ಇಳುವರಿ ಕುಸಿತ ಕಳವಳ, ಉತ್ತಮ ದರ ದೊರೆಯುವುದೇ ಎಂಬ ತಳಮಳ

0
ಚಿತ್ರ – ಲೇಖನ: ಹೆಚ್.ಎಸ್.‌ ಸಚ್ಚಿತ್

ಹುಣಸೂರು : ವಾಣಿಜ್ಯ ಬೆಳೆ ತಂಬಾಕು ಹದಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ.  ಈ ಸಾಲಿನಲ್ಲಿ ಮಾರುಕಟ್ಟೆ  ಲಾಭ ತರಲಿದೆ ಎಂಬ ನಿರೀಕ್ಷೆಯಿದೆ.  ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ನಾಟಿ ಮಾಡಿದ ತಂಬಾಕು ಹವಾಮಾನದ ವೈಪರಿತ್ಯಕ್ಕೆ ಸಿಲುಕಿತ್ತು ! ಇದರ ನಡುವೆಯೂ ಬೆಳೆಗಾರರು  ಹರಸಾಹಸದಿಂದ ಒಂದಷ್ಟು ಬೆಳೆ ಉಳಿಸಿಕೊಂಡಿದ್ದಾರೆ.

ತಂಬಾಕು  ಇಳುವರಿ ಕುಂಟಿತವಾಗಿದ್ದರು ಗುಣಮಟ್ಟದ ಸೊಪ್ಪು  ರೈತನ ಕೈ ಸೇರುತ್ತಿದೆ. ದುಪ್ಪಟ್ಟಾಗಿರುವ ಉತ್ಪಾದನ ವೆಚ್ಚಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ದರ ದೊರೆಯುವ ನಿರೀಕ್ಷೆಯಲ್ಲಿದ್ದಾರೆ .

ಕಠಾವು:   ಹಸಿರಿನಿಂದ ಹಳದಿ ಬಣ್ಣಕ್ಕೆ ತಿರುಗುತ್ತಿರುವ ಎಲೆಯನ್ನು 2 ಅಥವಾ 3 ಎಲೆಗಳನ್ನು ಗೊಂಚಲು ಮಾಡಿ ಕಡ್ಡಿಗೆ ಕಟ್ಟಬೇಕು.  ಗೊಂಚಲು ಕಟ್ಟಿರುವ ಕಡ್ಡಿಯನ್ನು ಹದಗೊಳಿಸುವ ಬ್ಯಾರನ್‌ ನಲ್ಲಿ ವೈಜ್ಞಾನಿಕವಾಗಿ ತೂಗು ಹಾಕುವುದರಿಂದ ಬೆಂಕಿ ಶಾಖಕ್ಕೆ ಸೊಪ್ಪು  ಹದಗೊಳ್ಳುವುದು ಎಂದು ತಂಬಾಕು ಸಂಶೋಧನ ಕೇಂದ್ರದ ವಿಜ್ಞಾನಿ ಡಾ. ರಾಮಕೃಷ್ಣ ಮಾಹಿತಿ ನೀಡಿದರು.

ಗುಣಮಟ್ಟ: ತಂಬಾಕು ಗುಣಮಟ್ಟ ಕಾದುಕೊಳ್ಳಲು  ಹಸಿರಿನಿಂದ ಕೂಡಿದ ಎಲೆ ಕಠಾವು ಮಾಡಿದಲ್ಲಿ ಹದಗೊಳಿಸುವಾಗ ತರಗು ಅಥವಾ ಕಪ್ಪು ಬಣ್ಣಕ್ಕೆ ತಿರುಗಲಿದೆ. ಇದರಿಂದ ಆರ್ಥಿಕ ನಷ್ಟವಾಗುತ್ತದೆ. 25-26 ನೇ ಸಾಲಿನಲ್ಲಿ ಮಳೆ ಏರುಪೇರಿನಿಂದಾಗಿ ಇಳುವರಿ ಕುಂಟಿತವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರೈತರು  ಕಠಾವಿಗೆ ಬಂದಿರುವ ಎಲೆಯನ್ನು ಕಿತ್ತು,  ಗೊಂಚಲು ಮಾಡಿ ಸೊಪ್ಪನ್ನು ಪ್ರತಿ ಕಡ್ಡಿಗೆ 20 ಗೊಂಚಲುಗಳನ್ನಷ್ಟೇ ಕಟ್ಟಬೇಕು ಎಂದು ಅವರು ಹೇಳಿದರು.

