ಕೃಷಿಯನ್ನು ಲಾಭದಾಯಕಗೊಳಿಸಲು ಸಾಧ್ಯ: ವಾಸುದೇವಮೂರ್ತಿ

0

ರಾಷ್ಟ್ರೀಯ ಕೃಷಿ ಯಂತ್ರೋಪಕರಣ ಕ್ಷೇತ್ರದಲ್ಲಿ ರತ್ಬಗಿರಿ ಇಂಪೆಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಪ್ರಮುಖ ಹೆಸರು. ಇದರ ಸಂಸ್ಥಾಪಕರು. ಚೇರ್ಮನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಎಸ್.ಎ. ವಾಸುದೇವಮೂರ್ತಿ. ಕೃಷಿಕ್ಷೇತ್ರದ ಆಳವಾದ ಜ್ಞಾನ ಹೊಂದಿರುವವರು. ಈ ಕಾರಣದಿಂದ ಇವರ ಸಂಸ್ಥೆಯಿಂದ ಭಾರತೀಯ ಕೃಷಿ-ತೋಟಗಾರಿಕೆಗೆ ಅಗತ್ಯವಾದ ಯಂತ್ರೋಪಕರಣಗಳು ಸಣ್ಣ ಪ್ರಮಾಣದ ರೈತರಿಗೂ ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತಿದೆ. ಇವರೊಂದಿಗೆ “ಅಗ್ರಿಕಲ್ಚರ್‌ ಇಂಡಿಯಾ” ಪ್ರತಿನಿಧಿ ನಡೆಸಿದ ಮಾತುಕತೆ ನಿಮ್ಮ ಮುಂದಿದೆ.

ಅಗ್ರಿಕಲ್ಚರ್‌ ಇಂಡಿಯಾ: ನೀವು ಕೃಷಿ ಯಂತ್ರೋಪಕರಣ ಉದ್ಯಮಕ್ಕೆ ಬಂದಿದ್ದು ಹೇಗೆ ? ನಿಮ್ಮ ಉದ್ಯಮ ಪಯಣದ ಬಗ್ಗೆ ತಿಳಿಸಿಕೊಡಿ

ಎಸ್.ಎ. ವಾಸುದೇವಮೂರ್ತಿ: ಮೂಲತಃ ನಮ್ಮದು ಕೃಷಿಕ ಕುಟುಂಬ. ತೆಂಗು –ಅಡಿಕೆ, ಬಾಳೆ-ಭತ್ತ ಇತ್ಯಾದಿ ಬೆಳೆಯುತ್ತಿದ್ದೆವು.  ಬೆಳೆಗಾರರ ಸಮಸ್ಯೆಗಳನ್ನು ಅನುಭವಿಸಿದ್ದೇನೆ. ನೋಡಿದ್ದೇನೆ. ಈ ಹಿನ್ನೆಲೆಯಲ್ಲಿ ಕೃಷಿಯನ್ನು ಲಾಭದಾಯಕಗೊಳಿಸಲು ಏನು ಮಾಡಬಹುದು ಎಂದು ಸದಾ ಚಿಂತಿಸುತ್ತಿದ್ದೆ. ಕೃಷಿ ಯಂತ್ರೋಪಕರಣಗಳ ಉದ್ಯಮ ಆರಂಭಿಸಿದರೆ ಸಣ್ಣ- ಮಧ್ಯಮ – ದೊಡ್ಡ ಪ್ರಮಾಣದ ರೈತರಿಗೂ ಅಗತ್ಯವಾದ ಸಹಾಯ ಮಾಡಬಹುದು. ಅವರ ಕೈಗೆಟ್ಟುಕುವ ಬೆಲೆಯಲ್ಲಿ ಉಪಕರಣಗಳನ್ನು ನೀಡಬಹುದು ಎನಿಸಿತು. ಈ ಬಗ್ಗೆ ಅಧ್ಯಯನ ಮಾಡಿ ೧೯೭೫ರಲ್ಲಿ ಚಿಕ್ಕಮಗಳೂರಲ್ಲಿ ಅನ್ನಪೂರ್ಣ ಏಜೆನ್ಸಿಸ್‌ ಹೆಸರಿನಲ್ಲಿ ಈ ಉದ್ಯಮ ಆರಂಭಿಸಿದೆವು.

