ಸಸ್ಯನಾಶಕ ಸಹಿಷ್ಣು ಬಾಸ್ಮತಿ ತಳಿಗೆ ಕೃಷಿಕರ ತೀವ್ರ ವಿರೋಧ

0
ಸಾಂದರ್ಭಿಕ ಚಿತ್ರ

ರೈತ ಸಂಘಟನೆಗಳ ಮುಖಂಡರು, ರೈತರ ಹಿತಾಸಕ್ತಿ ಸಲುವಾಗಿ ಕೆಲಸ ಮಾಡುವ ಸಂಘಟನೆಗಳ ಮುಖಂಡರು, ಕೆಲವಾರು ಸಸ್ಯ ವಿಜ್ಞಾನಿಗಳು ಮತ್ತು ಆರೋಗ್ಯ ಕಾರ್ಯಕರ್ತರು  ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಬಿಡುಗಡೆ ಮಾಡಿದ ಎರಡು ಸಸ್ಯನಾಶಕ ಸಹಿಷ್ಣು ಇರುವ ಎರಡು ಭತ್ತದ ತಳಿಗಳ ವಿತರಣೆಯನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.

ಈ ಕುರಿತು ಕೇಂದ್ರ ಕೃಷಿ ಸಚಿವಾಲಯವನ್ನು ಅವರು ತೀವ್ರವಾಗಿ ಆಗ್ರಹಿಸಿದ್ದಾರೆ.  ಅವುಗಳು ಸೂಪರ್ವೀಡ್ಗಳ ಹೊರಹೊಮ್ಮುವಿಕೆಗೆ ಕಾರಣವಾಗಬಹುದು.  ಇದರಿಂದ  ಬಾಸ್ಮತಿ ರಫ್ತು ಮತ್ತು ಬೆಳೆಗಾರರ  ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಅಧೀನದ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್)   ಸರ್ಕಾರಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ  ಸಸ್ಯನಾಶಕ ಸಹಿಷ್ಣು ಇರುವ ಎರಡು ಭತ್ತದ ತಳಿಗಳ ವಾಣಿಜ್ಯ ಕೃಷಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

“ಈ ತಳಿಗಳ ಬಳಕೆಗೆ ರೈತರ ತೀವ್ರ ವಿರೋಧವಿದೆ. ಇವುಗಳ ಮಾರಾಟವನ್ನು  ಕೂಡಲೇ ನಿಲ್ಲಿಸದಿದ್ದರೆ ಐಸಿಎಆರ್ ಉಗ್ರ ಸಾರ್ವಜನಿಕ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ”ಎಂದು ಪ್ರತಿಭಟನಾಕಾರರು  ಕೃಷಿ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಇಲ್ಲಿ ನಿರ್ಲಕ್ಷಿಸಿರುವುದರಿಂದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ಮೂಲಕವೂ ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ  ಅಭಿವೃದ್ಧಿಪಡಿಸಿರುವ ಭತ್ತದ ತಳಿಗಳು, ಭತ್ತದ ಜೊತೆಯಲ್ಲಿ ಬೆಳೆಯಬಹುದಾದ ಕಳೆಗಳನ್ನು ನಿರ್ಮೂಲನೆ ಮಾಡಲು ಇಮಾಜೆಥಪೈರ್ ಎಂಬ ಸಸ್ಯನಾಶಕವನ್ನು ನೇರವಾಗಿ ಅನ್ವಯಿಸುವುದನ್ನು ಸಹಿಸಿಕೊಳ್ಳಬಲ್ಲವು.  ಸಸಿಮಡಿ ಮಾಡಿದ ನಂತರವೇ  ಸಸಿಗಳನ್ನು ನಾಟಿ ಮಾಡುವ ಅಗತ್ಯವಿಲ್ಲದೆ ಈ ಎರಡೂ ತಳಿಗಳನ್ನು ರೈತರು ನೇರವಾಗಿ ಜಮೀನಿನಲ್ಲಿ ಬೆಳೆಯಬಹುದು.

ಕಸಿ ಮಾಡಿದ ಭತ್ತದ ತಳಿಗೆ  ಹೋಲಿಸಿದರೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದ  ಭತ್ತದ ತಳಿಗಳು ಕಡಿಮೆ ನೀರಿನಲ್ಲಿಯೂ ಬೆಳೆಯುತ್ತವೆ. ಸಾಂಪ್ರದಾಯಿಕವಾಗಿ ಬಳಕೆಯಾಗುವ ನೀರಿನಲ್ಲಿ ಶೇಕಡ ೩೩ ರಷ್ಟು ಪ್ರಮಾಣದ ನೀರು ಉಳಿತಾಯವಾಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಕಳೆ ಬಾಧೆಯೂ ಇರುವುದಿಲ್ಲ ಎಂದು ಎ.ಐ.ಆರ್‌. ಐ. ವಿಜ್ಞಾನಿಗಳು ಹೇಳಿದ್ದಾರೆ.

