್ರಮಗಳನ್ನು ಪಾಲಿಸುವುದು ಅವಶ್ಯಕ.
ಕಡಿಮೆ ನೀರು ಬಯಸುವ ಮತ್ತು ಕಠಿಣ ಹವಾಮಾನ (ಮಳೆಯ ಅಭಾವ) ಪರಿಸ್ಥಿತಿಯಲ್ಲೂ ಇಳುವರಿ ಕೊಡುವಂತಹ ಬೆಳೆ (ಆಳವಾದ ಬೇರುಗಳಿಂದ ತೇವಾಂಶದ ಸಮರ್ಥ ಬಳಕೆ). ರೈಜೋಬಿಯಂ ಅಣುವಿನ ಸಹಾಯದಿಂದ ವಾತಾವರಣದಲ್ಲಿನ ಸಾರಜನಕವನ್ನು ಸ್ಥಿರೀಕರಿಸಿ ಉಪಯೋಗಿಸಿಕೊಳ್ಳುವ ಶಕ್ತಿ ಹೊಂದಿರುವುದರಿAದ ಮಣ್ಣಿನ ಫಲವತ್ತತೆ ಹಾಗೂ ಸುಸ್ಥಿರ ಕೃಷಿಗೆ ಅತ್ಯಂತ ಅವಶ್ಯಕ. ಇದನ್ನು ಪೂರ್ಣ ಬೆಳೆಯಾಗಿ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವುದಲ್ಲದೇ, ರಾಗಿ, ನೆಲಗಡಲೆ, ಜೋಳ ಮತ್ತು ಮುಸುಕಿನಜೋಳ ಬೆಳೆಗಳೊಂದಿಗೆ ಮಿಶ್ರ ಬೆಳೆಯಾಗಿಯೂ ಸಹ ಬೆಳೆಯಲಾಗುತ್ತಿದೆ.
ಭೂಮಿಯ ಆಯ್ಕೆ
ತೊಗರಿಯನ್ನು ಎಲ್ಲ ರೀತಿಯ ಭೂಮಿಯಲ್ಲೂ ಬೆಳೆಯಬಹುದು. ಆದರೆ ನೀರು ಸರಾಗವಾಗಿ ಬಸಿದು ಹೋಗುವಂತಹ ಸಾಮರ್ಥ್ಯ ಹೊಂದಿರುವ ಭೂಮಿ, ತೊಗರಿಗೆ ಉತ್ತಮ. ಆಯ್ಕೆ ಮಾಡಿದ ಭೂಮಿ ಸಮತಟ್ಟಾಗಿದ್ದು ಫಲವತ್ತತೆಯಿಂದಕೂಡಿ, ಕಳೆಗಳಿಂದ ಮುಕ್ತವಾಗಿರಬೇಕು.
ಬಿತ್ತನೆ ಕಾಲ
ಮೇ ನಿಂದ ಜುಲೈ ತಿಂಗಳುಗಳು ಬಿತ್ತನೆಗೆ ಸರಿಯಾದ ಕಾಲ. ತೊಗರಿಯ ಹೂ ಬಿಟ್ಟು ಉತ್ತಮ ಇಳುವರಿ ಕೊಡಲು ನಿರ್ದಿಷ್ಟ ಪ್ರಮಾಣದ ಒಟ್ಟು ಉಷ್ಣಾಂಶ ಮತ್ತು ಅಲ್ಪಾವಧಿ ದಿನ ಮುಖ್ಯ. ಹಾಗಾಗಿ ಮುಂಚಿತವಾಗಿ ಬಿತ್ತಿದ ಬೆಳೆಗೆ ಇವು ಲಭ್ಯವಾಗಿ ಅಧಿಕ ಇಳುವರಿ ಸಾದ್ಯ. ಬದಲಾದ ಹವಾಮಾನ ಪರಿಸ್ಥಿತಿಯಲ್ಲಿ ತಡವಾಗಿ ಬಿತ್ತಿದಾಗ ಕಡಿಮೆ ಸೂರ್ಯರಶ್ಮಿ ಹಾಗು ಅಧಿಕ ತೇವಾಂಶದಿಂದ ಕುಂಠಿತ ಬೆಳವಣೆಗೆ, ತಡವಾಗಿ ಹೂಬಿಡುವುದು ಮತ್ತು ಕೀಟ / ರೋಗ ಭಾದೆ ಅಧಿಕವಾಗಿ ಇಳುವರಿ ಕಡಿಮೆಯಾಗುತ್ತಿರುವುದು ಕಂಡು ಬಂದಿದೆ. ಮುಂಚಿತವಾದ ಬಿತ್ತನೆ (ಮೇ-ಜೂನ್) ಸೂಕ್ತ.