ಈ ನಂತರ ನೂತನವಾದ ಕೃಷಿ ಯಂತ್ರೋಪಕರಣಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆವು. ಯಾವುದೇ ಹೊಸ ವಿಷಯವನ್ನು ರೈತರು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ ಹೊಸ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಯನ್ನು ರೈತರ ಜಮೀನುಗಳಿಗೆ ಹೋಗಿ ಮಾಡುತ್ತಿದ್ದೆವು. ಆಗೆಲ್ಲ ನಾನೇ ಪ್ರಾತ್ಯಕ್ಷಿಕೆ ನೀಡುತ್ತಿದ್ದೆ.

ಹೀಗೆ ನಮ್ಮ ಪಯಣ ಆರಂಭವಾಯಿತು. ಅಂತರಾಷ್ಟ್ರೀಯ ಕೃಷಿ ಯಂತ್ರೋಪಕರಣಗಳ ಮೇಳಕ್ಕೆ ಭೇಟಿ ನೀಡುತ್ತಿದ್ದೆವು. ಪ್ರಪಂಚದ ಇತರ ದೇಶಗಳಲ್ಲಿ ಎಂಥಾ ಬೆಳವಣಿಗೆಯಾಗುತ್ತಿದೆ, ಸಂಶೋಧನೆಗಳ ಮೂಲಕ ಏನೇನು ವಿಶೇಷತೆ ಸಾಧಿಸಿದ್ದಾರೆ ಎನ್ನುವುದು ನಮಗೆ ಅರ್ಥವಾಯಿತು. ಇವುಗಳನ್ನು ನಮ್ಮ ಬೆಳೆಗಾರರಿಗೆ ಪರಿಚಯ ಮಾಡಕೊಡಬೇಕು ಎಂದು ನಿಶ್ಚಯಿಸಿದೆವು. ಪ್ರಮುಖವಾಗಿ ಏಕವ್ಯಕ್ತಿ ಚಾಲಿತ ಯಂತ್ರೋಪಕರಣಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆವು.

ಒಬ್ಬನೇ ವ್ಯಕ್ತಿ ಕಳೆ ಕೊಚ್ಚುವ ಯಂತ್ರ ಬಳಸುವುದು, ಓರ್ವನೇ ವ್ಯಕ್ತಿ ಒಂದೇ ದಿನಕ್ಕೆ ಎಂಟು ಎಕರೆಗೂ ಹೆಚ್ಚು ಜಮೀನಿಗೆ ದ್ರಾವಣ ಸಿಂಪಡಿಸಲು ಸಾಧ್ಯವಾಗುವಂಥ ಸ್ಪ್ರೇಯರ್‌ ಗಳನ್ನು ಮಾರುಕಟ್ಟೆಗೆ ತಂದೆವು. ಇಂಥ ಸ್ಪ್ರೇಯರ್‌ ಗಳು ಬರುವ ಮುಂಚೆ ಓರ್ವ ವ್ಯಕ್ತಿ ಒಂದೆಕರೆ ಅಥವಾ ಒಂದೂವರೆ ಎಕರೆಗೆ ಸಿಂಪಡಣೆ ಮಾಡಿದರೆ ಅದೇ ಹೆಚ್ಚು ಎನ್ನುವಂಥಾ ಪರಿಸ್ಥಿತಿ ಇತ್ತು. ಇಷ್ಟೇ ಸಮಯದಲ್ಲಿ ಎಂಟು  ಎಕರೆಗೂ ಹೆಚ್ಚು ಪ್ರದೇಶಕ್ಕೆ ಸಿಂಪಡಣೆ ಮಾಡಬಹುದು ಎನ್ನುವಾಗ ಕೃಷಿಯ ವೆಚ್ಚ ಗಣನೀಯವಾಗಿ ಕಡಿಮೆಯಾಯಿತು.

