ಲೇಖಕರು: ಕಾರ್ತಿಕಾದಿತ್ಯ ಬೆಳಗೋಡು

ಅರ್ಕಾವತಿಯಲ್ಲಿ ಮತ್ತೆ ಹಳದಿ ನೀರು ಹರಿಯುತ್ತಿದೆಯಂತೆ. ಮತ್ತೆ ಕಾರ್ಖಾನೆಗಳು ತ್ಯಾಜ್ಯದ ನೀರನ್ನು ಅರ್ಕಾವತಿಗೆ ಹರಿಸಿರುವ ಅನುಮಾನವಿದೆಯಂತೆ. ಅರ್ಕಾವತಿಯನ್ನು ಬೆಂಗಳೂರೆಂಬ ರಾಕ್ಷಸನಗರಿ ಕೊಂದು ಯಾವುದೋ ಕಾಲವಾಯಿತು. ಈಗುಳಿದಿರುವುದು ಅದರ ಪಳಯುಳಿಕೆ ಮಾತ್ರ.

ಬೆಂಗಳೂರು; ಕೇವಲ ಅರ್ಕಾವತಿಯನ್ನಷ್ಟೇ ಅಲ್ಲ, ಬಹುತೇಕ ಎಲ್ಲ ನದಿ, ಕೆರೆಗಳನ್ನೂ ಕೊಂದುಹಾಕಿದೆ. ಪರಿಣಾಮ, ಕೊಳಕಿಲ್ಲದ ಕೆರೆಯಿಂದ ಒಂದು ಕೊಡ ಶುದ್ಧ ನೀರು ತಂದರೆ ಮಾತ್ರ ನಿಮ್ಮ ಮನೆ ಉಳಿಸಬಹುದು ಎಂದೇನಾದರೂ ಯಾರಾದರೂ ಜ್ಯೋತಿಷಿ ಶರತ್ತು ಹಾಕಿದರೆ ಬೆಂಗಳೂರಿಗರು ಬಿಂದಿಗೆ ಹೊತ್ತುಕೊಂಡು ದೂರದ ಮಂಡ್ಯದ ಜಲಾಶಯಕ್ಕೋ, ಮುತ್ತತ್ತಿಗೋ ಓಡಬೇಕು.!

ಯಗಚಿ ಜಲಾಶಯ

ಜಲ ಸಂಪತ್ತಿನ ಕೊಲೆ, ಕೇವಲ ಬೆಂಗಳೂರಿನಂತಹ ದೊಡ್ಡ ನಗರದಲ್ಲಷ್ಟೇ ಅಲ್ಲ, ಸಣ್ಣ ಪುಟ್ಟ ಪೇಟೆಗಳಲ್ಲೂ ನಡೆಯುತ್ತದೆ. ತನ್ನನ್ನು ಪೊರೆಯುವ ಜಲಮೂಲಗಳನ್ನು ಹಾಳುಗೆಡವುವುದು ಮನುಷ್ಯನ ಹಲವು ವ್ಯಾಧಿಗಳಲ್ಲೊಂದು. ಯಾವುದೇ ಪಟ್ಟಣದ ಬಳಿಯಲ್ಲೊಂದು ಹೊಳೆಯೋ, ನದಿಯೋ ಹರಿಯುತ್ತಿದೆಯೆಂದರೆ ಮನೆಯ ಬಚ್ಚಲಿನ ಪೈಪಿನಿಂದ ಹಿಡಿದು ಡ್ರೈನೇಜಿನ ತನಕ ಎಲ್ಲವನ್ನೂ ಹೊಳೆಗೆ ತಿರುಗಿಸಲಾಗುತ್ತದೆ.

ಕಸ, ತ್ಯಾಜ್ಯಗಳನ್ನೆಲ್ಲಾ ಹೊಳೆದಂಡೆಯುದ್ದಕ್ಕೂ ಸುರಿಯಲಾಗುತ್ತದೆ. ಹೊಳೆಯೇನೋ ಕೊಳಚೆಯನ್ನೆಲ್ಲಾ ಶುದ್ದೀಕರಿಸುವ ಯಂತ್ರವೇನೋ ಎಂಬಂತೆ.! ಆ ಹೊಳೆಯು ಮುಂದಿನೂರಿಗೂ ಜಲಮೂಲ ಎಂಬ ಸಣ್ಣ ವಾಸ್ತವವೂ ಕುಲಗೆಡಿಸುವವರ ತಲೆಗೆ ಬರುವುದಿಲ್ಲ. ಬಂದರೂ ಕೆಲವರಿಗೆ ಕುಡಿಯುವವರು ಮುಂದಿನೂರಿನವರು ತಾನೇ… ನಾವಲ್ಲವಲ್ಲ! ಎಂಬ ವಿಕೃತ ಆಲೋಚನೆ.