ಬೇಸಾಯಕ್ಕೆ ಸಾಮಗ್ರಿಗಳು
- ಸಾಮಗ್ರಿಗಳು ಮತ್ತು ಪ್ರಮಾಣ (ಒಂದು ಎಕರೆಗೆ)
- ಬಿತ್ತನೆ ಬೀಜ ಸಾವಯವ ಗೊಬ್ಬರಗಳು ಜೈವಿಕ ಗೊಬ್ಬರಗಳು ರಾಸಾಯನಿಕ ಗೊಬ್ಬರಗಳು (ಕಿ.ಗ್ರಾಂ)
- ಪೋಷಕಾಂಶಗಳು ಲಘು ಪೋಷಕಾಂಶಗಳು
- ಪೂರ್ಣ ಬೆಳೆ ಮಿಶ್ರ ಬೆಳೆ ಕೊಟ್ಟಿಗೆ ಗೊಬ್ಬರ/ ಕಾಂಪೋಸ್ಟ್ ರೈಜೋಬಿಯಂ ರಂಜಕ ಕರಗಿಸುವ ಜೀವಾಣು ಸಾರಜನಕ ರಂಜಕ ಪೊಟ್ಯಾಷ್ ಗಂಧಕ ಸತು ಸೋಡಿಯಂ ಮಾಲಿಬ್ಡೇಟ್
- 5-6 ಕಿ.ಗ್ರಾಂ 3 ಕಿ.ಗ್ರಾಂ 3 ಟನ್ 200 ಗ್ರಾಂ 200 ಗ್ರಾಂ 10 ಕಿ.ಗ್ರಾಂ 20 ಕಿ.ಗ್ರಾಂ 10 ಕಿ.ಗ್ರಾಂ 8 ಕಿ.ಗ್ರಾಂ 6 ಕಿ.ಗ್ರಾಂ 24 ಗ್ರಾಂ
ಸುಧಾರಿತ ತಳಿಗಳು
ಅಧಿಕ ಇಳುವರಿ ಪಡೆಯಲು ಉತ್ತಮ ಬೆಳವಣಿಗೆ ಮತ್ತು ಕೀಟ-ರೋಗಗಳಿಂದ ರಕ್ಷಣೆ ಅತಿ ಮುಖ್ಯ. ಈ ದಿಸೆಯಲ್ಲಿ ಉತ್ತಮ / ಸಕಾಲಿಕ ಬೇಸಾಯಕ್ರಮಗಳ ಜೊತೆಗೆ ಪ್ರದೇಶ, ಬಳಕೆ ಮತ್ತು ರೋಗ/ಕೀಟ ಭಾಧೆಗಳಿಗನುಸಾರವಾಗಿ ಸೂಕ್ತ ತಳಿ ಆಯ್ಕೆ ಮಹತ್ವದ್ದು. ಈ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯವು ಸಂಶೋಧನೆ ನಡೆಸಿ ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಿಗೆ ಉತ್ಪಾದನೆಯನ್ನು ಹೆಚ್ಚಿಸುವ ಸುಧಾರಿತ ತಳಿ ಬೆಂಗಳೂರು ರೆಡ್‌ಗ್ರಾಮ್ (ಬಿ.ಆರ್.ಜಿ-1,2,3,4 ಮತ್ತು 5) ತಳಿಗಳನ್ನು ಅಭಿವೃದ್ಧಿಪಡಿಸಿದೆ. ಈ ತಳಿಗಳ ಬಿತ್ತನೆ ಬೀಜಗಳು ಕೃಷಿ ವಿಶ್ವವಿದ್ಯಾನಿಲಯ, ಕೃಷಿ ವಿಜ್ಞಾನ / ಸಂಶೋಧನಾ ಕೇಂದ್ರ, ರಾಜ್ಯ ಬೀಜ ನಿಗಮ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ದೊರೆಯುತ್ತವೆ.
