ಚಿತ್ರ-ಲೇಖನ: ಕುಮಾರ ರೈತ

ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ರೋಗಿಯ ಸಾವು – ಬದುಕಿನ ಪ್ರಶ್ನೆ. ವೈದ್ಯರು-ನರ್ಸ್ಗಳು ಶ್ರಮಿಸುತ್ತಿದ್ದಾರೆ. ಇವರಲ್ಲಿಯೂ ಉದ್ವೇಗವಿದೆ. ಹೊರಗಡೆ ಇರುವ ಬಂಧುಗಳಲ್ಲಿ ಆತಂಕ-ಚಡಪಡಿಕೆ. ಥಟ್ಟನೇ ವಿದ್ಯುತ್ ಪೂರೈಕೆ ನಿಂತಿತು. ಜನರೇಟರ್ ತಕ್ಷಣ ಆನ್ ಆಗಬೇಕಿತ್ತು. ಆಗಲಿಲ್ಲ. ಬಂಧುಗಳ ರೋದನ. ಕರೆಂಟ್ ಹೋಗಿದೆ. ಜೀವ ಉಳಿಯುವುದೇ ? ಯಕ್ಷಪ್ರಶ್ನೆ. ತಕ್ಷಣ ನರ್ಸವೊಬ್ಬರು ಓಡಿ ಹೋಗಿ ಪಕ್ಕದಲ್ಲೇ ಇದ್ದ ಕೋಣೆಯಿಂದ ಒಂದೆರಡು ಟಾರ್ಚ್ ತಂದರು. ಅದರ ಬೆಳಕಿನಲ್ಲಿಯೇ ಶಸ್ತ್ರಚಿಕಿತ್ಸೆ ಯಶಸ್ವಿ. ವೈದ್ಯರು ಈ ವಿಷಯ ಹೇಳಿದಾಕ್ಷಣ ಸಮೀಪ‍ದ ಬಂಧುಗಳ ಮೊಗದಲ್ಲಿ ಮೂಡಿದ ಸಮಾಧಾನದ ಭಾವ.

ಇದು ತಮಿಳುನಾಡು ರಾಜ್ಯದ ಧರ್ಮಪುರಿ-ಸೇಲಂ ಜಿಲ್ಲೆಗಳಿಂದ 50 ಕಿಲೋಮೀಟರಿಗೂ ಹೆಚ್ಚು ದೂರವಿರುವ ಸಿತ್ತಿಲಿಂಗಿ ಗ್ರಾಮದಲ್ಲಿರುವ ಬುಡಕಟ್ಟು ಸಮುದಾಯಗಳ ಆರೋಗ್ಯ ಕ್ಷೇಮ ಆಸ್ಪತ್ರೆ(Tribal Health Initiative)ಯಲ್ಲಿದ್ದ ಸ್ಥಿತಿ. ಸಣ್ಣದೊಂದು ಚಿಕಿತ್ಸೆಗೂ ಒಂದೆರಡು ತಾಸು ಪಯಣಿಸಬೇಕಾದ, ಸಮರ್ಪಕ ರಸ್ತೆ ಇರದ, ಬೆಟ್ಟಗಳ ಪ್ರದೇಶದ ಕಾಡಿನ ಬುಡಕಟ್ಟು ಜನರೇ ಇರುವ, ವಾಹನಗಳ ಸೌಕರ್ಯವೇ ವಿರಳವಾಗಿದ್ದ ಪ್ರದೇಶದಲ್ಲಿ ವೈದ್ಯ ದಂಪತಿ ರೇಗಿ ಜಾರ್ಜ್ ಮತ್ತು ಲಲಿತಾ ಜಾರ್ಜ್ 1992ರಲ್ಲಿ ಸಣ್ಣದೊಂದು ಆಸ್ಪತ್ರೆ ಸ್ಥಾಪಿಸಿದರು. ಇವರ ನಿರಂತರ ಪರಿಶ್ರಮದಿಂದ ಇದು ಮಧ್ಯಮ ಪ್ರಮಾಣದ ಸುಸಜ್ಜಿತ ಆಸ್ಪತ್ರೆಯಾಗಿ ಬೆಳೆದಿದೆ.

