“ಸರಿಯಾದ ಆಹಾರವನ್ನು ತೆಗೆದುಕೊಳ್ಳದೇ ಸರಿಯಾದ ಆರೋಗ್ಯ ಪಡೆಯಲಾಗುವುದಿಲ್ಲ, ಸರಿಯಾದ ಆರೋಗ್ಯ ಇಲ್ಲದೆ ಸರಿಯಾದ ಅನಂದ ಪಡೆಯಲಾಗುವುದಿಲ್ಲ”
“ನಮ್ಮ ಆಹಾರವನ್ನು ನಾವೇ ಬೆಳೆಯುವುದು ನಮ್ಮ ಹಣವನ್ನು ನಾವೇ ಮುದ್ರಿಸಿಕೊಂಡ ಹಾಗೆ”
*ಮೇಲಿನ ಇವೆರಡು ಮಾತುಗಳನ್ನು ಗಮನಿಸಿದಾಗ ಆಹಾರ,ಆರೋಗ್ಯ,ಅನಂದ,ಆದಾಯ ಒಂದಕ್ಕೊಂದು ಬೆಸೆದುಕೊಂಡಿದೆ,ಇವೆಲ್ಲವನ್ನೂ ಪ್ರತ್ಯೇಕವಾಗಿ ನೋಡಲಾಗುವುದಿಲ್ಲ ಮತ್ತು ಪ್ರತ್ಯೇಕವಾಗಿ ಅನುಭವಿಸಲು ಬರುವುದಿಲ್ಲ.ಇವೆಲ್ಲಾ ಒಟ್ಟಾರೆಯಾಗಿ ಇದ್ದಾಗ ಮಾತ್ರ ಮಾನಸಿಕ ನೆಮ್ಮದಿ ಮತ್ತು ದೈಹಿಕ ಆರೋಗ್ಯ ಪಡೆಯಲು ಸಾಧ್ಯ.ಇವುಗಳ ಮೂಲ ಮಣ್ಣು,ಅಂದರೆ ನಮ್ಮ ಕೃಷಿ ಭೂಮಿಯಲ್ಲಿ ನಮ್ಮ ಕುಟುಂಬಕ್ಕೆ ಬೇಕಾದ ಆಹಾರವನ್ನು ಸಣ್ಣ ಮಟ್ಟದಲ್ಲಿ ಉತ್ಪಾದನೆ ಮಾಡುವುದರಿಂದ ಉತ್ತಮ ಪೌಷ್ಟಿಕ ಆಹಾರ,ಶುದ್ಧ ಗಾಳಿ ಮತ್ತು ನೀರು,ಉತ್ತಮ ಪರಿಸರ ಕಾಪಾಡಿಕೊಳ್ಳಬಹುದು.
*ಹಾಗಾದರೆ ಒಬ್ಬ ವ್ಯಕ್ತಿಗೆ ಬೇಕಾಗುವ ಮತ್ತು ಒಂದು ಕುಟುಂಬಕ್ಕೆ (ಐದು ಜನರು) ಬೇಕಾಗುವ ಆಹಾರ ಪ್ರಮಾಣ ಹಾಗು ಇದನ್ನು ಬೆಳೆಯಲು ಬೇಕಿರುವ ಕೃಷಿ ಭೂಮಿ ವಿಸ್ತೀರ್ಣ ಎಷ್ಟು ಎಂಬ ಬಗ್ಗೆ ನೋಡೋಣ.ಇದು ಒಂದು ಲೆಕ್ಕಚಾರಕ್ಕೆ ಮಾತ್ರ,ಆಹಾರಕ್ಕೆ ಯಾವುದೇ ರೀತಿಯ ಸಿದ್ದ
ಸೂತ್ರಗಳಿಲ್ಲ.ಆಹಾರ ಕ್ರಮ ಅವರವರ ಇಚ್ಛೆಗೆ ಅನುಗುಣವಾಗಿ ಬದಲಾಗುತ್ತಾ ಹೋಗುತ್ತದೆ.
*ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಪ್ರತಿದಿನದ ಆಹಾರದ ಅವಶ್ಯಕತೆ ಮತ್ತು ಆಹಾರದ ಬಳಕೆ ಪ್ರಮಾಣವನ್ನು ತೆಗೆದುಕೊಂಡು ಹೇಳುವುದಾದರೆ:
1)ಧಾನ್ಯ(ರಾಗಿ, ಜೋಳ, ಅಕ್ಕಿ,ಗೋಧಿ,ಸಿರಿಧಾನ್ಯಗಳು):
250-300 ಗ್ರಾಂ
2)ಬೇಳೆಕಾಳು(ತೊಗರಿ, ಹುರಳಿ, ಉದ್ದು, ಕಡ್ಲೆ, ಅಲಸಂದೆ, ಹೆಸರು, ಇತರೆ):
80-90 ಗ್ರಾಂ
3)ತರಕಾರಿ ಮತ್ತು ಸೊಪ್ಪುಗಳು: (ಈರುಳ್ಳಿ,ಆಲೂಗಡ್ಡೆ, ವಿವಿಧ ತರಕಾರಿ, ಕೊತ್ತಂಬರಿ, ಮೆಂತ್ಯ, ಕರಿಬೇವು, ವಿವಿಧ ಸೊಪ್ಪುಗಳು ):
300 ಗ್ರಾಂ
4)#ಹಣ್ಣುಗಳು:(ಬಾಳೆಹಣ್ಣು, ಸೀಬೆ, ಸಪೋಟ, ದಾಳಿಂಬೆ, ದ್ರಾಕ್ಷಿ, ಇತ್ಯಾದಿ )
100 ಗ್ರಾಂ
5)ಬೆಲ್ಲ :30 ಗ್ರಾಂ
6)ಅಡುಗೆ ಎಣ್ಣೆ(ಕಡ್ಲೆಕಾಯಿ, ಸೂರ್ಯಕಾಂತಿ, ಕುಸುಬೆ, ಕೊಬ್ಬರಿ, ಎಳ್ಳು,ಇತ್ಯಾದಿ)
:30 ಗ್ರಾಂ
*ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು ಬೇಕಾಗುವ ಆಹಾರದ ಪ್ರಮಾಣ:
1)ಧಾನ್ಯ : 08 ಕೆಜಿ
2)ಬೇಳೆಕಾಳು : 2.5 ಕೆಜಿ
3)ತರಕಾರಿ ಮತ್ತು ಸೊಪ್ಪುಗಳು: 09ಕೆಜಿ
4)ಹಣ್ಣುಗಳು: 03 ಕೆಜಿ
5)ಬೆಲ್ಲ: 01 ಕೆಜಿ
6)ಅಡುಗೆ ಎಣ್ಣೆ :01 ಕೆಜಿ
*ಪ್ರತಿ ವ್ಯಕ್ತಿಗೆ ಪ್ರತಿ ವರ್ಷ ಬೇಕಾಗುವ ಆಹಾರದ ಪ್ರಮಾಣ :
1)ಧಾನ್ಯ:100 ಕೆಜಿ
2)ಬೇಳೆಕಾಳು :30 ಕೆಜಿ
3)ತರಕಾರಿ+ಸೊಪ್ಪು:100 ಕೆಜಿ
4)ಹಣ್ಣುಗಳು :40 ಕೆಜಿ
5)ಬೆಲ್ಲ :12 ಕೆಜಿ
6)ಅಡುಗೆ ಎಣ್ಣೆ :12 ಕೆಜಿ
*12 ಕೆಜಿ ಬೆಲ್ಲ ಮಾಡಲು 120 ಕೆಜಿ ಕಬ್ಬು,12 ಕೆಜಿ ಎಣ್ಣೆ ಮಾಡಲು 30 ಕೆಜಿ ಕಡ್ಲೆಕಾಯಿ ಬೀಜ ಅಥವಾ 24 ಕೆಜಿ ಕೊಬ್ಬರಿ ಬೆಳೆದುಕೊಳ್ಳುವುದು.ಒಂದು ತೆಂಗಿನಮರದಿಂದ ಬರುವ 100 ತೆಂಗಿನಕಾಯಿಂದ ಸುಮಾರು 15-20 ಕೆಜಿ ಒಣಕೊಬ್ಬರಿ ದೊರೆಯುತ್ತದೆ,ಒಬ್ಬ ವ್ಯಕ್ತಿಗೆ ಎಣ್ಣೆ ಮತ್ತು ತೆಂಗಿನಕಾಯಿ ಬಳಕೆಗೆ 02 ತೆಂಗಿನಮರ ಅವಶ್ಯಕತೆಯಿದೆ.