ಬೀಜೋಪಚಾರ
ಬಿತ್ತನೆಗೆ ಮುಂಚೆ ಎಕರೆಗೆ 24 ಗ್ರಾಂ. ಸೋಡಿಯಂ ಮಾಲಿಬ್ಡೇಟ್‌ನ್ನು ಮಡಕೆ ಅಥವಾ ಪ್ಲಾಸ್ಟಿಕ್ ಪಾತ್ರೆಯಲ್ಲಿ ತೆಗೆದುಕೊಂಡು 60 ಮಿ.ಲೀ. (ಶೇ.2ರ) ಬೆಲ್ಲದ ದ್ರಾವಣದಲ್ಲಿ ಕರಗಿಸಿದ ಮಿಶ್ರಣದಲ್ಲಿ ಎಕರೆಗೆ ಬೇಕಾದ ಬಿತ್ತನೆ ಬೀಜವನ್ನು ಬೆರೆಸಿ ನೆರಳಿನಲ್ಲಿ ಒಣಗಿಸಿ. ನಂತರ ಶೇ.2ರ ಬೆಲ್ಲದ ದ್ರಾವಣದಲ್ಲಿ ರೈಜೋಬಿಯಂ, ರಂಜಕ ಕರಗಿಸುವ ಹಾಗೂ ಟ್ರೆöÊಕೋಡರ್ಮಾ ಜೀವಾಣುಗಳನ್ನು ತಲಾ 200 ಗ್ರಾಂ ನಂತೆ ಬಿತ್ತನೆ ಬೀಜಕ್ಕೆ ಲೇಪನ ಮಾಡುವುದು. (ಶೇ.2ರ ಬೆಲ್ಲದ ದ್ರಾವಣ – 20 ಗ್ರಾಂ ಬೆಲ್ಲ ಅಥವಾ ಸಕ್ಕರೆಯನ್ನು ಒಂದು ಲೀಟರ್ ನೀರಿನಲ್ಲಿ ಕರಗಿಸಿ 5 ನಿಮಿಷಗಳ ಕಾಲ ಕುದಿಸಿ ಅಂಟು ದ್ರಾವಣವನ್ನು ತಯಾರಿಸುವುದು).
ಬಿತ್ತನೆ ವಿಧಾನ
ಬಿತ್ತನೆ ಮಾಡುವ ಮೊದಲು ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಹದಮಾಡಿ, ಎಕರೆಗೆ ಶಿಫಾರಸ್ಸು ಮಾಡಿದ 3 ಟನ್ ಕೊಟ್ಟಿಗೆ ಗೊಬ್ಬರ / ಕಾಂಪೋಸ್ಟನ್ನು ಬಿತ್ತನೆಗೆ 2-3 ವಾರಗಳ ಮುಂಚೆ ಮಣ್ಣಿಗೆ ಸೇರಿಸುವುದು. ಬಿತ್ತನೆ ಸಮಯದಲ್ಲಿ ಎಕರೆಗೆ ಶಿಫಾರಸ್ಸು ಮಾಡಿದ ಪೂರ್ತಿ ಅಂದರೆ 10 ಕೆ.ಜಿ. ಸಾರಜನಕ, 20 ಕೆ.ಜಿ. ರಂಜಕ, 10 ಕೆ.ಜಿ. ಪೊಟ್ಯಾಷ್ ಹಾಗೂ 6 ಕೆ.ಜಿ. ಸತುವಿನ ಸಲ್ಫೇಟನ್ನು ಒದಗಿಸುವ ರಾಸಾಯನಿಕ ರಸಗೊಬ್ಬರಗಳನ್ನು ಬಿತ್ತನೆ ಸಾಲಿನಲ್ಲಿ ಬೆರೆಸುವುದು.
ಕಡಿಮೆ ಬೆಲೆಯಲ್ಲಿ ದೊರೆಯುವ ರಾಕ್‌ಫಾಸ್ಫೇಟ್ ರಂಜಕಗೊಬ್ಬರವನ್ನು ಮೂಲ ಗೊಬ್ಬರವಾಗಿ ಉಪಯೋಗಿಸುವುದಾದರೆ ಬೀಜಕ್ಕೆ ರಂಜಕ ಕರಗಿಸುವ ಜೀವಾಣುವಿನಿಂದ ಲೇಪನಮಾಡಿ ಅರ್ಧ ಗಂಟೆ ನಂತರ ಬಿತ್ತುವುದು. ಗಂಧಕರಹಿತ ರಸಗೊಬ್ಬರಗಳನ್ನು ಬಳಸಿದಾಗ, ಬಿತ್ತನೆ ಸಮಯದಲ್ಲಿ ಎಕರೆಗೆ 60 ಕಿ.ಗ್ರಾಂ. ಜಿಪ್ಸಂ ಲವಣಕೊಡುವುದರ ಮುಖಾಂತರ 8 ಕಿ.ಗ್ರಾಂ. ಗಂಧಕವನ್ನು ಒದಗಿಸಬಹುದು.