ಗ್ರಾಮೀಣ ಪ್ರದೇಶದಲ್ಲಿ ನಿರಂತರ ವಿದ್ಯುತ್ ಪೂರೈಕೆ ಇರುವುದಿಲ್ಲ. ಇದ್ದಾಗಲೂ ಬಲ್ಬ್ ಅನ್ನು ಮಂಕಾಗಿ ಬೆಳಗುವಂತೆ ಮಾಡುವಷ್ಟೇ ವಿದ್ಯುತ್ ಪೂರೈಕೆ. ಇಂಥ ಸ್ಥಿತಿಯಲ್ಲಿ ವಿದ್ಯುತ್ ನೆಚ್ಚಿ ತುರ್ತು ಚಿಕಿತ್ಸೆ ಮಾಡಲು ಸಾಧ್ಯವೇ ? ಇದರಿಂದಾಗಿ ಜನರೇಟರ್ ಅವಲಂಬಿಸಬೇಕಾದ, ದಿನದ 24 ತಾಸು ಅದನ್ನು ಚಾಲನೆ ಇಡಬೇಕಾದ ಪರಿಸ್ಥಿತಿ.

ವೈದ್ಯ ದಂಪತಿ ರೇಗಿಜಾರ್ಜ್, ಲಲಿತಾ ಜಾರ್ಜ್

ಕಾಡಿನ ಮಧ್ಯೆ ದೊರೆಯುವ ಪರಿಶುದ್ಧ ಗಾಳಿಯನ್ನೂ ಡೀಸೆಲ್ ಜನರೇಟರ್ ಹೊಗೆ ಮಾಲಿನ್ಯಗೊಳಿಸುತ್ತಿತ್ತು. ಸಾಲದೆಂಬಂತೆ ಆಗಾಗ ಸ್ಥಗಿತವಾಗುವುದು ಬೇರೆ. ಇದರಿಂದ ವೈದ್ಯ ದಂಪತಿ ಬೇಸರಗೊಂಡಿದ್ದರು. ಇದಕ್ಕೆ ಪರಿಹಾರ ಹುಡುಕುತ್ತಿದ್ದ ಅವರು ಸೆಲ್ಕೊ ಸಂಸ್ಥೆ ಸಂಪರ್ಕಿಸಿದರು. ಇಲ್ಲಿಯ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೈನಂದಿನ ಅವಶ್ಯಕತೆಗಳನ್ನು ಅರಿತುಕೊಂಡರು. ಹಿಂದಿರುಗಿ ತುರ್ತು ಅವಶ್ಯಕತೆಗಳಿಗೆ ತಕ್ಕಂತೆ, ದಿನವೀಡಿ ವಿದ್ಯುತ್ ಪೂರೈಸುವ ಸಾಮರ್ಥ್ಯದ ಸೌರಶಕ್ತಿ ಆಧಾರಿತ ಘಟಕಗಳನ್ನು ಅಭಿವೃದ್ಧಿಪಡಿಸಿದರು. ತಾವೇ ತಂದು ಅಳವಡಿಸಿದರು.

ಅಂದಿನಿಂದ ಟಾರ್ಚ್ ಹಿಡಿದು ಶಸ್ತ್ರಚಿಕಿತ್ಸೆ ನಡೆಸಬೇಕಾದ ಅವಶ್ಯಕತೆ ಉದ್ಬವಿಸಿಲ್ಲ. ಶಸ್ತ್ರಚಿಕಿತ್ಸಾ ಕೊಠಡಿ ಸಂಪೂರ್ಣ ಸೌರಶಕ್ತಿಯಿಂದ ನಡೆಯುತ್ತಿದೆ. ತುರ್ತು ಚಿಕಿತ್ಸೆಗಾಗಿ ಔಷಧ ಇರಿಸುವ ರಿಫ್ರಿಜೇಟರ್, ಶಸ್ತ್ರಚಿಕಿತ್ಸಾ ಪರಿಕರಗಳನ್ನು ರೋಗಮುಕ್ತಗೊಳಿಸುವ ಘಟಕ, ಹೆರಿಗೆ ಮಾಡಿಸುವ ಘಟಕಗಳು ಸೌರಶಕ್ತಿ ವ್ಯವಸ್ಥೆಯಿಂದಲೇ ನಡೆಯುತ್ತಿವೆ.