ಇದೇ ರೀತಿ ಕೊಚ್ಚುಕಳೆ ಮಾಡುವುದಕ್ಕೆ ಬೇಕಾದ ಅತ್ಯಾಧುನಿಕ ಉಪಕರಣಗಳನ್ನು ಪರಿಚಯ ಮಾಡಿದೆವು. ಇದಕ್ಕೆ ಮೊದಲು ಒಂದು ಎಕರೆ ಅಡಿಕೆ ತೋಟದಲ್ಲಿ ಕೃಷಿಕಾರ್ಮಿಕರ ಸಹಾಯದಿಂದ ಕೊಚ್ಚುಕಳೆ ಮಾಡಿಸಬೇಕಾದಾಗ ೧೨ ಸಾವಿರ ರೂಪಾಯಿ ಖರ್ಚಾಗುತ್ತಿತ್ತು. ನಮ್ಮ ಕೃಷಿ ಉಪಕರಣ ಬಳಸಿ ಮಾಡಿದಾಗ ಇದರ ಖರ್ಚು ಒಂದು ಸಾವಿರದ ಇನ್ನೂರು ರೂಪಾಯಿಂದ ಒಂದೂವರೆ ಸಾವಿರದಷ್ಟು ಆಗುತ್ತಿತ್ತು. ಇದರಿಂದ ಕೃಷಿವೆಚ್ಚದಲ್ಲಿ ಗಣನೀಯವಾದ ಮೊತ್ತ ಉಳಿತಾಯವಾಯಿತು.

ಎರಡನೇಯದು  ಸಕಾಲದಲ್ಲಿ ಕೆಲಸವಾಗತೊಡಗಿತು. ಇದಕ್ಕೆ ಪೂರಕವಾಗಿ ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಇದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಸಬ್ಸಿಡಿ ಮೂಲಕ ರೈತರಿಗೆ ಯಂತ್ರೋಪಕರಣಗಳನ್ನು ನೀಡತೊಡಗಿತು.. ಸಹಾಯಧನದ ಕಾರಣದಿಂದ ಲಕ್ಷಾಂತರ ಬೆಳೆಗಾರರು ನಮ್ಮ ಸಂಸ್ಥೆಯ ಯಂತ್ರೋಪಕರಣಗಳನ್ನು ತೆಗೆದುಕೊಂಡು ಬಳಸುತ್ತಿದ್ದಾರೆ. ಅವುಗಳ ಅನುಕೂಲತೆಯನ್ನು ಪಡೆಯುತ್ತಿದ್ದಾರೆ.

ಅನೇಕರು ಈ ಯಂತ್ರೋಪಕರಣಗಳನ್ನು ಸ್ವಂತಕ್ಕೆ ಬಳಸುವುದಲ್ಲದೇ ಬಾಡಿಗೆಗೆ ನೀಡುತ್ತಿದ್ದಾರೆ. ಕೆಲವರು ತಾವೇ ಇದನ್ನು ಇತರರ ತೋಟ – ಜಮೀನುಗಳಿಗೆ ತೆಗೆದುಕೊಂಡು ಹೋಗಿ ಕೆಲಸಗಳನ್ನು ಮಾಡಿ ಉತ್ತಮ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ. ಇದರಿಂದ ನಮ್ಮ ಸಂಸ್ಥೆಯ ಯಂತ್ರೋಪಕರಣಗಳ ಸಹಾಯದಿಂದ ಬಹಳಷ್ಟು ಮಂದಿ ಸ್ವಯಂ ಉದ್ಯೋಗ ಸಹ ಕಂಡುಕೊಂಡಿದ್ದಾರೆ.  ತಾವು ಮಾಡುವ ಕೃಷಿಯಲ್ಲಿ ಅಧಿಕ ಲಾಭವನ್ನೂ ಪಡೆಯುತ್ತಿದ್ದಾರೆ.

ಅಗ್ರಿಕಲ್ಚರ್‌ ಇಂಡಿಯಾ: ನಿಮ್ಮ ಸಂಸ್ಥೆಯಲ್ಲಿ ರತ್ನಗಿರಿ ಇಂಪೆಕ್ಸ್‌ ಅಂತಲೂ ಇದೆ. ಅಗ್ರಿಮಾರ್ಟ್‌ ಅಂತಲೂ ಇದೆ. ಇವೆರಡರ ನಡುವಿನ ವ್ಯತ್ಯಾಸಗಳೇನು ? ಒಂದಕ್ಕೊಂಡು ಇರುವ ಸಂಬಂಧಗಳೇನು ? ಹಾಗೆಯೇ ಅಗ್ರಿಮೇಟ್‌ ಬಗ್ಗೆಯೂ ತಿಳಿಸಿ