ಈ ನಂತರ ತೊಗರಿಯನ್ನು ಭೂಮಿಯ ಫಲವತ್ತತೆಯ ಆಧಾರದ ಮೇಲೆ ಮೇ-ಜೂನ್‌ನಲ್ಲಾದರೆ 3-4 ಅಡಿ ಅಂತರದ ಸಾಲುಗಳಲ್ಲಿ ಗಿಡದಿಂದಗಿಡಕ್ಕೆ ಒಂದು ಅಡಿ ಹಾಗೂ ಜುಲೈ ನಂತರ 2-3 ಅಡಿ ಅಂತರದ ಸಾಲುಗಳಲ್ಲಿ ಗಿಡದಿಂದ ಗಿಡಕ್ಕೆ ಅರ್ಧ ಅಡಿ ಅಂತರವಿರುವಂತೆ ಬೀಜವನ್ನು ಒಂದು ಅಂಗುಲಕ್ಕಿಂತ ಹೆಚ್ಚಿನ ಆಳಕ್ಕೆ ಬೀಳದಂತೆ ಬಿತ್ತನೆ ಮಾಡುವುದು.
ತೊಗರಿ ನಾಟಿ ಪದ್ಧತಿ
ಇತ್ತೀಚಿನ ದಿನಗಳಲ್ಲಿ ಮುಂಗಾರು ಮಳೆ ತಡವಾಗಿ ಪ್ರಾರಂಭವಾಗುತ್ತಿದ್ದು ತೊಗರಿ ಬಿತ್ತನೆ ತಡವಾಗುತ್ತಿದೆ. ಆದುದರಿಂದ ತೊಗರಿ ಬೀಜವನ್ನು ಮೇ ತಿಂಗಳಲ್ಲಿ ಪಾಲಿಥೀನ್ ಚೀಲಗಳಲ್ಲಿ ಬೆಳೆದು 4 ರಿಂದ 6 ವಾರಗಳ ನಂತರ ನಾಟಿ ಮಾಡುವುದರಿಂದ ತಡವಾಗಿ ನೇರಬಿತ್ತನೆ ಮಾಡಿದ ತೊಗರಿ ಬೆಳೆಗಿಂತ ಹೆಚ್ಚಿನ ಇಳುವರಿ ಹಾಗೂ ಆದಾಯವನ್ನು ಪಡೆಯಬಹುದು. ಈ ರೀತಿ ಬೆಳೆದ ತೊಗರಿ ಸಸಿಗಳನ್ನು ಹೊಲದಲ್ಲಿ ಸಸ್ಯಸಂಖ್ಯೆ ಕಡಿಮೆಯಾದಾಗ ಸಹ ನಾಟಿ ಮಾಡಲು ಬಳಸಬಹುದು.
ಸಸಿ ತಯಾರಿಕಾ ವಿಧಾನ
ಸಸಿ ತಯಾರಿಸಲು ಸುಮಾರು 6″ ಅಂಗುಲ ಉದ್ದ ಹಾಗೂ 4″ ಅಂಗುಲ ಅಗಲವಿರುವ 150-200 ಗೇಜು ದಪ್ಪವಿರುವ ಪಾಲಿಥೀನ್ ಚೀಲಗಳನ್ನು ಉಪಯೋಗಿಸಬೇಕು. ಪಾಲಿಥೀನ್ ಚೀಲದಲ್ಲಿ ಸಮಪ್ರಮಾಣದಲ್ಲಿ ಸಾವಯವ ಗೊಬ್ಬರ, ಮಣ್ಣು ಮತ್ತು ಮರಳನ್ನು ಮಿಶ್ರಣಮಾಡಿ ತುಂಬಬೇಕು. ಪಾಲೀಥಿನ್ ಚೀಲದಲ್ಲಿ ಸರಿಯಾಗಿ ಹೆಚ್ಚಿನ ನೀರು ಬಸಿದು ಹೋಗಲು ಕೆಳಭಾಗದಲ್ಲಿ ಮತ್ತು ಸುತ್ತಲು 3-4 ರಂದ್ರಗಳನ್ನ ತೆಗೆಯಬೇಕು.
ಈ ನಂತರ ಮೇ 15 ಕ್ಕೆ 1 ಸೆಂ. ಮೀ. ಆಳದಲ್ಲಿ ಪ್ರತಿ ಚೀಲಕ್ಕೆ ಬೀಜೋಪಚಾರ ಮಾಡಿದ ಎರಡು ಬೀಜಗಳನ್ನು ಹಾಕಿ ಚೀಲಗಳನ್ನು ನೆರಳಿರುವ ಹಾಗೂ ಸರಿಯಾಗಿ ಸೂರ್ಯನ ಬೆಳಕು ಬರುವ ಜಾಗದಲ್ಲಿ ಇಟ್ಟು ನಿಯಮಿತವಾಗಿ ಜಾಲರಿ ಮುಖಾಂತರ ತಪ್ಪದೇ ನೀರು ಹಾಕಬೇಕು. ಸುಮಾರು 30 ರಿಂದ 40 ದಿವಸದ ತೊಗರಿ ಸಸಿಗಳು ನಾಟಿಗೆ ಯೋಗ್ಯವಾಗಿರುತ್ತವೆ.