*ಒಬ್ಬ ವ್ಯಕ್ತಿಗೆ ಪ್ರತಿ ವರ್ಷ ಬೇಕಾಗುವ ಧವಸ -ಧಾನ್ಯ -ತರಕಾರಿ -ಸೊಪ್ಪು-ಹಣ್ಣು ಇವುಗಳ ಪ್ರಮಾಣ ಸುಮಾರು 400 ಕೆಜಿ.ಇವುಗಳ ಮೌಲ್ಯವನ್ನು ವೈಜ್ಞಾನಿಕ ರೀತಿಯಲ್ಲಿ ನೋಡಿದಾಗ:
(ರೂಪಾಯಿಗಳಲ್ಲಿ)
1)ಧಾನ್ಯ:
100 ಕೆಜಿ*75 ರೂ =7500/
2)ಬೇಳೆಕಾಳು :
30 ಕೆಜಿ *100 ರೂ =3000/
3)ತರಕಾರಿ+ಸೊಪ್ಪು:
100 ಕೆಜಿ *50 ರೂ =5000/
4)ಬೆಲ್ಲ:
12 ಕೆಜಿ *100 ರೂ =1200/
5) ಅಡುಗೆ ಎಣ್ಣೆ :
12 ಕೆಜಿ *400 ರೂ =4800/
6)ಹಣ್ಣುಗಳು:
40 ಕೆಜಿ *100 ರೂ =4000/
7)ಇತರೆ( ತೆಂಗಿನ ಕಾಯಿ, ಹೂವು,ಮಸಾಲೆ/ಸಾಂಬಾರ್ ಪದಾರ್ಥ,ಔಷಧಿಬೆಳೆ,
ಗೆಡ್ಡೆ-ಗೆಣಸು,ಹತ್ತಿ, ಕಟ್ಟಿಗೆ,ಇತ್ಯಾದಿ):4500/
*ಹೀಗೆ ಒಟ್ಟು ಒಬ್ಬ ವ್ಯಕ್ತಿಗೆ ಪ್ರತಿ ವರ್ಷ ಬಳಸುವ ಒಟ್ಟಾರೆ ಆಹಾರದ ಪ್ರಮಾಣ ಸುಮಾರು 400 ಕೆಜಿ ಮತ್ತು ಇದರ ಮೌಲ್ಯ ರೂ 30 ಸಾವಿರ.ಈ ರೀತಿಯಾಗಿ ನಾವು 05 ಜನರ ಕುಟುಂಬಕ್ಕೆ ಬೇಕಾಗುವ ಆಹಾರ ಪ್ರಮಾಣ:
1)ಧಾನ್ಯ :500 ಕೆಜಿ
2)ಬೇಳೆಕಾಳು :150 ಕೆಜಿ,
3)ತರಕಾರಿ+ಸೊಪ್ಪು:500 ಕೆಜಿ,
4)ಬೆಲ್ಲ :60 ಕೆಜಿ(ಕಬ್ಬು :600 ಕೆಜಿ )
5)ಕಡ್ಲೆಕಾಯಿ ಎಣ್ಣೆ:60 ಕೆಜಿ (ಕಡ್ಲೆಬೀಜ :150 ಕೆಜಿ) 6)ಹಣ್ಣುಗಳು:200 ಕೆಜಿ
*ಹೀಗೆ 10 ಗುಂಟೆ ಕೃಷಿ ಭೂಮಿಯಲ್ಲಿ ಒಟ್ಟು ಆಹಾರದ ಪ್ರಮಾಣ 02 ಟನ್ ಮತ್ತು ಇದರ ಮೌಲ್ಯ:1.5 ಲಕ್ಷ ರೂಪಾಯಿಗಳಾಗುತ್ತದೆ.ಮೌಲ್ಯವೆಂದರೆ ಹಣವೊಂದೇ ಅಲ್ಲ!