ಎಸ್.ಎ. ವಾಸುದೇವಮೂರ್ತಿ: ಅಗ್ರಿಮಾರ್ಟ್‌ ಎನ್ನುವುದು ರತ್ನಗಿರಿ ಇಂಪೆಕ್ಸ್‌ ಸಂಸ್ಥೆಯ ರಿಟೈಲ್‌ ಔಟ್‌ ಲೇಟ್‌ ಬ್ರಾಂಡ್.‌ ಈ ಬ್ರಾಂಡಿನ ಮಾಲೀಕ ಸಂಸ್ಥೆ ರತ್ನಗಿರಿ ಇಂಪೆಕ್ಸ್‌ ಪ್ರೈವೇಟ್‌ ಲಿಮಿಟೆಡ್.‌ ಅಗ್ರಿಮೇಟ್‌ ಎನ್ನುವುದು ನಮ್ಮ ಸಂಸ್ಥೆಯ ಯಂತ್ರೋಪಕರಣಗಳ ಹೆಸರು ಹಾಗೂ ಬ್ರಾಂಡ್‌.  ಸಂಸ್ಥೆಯ ಕೃಷಿ ಯಂತ್ರೋಪಕರಣಗಳ ಜೊತೆಗೆ ಇತರ ತಯಾರಿಕ ಕಂಪನಿಗಳ ಯಂತ್ರೋಪಕರಣಗಳನ್ನು “ಅಗ್ರಿಮಾರ್ಟ್”‌ ನಲ್ಲಿ ನಾವು ವ್ಯವಸ್ಥಿತವಾಗಿ ಪ್ರದರ್ಶನ ಮಾಡಿ ಮಾರಾಟ ಮಾಡುತ್ತೇವೆ. ಇದರ ಜೊತೆಗೆ ಸರ್ವೀಸ್‌ – ಮಾಹಿತಿ ಮತ್ತು ಮಾರ್ಗದರ್ಶನ ಸೇವೆಯನ್ನೂ ನೀಡುತ್ತೇವೆ. ಈ ಯಂತ್ರೋಪಕರಣಗಳನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನು ಫೀಲ್ಡ್‌ ನಲ್ಲಿಯೇ ಹೇಳಿಕೊಡುತ್ತೇವೆ.

ಅಗ್ರಿಕಲ್ಚರ್‌ ಇಂಡಿಯಾ: ಅಗ್ರಿಮಾರ್ಟ್‌ ಕರ್ನಾಟಕದಲ್ಲಿ ಮಾತ್ರ ಇದೆಯೋ ಅಥವಾ ಕರ್ನಾಟಕದಿಂದ ಹೊರಗಡೆಯೂ ಇದೆಯೋ ?

ಎಸ್.ಎ. ವಾಸುದೇವಮೂರ್ತಿ: ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಜೊತೆಗೆ ದೇಶದ ಇನ್ನೂ ಅನೇಕ ರಾಜ್ಯಗಳಲ್ಲಿ ಅಗ್ರಿಮಾರ್ಟ್‌ ಇದೆ.

ಅಗ್ರಿಕಲ್ಚರ್‌ ಇಂಡಿಯಾ: ವರ್ಷದಿಂದ ವರ್ಷಕ್ಕೆ ನಿಪುಣತೆ ಇರುವ ಕೃಷಿ ಕಾರ್ಮಿಕರ ಲಭ್ಯತೆ ಕಡಿಮೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಈ ಕೊರತೆ ನೀಗಿಸಲು ಮುಖ್ಯವಾಗಿ ಯಾವಯಾವ ಯಂತ್ರೋಪಕರಣಗಳನ್ನು ಅಭಿವೃದ್ಧಿಪಡಿಸಿದ್ದೀರಿ ?