ಕಳೆ ನಿರ್ವಹಣೆ
ತೊಗರಿ ಗಿಡವು ಉದ್ದ ಮತ್ತು ಅಗಲವಾಗಿ ಬೆಳೆಯುವುದರಿಂದ ಹೆಚ್ಚು ಅಂತರದ ಸಾಲಿನಲ್ಲಿ ಬಿತ್ತನೆ ಮಾಡಲಾಗುತ್ತದೆ. ಜೊತೆಗೆ ಬೆಳೆಯ ಪ್ರಾರಂಭಿಕ ಹಂತದ ಬೆಳವಣೆಗೆ ನಿಧಾನವಾಗಿರುವುದರಿಂದ ಕಳೆ ಹಾವಳಿ ಹೆಚ್ಚಾಗಿ ಸೂರ್ಯರಶ್ಮಿ, ನೀರು ಮತ್ತು ಪೋಷಕಾಂಶಗಳು ಕಳೆಗಳ ಪಾಲಾಗಿ ಬೆಳೆಯ ಬೆಳವಣಿಗೆ ಕುಂಠಿತವಾಗುತ್ತದೆ. ಈ ಅಂಶವನ್ನು ಪರಿಗಣಿಸಿ ಅಲ್ಪಾವಧಿ ಮತ್ತು ಸೂಕ್ತ ಬೆಳೆಯನ್ನು ಅಂತರಬೆಳೆಯಾಗಿ ಬೆಳೆಯುವುದರಿಂದ ಸಂಪನ್ಮೂಲ ಸದ್ಬಳಕೆ ಜೊತೆ ಅಧಿಕ ಆದಾಯವನ್ನು ಪಡೆಯ ಬಹುದು.
ಕಳೆ ಹೆಚ್ಚಿದ್ದಲ್ಲಿ ಪೆಂಡಿಮೆಥಾಲೀನ್ 38.7 ಇ.ಸಿ.ಎಂಬ ಉದಯಪೂರ್ವ ಕಳೆನಾಶಕವನ್ನು ಬಿತ್ತನೆ ಮಾಡಿದ ದಿನ ಅಥವಾ ಮಾರನೇ ದಿನ ಒಂದು ಎಕರೆಗೆ 700 ಮಿಲಿ ಲೀಟರ್ ಅನ್ನು 300 ಲೀ. ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವುದು ಹಾಗೂ ಉದಯೋತ್ತರ ಕಳೆನಾಶಕವಾದ ಇಮ್ಯಾಜಥಫಿರ್ ಶೇ.10 ಎಸ್.ಎಲ್ ಬಿತ್ತನೆಯಾದ 20 ರಿಂದ 25 ದಿನಗಳ ನಂತರ (ಕಳೆಯ 2 ರಿಂದ 3 ಎಲೆಗಳ ಹಂತದಲ್ಲಿ) 400 ಮಿ.ಲೀ ಅನ್ನು 200 ಲೀ. ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವುದು. ಸಿಂಪರಣೆಯ ನಂತರ ಭೂಮಿಯನ್ನು ತುಳಿಯಬಾರದು. ಸಿಂಪರಣೆ ಸಮಯದಲ್ಲಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರುವಂತೆ ಹಾಗೂ ಹೆಂಟೆಗಳಿರದಂತೆ ಎಚ್ಚರ ವಹಿಸುವುದು. 40 ರಿಂದ 50 ದಿವಸದಲ್ಲಿ ಬರುವ ಕಳೆಗಳನ್ನು ಕುಂಟೆ ಹಾಯಿಸುವುದರಿಂದ ಅಥವಾ ಕೈಕಳೆಯಿಂದ ನಿಯಂತ್ರಿಸುವುದು.