ಮಾಲಿನ್ಯಮುಕ್ತ ಜೊತೆಗೆ ತಗ್ಗಿದ ಖರ್ಚು: ಬುಡಕಟ್ಟು ಸಮುದಾಯಗಳ ಆರೋಗ್ಯ ಕ್ಷೇಮ ಆಸ್ಪತ್ರೆಯಲ್ಲಿ ಬಹುತೇಕ ಚಿಕಿತ್ಸೆಗಳು ಉಚಿತ. ಶಸ್ತ್ರಚಿಕಿತ್ಸೆ, ಹೆರಿಗೆ ಇತ್ಯಾದಿಗಳಿಗೆ ನಾಮಮಾತ್ರದ ಶುಲ್ಕ ವಿಧಿಸುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಡೀಸೆಲ್ ಖರೀದಿ ಸಲುವಾಗಿ ವರ್ಷಕ್ಕೆ ಒಂದೂವರೆ ಲಕ್ಷ ರೂಪಾಯಿ ವೆಚ್ಚವಾದರೆ ಭರಿಸುವುದಾದರೂ ಹೇಗೆ. ಇಂಥ ಪರಿಸ್ಥಿತಿಯನ್ನು ಸೌರಶಕ್ತಿ ಘಟಕಗಳು ನಿವಾರಿಸಿವೆ. ಇವುಗಳನ್ನು ಸ್ಥಾಪಿಸಲು ಆಸ್ಪತ್ರೆ ಆಡಳಿತ ಮಂಡಳಿಗೆ ತಗುಲಿದ ವೆಚ್ಚ 8.5 ಲಕ್ಷ (ಎಂಟೂವರೆ ವರ್ಷ) ಡಿಸೇಲ್ ಖರೀದಿಗಾಗಿ ವ್ಯಯಿಸುತ್ತಿದ್ದ ಹಣ ನಿಂತಿರುವುದು, ವಿದ್ಯುತ್ ಬಿಲ್ ಗಮನಾರ್ಹವಾಗಿ ತಗ್ಗಿರುವುದರಿಂದ ಗಣನೀಯವಾಗಿ ಹಣ ಉಳಿತಾಯವಾಗುತ್ತಿದೆ.

ಸಾವಯವ ಕೃಷಿ ಜೊತೆಗೆ ಸೌರಶಕ್ತಿ ತಂದ ಖುಷಿ:  ಕಲ್ರಾಯನ್, ಸಿತೇರಿ ಬೆಟ್ಟಶ್ರೇಣಿಗಳ ಕಾಡುಗಳ ನಡುವಿನ ಹಳ್ಳಿಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರ ಆರ್ಥಿಕ ಪರಿಸ್ಥಿತಿಯನ್ನೂ ಉತ್ತಮಗೊಳಿಸಲು ವೈದ್ಯ ದಂಪತಿ ನಿರ್ಧರಿಸಿದರು. ಅಲ್ಲಿನ ಹಳ್ಳಿಗಳಲ್ಲಿ ಮೊದಲಿನಿಂದಲೂ ಸಾವಯವ ಕೃಷಿ ಚಾಲ್ತಿಯಲ್ಲಿತ್ತು. ಮಧ್ಯೆ ರಾಸಾಯನಿಕ ಕೃಷಿಪದ್ಧತಿಯೂ ನುಸುಳಿತ್ತು. ಇದರ ದುಷ್ಪರಿಣಾಮಗಳನ್ನು ಡಾ. ರೇಗಿ ಜಾರ್ಜ್, ಡಾ. ಲಲಿತಾ ಜಾರ್ಜ್ ಮತ್ತಿವರ ಜೊತೆಗೆ ದುಡಿಯುತ್ತಿರುವ ಸಿಬ್ಬಂದಿ ಮನವರಿಕೆ ಮಾಡಿಕೊಟ್ಟರು. ಇಡೀ ಪ್ರದೇಶ ಸಾವಯವಮಯವಾಗುವಂತೆ ಮಾಡಿದರು. ಇದಿಷ್ಟೆ ಅಲ್ಲ; ಹಳ್ಳಿಗರು ಬೆಳೆದ ಬೆಳೆಗಳಿಗೆ ಉತ್ತಮ ಮೌಲ್ಯ ಒದಗಿಸಲು ನಿರ್ಧರಿಸಿದರು. ಇದಕ್ಕಾಗಿ ಸಿತ್ತಿಲಿಂಗಿ ಸಾವಯವ ಕೃಷಿಕರ ಸಂಘ (Sofa) ಸ್ಥಾಪಿಸಿದರು.ಇಲ್ಲಿನ ಆಡಳಿತಾತ್ಮಕ ನಿರ್ಧಾರಗಳನ್ನು ಕೃಷಿಕರೇ ತೆಗೆದುಕೊಳ್ಳುತ್ತಾರೆ. ಅಗತ್ಯ ಮಾರ್ಗದರ್ಶನವನ್ನು ವೈದ್ಯ ದಂಪತಿ ಮತ್ತವರ ಜೊತೆಗಿರುವ ಸಿಬ್ಬಂದಿ ನೀಡುತ್ತಾರೆ.