ಎಸ್.ಎ. ವಾಸುದೇವಮೂರ್ತಿ: ರತ್ನಗಿರಿ ಇಂಪೆಕ್ಸ್‌ ಸಂಸ್ಥೆ ಕೃಷಿಕರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತದೆ. ಅವರ ಕೃಷಿ ಸಮಸ್ಯೆಗಳನ್ನು ಗಮನಿಸುತ್ತಿರುತ್ತೇವೆ.  ಅವರು ಸಹ ತಮಗೆ ಅಗತ್ಯವಾದ ಕೃಷಿ ಯಂತ್ರೋಕರಣಗಳ ಬಗ್ಗೆ ತಿಳಿಸುತ್ತಿರುತ್ತಾರೆ. ಇದರಿಂದ ಯಾವ ರೀತಿಯ ಯಂತ್ರೋಪಕರಣ ಬೇಕು ಎಂಬುದು ತಿಳಿಯುತ್ತದೆ. ಅವಶ್ಯಕತೆಗೆ ಅನುಗುಣವಾಗಿ ಅವುಗಳನ್ನು ಅಭಿವೃದ್ಧಿ ಮಾಡುತ್ತೇವೆ. ಉದಾಹರಣೆಗೆ ಹೇಳಬೇಕೆಂದರೆ ಬಹಳ ವರ್ಷಗಳ ಹಿಂದೆಯೇ ಭತ್ತ, ರಾಗಿ, ಜೋಳ ಇತ್ಯಾದಿ ಕ್ಷೇತ್ರ ಬೆಳೆಗಳನ್ನು ಸರಳವಾಗಿ ಕೊಯ್ಲು ಮಾಡುವ ಸಾಧನ ಅಭಿವೃದ್ಧಿಪಡಿಸಿದ್ದೇವೆ. ಅಡಿಕೆ ಫಸಲು ಕೊಯ್ಲು ಮಾಡಲು ಸಲೀಸಾಗಿ ಮರ ಏರಿ ಗೊನೆ ಕೊಯ್ಯುವ ಯಂತ್ರ ಅಭಿವೃದ್ಧಿ ಪಡಿಸಿದ್ದೇವೆ.  ಈ ರೀತಿ ಸಾಕಷ್ಟು ಯಂತ್ರೋಪಕರಣಗಳ ಅಭಿವೃದ್ಧಿ ಆಗಿದೆ.

ಅಗ್ರಿಕಲ್ಚರ್‌ ಇಂಡಿಯಾ: ಯುರೋಪ್‌ ಮತ್ತು ಅಮೆರಿಕಾದಲ್ಲಿನ ಕೃಷಿ ಯಂತ್ರೋಪಕರಣಗಳಿಗೂ ಭಾರತದಲ್ಲಿ ಇರುವ ಕೃಷಿ ಯಂತ್ರೋಪಕರಣಗಳಿಗೂ ವ್ಯತ್ಯಾಸ ಇದೆಯೇ. ಅಲ್ಲಿನಷ್ಟು ಇಲ್ಲಿಯೂ ಅಭಿವೃದ್ಧಿಯಾಗಿದೆಯೇ ?

ಎಸ್.ಎ. ವಾಸುದೇವಮೂರ್ತಿ: ಅಲ್ಲಿರುವ ಕೃಷಿ ಯಂತ್ರೋಪಕರಗಳಷ್ಟೇ ಸಮರ್ಥ ಮತ್ತು ಶಕ್ತಿಶಾಲಿಯಾದಂಥ ಯಂತ್ರೋಕರಣಗಳು ನಮ್ಮಲಿಯೂ ಇದೆ. ಆದರೆ ಇವುಗಳ ಸಂಖ್ಯೆಕಡಿಮೆ. ಏಕೆಂದರೆ ಅಲ್ಲಿ ಭೂ ಹಿಡುವಳಿ ಪ್ರಮಾಣ ದೊಡ್ಡದು. ಒಬ್ಬ ರೈತನಿಗೆ ಕನಿಷ್ಟ ಐನೂರರಿಂದ ಸಾವಿರಾರು ಎಕರೆ ತನಕ ತೋಟ – ಜಮೀನಿರುತ್ತದೆ. ಭಾರತದಲ್ಲಿ ಸಣ್ಣ ರೈತರು, ಮಧ್ಯಮ ಪ್ರಮಾಣದ ರೈತರ ಸಂಖ್ಯೆಯೇ ಅತ್ಯಧಿಕ. ಇದನ್ನು ಗಮನದಲ್ಲಿಟ್ಟುಕೊಂಡು ಯಂತ್ರೋಪಕರಣಗಳ ರೂಪಿಸುವಿಕೆ ಆಗುತ್ತಿರುತ್ತದೆ.

