ಅಡಿಕೆಹಾಳೆಯನ್ನು ಅವಲಕ್ಕಿಯಾಗಿ ಪರಿವರ್ತಿಸುವ ಘಟಕ

0

ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕಿನ ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅಡಿಕೆ ಹಾಳೆಯನ್ನು ಅವಲಕ್ಕಿ ರೂಪಕ್ಕೆ ತರುವ ಘಟಕ ಸ್ಥಾಪಿತವಾಗಿದೆ. ರಾಷ್ಟ್ರೀಯ ಪಶು ವಿಜ್ಞಾನ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆ, ಪುತ್ತೂರಿನ ಕರ್ನಾಟಕ ಹಾಲು ಮಹಾ ಮಂಡಳಿ ಘಟಕ ಮತ್ತು ಪಾಣಾಜೆ ಹಾಲು ಉತ್ಪಾದಕರ ಸಂಘದ ಸಂಯುಕ್ತ ಶ್ರಮ-ಆಸಕ್ತಿಯಿಂದ ಈ ಘಟಕ ಆರಂಭವಾಗಿದೆ. ಯಂತ್ರಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿಯೇ ಪ್ರತ್ಯೇಕವಾದ ಕಟ್ಟಡ ನಿರ್ಮಿಸಲಾಗಿದೆ. ಯಂತ್ರೋಪಕರಣಗಳನ್ನು ಖರೀದಿಸಲು ನಾಲ್ಕು ಲಕ್ಷ ವೆಚ್ಚವಾಗಿದೆ. ಇದಕ್ಕೆ ನಬಾರ್ಡ್ ಕೂಡ ಆರ್ಥಿಕ ಸಹಾಯ ನೀಡಿದೆ. ಕಟ್ಟಡ ನಿರ್ಮಿಸಲು ಮತ್ತು ಘಟಕಕ್ಕೆ ವಿದ್ಯುತ್ ಸಂಪರ್ಕ ಪಡೆಯುವ ಕಾರ್ಯಗಳಿಗೆ ಪಾಣಾಜೆ ಹಾಲು ಉತ್ಪಾದಕರ ಸಂಘ ಮೂರು ಲಕ್ಷ ವೆಚ್ಚ ಮಾಡಿದೆ.