ಚಿಕ್ಕಮಗಳೂರು ನಗರದ ಮಧ್ಯೆ ಕಾಫಿಡೇ ಗ್ಲೋಬಲ್ ಸಂಸ್ಥೆ ಎದುರು ರಾಜಕಾಲುವೆ ಹಾದುಹೋಗಿದೆ. ಇತ್ತೀಚಿನ ಕೆಲವು ವರ್ಷಗಳ ಹಿಂದಿನವರೆಗೂ ಅದು ರಾಜಕಾಲುವೆಯೇ ಎಂದು ತಿಳಿದಿದ್ದೆ. ಅದೇ ಯಗಚಿ ಹೊಳೆ ಎಂದು ತಿಳಿದಿದ್ದು ಇತ್ತೀಚೆಗೆ. ಅದೇ ಹೊಳೆ ಸನಿಹದಲ್ಲಿರುವ ಯಗಚಿ ಜಲಾಶಯ ಸೇರುತ್ತದೆ. ಮತ್ತದೇ ನೀರನ್ನು ಚಿಕ್ಕಮಗಳೂರು ನಗರಕ್ಕೆ ಪೂರೈಸಲಾಗುತ್ತದೆ.! ನಾವು ಕುಲಗೆಡಿಸಿದ ನೀರನ್ನು ನಾವೇ ಕುಡಿಯುವ ಸೌಭಾಗ್ಯ !

ಇನ್ನು ಚಿಕ್ಕಮಗಳೂರಿನ ನಡುವೆ ಹಿಂದೆ ಯಾವ ಪುಣ್ಯಾತ್ಮನೋ ಕಟ್ಟಿಸಿದ ಕೆರೆಗಳಿವೆ. ಎಷ್ಟು ಅದ್ಬುತವಾದ ತಾಂತ್ರಿಕತೆ ಬಳಸಿ ಕಟ್ಟಲಾಗಿದೆ ಎಂದು ಆಶ್ಚರ್ಯವಾಗುತ್ತದೆ. ಮಳೆಗಾಲದಲ್ಲಿ ಗಿರಿಶ್ರೇಣಿಯಿಂದ ಜಾರಿ ಬರುವ ಹಾಗೂ ತೊರೆಗಳಿಂದ ಬರುವ ನೀರನ್ನು ಹಿಡಿದಿಟ್ಟುಕೊಳ್ಳಲು ಒಂದರ ಕೆಳಗೊಂದು ಕೆರೆ ಕಟ್ಟಿಸಲಾಗಿದೆ. ಒಂದು ತುಂಬಿದ ನಂತರ ಮತ್ತೊಂದು ಕೆರೆಗೆ ನೀರು ಹರಿಸುವ ವ್ಯವಸ್ಥೆ.

ಅರ್ಕಾವತಿ ನದಿ, ಕನಕಪುರದ ಬಳಿಯ ಚಿತ್ರ

ಆ ಮೂಲಕ ಸುತ್ತಲಿನ ಕೃಷಿಗೆ ಹಾಗೂ ಚಿಕ್ಕಮಗಳೂರಿಗೆ ನೀರು ಪೂರೈಸುವ ವ್ಯವಸ್ಥೆ. ನಗರ ಬೆಳೆದಂತೆ ಅವುಗಳಲ್ಲಿ ಈಗ ಮೂರು ಕೆರೆಗಳಿಗೆ ಕೊಳಚೆ ನೀರು ಹರಿಸಿ ಕೊಲ್ಲಲಾಗಿದೆ ! ಅವುಗಳೀಗ ಕೊಳೆ ಮತ್ತು ಕಳೆಗಳನ್ನು ತುಂಬಿಕೊಂಡು ಅಸ್ಥಿಪಂjರದಂತೆ ಮಲಗಿವೆ. ಅವುಗಳನ್ನು ಶುದ್ದೀಕರಿಸುವ ನೆಪದಲ್ಲಿ ಜಿಲ್ಲಾಡಳಿತ ಆಗಾಗ ದುಡ್ಡು ಬಿಡುಗಡೆ ಮಾಡುತ್ತದೆ. ಅದು ಯಾರ್ಯಾರ ಮನೆ ಸೇರುತ್ತದೋ !ಜಲಮೂಲಗಳನ್ನು ಹಾಳುಗೆಡವುವ ನಮ್ಮ ಹೀನ ಮನಸ್ಥಿತಿಗೆ ಇಂತಹ ನೂರಾರು ಉದಾಹರಣೆಗಳಿವೆ. ನಾವು ನಮ್ಮನ್ನು ಕೊಂದುಕೊಳ್ಳುತ್ತಿದ್ದೇವೆ ಎಂಬುವುದಕ್ಕೆ ನಾವು ನೀರನ್ನು ಕಂಡಕಂಡಲ್ಲಿ ಕೊಲ್ಲುತ್ತಿರುವುದೇ ಸಾಕ್ಷಿ.

LEAVE A REPLY

Please enter your comment!
Please enter your name here