ಕೃಷಿಕರು ಶ್ರಮಪಟ್ಟು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸದಾ ಉತ್ತಮ ಬೆಲೆ ದೊರಕುವುದಿಲ್ಲ. ಇದನ್ನು ಮನಗಂಡಿದ್ದ ವೈದ್ಯದಂಪತಿ ಈ ಬೆಳೆಗಳನ್ನು ಮೌಲ್ಯವರ್ಧನೆ ಮಾಡಲು, ಕೃಷಿಕರಿಗೆ ಉತ್ತಮ ಬೆಲೆ ದೊರಕಿಸಲು ನಿರ್ಧರಿಸಿದ್ದರು. ಇದರಿಂದ ವಿವಿಧ ಬೆಳೆಗಳ ಮೌಲ್ಯವರ್ಧನಾ ಕೇಂದ್ರ ಸ್ಥಾಪನೆಯಾಯಿತು. ಮತ್ತೆ ಇಲ್ಲಿಯೂ ವಿದ್ಯುತ್ ಸಮಸ್ಯೆ. ಯಂತ್ರಗಳನ್ನು ಚಾಲನೆ ಮಾಡಲು ಡಿಸೇಲ್ ಮೊರೆ ಹೋಗಬೇಕಾದ ಸ್ಥಿತಿ. ಮೂಗಿಗಿಂತ ಮೂಗುತಿ ಭಾರವೆನ್ನುವ ಹಾಗೆ ಲಾಭ ಬರುವುದಿರಲಿ, ಖರ್ಚೇ ಹೆಚ್ಚಾಗಿತ್ತು. ಈ ಸ್ಥಿತಿಗೂ ಸೆಲ್ಕೋ ಪರಿಹಾರ ಒದಗಿಸಿತು.