*10 ಗುಂಟೆಯಲ್ಲಿ ಏಕಬೆಳೆ ಬೆಳೆದಾಗ ಅದರಲ್ಲಿನ ಇಳುವರಿ ಮತ್ತು ಆದಾಯವನ್ನು ಕೆಲವು ಉದಾಹರಣೆಯೊಂದಿಗೆ ನೋಡೋಣ:
1)#ಕಬ್ಬು(ಎಕರೆಗೆ 60 ಟನ್ ಇಳುವರಿ ) :15 ಟನ್
2)ಭತ್ತ ( ವರ್ಷಕ್ಕೆ 02 ಬೆಳೆ, ಎಕರೆಗೆ 02 ಟನ್ ಇಳುವರಿ ):01 ಟನ್
3)ಹೈಬ್ರಿಡ್ ಜೋಳ( ವರ್ಷಕ್ಕೆ 02 ಬೆಳೆ,03 ಟನ್ ಇಳುವರಿ ):1.5 ಟನ್
4)ಬಾಳೆ (250 ಸಂಖ್ಯೆ, ಎಕರೆಗೆ 08 ಟನ್ ಇಳುವರಿ ):02 ಟನ್
ಈ ಪ್ರಕಾರ ಕಬ್ಬು, ಭತ್ತ,ಜೋಳ,ಬಾಳೆಯಿಂದ ಕ್ರಮವಾಗಿ 40 ಸಾವಿರ ರೂ,15 ಸಾವಿರ ರೂ,30 ಸಾವಿರ ರೂ,50 ಸಾವಿರ ರೂ ಗಳಿಸುವ ಸಾಧ್ಯತೆಯಿದ್ದರು ಕೂಡ ಇದನ್ನು ಏಕಬೆಳೆ ರೀತಿ ನಿರಂತರವಾಗಿ ಬೆಳೆದು ಆದಾಯ ಪಡೆಯಲಾಗುವುದಿಲ್ಲ.ಜಮೀನಿಂದ ಹೋಗುವ ಪದಾರ್ಥದ ಪ್ರಮಾಣ ಕಡಿಮೆ ಇರಬೇಕು,ಬರುವ ಮೌಲ್ಯ ಜಾಸ್ತಿಯಿರಬೇಕು.ಈ ರೀತಿಯಾಗಿ ಬೆಳೆ ಆಯೋಜನೆ ಮಾಡಬೇಕು.
*05 ಜನರ ಕುಟುಂಬಕ್ಕೆ ಬೇಕಾಗುವ ಕೃಷಿ ಭೂಮಿ ಪ್ರಮಾಣ ಗರಿಷ್ಠ :10 ಗುಂಟೆ.
01 ಗುಂಟೆ ಪ್ರದೇಶ ಅಂದರೆ 33’X33’ಅಡಿಗಳು =1089 ಚದರಡಿ.
10 ಗುಂಟೆ ಪ್ರದೇಶ ಅಂದರೆ 10 ಸಾವಿರ ಚದರಡಿ (100’X100′).
