ಅಧಿಕ ಇಳುವರಿ ನೀಡುವ 109 ಹೊಸ ತಳಿಗಳ ಬಿಡುಗಡೆ

0
ಪ್ರಧಾನಿ ನರೇಂದ್ರ ಮೋದಿ ಅವರು ಬೆಳೆ ಪ್ರಾತ್ಯಕ್ಷಿಕೆ ತಾಕಿನಲ್ಲಿ ಕೃಷಿವಿಜ್ಞಾನಿಗಳು, ರೈತರೊಂದಿಗೆ ಮಾತನಾಡಿದರು ಮಾತನಾಡುತ್ತಿರುವ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಹವಾಮಾನ ವೈಪರೀತ್ಯ ತಡೆದುಕೊಳ್ಳುವ, ಅಧಿಕ ಇಳುವರಿ ನೀಡುವ  109  ಜೈವಿಕ ಬಲವರ್ಧಿತ ಬೆಳೆಗಳ ತಳಿಗಳನ್ನು  ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರು  ಕೃಷಿಯಲ್ಲಿ ಮೌಲ್ಯವರ್ಧನೆಯ ಮಹತ್ವವನ್ನು ಪ್ರತಿಪಾದಿಸಿದರು. ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ದಿಶೆಯಲ್ಲಿ  ಹೊಸ ತಳಿಗಳು ಹೆಚ್ಚು ಪ್ರಯೋಜನಕಾರಿಯಾಗಿವೆ ಎಂಬ ಅಭಿಪ್ರಾಯಗಳನ್ನು ಅವರು ಉಲ್ಲೇಖಿಸಿದರು.

ಅವರು ಇಂದು ಮುಂಜಾನೆ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ  ಕೃಷಿವಿಜ್ಞಾನಿಗಳು ಅಭಿವೃದ್ಧಿಡಿಸಿರುವ ನೂತನ  109 ವಿವಿಧ ತಳಿಗಳ ಬಿಡುಗಡೆ ಮಾಡಿ ಮಾತನಾಡಿದರು.  ಈ  ತಳಿಗಳ ಅಭಿವೃದ್ಧಿಗಾಗಿ ಶ‍್ರಮಿಸಿದ ಕೃಷಿವಿಜ್ಞಾನಿಗಳನ್ನು ಅವರು ಶ್ಲಾಘಿಸಿದರು. ನೈಸರ್ಗಿಕ ಕೃಷಿಯ ಪ್ರಯೋಜನಗಳು ಮತ್ತು ಸಾವಯವ ಆಹಾರಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯ ಕುರಿತು ಪ್ರಸ್ತಾಪಿಸಿದರು.

ಈ ಸಂದರ್ಭದಲ್ಲಿ ರೈತರು ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು. ಈ ಹೊಸ ತಳಿಗಳ ಪ್ರಾಮುಖ್ಯತೆಯನ್ನು ಚರ್ಚಿಸಿದ ಮೋದಿ,  ಕೃಷಿಯಲ್ಲಿ ಮೌಲ್ಯವರ್ಧನೆಯ ಮಹತ್ವದ ಬಗ್ಗೆ ಒತ್ತಿ ಹೇಳಿದರು. ಹೊಸ ತಳಿಗಳ ಪ್ರಯೋಜನಗಳ ಬಗ್ಗೆ ರೈತರಿಗೆ  ಪೂರ್ವಭಾವಿಯಾಗಿ ಮಾಹಿತಿ ನೀಡಬೇಕು ಎಂದು ಕೃಷಿವಿಜ್ಞಾನಿಗಳಿಗೆ ಕರೆ ನೀಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು  ರಾಗಿಯ ಮಹತ್ವವನ್ನು ಕುರಿತು ಮಾತನಾಡಿ,  ಜನತೆ ಪೌಷ್ಟಿಕ ಆಹಾರದ ಸೇವನೆಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ.  ಈ ದಿಶೆಯಲ್ಲಿ ನೈಸರ್ಗಿಕ ಕೃಷಿಯಿಂದ ಆಗುವ ಪ್ರಯೋಜನಗಳು ಮತ್ತು ಸಾವಯವ ಕೃಷಿಯತ್ತ ಜನಸಾಮಾನ್ಯರಲ್ಲಿ ಹೆಚ್ಚುತ್ತಿರುವ ನಂಬಿಕೆಯ ಬಗ್ಗೆ ಮಾತನಾಡಿದರು. ಜನರು ಸಾವಯವ ಆಹಾರವನ್ನು ಸೇವಿಸಲು ಮತ್ತು ಬೇಡಿಕೆಯಿಡಲು ಪ್ರಾರಂಭಿಸಿದ್ದಾರೆ ಎಂದರು.

ಬಿಡುಗಡೆ ಆಗಿರುವ  61 ಬೆಳೆಗಳ 109 ತಳಿಗಳಲ್ಲಿ 34 ಕ್ಷೇತ್ರ ಬೆಳೆಗಳು ಮತ್ತು 27 ತೋಟಗಾರಿಕಾ ಬೆಳೆಗಳು ಸೇರಿವೆ. ಕ್ಷೇತ್ರ ಬೆಳೆಗಳಲ್ಲಿ ರಾಗಿ, ಮೇವು ಬೆಳೆಗಳು, ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು, ಕಬ್ಬು, ಹತ್ತಿ, ನಾರು ಮತ್ತು ಇತರ ಸಂಭಾವ್ಯ ಬೆಳೆಗಳು ಸೇರಿವೆ.  ತೋಟಗಾರಿಕಾ ಬೆಳೆಗಳ ಪೈಕಿ ವಿವಿಧ ಬಗೆಯ ಹಣ್ಣುಗಳು, ತರಕಾರಿ ಬೆಳೆಗಳು, ತೋಟದ ಬೆಳೆಗಳು, ಗಡ್ಡೆ ಬೆಳೆಗಳು, ಸಾಂಬಾರು ಪದಾರ್ಥಗಳು, ಹೂವುಗಳು ಮತ್ತು ಔಷಧೀಯ ಬೆಳೆಗಳ ತಳಿಗಳು ಸೇರಿವೆ.

LEAVE A REPLY

Please enter your comment!
Please enter your name here