ಅಗ್ರಿಕಲ್ಚರ್‌ ಇಂಡಿಯಾ: ಕೃಷಿ ಯಂತ್ರೋಪಕರಣಗಳನ್ನು ಮಾರಾಟ ಮಾಡಿದ ನಂತರ ಸರ್ವೀಸ್‌ ಅತ್ಯಗತ್ಯವಾಗಿರುತ್ತದೆ. ಈ ದಿಶೆಯಲ್ಲಿ ನೀವು ಮಾಡುತ್ತಿರುವ ಕಾರ್ಯಗಳೇನು ?

ಎಸ್.ಎ. ವಾಸುದೇವಮೂರ್ತಿ: ನಾವು ಮಾರಾಟ ಮಾಡುವ ಕೃಷಿ ಯಂತ್ರೋಪಕರಣಗಳಿವೆ ವಾರಂಟಿ ನೀಡುತ್ತೇವೆ. ನಾವು ಮಾರಾಟ ಮಾಡಿದ ಯಂತ್ರೋಪಕರಣಗಳಿಗೆ ಕ್ಲೈಮ್‌ ಬಂದಿರುವುದು ಪಾಯಿಂಟ್‌ ಟು ಪರ್ಸೆಂಟ್‌ ಗಿಂತ ಕಡಿಮೆ. ನಾವು ವ್ಯವಸ್ಥಿತವಾಗಿ ಉಚಿತ ಸರ್ವೀಸ್‌ ಕ್ಯಾಂಪ್‌ ಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಾಡುತ್ತೇವೆ. ಅಗ್ರಿಮಾರ್ಟ್‌ ಮತ್ತು ಅದರ ಡೀಲರ್‌ ಗಳು ಕಡ್ಡಾಯವಾಗಿ ಸರ್ವೀಸ್‌ ನೀಡುತ್ತಾರೆ. ಅಗತ್ಯವಿರುವ ಬಿಡಿಭಾಗಗಳನ್ನು ಅವರುಗಳಿಗೆ ಸರಬರಾಜು ಮಾಡುತ್ತೇವೆ.‌

“ಸ್ಮಾರ್ಟ್‌ ವಿಲೇಜ್‌ ಎಕನಾಮಿಕ್‌ ಜೋನ್”

ಭಾರತದಲ್ಲಿ ಎರಡು ವಿಧವಿದೆ. ಒಂದು ಗ್ರಾಮೀಣ ಭಾರತ ಮತ್ತೊಂದು ನಗರ ಭಾರತ. ಗ್ರಾಮೀಣ ಭಾರತ ಸ್ವಾವಲಂನೆ ಸಾಧಿಸದೇ ಇಡೀ ರಾಷ್ಟ್ರದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಈ ದಿಶೆಯಲ್ಲಿ ೨೦ ವರ್ಷದ ಅಧ್ಯಯನ- ಸಂಶೋಧನೆ ಮಾಡಿ “ಸ್ಮಾರ್ಟ್‌ ವಿಲೇಜ್‌ ಎಕನಾಮಿಕ್‌ ಜೋನ್” ಎಂಬ ಯೋಜನೆ ರೂಪಿಸಿದ್ದೇನೆ. ಈ ಯೋಜನೆ ಅಡಿಯಲ್ಲಿ ಹಳ್ಳಿಗಳು ಸಂಪೂರ್ಣ ಅಭಿವೃದ್ಧಿ ಹೊಂದುತ್ತವೆ.

