ಕರಾವಳಿ ಮಲೆನಾಡು ಜಿಲ್ಲೆಗಳ ಅಲ್ಲಲ್ಲಿ ನಿನ್ನೆ ಒಂದೆರಡು ಸಾಮಾನ್ಯ ಮಳೆಯಾಗಿತ್ತು. ಒಳನಾಡು ಜಿಲ್ಲೆಗಳ ಅಲ್ಲಲ್ಲಿ ಸಣ್ಣ ಮಳೆಯಾಗಿದೆ. ಇವತ್ತಿನ ಮುನ್ಸೂಚನೆ ಪ್ರಕಾರ ಕಾಸರಗೋಡು ದ.ಕ ಉಡುಪಿ ಉ.ಕ ಜಿಲ್ಲೆಗಳಲ್ಲಿ ಬೆಳಿಗ್ಗೆ ಮೋಡದ ವಾತಾವರಣ ಇರಲಿದ್ದು ನಂತರ ಬಿಸಿಲು ಮುಂದುವರೆಯಬಹುದು.
ಮುಂಗಾರು ದುರ್ಬಲ ಆದ ಕಾರಣ ಪಶ್ಚಿಮದ ಮೋಡದಲ್ಲಿ ಮೋಡಕ್ಕೆ ತಕ್ಕಂತೆ ಮಳೆಯಾಗದೆ ಮಧ್ಯಾಹ್ನ ನಂತರ ರಾತ್ರಿ ಅಲ್ಲಲ್ಲಿ ತುಂತುರು/ಸಣ್ಣ ಮಳೆ ಮುಂದುವರಿಯಲಿದೆ. ಸಂಜೆ ರಾತ್ರಿ ದ.ಕ. ಉಡುಪಿ ಜಿಲ್ಲೆಗಳ ಘಟ್ಟಪ್ರದೇಶಗಳ ಸಮೀಪದ ತಾಲ್ಲೂಕುಗಳಲ್ಲಿ ಗುಡುಗು ಮಳೆ ಆರಂಭವಾಗುವ ಸಾಧ್ಯತೆಗಳಿವೆ. ಈ ವಾತಾವರಣ ಮುಂದಿನ 3 ದಿನ ಮುಂದುವರಿಯಲಿದ್ದು ಆಗಸ್ಟ್ 5 ರಿಂದ 8 ತನಕ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಚುರುಕಾಗುವ ಸಾಧ್ಯತೆಗಳಿದ್ದು ಸಾಧಾರಣ ಮಳೆಯ ಮುನ್ಸೂಚನೆ ಇದೆ.
ಮಲೆನಾಡಿನಲ್ಲಿ ಮೋಡದ ವಾತಾವರಣ ಇರಲಿದ್ದು ಮಧ್ಯಾಹ್ನ ನಂತರ ಕೊಡಗು ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಮಳೆ ಬರುವ ಮುನ್ಸೂಚನೆ ಇದೆ. ಹಾಸನ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಮಳೆ ಮುನ್ಸೂಚನೆ ಇದೆ. ಮಲೆನಾಡು ಜಿಲ್ಲೆಗಳಲ್ಲಿ ಮುಂಗಾರು ಮೋಡ ಮತ್ತು ಸಂಜೆ ಪೂರ್ವದ ಮೋಡದಿಂದ ಪ್ರತಿದಿನ ಸಾಮಾನ್ಯ ಮಳೆ ಮುಂದಿನ 10 ದಿನ ಮುಂದುವರೆಯಬಹುದು.
ದಕ್ಷಿಣ ಒಳನಾಡಿನಲ್ಲಿ ಇವತ್ತಿನಿಂದ ಮಳೆ ಆರಂಭ ಈ ಜಿಲ್ಲೆಗಳಲ್ಲಿ ಆರಂಭಿಕ ಮುಂಗಾರು ಕೊರತೆಯಾಗಿದ್ದು ಮುಂದಿನ ವಾರ ತನಕ ಮಳೆ ಮುಂದುವರೆಯಬಹುದು. ಚಾಮರಾಜನಗರ ಮೈಸೂರು ರಾಮನಗರ ಮಂಡ್ಯ ಬೆಂಗಳೂರು – ಗ್ರಾಮಾಂತರ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಮಳೆ ಮುನ್ಸೂಚನೆ ಇದೆ. ಚಿತ್ರದುರ್ಗ ದಾವಣಗೆರೆ ಬಳ್ಳಾರಿ ಜಿಲ್ಲೆಗಳ ಕೆಲವೆಡೆ ರಾತ್ರಿ ಮಳೆ ಸಾಧ್ಯತೆ ಇದೆ. ನಾಳೆಯಿಂದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಮೂಲಕ ಮಳೆ ಮುಂದುವರೆಯಬಹುದು.
ಉತ್ತರ ಒಳನಾಡಿನ ಗದಗ ಕೊಪ್ಪಳ ಕಲ್ಬುರ್ಗಿ ರಾಯಚೂರು ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆ ಮುನ್ಸೂಚನೆ ಇದೆ. ಬೆಳಗಾವಿ ಧಾರವಾಡ ಹಾವೇರಿ ಬಿಜಾಪುರ ಬಾಗಲಕೋಟೆ ಯಾದಗಿರಿ ಬೀದರ್ ಜಿಲ್ಲೆಗಳಲ್ಲಿ ಸಂಜೆ ಮೋಡದ ವಾತಾವರಣ ಕೆಲವೆಡೆ ತುಂತುರು ಮಳೆಯಾಗಬಹುದು.
ಮುಂಗಾರು ಉತ್ತರದಲ್ಲಿ ಮಾನ್ಸೂನ್ ಟ್ರಫ್ ಹಿಮಾಲಯ ತಲುಪಿದ್ದು ದಕ್ಷಿಣದಲ್ಲಿ ಮುಂಗಾರು ದುರ್ಬಲ ವಾಗಿದೆ. ಬಂಗಾಳಕೊಲ್ಲಿಯಿಂದ ಪೂರ್ವದ ಮಾರುತಗಳಿಂದ ಮೋಡ ಪಶ್ಚಿಮದ ಕಡೆಗೆ ಬೀಸಲು ಆರಂಭವಾಗಿದ್ದು ತಮಿಳುನಾಡಿನಲ್ಲಿ ಗುಡುಗು ಮಳೆ ಆರಂಭವಾಗಬಹುದು. ಕೇರಳ ಕರಾವಳಿಯಲ್ಲಿ ಮುಂದಿನ ವಾರ ಮುಂಗಾರು ಚುರುಕಾಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿಯೂ ಎರಡು ಬದಿಯ ಮೋಡದಿಂದ ಸಾಧಾರಣ ಮಳೆಯಾಗಬಹುದು.
ಹವಾಮಾನ ತಜ್ಞ: ರಘುರಾಮ ಕಂಪದಕೋಡಿ






