ನೀರು ನಿರ್ವಹಣೆ
ಈ ಬೆಳೆಯ ಒಟ್ಟು ನೀರಿನ ಅವಶ್ಯಕತೆಯು ಸುಮಾರು 16-20 ಎಕರೆ ಇಂಚಿನಷ್ಟಿರುತ್ತದೆ. ಮೊಳಕೆ, ಮೊಗ್ಗು ಪ್ರಾರಂಭ ಹಾಗೂ ಕಾಳುಗಳು ತುಂಬುವ ಹಂತ ಬೆಳೆಗೆ ನೀರುಅವಶ್ಯಕತೆಯ ಸಂದಿಗ್ಧ ಹಂತಗಳು. ನೀರಾವರಿ ಅನುಕೂಲವಿದ್ದು ಹೆಚ್ಚಿನ ಇಳುವರಿ ಪಡೆಯಲು, ಭೂಮಿಯಲ್ಲಿನ ತೇವಾಂಶಕ್ಕೆ ಅನುಗುಣವಾಗಿ ಬೆಳೆಯ ಮುಖ್ಯ ಹಂತಗಳಾದ ಹೂ ಹಾಗೂ ಕಾಳುಕಟ್ಟುವ ಸಮಯದಲ್ಲಿ ಎರಡು ಬಾರಿ ನೀರು ಕೊಡುವುದರಿಂದ ಅಧಿಕ ಇಳುವರಿ ಪಡೆಯಬಹುದು. ಪಾತಳಿ ನೀರಾವರಿ ಪದ್ಧತಿಯಲ್ಲಿ ಸಾಲು-ಬೋದು ವಿನ್ಯಾಸದಲ್ಲಿ ನೀರುಣಿಸುವುದರಿಂದ ಬೆಳೆಯ ಉತ್ತಮ ಬೆಳವಣಿಗೆಗೆ ಸಹಾಯಕವಾಗುತ್ತದೆ.
ಅಧಿಕ ಮಳೆಯ ಕಾರಣ ಹೆಚ್ಚಿದ ತೇವಾಂಶ ಮತ್ತು ತಂಪಾದ ವಾತಾವರಣದಿಂದ ಕೀಟ ಮತ್ತು ರೋಗಭಾದೆ ಹೆಚ್ಚಾಗಿ ಗಿಡಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಭೂವಿಯಲ್ಲಿ ಮುಖ್ಯವಾಗಿ ಹೂಬಿಟ್ಟ ನಂತರ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮುಂಜಾಗ್ರತಾ ಕ್ರಮವಾಗಿ ನೀರು ಸರಾಗವಾಗಿ ಹರಿದು ಹೋಗಲು ಕಾಲುವೆ ವ್ಯವಸ್ಥೆ ಮಾಡಬೇಕು.
ಅಂತರ ಬೇಸಾಯ
ಹವಾಗುಣಕ್ಕನುಗುಣವಾಗಿ 2-3 ಬಾರಿ ಅಂತರ ಬೇಸಾಯ ಮಾಡುವುದು. ಬೆಳೆಯ 25-60 ದಿವಸಗಳ ಕಾಲಾವಧಿಯಲ್ಲಿ ಪಟಗಳನ್ನು ಮಾಡಿ ಗಿಡದ ಬುಡಕ್ಕೆ ಮಣ್ಣು ಏರು ಹಾಕುವುದು. ಈ ಮೂಲಕ ಮಳೆಯ ನೀರನ್ನು ಸಂರಕ್ಷಣೆ ಮಾಡಬಹುದು ಹಾಗೂ ಕಳೆಗಳನ್ನು ನಿಯಂತ್ರಿಸಬಹುದು.
ಕುಡಿ ಚಿವುಟುವದು:
ಗಿಡದ ಬೆಳೆಯುವ ತುದಿಯನ್ನು ಚಿವುಟುವುದರಿಂದ ಗಿಡ ಎತ್ತರಕ್ಕೆ ಬೆಳೆಯುವ ಬದಲು ಹೆಚ್ಚು ಕವಲುಗಳನ್ನು ಕೊಡುತ್ತದೆ. ಗಿಡದ 1-1.5 ಅಡಿ ಉದ್ದವಿರುವಾಗ / ಬೆಳೆ ಕವಲೊಡೆಯುವ ಹಂತದಲ್ಲಿ ಅಥವಾ ಬಿತ್ತಿದ 40 (ಅಲ್ಪಾü -ಮಧ್ಯಮಾವಧಿ ತಳಿ) 60 (ಧೀರ್ಘಾವಧಿ ತಳಿ) ದಿನಗಳಲ್ಲಿ ಕೈಯಿಂದ / ಚಿವುಟುವಿಕೆ ಸಾಧನ ಬಳಸಿ ಗಿಡದ ತುದಿಯ ಒಂದು ಇಂಚು ಕುಡಿ ಚಿವುಟುವದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕವಲೊಡೆದು, ಕಾಯಿಗಳ ಸಂಖ್ಯೆ ಹೆಚ್ಚುತ್ತದೆ. ಇದರಿಂದ ಹೆಚ್ಚಿನ ಇಳುವರಿ ಪಡೆಯಬಹುದು.