ಸ್ಮಾರ್ಟ್‌ ವಿಲೇಜ್‌ ಎಂದರೆ ಮೊಬೈಲ್‌ ಟವರ್‌ ಬಂತು, ಸ್ಮಾರ್ಟ್‌ ಟಿವಿ ಬಂತು ಅಂತಲ್ಲ. ಹಳ್ಳಿಯ ನಿಜವಾದ ಆರ್ಥಿಕ ಅಭಿವೃದ್ಧಿ ಸಾಧಿಸುವುದು. ಅದಕ್ಕೆ ಬೇಕಾದ ವಿವಿಧ ಕಾರ್ಯಗಳನ್ನು ಮಾಡುವುದು. ಇದು ಬೆಳೆಗಾರರಿಂದ ನೇರ ಬಳಕೆದಾರರಿಗೆ ಎಂಬ ತತ್ವ ಆಧರಿಸಿದೆ. ಬೆಳೆಗಾರರೇ ಅಗತ್ಯ ಮೌಲ್ಯವರ್ಧನೆ ಕಾರ್ಯ ಮಾಡುತ್ತಾರೆ. ಕೃಷಿಕರಿಗೆ ಅನೇಕ ಮೂಲಗಳಿಂದ ಆದಾಯ ಬರುವಂತೆ ಮಾಡಲಾಗುತ್ತದೆ. ಇಲ್ಲಿ ಕೃಷಿಕರು ತಮ್ಮ ತೋಟ ಹೊಲ ಗದ್ದೆಯ ಒಡೆತನ ಬಿಟ್ಟು ಕೊಡುವಂಥ ಸಂದರ್ಭ ಇರುವುದಿಲ್ಲ. ಬರುವುದಿಲ್ಲ. ಅವರೇ ಮಾಲಿಕರಾಗಿದ್ದುಕೊಂಡು ಅಭಿವೃದ್ಧಿ ಸಾಧಿಸಬಹುದು. ಆಸಕ್ತಿ ಹೊಂದಿರುವ ರೈತರು ಸಂಪರ್ಕಿಸಿದರೆ ಅಗತ್ಯವಿರುವ ಎಲ್ಲ ಮಾಹಿತಿ ನೀಡಲಾಗುವುದು.

ಅಗ್ರಿಕಲ್ಚರ್‌ ಇಂಡಿಯಾ: ನೀವು ಬೇರೆಬೇರೆ ದೇಶಗಳಲ್ಲಿ ನಡೆಯುವ ಕೃಷಿ ಯಂತ್ರೋಪಕರಣ ಮೇಳಗಳನ್ನು ನೋಡುತ್ತಿದ್ದೀರಿ. ಯಾವ ಯಾವ ದೇಶದಲ್ಲಿ ಕೃಷಿ ಯಂತ್ರೋಪಕರಣಗಳ ಸಮರ್ಥ ಹಾಗೂ ಗರಿಷ್ಠ ಬಳಕೆ ಮಾಡಲಾಗುತ್ತಿದೆ ?

ಎಸ್.ಎ. ವಾಸುದೇವಮೂರ್ತಿ: ಇಸ್ರೇಲ್‌ ಮತ್ತು ಚೀನಾದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಸಮರ್ಥವಾಗಿ ಹಾಗೂ ಗರಿಷ್ಠ ಮಟ್ಟದಲ್ಲಿ ಬಳಕೆ ಮಾಡಲಾಗುತ್ತಿದೆ. ಇಸ್ರೇಲಿನಲ್ಲಿ ವರ್ಷಕ್ಕೆ ಆರೇಳು ಇಂಚು ಮಳೆ ಬಂದರೆ ಅದೇ ಹೆಚ್ಚು. ಆದರೆ ಅವರು ಕೃಷಿಯಲ್ಲಿ ಅಮೋಘ ಎನ್ನುವಂಥ ಸಾಧನೆ ಮಾಡಿದ್ದಾರೆ. ಅವರು ಮರಳುಗಾಡಿನಲ್ಲಿ ಕೃಷಿ ಮಾಡಿ ಅತೀ ಹೆಚ್ಚು ಪ್ರಮಾಣದಲ್ಲಿ ಯುರೋಪ್‌ ದೇಶಗಳಿಗೆ ಹಣ್ಣುಹಂಪಲು, ತರಕಾರಿಗಳನ್ನು ಸರಬರಾಜು ಮಾಡುತ್ತಾರೆ.  ಇದಕ್ಕಾಗಿ ತಂತ್ರಜ್ಞಾನದ ಗರಿಷ್ಠ ಬಳಕೆ ಮಾಡುತ್ತಿದ್ದಾರೆ. ಪ್ರತಿಯೊಂದು ಸಸ್ಯಕ್ಕೂ ಎಷ್ಟು ಪ್ರಮಾಣದ ನೀರು, ಪೋಷಕಾಂಶ ಬೇಕು ಎಂಬುದನ್ನು ಲೆಕ್ಕ ಹಾಕಿ ಕೊಡುತ್ತಾರೆ. ಸಾಧ್ಯವಾದಷ್ಟೂ ಮಟ್ಟಿಗೆ ಕಳೆ ಬೆಳೆಯದಂತೆ ಮಾಡುತ್ತಾರೆ. ಇದಲ್ಲದೇ ಗ್ರೀನ್‌ ಹೌಸ್‌, ನೆಟ್‌ ಹೌಸ್‌ ಪಾಲಿಹೌಸಿನಲ್ಲಿಯೂ ಉತ್ತಮ ತಂತ್ರಜ್ಞಾನ ಬಳಕೆ ಮಾಡುತ್ತಿದ್ದಾರೆ. ಸಾಮಾನ್ಯಕ್ಕಿಂತ ಅಧಿಕ ಇಳುವರಿ ಪಡೆಯುತ್ತಾರೆ.

