ಬೆಂಗಳೂರಿನ ಗಾಂಧೀ ಕೃಷಿವಿಜ್ಞಾನ ಕೇಂದ್ರದ ಆವರಣದಲ್ಲಿ ನಾಲ್ಕುದಿನ ನಡೆದ ಕೃಷಿಮೇಳ ಇಂದು ತೆರೆಕಂಡಿತು. ಹಬ್ಬದ ದಿನವಾಗಿದ್ದರೂ ಅಪಾರ ಸಂಖ್ಯೆಯಲ್ಲಿ ರೈತರು, ಆಸಕ್ತರು ಭೇಟಿ ನೀಡಿದ್ದು ವಿಶೇಷವಾಗಿತ್ತು. ರೈತರು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು. ತಾಕುಗಳಿಗೆ ಭೇಟಿನೀಡಿ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದರು. ಕೃಷಿವಿಜ್ಞಾನಿಗಳೊಂದಿಗೆ ಚರ್ಚಿಸಿದರು.

ಸಮಾರೋಪ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಅಶ್ವಥನಾರಾಯಣ, ಸಚಿವ ಮಾಧುಸ್ವಾಮಿ, ಸಂಸದ ಬಚ್ಚೇಗೌಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಗೋವಿಂದ ಕಾರಜೋಳ ಅವರು “ದಶಕಗಳ ಹಿಂದೆ ಮಾಡುತ್ತಿದ್ದ ಕೃಷಿಪದ್ದತಿಗಳು ವೈವಿಧ್ಯಮಯವಾಗಿತ್ತು. ಕೃಷಿಕರು ಬಿತ್ತನೆಬೀಜಗಳಿಗಾಗಿ ಇತರರ ಮೊರೆ ಹೋಗುತ್ತಿರಲಿಲ್ಲ.  ನಾನಾ ವಿಧದ ಬೆಳೆಗಳ ಬಿತ್ತನೆಬೀಜಗಳನ್ನು ಸಂರಕ್ಷಿಸಿ ಇಡುವುದರಲ್ಲಿ ಅಪಾರ ಮುತುವರ್ಜಿ ವಹಿಸುತ್ತಿದ್ದರು. ಇದು ಬೀಜ ಕಾಯ್ದಿರಿಸುವ ಪದ್ಧತಿಯಾಗಿತ್ತು.

ಇತ್ತೀಚಿನ ದಶಕಗಳಲ್ಲಿ ನಾನಾಕಾರಣಗಳಿಂದ ದೇಸಿತಳಿಗಳಲ್ಲಿ ಸಾಕಷ್ಟು ತಳಿಗಳು ಕಣ್ಮರೆಯಾಗಿವೆ. ಆದ್ದರಿಂದ ದೇಸೀತಳಿ ಬಿತ್ತನೆಬೀಜಗಳನ್ನು ಉಳಿಸುವ, ಪಾರಾಂಪಾರಿಕ ಪದ್ಧತಿಗಳನ್ನು ಬೆಳೆಸುವ ಕಾರ್ಯವನ್ನು ಕೃಷಿವಿಶ್ವವಿದ್ಯಾಲಯಗಳು ಮಾಡಬೇಕು.  ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು ರೈತರ ಹೊಲಗಳಿಗೆ ತೆರಳಿ ಅವರಿಗೆ ಅಗತ್ಯವಾದ ಮಾರ್ಗದರ್ಶನ, ಸಹಾಯ ಮಾಡುವ ವಿಸ್ತರಣಾ ಕಾರ್ಯವನ್ನು ಇನ್ನೂ ಹೆಚ್ಚೆಚ್ಚು ಮಾಡಬೇಕು ಎಂದು ಹೇಳಿದರು.

ಕೃಷಿ ವಿಷಯಗಳಲ್ಲಿ ಪದವಿ – ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವವರ ಶಿಕ್ಷಣಕ್ಕಾಗಿ ಸರ್ಕಾರ ಅಪಾರ ಹಣ ಖರ್ಚು ಮಾಡುತ್ತಿದೆ. ಅವರ ಮೇಲೆ ಸಮಾಜವೂ ಭರವಸೆ ಇಟ್ಟುಕೊಂಡಿರುತ್ತದೆ. ಇವರಲ್ಲಿ ಅನೇಕರು ಕೃಷಿಕ್ಷೇತ್ರ ಬಿಟ್ಟು ಕಾರಕೂನರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ತಾವು ಪಡೆದ ಶಿಕ್ಷಣದ ಕ್ಷೇತ್ರದಲ್ಲಿಯೇ ಮುಂದುವರಿಯುವುದು ದೇಶದ ಪ್ರಗತಿದೃಷ್ಟಿಯಿಂದ ಅಗತ್ಯ ಎಂದು ಕಿವಿಮಾತು ಹೇಳಿದರು.

ಅತಿವೃಷ್ಟಿಯಿಂದ ಸಂತ್ರಸ್ತರಾದವರ ಸಲುಇವಾಗಿ ರಾಜ್ಯ ಸರ್ಕಾರ ಕೈಗೊಂಡ ಪರಿಹಾರದ ಕ್ರಮಗಳನ್ನು ಅಂಕಿಅಂಶಗಳ ಸಮೇತ ವಿವರಿಸಿದರು. ಸಂತ್ರಸ್ತರು ಪುನರ್ ಬದುಕು ಕಟ್ಟಿಕೊಳ್ಳಲು ರಾಜ್ಯ ಸರ್ಕಾರ ಸಾಧ್ಯವಿರುವ ಎಲ್ಲ ಕಾರ್ಯಗಳನ್ನು ಮಾಡುತ್ತದೆ ಎಂದು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ರಾಜ್ಯಮಟ್ಟದ ಹೆಚ್.ಡಿ.ದೇವೇಗೌಡ ರೈತ ಪ್ರಶಸ್ತಿಗೆ ಪಾತ್ರರಾದ ಹಾಸನ ಜಿಲ್ಲೆಯ ಹೊಯ್ಸಳ ಅಪ್ಪಾಜಿ, ರಾಮನಗರದ ಕ್ಯಾಪಿಕಂ ಕಮಲಮ್ಮ ಮತ್ತು ಜಿಲ್ಲಾಮಟ್ಟದ ಪ್ರಶಸ್ತಿಗಳನ್ನು ಪಡೆದ ರೈತರು, ರೈತಮಹಿಳೆಯರಿಗೆ ಪ್ರಶಸ್ತಿಪತ್ರ ನೀಡಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ರಾಜೇಂದ್ರಪ್ರಸಾದ್, ವಿಸ್ತರಣಾ ನಿರ್ದೇಶಕ ಡಾ. ಎಂ.ಎಸ್. ನಟರಾಜು, ಕೃಷಿ ಸಂಶೋಧನಾ ನಿರ್ದೇಶಕ ಡಾ. ಷಡಾಕ್ಷರಿ, ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here