ಪೋಷಕಾಂಶಗಳ ಎಲೆ ಸಿಂಪರಣೆ
ದ್ವಿದಳ ಧಾನ್ಯಗಳ ವಿಶೇಷತೆ ಎಂದರೆ ಅವು ಸಾರಜನಕ ಸ್ವಾವಲಂಬಿ. ಆದರೆ, ಕಾಯಿ ಬೆಳವಣೆಗೆ ಹಂತದಲ್ಲಿ / ಬೇರು ಗಂಟುಗಳ ಕಾರ್ಯ ಸ್ಥಗಿತ ಗೊಂಡು ಪೋಷಕಾಂಶಗಳ ಕೊರತೆ ಕಂಡು ಬರುತ್ತದೆ. ಇದರಿಂದ ಎಲೆ ಹಣ್ಣಾಗಿ ಉದುರಿ ಗಿಡದ ಆಹಾರ ಉತ್ಪಾದನೆ ಕಡಿಮೆಯಾಗುವುದು. ಇದಕ್ಕೆ ಪರಿಹಾರ ವೆಂದರೆ ಬಿಡುವ ಮತ್ತು ಕಾಯಿಕಟ್ಟುವ ಹಂತದಲ್ಲಿ ಎರಡು ಬಾರಿ ಸೂಕ್ತ ಪೋಷಕಾಂಶಗಳನ್ನು ಎಲೆ ಸಿಂಪರಣೆ ಮಾಡುವುದು. ಪ್ರಧಾನ ಮತ್ತು ಸೂಕ್ಷ್ಮ ಪೋಷಕಾಂಶಗಳ ಜೊತೆ ಸಸ್ಯ ಪ್ರಚೋದಕ ಹೊಂದಿರುವ ಸಸ್ಯ ಬೆಳೆವಣೆಗೋತ್ಕರ್ಷ ಮಿಶ್ರಣ (ಪಲ್ಸ್ ಮ್ಯಾಜಿಕ್) ವನ್ನು ಎರಡು ಬಾರಿ ಸಿಂಪಡಿಸುವುದು. ಹೂ ಬಿಡುವ ಸಮಯದಲ್ಲಿ 15 ದಿನಗಳ ಅಂತರದಲ್ಲಿ 2 ಬಾರಿ, ಪ್ರತಿ ಬಾರಿ 2 ಕಿ.ಗ್ರಾ. ಪಲ್ಸ್ ಮ್ಯಾಜಿಕ / ಎಕರೆಗೆ 200 ನೀ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಇದರಿಂದ ಹೂ ಉದುರುವುದು ಕಡಿಮೆಯಾಗಿ ಕಾಯಿಗಳ ಸಂಖ್ಯೆ ಮತ್ತು ಕಾಳಿನ ತೂಕ ಹೆಚ್ಚಾಗುವುದರಿಂದ ಶೇ. 15 ರಿಂದ 20 ರಷ್ಟು ಅಧಿಕ ಇಳುವರಿ ಸಾಧ್ಯ.
ಅಂತರ ಬೆಳೆ
ಪೂರ್ಣ ಬೆಳೆಯಾಗಿ ಮೇ – ಜೂನ್ ತಿಂಗಳುಗಳಲ್ಲಿ 4 ಅಡಿಗೂ ಹೆಚ್ಚು ಅಂತರದಲ್ಲಿ ಬಿತ್ತಿದ ತೊಗರಿ ಬೆಳೆ ಜೊತೆಯಲ್ಲಿ ರಾಗಿ ಮತ್ತು ದ್ವಿದಳ ಧಾನ್ಯಗಳನ್ನು ಅಂತರ ಬೆಳೆಯಾಗಿ 1:1 ಅಥವಾ 1:2ರ ಅನುಪಾತದಲ್ಲಿ ಬೆಳೆದಾಗ ಭೂ ಪ್ರದೇಶ, ಪೋಷಕಾಂಶ ಮತ್ತು ತೇವಾಂಶದ ಸದುಪಯೋಗ ಪಡೆದು ಕಳೆ ನಿಯಂತ್ರಣ ಮಾಡಿ, ಖರ್ಚಿಲ್ಲದೆ ಎಕರೆಗೆ 1 ರಿಂದ 2 ಕ್ವಿಂಟಾಲ್ ಹೆಚ್ಚಿನ ಇಳುವರಿ ಪಡೆಯಬಹುದು.
ಎರಡು ಸಾಲು ತೊಗರಿ ನಂತರ ರಾಗಿಯನ್ನು 2:1 ಅನುಪಾತದಲ್ಲಿ ಸಾಲುಗಳ ಮಧ್ಯದಲ್ಲಿ ಅಂತರ ಬೆಳೆಯಾಗಿ ಬಿತ್ತನೆ ಮಾಡುವುದರಿಂದ ತೊಗರಿ ಇಳುವರಿ ಜೊತೆಗೆ ರಾಗಿ ಇಳುವರಿಯನ್ನು ಸಹ ಪಡೆಯಲು ಸಾಧ್ಯವಾಗುತ್ತದೆ. ಮೇ-ಜೂನ್ ತಿಂಗಳಲ್ಲಿ ಬಿತ್ತನೆ ಮಾಡುವ ತೊಗರಿ ಬೆಳೆ ಜೊತೆಯಲ್ಲಿ ಅಂತರಬೆಳೆಯಾಗಿ ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುವ ಅಲಸಂದೆ, ಹೆಸರು, ಉದ್ದು, ಸೋಯಾ ಅವರೆ ಮತ್ತು ಅವರೆ ಬೆಳೆಗಳನ್ನು ಬೆಳೆಯಬಹುದು.