4.5 ಕಿಲೋವ್ಯಾಟ್ ಸಾಮರ್ಥ್ಯದ ಸೌರಶಕ್ತಿ ಘಟಕ ಸ್ಥಾಪಿಸಿತು. ಇದರ ಜೊತೆಗೆ 5 ತಾಸಿಗೂ ಹೆಚ್ಚುಕಾಲ ಸೌರಶಕ್ತಿ ಹಿಡಿದಿಟ್ಟುಕೊಂಡು ತುರ್ತು ಸಂದರ್ಭಗಳಲ್ಲಿ ಪೂರೈಸುವ ಬ್ಯಾಟರಿ ಘಟಕಗಳನ್ನೂ ಸ್ಥಾಪನೆಯಾಯಿತು. ಇದರ ಪರಿಣಾಮವಾಗಿ ಇಂದು ಸಿತ್ತಿಲಿಂಗಿ ಸಾವಯವ ಕೃಷಿಕರ ಸಂಘದ ಉಸ್ತುವಾರಿಯಲ್ಲಿರುವ ಮೌಲ್ಯವರ್ಧನಾ ಘಟಕದ ಎಲ್ಲ ಯಂತ್ರಗಳು ಸೌರಶಕ್ತಿಯಿಂದಲೇ ಚಾಲನೆಗೊಳ್ಳುತ್ತಿವೆ. ಇಲ್ಲಿ ಫ್ಲೋರ್ ಮಿಲ್ಲಿನಿಂದ ಆರಂಭಿಸಿ ಪ್ಯಾಡಿ ಡಿಹಸ್ಕಿಂಗ್, ಮಿಲ್ಲೆಟ್ ಪೌಡರಿಂಗ್, ಮಸಾಲಾ ಪೌಡರಿಂಗ್, ಗ್ರೇಡರ್/ಡಿಸ್ಟೋನರ್, ಡೊ ಮಿಕ್ಸರ್, ರೋಟಿ ಮೇಕರ್, ಹಪ್ಪಳ ಮೇಕರ್, ಬಿಸ್ಕೇಟ್ ತಯಾರಿಕ ಘಟಕ, ತೂಕ ಮತ್ತು ಪ್ಯಾಕಿಂಗ್ ಮೆಶೀನ್, ಸೋಪ್ ಮೇಕಿಂಗ್ ಘಟಕ ಇತ್ಯಾದಿ  ಅಡೆತಡೆಯಿಲ್ಲದೇ ಚಾಲನೆಗೊಳ್ಳುತ್ತಿವೆ.

ಲಕ್ಷಾಂತರ ರೂ ಉಳಿತಾಯ: ಈ ಎಲ್ಲ ಮೌಲ್ಯವರ್ಧನಾ ಘಟಕಗಳನ್ನು ಡೀಸೆಲ್ ಬಳಸಿ ಚಾಲನೆ ಮಾಡಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿತ್ತು. ಆ ಹಣವೆಲ್ಲವೂ ಉಳಿತಾಯವಾಗುತ್ತಿದೆ. ಅದು ಸಂಘದಲ್ಲಿರುವ 500ಕ್ಕೂ ಹೆಚ್ಚು ಸಣ್ಣಸಣ್ಣ ಕೃಷಿಕರಿಗೆ ಅವರು ಬೆಳೆದ ಬೆಳೆಯ ಹಣದೊಂದಿಗೆ ಹಂಚಿಕೆಯಾಗುತ್ತಿದೆ. ಇಲ್ಲಿನ ಮೌಲ್ಯವರ್ಧನಾ ವಸ್ತುಗಳನ್ನು ಮಾರುವುದಕ್ಕಾಗಿಯೇ ಸಿತ್ತಿಲಿಂಗಿಯಲ್ಲಿಯೇ ಮಾರಾಟ ಕೇಂದ್ರ ತೆರೆಯಲಾಗಿದೆ. ಉತ್ತಮ ಗುಣಮಟ್ಟದ ಕಾರಣ ಇಲ್ಲಿನ ವಸ್ತುಗಳಿಗೆ ದೂರದ ಚೆನ್ನೈ, ಬೆಂಗಳೂರಿನ ಸಾವಯವ ಉತ್ಪನ್ನ ಮಾರಾಟ ಸಂಸ್ಥೆಗಳಿಂದ ಅಪಾರ ಬೇಡಿಕೆಯಿದೆ.