ಚೀನಾದಲ್ಲಿ ನಾನು ಸಂಚರಿಸುವಾಗ  ನೂರು, ಇನ್ನೂರು, ಮುನ್ನೂರು ಎಕರೆಗಳಲ್ಲಿ ಹರಡಿಕೊಂಡ ಗ್ರೀನ್‌ ಹೌಸ್‌ ಗಳನ್ನು ನೋಡಿದ್ದೇನೆ. ಇದನ್ನು ಅಗ್ಗದಲ್ಲಿ  ನಿರ್ಮಿಸಿ ಗುಣಮಟ್ಟದ ಕೃಷಿ ಉತ್ಪನ್ನಗಳನ್ನು ಪಡೆಯುವುದು ಹೇಗೆ ಎಂಬುದಕ್ಕೆ ಅವರು ಮಾದರಿಯಾಗಿದ್ದಾರೆ.

ಅಗ್ರಿಕಲ್ಚರ್‌ ಇಂಡಿಯಾ: ಭಾರತದ ಕೃಷಿಯಲ್ಲಿ ಭರವಸೆ ಇಡಬಹುದೇ ?

ಎಸ್.ಎ. ವಾಸುದೇವಮೂರ್ತಿ: ಯಾವುದೇ ಕ್ಷೇತ್ರವಾಗಿರಲಿ ಅದು ಲಾಭದಾಯಕವಾಗಿದ್ದರೆ ಮಾತ್ರ ಜನತೆ ಅದರಲ್ಲಿ ಮುಂದುವರಿಯುತ್ತಾರೆ. ಕೃಷಿಯೂ ಇದಕ್ಕೆ ಹೊರತಲ್ಲ. ಇದು ಲಾಭದಾಯಕವಲ್ಲ ಎಂದು ಭಾವಿಸಿ ಅನೇಕರು ಅದರಿಂದ ವಿಮುಖರಾಗುತ್ತಿದ್ದಾರೆ. ಇನ್ನೊಂದು ಹಿಡುವಳಿಗಳು ಅಂದರೆ ಮಾಲೀಕತ್ವ ಹೊಂದಿರುವ ಜಮೀನಿನ ವಿಸ್ತೀರ್ಣ ನಾನಾ ಕಾರಣಗಳಿಂದ ಚಿಕ್ಕದಾಗುತ್ತಿರುವುದು. ಇಂಥ ಸಂದರ್ಭದಲ್ಲಿ ಹಳ್ಳಿಯಲ್ಲಿ ನೆಲೆಸುವವರಿಗೆ ಬೇರೆಬೇರೆ ವಿಭಾಗಗಳಿಂದ ಉತ್ತಮ ಆದಾಯ ಬರುವ ಹಾಗೆ ಯೋಜನೆ ರೂಪಿಸಬೇಕು. ಹೀಗೆ ಮಾಡಿದಾಗ ಮಾತ್ರ ರೈತರ ಮಕ್ಕಳು ಅಲ್ಲಿ ಉಳಿಯುತ್ತಾರೆ. ಅವರಿಗೆ ಅಲ್ಲಿಯೇ ಉದ್ಯೋಗಗಳು ಸಿಗುತ್ತವೆ. ಕೃಷಿಜೀವನದಲ್ಲಿ ನಂಬಿಕೆ ಬರುತ್ತದೆ. ಭರವಸೆ ದೊರೆಯುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 080 2698 5100

LEAVE A REPLY

Please enter your comment!
Please enter your name here