ತೊಗರಿಯನ್ನುಅಂತರ ಬೆಳೆಯಾಗಿ ರಾಗಿಯಲ್ಲಿ 6:1 ಅಥವಾ 8:2, ನೆಲಗಡಲೆಯಲ್ಲಿ 4:1 ಅಥವಾ 8:2, ಮುಸುಕಿನಜೋಳದಲ್ಲಿ 4:1, ಆಲೂಗಡ್ಡೆಯಲ್ಲಿ 6:1 ಅನುಪಾತದಲ್ಲಿ ಬೆಳೆÉಯಬಹುದು. ಈ ರೀತಿಯಲ್ಲಿ ಅಂತರಬೆಳೆಯಾಗಿ ಬೆಳೆದಲ್ಲಿ ಬೀಜ ಮತ್ತು ಸಸ್ಯ ಸಂರಕ್ಷಣೆಯ ಖರ್ಚು ಹೊರತುಪಡಿಸಿ ಇತರೆ ಯಾವುದೇ ಖರ್ಚಿಲ್ಲದೆ ಹೆಚ್ಚಿನ ಲಾಭ ಪಡೆಯಬಹುದು.
ಸಸ್ಯ ಸಂರಕ್ಷಣೆ
ಕೀಟ ಹಾಗೂ ರೋಗ ಬಾಧೆಯ ಲಕ್ಷಣಗಳು ಕಂಡು ಬಂದಲ್ಲಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಿ. ಕೀಟ / ರೋಗಗಳನ್ನು ಸಮಗ್ರ ನಿರ್ವಹಣಾ ಕ್ರಮಗಳನ್ನು ಅನುಸರಿಸಿ ಹತೋಟಿ ಮಾಡುವುದು ಒಳ್ಳೆಯದು.
ಸುಧಾರಿತ ಬೇಸಾಯ ಕ್ರಮಗಳನ್ನು ಪಾಲಿಸುವುದರಿಂದ ರೈತರು ದೇಶದಲ್ಲಿನ ಸಸಾರಜನಕ ಅಪೌಷ್ಟಕತೆ ತೊಡೆದು ಹಾಕುವುದರ ಜೊತೆಗೆ ಅಧಿಕ ಆದಾಯ, ಕೃಷಿಯಲ್ಲಿ ಸುಸ್ಥಿರತೆ ಮತ್ತು ಪರಿಸರವನ್ನು ಸಂರಕ್ಷ್ಷಣೆಯಲ್ಲಿ ತಮ್ಮ ಬದ್ದತೆ ಮೆರೆದಂತಾಗುತ್ತದೆ.
ಮುಖ್ಯವಾದ ಕಡಿಮೆ ಖರ್ಚಿನ ಬೇಸಾಯ ಕ್ರಮಗಳು
- ಶಿಫಾರಸ್ಸು ಮಾಡಿದ ತಳಿಗಳನ್ನೇ ಬಳಸುವುದು.
- ಮೇ – ಜೂನ್ ತಿಂಗಳಿನಲ್ಲಿ ಬಿತ್ತನೆ ಮಾಡಿದಲ್ಲಿ ಹೆಚ್ಚು ಇಳುವರಿ ನಿರೀಕ್ಷಿಸಬಹುದು.
- ಬೆಳೆಯ ಬೆಳವಣಿಗೆಯ ಹಂತದಲ್ಲೇ ಕಳೆಗಳನ್ನು ಪೂರ್ಣವಾಗಿ ನಾಶ ಮಾಡುವುದು.
- ಮೇ ತಿಂಗಳಲ್ಲಿಬಿತ್ತುವ ಬೆಳೆಯನ್ನು 3-4 ಅಡಿ ಅಂತರದ ಸಾಲುಗಳಲ್ಲಿ ಬಿತ್ತುವುದು.
- ಸೊರಗು ರೋಗ ಹಾಗೂ ಬಂಜೆ ರೋಗ ಪೀಡಿತ ಪ್ರದೇಶಗಳಲ್ಲಿ ಆಯಾ ರೋಗನಿರೋಧಕ ತಳಿಗಳನ್ನು ಬೆಳೆಯುವುದು.