ಹೊಲಿಗೆ ಯಂತ್ರ: ಕೃಷಿ ಉತ್ಪನ್ನ ಮೌಲ್ಯವರ್ಧನಾ ಘಟಕದ ಆವರಣದಲ್ಲಿಯೇ ಬುಡಕಟ್ಟು ಮಹಿಳೆಯರೇ ನಡೆಸುವ ಹೊಲಿಗೆ ಕೇಂದ್ರಗಳಿವೆ. ವೈದ್ಯ ದಂಪತಿಯೇ ಆಸಕ್ತಿ ವಹಿಸಿ ಇವರಿಗೆ ಹೊಲಿಗೆ ತರಬೇತಿಯನ್ನು ಕೊಡಿಸಿದ್ದಾರೆ. ಇಲ್ಲಿ ಬೇರೆಬೇರೆ ಸಂಸ್ಥೆ, ಆಸ್ಪತ್ರೆಗಳಿಂದ ಮುಂಚಿತವಾಗಿ ಬೇಡಿಕೆಗಳನ್ನು ಸ್ವೀಕರಿಸಿ ಉಡುಪುಗಳನ್ನು ಹೊಲೆದು ಕೊಡಲಾಗುತ್ತದೆ. ಗುಣಮಟ್ಟದ ಹತ್ತಿ, ಸಹಜ ಬಣ್ಣ ಬಳಸಿ ಹೊಲೆದ ಉಡುಪುಗಳಿಗೆ ಸಾಕಷ್ಟು ಬೇಡಿಕೆಯೂ ಇದೆ. ವಿಶೇಷವೆಂದರೆ ಇಲ್ಲಿರುವ ಅತ್ಯಾಧುನಿಕ ಹೊಲಿಗೆ ಯಂತ್ರಗಳು ಸೌರಶಕ್ತಿಯಿಂದಲೇ ಚಾಲನೆಗೊಳ್ಳುತ್ತಿರುವುದು. ಇದಕ್ಕೆ ಬೇಕಾದ ವ್ಯವಸ್ಥೆಯನ್ನೂ ಸೆಲ್ಕೊ ವಿನ್ಯಾಸಗೊಳಿಸಿದೆ.

ನಾವು ಮುಖ್ಯವಾಗಿ ಈ ಎಲ್ಲ ಮಾದರಿಗಳಲ್ಲಿಯೂ ಗಮನಿಸಬೇಕಿರುವುದು ಸೌರಶಕ್ತಿ ಆಧಾರಿತ ಯಂತ್ರಗಳನ್ನು ಬಳಸುವುದರ ಮೂಲಕ ಖರ್ಚು ಗಣನೀಯವಾಗಿ ತಗ್ಗಿರುವುದು, ವರ್ಷದಿಂದ ವರ್ಷಕ್ಕೆ ಲಾಭಾಂಶ ಹೆಚ್ಚಳವಾಗುತ್ತಿರುವುದು, ಈ ಎಲ್ಲ ಲಾಭಾಂಶ, ಸಂಘದಲ್ಲಿ ಸದಸ್ಯರಾಗಿರುವ ಬುಡಕಟ್ಟು ಸಮುದಾಯದ ಕೃಷಿಕರು, ಮೌಲ್ಯವರ್ಧನೆ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯರು, ಹೊಲಿಗೆ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯ ಮಹಿಳೆಯರಿಗೆ ಹಂಚಿಕೆಯಾಗುತ್ತಿರುವುದು. ಇದರಿಂದ ಇವರ ಆರ್ಥಿಕ ಪರಿಸ್ಥಿತಿ ಉತ್ತಮಗೊಂಡಿದೆ. ಇವರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುತ್ತಿದೆ. ಇವೆಲ್ಲದರ ಜೊತೆಗೆ ಪೌಷ್ಟಿಕಾಂಶಯುಕ್ತ ಆಹಾರ ದೊರಕುತ್ತಿದೆ. ಆರೋಗ್ಯದಾಯಕ ಬದುಕು ಇವರದಾಗಿದೆ. ಇವೆಲ್ಲದರಿಂದ ಇವರುಗಳ ಮೊಗಗಳಲ್ಲಿ ನೆಮ್ಮದಿಯ ನಗುವಿದೆ. ಈ ನಗು ಚೆಲ್ಲುವ ಬೆಳಕಿಗೆ ಸೆಲ್ಕೊ ವಿನ್ಯಾಸದ ಸೌರಶಕ್ತಿ ಘಟಕಗಳೂ ಕಾರಣವಾಗಿವೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 80737 65665

LEAVE A REPLY

Please enter your comment!
Please enter your name here