ಮೇಲಿನ ಆಹಾರ ಬೇಡಿಕೆ ಪೂರೈಸಿಕೊಳ್ಳಲು 10 ಗುಂಟೆ ಪ್ರದೇಶವನ್ನು ವಿಭಾಗ ಮಾಡಿಕೊಂಡು,ಪ್ರತಿ ವಿಭಾಗದಲ್ಲಿ ಧಾನ್ಯ,ಬೇಳೆಕಾಳು,ಎಣ್ಣೆಕಾಳು,ತರಕಾರಿ ಈ ರೀತಿಯಾಗಿ ಬೆಳೆ ಪರಿವರ್ತನೆ ಮಾಡಿಕೊಂಡು ಪ್ರತಿ ಹಂಗಾಮಿನಲ್ಲಿ(04 ತಿಂಗಳಿಗೊಮ್ಮೆ )ಬೆಳೆ ಬೆಳೆಯುವುದು.ಧವಸ -ಧಾನ್ಯ -ಬೇಳೆಕಾಳು -ಎಣ್ಣೆಕಾಳು -ತರಕಾರಿ ಇವುಗಳ ಗರಿಷ್ಠ ಅವಧಿ 03 ರಿಂದ 04 ತಿಂಗಳಾಗಿರುತ್ತದೆ.
# 04 ಗುಂಟೆ ಧಾನ್ಯ,#02 ಗುಂಟೆ ಹಣ್ಣುಗಳು, #02 ಗುಂಟೆ ತರಕಾರಿ +ಸೊಪ್ಪು,#01 ಗುಂಟೆ ಬೇಳೆಕಾಳು,#01 ಗುಂಟೆ ಎಣ್ಣೆಕಾಳು ಬೆಳೆಯುವುದು.
*ಹದಿನೈದು ದಿನಕೊಮ್ಮೆ ಸೊಪ್ಪು,ತಿಂಗಳಿಗೊಮ್ಮೆ ಬೀನ್ಸ್, ಮೂರು ತಿಂಗಳಿಗೊಮ್ಮೆ ಬದನೆ,ಟೊಮೇಟೊ, ಮೆಣಸಿನಕಾಯಿ ಬರುವ ರೀತಿಯಲ್ಲಿ ಹಾಕಬೇಕು,ಈ ರೀತಿಯಾಗಿ ಬೆಳೆಗಳ ಸರಪಣಿಯನ್ನು ಮುಂದುವರಿಸಬೇಕು.ವರ್ಷದಲ್ಲಿ ಮೂರು ತಿಂಗಳು ಹಣ್ಣು ಕೊಡುವ ಬಟರ್ ಫ್ರೂಟ್, ಒಂಬತ್ತು ತಿಂಗಳು ಕೊಡುವ ಸಪೋಟ,ಮೂರು ತಿಂಗಳು ಕೊಡುವ ಮಾವು, ವರ್ಷಪೂರ್ತಿ ಹಣ್ಣು ಕೊಡುವ ಬಾಳೆ,ಪಪ್ಪಾಯ, ಸೀಬೆ ಇವುಗಳ ಜೊತೆಗೆ ದಂಟಿನ ಸೊಪ್ಪು,ಕೊತ್ತಂಬರಿ, ಮೆಂತ್ಯ, ನುಗ್ಗೆ, ಕರಿಬೇವು, ನಿಂಬೆ…… ಹೀಗೆ 10 ಗುಂಟೆಯಲ್ಲಿನ ಕೃಷಿ ಕ್ರಮವನ್ನು ಹೊರಗಿನ ಕೂಲಿ ಕಾರ್ಮಿಕರನ್ನು ಅವಲಂಬನೆ ಮಾಡದೇ ನಿರ್ವಹಿಸಬಹುದು.