ಅವಲಕ್ಕಿ ಮಾದರಿಗೆ ತರುವ ಯಂತ್ರಕ್ಕೆ 5 ಹೆಚ್.ಪಿ. ಸಾಮಥ್ರ್ಯದ ಮೋಟಾರು ಅಳವಡಿಸಲಾಗಿದೆ. ಚೆನ್ನಾಗಿ ಒಣಗಿಸಿದ ಅಡಿಕೆ ಹಾಳೆಗಳನ್ನು ಇದಕ್ಕೆ ಒಟ್ಟಿದರೆ ಅವಲಕ್ಕಿ ಮಾದರಿಯಾಗಿ ಹೊರಬೀಳುತ್ತದೆ. ಈ ರೀತಿ ಬಿದ್ದ ರಾಶಿಯನ್ನು ಇತರ ಪಶು ಆಹಾರದ ಜೊತೆ ಚೆನ್ನಾಗಿ ಮಿಶ್ರ ಮಾಡಲು ಮತ್ತೊಂದು ಪ್ರತ್ಯೇಕವಾದ ಯಂತ್ರವಿದೆ. ಒಂದು ಅಥವಾ ಎರಡು ಹೈನುರಾಸುಗಳಿರುವವರಿಗೆ ಇಂಥ ಮಿಶ್ರಣದ ಯಂತ್ರ ಅಗತ್ಯವಿಲ್ಲ. ಅಡಿಕೆ ಹಾಳೆ ಅವಲಕ್ಕಿ ಮತ್ತು ಇತರ ಪಶು ಆಹಾರವನ್ನು ಅವರು ಕೈಯಿಂದಲೇ ಮಿಶ್ರಣ ಮಾಡಬಹುದು. ಈ ರೀತಿ ಕಲೆಸದೇ ಕೂಡ ಅಡಿಕೆ ಹಾಳೆ ಅವಲಕ್ಕಿಯನ್ನು ಪ್ರತ್ಯೇಕವಾಗಿ ನೀಡಬಹುದು. ಯಾವ ರೀತಿ ಕೊಡಬೇಕೆನ್ನುವುದು ಸಾಕಾಣಿಕೆದಾರರಿಗೆ ಬಿಟ್ಟ ವಿಷಯ. ಆದರೆ ಒಂದು ದಿನದಲ್ಲಿ ಯಾವ ಪ್ರಮಾಣದಲ್ಲಿ ನೀಡಬೇಕು ಎನ್ನುವ ಲೆಕ್ಕಾಚಾರದ ಬಗ್ಗೆ ಜಾಗರೂಕರಾಗಿರಬೇಕು
ಪಾಣಾಜೆಯಲ್ಲಿ ಈ ಘಟಕ ಸ್ಥಾಪನೆಯಾದ ನಂತರ ಸುತ್ತಮುತ್ತಲಿನ ಗ್ರಾಮಗಳ ಹೈನುರಾಸು ಸಾಕಾಣಿಕೆದಾರರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಒಣಗಿಸಿ, ಸಂಗ್ರಹ ಮಾಡಿದ ಅಡಿಕೆ ಹಾಳೆ ರಾಶಿಯನ್ನು ತಂದು ಅವಲಕ್ಕಿ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಒಂದು ಕೆಜಿಗೆ ಇಂತಿಷ್ಟೆಂದು ಶುಲ್ಕ ವಿಧಿಸಲಾಗುತ್ತಿದೆ. ದೊಡ್ಡ ಸಂಖ್ಯೆಯ ಹೈನುರಾಸುಗಳನ್ನು ಸಾಕಾಣಿಕೆದಾರರು ಇಲ್ಲಿಯೇ ಮಾಡುವ ಅಡಿಕೆ ಹಾಳೆ ಮತ್ತು ಇತರ ಪಶು ಆಹಾರಗಳನ್ನು ಮಿಶ್ರಣ ಮಾಡಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ. ಪುತ್ತೂರಿನ ನಿವಾಸಿಯೇ ಆದ ಸಚಿವೆ ಶೋಭಾ ಕರಂದ್ಲಾಜೆ ಅವರು ಘಟಕವನ್ನು ಉದ್ಘಾಟಿಸಿದ್ದಾರೆ. ಈ ಕಾರಣ ಆರಂಭದ ದಿನದಿಂದಲೇ ಘಟಕಕ್ಕೆ ಹೆಚ್ಚಿನ ಪ್ರಚಾರ ದೊರೆತಿದೆ. ಇದರಿಂದ ಜಿಲ್ಲೆಯ ವಿವಿಧ ತಾಲೂಕುಗಳಿಂದ ಅಲ್ಲದೇ ಅಕ್ಕಪಕ್ಕದ ಜಿಲ್ಲೆಯ ಆಸಕ್ತರು ಘಟಕದ ಕಾರ್ಯಾಚರಣೆ ನೋಡಿಕೊಂಡು ಹೋಗುತ್ತಿದ್ದಾರೆ. ಸಾಕಷ್ಟು ಮಂದಿ ತಮ್ಮ ಊರುಗಳಿಗೂ ಇಂಥ ಘಟಕ ಬೇಕೆಂದು ಬೇಡಿಕೆ ಸಲ್ಲಿಸುತ್ತಿದ್ದಾರೆ.