ನೂತನ ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ವಾದವನ್ನು ರೈತ ಸಂಘಟನೆಗಳ ಪ್ರತಿನಿಧಿಗಳು ವಿರೋಧಿಸಿದ್ದಾರೆ. ಈ ತಂತ್ರಜ್ಞಾನದ ಕಾರಣದಿಂದ  ಹೆಚ್ಚು ಹೆಚ್ಚು ರಾಸಾಯನಿಕಗಳ ಬಳಕೆಯ ಅಗತ್ಯವಿರುವ ಸೂಪರ್‌ವೀಡ್‌ಗಳ (ಬಲಿಷ್ಠ ಕಳೆಗಳು)  ಅಭಿವೃದ್ಧಿಯಾಗಬಹುದು ಜೊತೆಗೆ ಈ ಭತ್ತದ ತಳಿಗಳ ಅಕ್ಕಿಯಲ್ಲಿಯೂ ರಾಸಾಯನಿಕ ಉಳಿಕೆಗಳು ಇರುತ್ತವೆ. ಇದು ಸೇವನೆ ಮಾಡುವವರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಉಂಟು ಮಾಡಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

 ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಹೋರಾಟ ಮಾಡುವ ಕವಿತಾ ಕುರುಗಂಟಿ, ಗ್ರಾಹಕರ ಹಿತಾಸಕ್ತಿ ಗುಂಪಿನ ಸದಸ್ಯ ಪಿ.ದುರೈಸಿಂಗಂ, ICAR ಸಂಸ್ಥೆಯ ಮಾಜಿ ಪ್ರಧಾನ ವಿಜ್ಞಾನಿ ಸೋಮ ಮಾರ್ಲ, ಇತರರು ಪ್ರತಿಭಟನಾ ಪತ್ರಕ್ಕೆ ಸಹಿ ಮಾಡಿದ್ದಾರೆ.

ಕೀಟನಾಶಕಗಳಿಗಾಗಿ ಭಾರತದ ನಿಯಂತ್ರಕ ನಿಯಮಗಳ ಅಡಿಯಲ್ಲಿ ಭತ್ತದಲ್ಲಿ ಬಳಸಲು ಇಮಾಜೆಥಾಪೈರ್ ಅನ್ನು ಕಾನೂನುಬದ್ಧವಾಗಿ ನೋಂದಾಯಿಸಲಾಗಿಲ್ಲ ಎಂದು ಸಹಿ ಮಾಡಿದವರು ಹೇಳಿದ್ದಾರೆ. ಇದನ್ನು ಸೋಯಾಬೀನ್, ಕಡಲೆಕಾಯಿ, ಕರಿಬೇವು, ಹಸಿಬೇಳೆ ಮತ್ತು ಕೆಂಪುಬೇಳೆಗೆ ಮಾತ್ರ ಬಳಸಲು ನೋಂದಾಯಿಸಲಾಗಿದೆ ಎಂದು ವಿವರಿಸಿದ್ದಾರೆ.

“ಐಸಿಎಆರ್ ಹೇಗೆ ಸಂಶೋಧನೆಯನ್ನು ಕೈಗೆತ್ತಿಕೊಂಡಿತು ? ಅಸ್ತಿತ್ವದಲ್ಲಿರುವ ನಿಯಮಗಳ ಸ್ಪಷ್ಟ ಉಲ್ಲಂಘನೆಯಲ್ಲಿ ವಾಣಿಜ್ಯ ಕೃಷಿಗಾಗಿ ತಳಿಗಳ ಅಭಿವೃದ್ಧಿ ಹೇಗೆ  ಪ್ರಾರಂಭಿಸಿತು? ಸಂಬಂಧಿಸಿದ ನಿಯಮಗಳಿದ್ದರೂ ಅವುಗಳನ್ನು ಉಲ್ಲಂಘಿಸಲಾಗಿದೆ  ಎಂದು ಅವರು ಪ್ರಶ್ನಿಸಿದ್ದಾರೆ.

ಯುಕೆ, ಯುರೋಪಿಯನ್ ಯೂನಿಯನ್  ದೇಶಗಳಲ್ಲಿ ಇಮಾಜೆಥಾಪೈರ್ ಅನ್ನು ಅನುಮೋದಿಸಲಾಗಿಲ್ಲ . ಭಾರತ ಪ್ರಸ್ತುತ ಬಾಸುಮತಿ ಅಕ್ಕಿಯನ್ನು ರಫ್ತು ಮಾಡುತ್ತಿದೆ. ಈ ಹಿಂದೆ ಹಲವಾರು ದೇಶಗಳು ಫೈಟೊಸಾನಿಟರಿ ಮಾನದಂಡಗಳನ್ನು ಉಲ್ಲೇಖಿಸಿ ಭಾರತದಿಂದ  ರಫ್ತಾದ ಕೃಷಿ ಉತ್ಪನ್ನಗಳನ್ನು ತಿರಸ್ಕರಿಸಿವೆ. ಇಂಥ ಸಂದರ್ಭದಲ್ಲಿ ಭಾರತದ ಈ ಕಳೆ ನಿರೋಧಕ ಬಾಸ್ಮತಿ ಅಕ್ಕಿಯ ಭವಿಷ್ಯವೇನು? ಎಂದು ಪ್ರತಿಭಟನಾಕಾರರು ಕೇಳಿದ್ದಾರೆ.

LEAVE A REPLY

Please enter your comment!
Please enter your name here