ವಿಂಗಡಣೆ: ತಂಬಾಕು ಹದಗೊಳಿಸುವಾಗ ಮೂರು ಹಂತದಲ್ಲಿ ( ಹಸಿರು ಎಲೆ,  ಹಸಿರು ಮತ್ತು ಹಳದಿ ಮಿಶ್ರಿತ ಸೊಪ್ಪು ಮತ್ತು ಹಣ್ಣಾದ ಎಲೆ) ವಿಂಗಡಿಸಿಕೊಂಡು ಬ್ಯಾರನ್‌ ನಲ್ಲಿ ನೇತು ಹಾಕುವುದರಿಂದ ಬೆಂಕಿಯ ಶಾಖ ಸಮನಾಗಿ ಹರಡಿ ನಿರೀಕ್ಷೆಯಂತೆ ಹದಗೊಂಡು ಗುಣಮಟ್ಟದ ತಂಬಾಕು ಸಿಗಲಿದೆ.

ಸಿಂಗಲ್‌ ಬ್ಯಾರನ್‌ ಗೆ 350ಕ್ಕೂ ಹೆಚ್ಚು ಕಡ್ಡಿಯನ್ನು ನೇತು ಹಾಕುವುದರಿಂದ  ಶಾಖ ಹೆಚ್ಚಾಗಿ ಸೊಪ್ಪು ಸುಟ್ಟು ಹೋಗುವ ಸಾಧ್ಯತೆ ಇದೆ. ವೈಜ್ಞಾನಿಕವಾಗಿ ಹದಗೊಳಿಸುವುದರಿಂದ ಬೆಂಕಿ ಶಾಖ ಸಮನಾಗಿ ಎಲ್ಲ ಎಲೆಗಳಿಗೂ ಸಿಕ್ಕು ಪ್ರಥಮ ದರ್ಜೆ ಸೊಪ್ಪು  ಪಡೆಯಬಹುದು.

24-25 ನೇ ಸಾಲಿನಲ್ಲಿ ತಂಬಾಕು 85 ದಶಲಕ್ಷ ಕೆಜಿ. ಮಾರಾಟವಾಗಿತ್ತು. ಈ ಸಾಲಿನಲ್ಲಿ 70 ದಶಲಕ್ಷ ಕೆ.ಜಿ. ಉತ್ಪತ್ತಿಯಾಗುವ ನಿರೀಕ್ಷೆ ಇದ್ದು ಕಳೆದ ಸಾಲಿಗೆ ಶೇ 15 ರಷ್ಟು ಇಳುವರಿ ಕುಸಿತವಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ ದರ ಸಿಗುವ ನಿರೀಕ್ಷೆ ಇದೆ ಎಂದು ತಂಬಾಕು ಮಂಡಳಿ ಸದಸ್ಯ ವಿಕ್ರಂ ಗೌಡ ಅಭಿಪ್ರಾಯಪಟ್ಟರು

ಅತಿಯಾದ ಮಳೆಗೆ ಇಳುವರಿ ಕುಸಿದಿದೆ. ಸಿಕ್ಕಷ್ಟು ತಂಬಾಕು ವೈಜ್ಞಾನಿಕವಾಗಿ ಹದಗೊಳಿಸುವ ಪ್ರಕ್ರಿಯೆ ನಡೆದಿದೆ, ಗುಣಮಟ್ಟದ ಸೊಪ್ಪು ನಿರೀಕ್ಷೆಯಲ್ಲಿದ್ದು ಕಳೆದ ಸಾಲಿನಲ್ಲಿ ಮಾರುಕಟ್ಟೆಯಲ್ಲಿ  ₹3೦೦ ನೀಡಿದ್ದರು, ಈ ಸಾಲಿನಲ್ಲಿ ಉತ್ಪಾದನ ವೆಚ್ಚ ಹೆಚ್ಚಾಗಿದ್ದು ಕನಿಷ್ಟ ಪ್ರತಿ ಕೆಜಿ.ಗೆ ₹ 4೦೦ ನೀಡಿದಲ್ಲಿ ನಷ್ಟದಿಂದ ಪಾರಾಗಲು ಸಾಧ್ಯ ಎಂದು ಕಲ್ಕುಣಿಕೆ ಗ್ರಾಮದ ಪ್ರಗತಿಪರ ರೈತ ಕುಮಾರ್‌ ಪ್ರತಿಪಾದಿಸಿದರು.

LEAVE A REPLY

Please enter your comment!
Please enter your name here