ಕಾರ್ಮಿಕರ ಅಭಾವವಿರುವುದರಿಂದ ಈ ಕ್ರಮವನ್ನು ಅನುಸರಿಸುವುದು ಅನಿವಾರ್ಯ ಕೂಡ ಆಗಿದೆ.ಆಕಸ್ಮಿಕವಾಗಿ ಅಕಾಲಿಕ ಮಳೆ,ಕೀಟಭಾದೆ, ರೋಗಭಾದೆ,ಇತ್ಯಾದಿ ಸಮಸ್ಯೆಗಳಿಂದ ಕೆಲವು ಬೆಳೆ ಒಂದು ಹಂಗಾಮಿನಲ್ಲಿ ನಷ್ಟವಾದರೂ ಕೂಡ ಹೆಚ್ಚಿನ ಆರ್ಥಿಕ ನಷ್ಟವಾಗುವುದಿಲ್ಲ.
*ಈ ರೀತಿಯ ಕೃಷಿ ಕ್ರಮ ಅನುಸರಿಸುವುದರಿಂದ ಆಹಾರ ಮತ್ತು ಆಹಾರ ಭದ್ರತೆ ಒದಗಿಸಬಹುದು,ಮಾರುಕಟ್ಟೆ ಮತ್ತು ಬೆಲೆ,ನಿರುದ್ಯೋಗ ಸಮಸ್ಯೆ ಪರಿಹಾರ,ಸಣ್ಣ ಯಂತ್ರಗಳ ಮೂಲಕ ಕೃಷಿ ಮತ್ತು ಮೌಲ್ಯವರ್ಧನೆ,
ಬೀಜ,ಮಣ್ಣು ಮತ್ತು ಪರಿಸರ ಸಂರಕ್ಷಣೆ ಮಾಡುವುದರಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.
*10 ಗುಂಟೆ ಪ್ರದೇಶದಲ್ಲಿ ಯಾವುದೇ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೆ 02 ಟನ್ ಆಹಾರ ಉತ್ಪಾದನೆಯಂತೆ ಪ್ರತಿ ಎಕರೆ ಪ್ರದೇಶದಲ್ಲಿ 08 ಟನ್ ಆಹಾರ ಉತ್ಪಾದನೆಯಿಂದ 20 ಜನರ ಆಹಾರದ ಬೇಡಿಕೆ ಪೂರೈಸಬಹುದು.ಭಾರತ ದೇಶದ 40 ಕೋಟಿ ಎಕರೆ ಕೃಷಿ ಭೂಮಿಯಲ್ಲಿ 800 ಕೋಟಿ ಜನರಿಗೆ ಆಹಾರ ಉತ್ಪಾದನೆ ಮಾಡುವ ಸಾಮರ್ಥ್ಯವಿದೆ. ನೀರಾವರಿ ಸೌಲಭ್ಯವಿಲ್ಲದ ಪ್ರದೇಶದಲ್ಲೂ ಕೂಡ ಜಮೀನಿನಲ್ಲಿ ಮಳೆ ನೀರನ್ನು ಸಣ್ಣ ಕೆರೆ/ಹೊಂಡ ನಿರ್ಮಿಸಿ ಸಂಗ್ರಹಣೆ ಮಾಡಿ ಬಳಸಿಕೊಳ್ಳಬಹುದು.
“ನನ್ನ ಆಹಾರ ಮತ್ತು ಆರೋಗ್ಯ,ನನ್ನ ಜವಾಬ್ದಾರಿ” ಉತ್ತಮ ಆಹಾರ ಮತ್ತು ಆರೋಗ್ಯಕ್ಕೆ ಮೌಲ್ಯ ಕಟ್ಟಲಾಗುವುದಿಲ್ಲ.ನಮ್ಮ ಸ್ವಂತ ಆಹಾರವನ್ನು ನಾವೇ ನಮ್ಮ ಕೃಷಿ ಭೂಮಿಯಲ್ಲಿ ಬೆಳೆಯುವ ಮೂಲಕ
ಕೃಷಿ ಮೌಲ್ಯ ತಿಳಿಯೋಣ.
-ಪ್ರಶಾಂತ್ ಜಯರಾಮ್
9342434530