ತಂತ್ರಜ್ಞಾನ ವರ್ಗಾವಣೆಗೆ ಕೃಷಿ ಬರೆವಣಿಗೆ ತರಬೇತಿ ಕಾರ್ಯಕ್ರಮ

0

ಬೆಂಗಳೂರು: ಜನೆವರಿ 13 (ಜಿಕೆವಿಕೆ) ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮತ್ತು ವಿಸ್ತರಣಾ ಶಿಕ್ಷಣ ಸಂಸ್ಥೆ, ಹೈದರಾಬಾದ್ ಇವರ ಸಂಯುಕ್ತ ಆಶ್ರಯದಲ್ಲಿ ತಂತ್ರಜ್ಞಾನದ ಪರಿಣಾಮಕಾರಿ ವರ್ಗಾವಣೆಗೆ ಕೃಷಿ ಪತ್ರಿಕೋದ್ಯಮ ಕುರಿತ ಐದು ದಿನಗಳ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು ನಡೆಯಿತು.
ಜಿಕೆವಿಕೆ ಆವರಣದಲ್ಲಿರುವ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಮಾವೇಶ ಭವನದಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮವನ್ನು ಕೃ.ವಿ.ವಿ, ಬೆಂಗಳೂರಿನ ಕುಲಪತಿ ಡಾ: ಎಸ್.ವಿ.ಸುರೇಶ್ ಉದ್ಘಾಟಿಸಿದರು.

“ಕೃಷಿ ತಂತ್ರಜ್ಞಾನಗಳನ್ನು ಸಾಮಾನ್ಯ ಜನರಿಗೆ ಅದರಲ್ಲೂ ಮುಖ್ಯವಾಗಿ ರೈತರಿಗೆ ಶೀಘ್ರವಾಗಿ ತಲುಪಿಸಲು ಕೃಷಿ ಪತ್ರಿಕೋದ್ಯಮ ಕುರಿತು ತರಬೇತಿಯ ಅವಶ್ಯಕತೆಯನ್ನು ಅರಿತು ವಿಜ್ಞಾನಿಗಳಿಗೆ, ಸಂಶೋಧಕರಿಗೆ ಮತ್ತು ವಿಸ್ತರಣಾ ಕಾರ್ಯಕರ್ತರಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ವಿಷಯ. ಸ್ಥಳೀಯ ಮತ್ತು ಸರಳ ಭಾಷೆಯಲ್ಲಿ ವೈಜ್ಞಾನಿಕ ಪದಗಳನ್ನು ಬಳಸದೇ ಜನಸಾಮಾನ್ಯರ ಭಾಷೆಯಲ್ಲಿ ರೈತರ ಅನುಭವಗಳನ್ನು ಕುರಿತು ಯಶೋಗಾಥೆಗಳನ್ನು ದಿನ ಪತ್ರಿಕೆಗಳಲ್ಲಿ ಪ್ರಕಟಿಸಿದರೆ ಹೆಚ್ಚಿನ ಸಂಖ್ಯೆಯ ರೈತರು ಅಳವಡಿಸಿಕೊಳ್ಳಲು ಮುಂದಾಗುತ್ತಾರೆ. ಎಂದು ಕುಲಪತಿ ಅಭಿಪ್ರಾಯಪಟ್ಟರು.

ಜನಪ್ರಿಯ ಲೇಖನಗಳನ್ನು ಛಾಯಾಚಿತ್ರಗಳ ಸಮೇತ ನಿಯತಕಾಲಿಕಗಳಲ್ಲಿ ಪ್ರಕಟಿಸಲು ವಿಜ್ಞಾನಿಗಳು ಮುಂದಾಗಬೇಕು. ತರಬೇತಿಯಲ್ಲಿ ಪಡೆದ ಜ್ಞಾನವನ್ನು ತಮ್ಮ ಸಹೋದ್ಯೊಗಿಗಳ ಜೊತೆ ಚರ್ಚಿಸಿ ಹಂಚಿಕೊಂಡರೆ ಕಲಿತ ಜ್ಞಾನವು ಇತರರಿಗೆ ತಲುಪಲು ಸಹಾಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನವು ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತಿವೆ. ಆದುದರಿಂದ ಡಿಜಿಟಲ್ ತಂತ್ರಜ್ಞಾನಗಳ ಮೂಲಕ ಹೆಚ್ಚು ಆಕರ್ಷಿಣಿಯವಾಗಿ ಕೃಷಿ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸಲು ವಿಜ್ಞಾನಿಗಳು ಮತ್ತು ವಿಸ್ತರಣಾ ಕಾರ್ಯಕರ್ತರು ಮುಂದಾಗಬೇಕೆಂದು ಕರೆಯಿತ್ತರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ: ಕೆ. ನಾರಾಯಣಗೌಡ, ವಿಸ್ತರಣಾ ನಿರ್ದೇಶಕರು ಅವರು ಮಾತನಾಡಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಂತ್ರಜ್ಞಾನವನ್ನು ಬಳಸಿಕೊಂಡು ರೈತರು ತಮ್ಮ ಕೃಷಿ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳುವಂತೆ ಸೂಕ್ತ ಮಾಹಿತಿ ನೀಡಬೇಕು. ಇದರಿಂದ ಅವರು ತಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳಲ್ಲಿ ಬಳಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಸ್ತರಣಾ ಶಿಕ್ಷಣ ಸಂಸ್ಥೆ, ಹೈದರಾಬಾದ್, ಪ್ರಾಧ್ಯಾಪಕ ಡಾ: ಎ. ಶೈಲಜ, ಡಾ. ಆರ್. ವಸಂತ. ಸಿಬ್ಬಂದಿ ತರಬೇತಿ ಘಟಕದ ಮುಖ್ಯಸ್ಥ ಡಾ. ಕೆ. ಶಿವರಾಮು, ಪ್ರಾಧ್ಯಾಪಕರಾದ ಡಾ: ಬಿ. ಕಲ್ಪನಾ, ಡಾ: ಆರ್. ನಾರಾಯಣರೆಡ್ಡಿ ಮತ್ತು ಸಿ.ವಿ. ವೆಂಕಟೇಶಮೂರ್ತಿ ಉಪಸ್ಥಿತರಿದ್ದರು.

ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ, ಶಿವಮೊಗ್ಗದ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆ, ಕರ್ನಾಟಕ ಸರ್ಕಾರದ ಆತ್ಮ ಸಿಬ್ಬಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here