ತೂಕಕ್ಕೆ ಅನುಗುಣವಾಗಿ ಇಂತಿಷ್ಟು ಶುಲ್ಕ ವಿಧಿಸಿ ಅಡಿಕೆ ಹಾಳೆಯನ್ನು ಅವಲಕ್ಕಿಯಾಗಿ ಪರಿವರ್ತಿಸುವ ಘಟಕಗಳಿಗೂ ಐದು ಹೆಚ್.ಪಿ. ಸಾಮಥ್ರ್ಯದ ಮೋಟಾರು ಅಳವಡಿಸಿದ ಯಂತ್ರದ ನಿರ್ವಹಣೆ ದುಬಾರಿ. ಇನ್ನು ಮಧ್ಯಮ ಮತ್ತು ಸಣ್ಣ ಪ್ರಮಾಣದ ಹೈನುರಾಸು ಸಾಕಾಣಿಕೆ ಘಟಕಗಳಿಗಂತೂ ಇದರ ನಿರ್ವಹಣೆ ಸಾಧ್ಯವಿಲ್ಲ. ಆದ್ದರಿಂದ ಅರ್ಧ ಹೆಚ್.ಪಿ.ಯಿಂದ ಆರಂಭಿಸಿ ಐದು ಹೆಚ್.ಪಿ. ಸಾಮಥ್ರ್ಯದವರೆಗಿನ ಮೋಟಾರು ಅಳವಡಿಸಿದ ಯಂತ್ರಗಳನ್ನು ಅಭಿವೃದ್ಧಿಪಡಿಸಿದರೆ ತುಂಬ ಅನುಕೂಲ. ಕ್ವಿಂಟಾಲ್ಗಟ್ಟಲೇ ಅಡಿಕೆ ಹಾಳೆಯನ್ನು ಕಟ್ಟಿತರುವ ಕೃಷಿಕರು ಅದನ್ನು ಅವಲಕ್ಕಿ ರೂಪಕ್ಕೆ ತಂದ ನಂತರ ಸಾಗಾಣಿಕೆ ಮಾಡಲು ಪ್ರಯಾಸಪಡಬೇಕು. ಆದ್ದರಿಂದ ಅರ್ಧ ಹೆಚ್.ಪಿ. ಸಾಮರ್ಥ್ಯದ ಸಣ್ಣ ಯಂತ್ರಗಳಾದರೆ ಖರೀದಿಸಿ, ಹೈನು ಸಾಕಾಣಿಕೆ ಘಟಕದಲ್ಲಿಯೇ ಸ್ಥಾಪಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಪಶು ವಿಜ್ಞಾನ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆ ಪ್ರಯತ್ನಿಸಬೇಕು

 

ಗಮನಿಸಬೇಕಾದ ಪ್ರಮುಖ ವಿಷಯ: ಅಡಿಕೆ ಹಾಳೆಯಲ್ಲಿ ಹಸಿ ಅಂಶವಿಲ್ಲ, ಬೂಷ್ಟು ಕಟ್ಟಿಲ್ಲ ಎಂದು ಖಾತರಿ ಪಡಿಸಿಕೊಂಡೇ ಯಂತ್ರಕ್ಕೆ ಒಟ್ಟಬೇಕು. ಹಾಳೆ ಹಸಿಯಿದ್ದರೆ ಯಂತ್ರದ ಹಲ್ಲುಗಳಿಗೆ ಸಿಕ್ಕಿಕೊಳ್ಳುತ್ತದೆ. ಆಗ ಯಂತ್ರದ ಕವಚ ಬಿಚ್ಚಿ ಸಿಕ್ಕಿಕೊಂಡ ಹಸಿಹಾಳೆ ತೆಗೆದು ಮತ್ತೆ ಚಾಲನೆ ಮಾಡಬೇಕು. ಹಸಿ ಅಡಿಕೆ ಹಾಳೆ ಅಥವಾ ಬೂಷ್ಟು ಕಟ್ಟಿದ ಹಾಳೆಯನ್ನು ಸಣ್ಣ ಚೂರುಗಳಾಗಿ ಮಾಡಿ ಮೇವಾಗಿ ನೀಡಿದಾಗ ರಾಸುಗಳ ಆರೋಗ್ಯದ ಮೇಲೆ ತೀವ್ರತರವಾದ ದುಷ್ಪರಿಣಾಮ ಉಂಟಾಗುತ್ತದೆ.

LEAVE A REPLY

Please enter your comment!
Please enter your name here