ಗೆದ್ದಲು ಎಷ್ಟು ಅಪಾಯಕಾರಿಯೋ ಅಷ್ಟೇ ಉಪಕಾರಿ ಕೂಡ. ಎರೆಹುಳುವಿನಂತೆ ಮಣ್ಣಿನ ಮಿತ್ರ. ಆ ಮೂಲಕ ಕೃಷಿ ಲೋಕದ ಆಪ್ತ. ಅದರಲ್ಲೂ ಕಾಫಿ ತೋಟದವರಿಗೆ ಗೆದ್ದಲು ಮಹಾ ಉಪಕಾರಿ. ಗೊತ್ತಿದ್ದೊ ಗೊತ್ತಿಲ್ಲದೆಯೋ ಗೆದ್ದಲನ್ನು ಬಯ್ಯುವುದೇ ಕಾಯಕ ಮಾಡಿಕೊಂಡಿರುವ ಕೃಷಿಕರು ಒಂದು ಪಕ್ಷ ಈ ಭೂಮಿಯ ಮೇಲೆ ಗೆದ್ದಲು ಇಲ್ಲದೆ ಹೋಗಿದ್ದರೆ ಏನಾಗುತ್ತಿತ್ತು ಎನ್ನುವುದನ್ನು ಊಹಿಸಿಕೊಂಡರೆ ಸಾಕು. ಅವುಗಳ ಮಹತ್ವ ತಿಳಿಯುತ್ತದೆ.
ಗೆದ್ದಲು ಹುಳುಗಳು ಸಹ ಜೇನು ಹುಳುಗಳಂತೆ ಕೂಡು ಕುಟುಂಬದಲ್ಲೇ ವಾಸಿಸುತ್ತವೆ. ಬಹುಶಃ ಜೇನು ಹುಳುಗಳಿಗಿಂಲೂ ಗೆದ್ದಲು ಹುಳುಗಳ ಕುಟುಂಬ ಪದ್ದತಿ ದೊಡ್ಡದು. ಇಲ್ಲೂ ರಾಣಿ ಕೆಲಸಗಾರರು ಗಂಡುಹುಳು ಇತ್ಯಾದಿ ಗಳು ಇರುತ್ತವೆ. ಅತ್ಯಂತ ಒಗ್ಗಟ್ಟಿನ ಕುಟುಂಬ ವ್ಯವಸ್ಥೆ ಇರುತ್ತದೆ. ಜಗತ್ತಿನಲ್ಲಿ ಸಾವಿರದ ನೂರಕ್ಕೂ ಹೆಚ್ಚು ಬಗೆಯ ಗೆದ್ದಲು ಪ್ರಬೇಧಗಳಿವೆ ಎಂದು ತಜ್ಞರು ಹೇಳುತ್ತಾರೆ. ಸಿಡಿಲು ಸಹಿತ ಬರುವ ಮೊದಲ ಮಳೆಯಲ್ಲಿ ಮಣ್ಣಿನಿಂದ ಅಸಂಖ್ಯಾತ ಸಂಖ್ಯೆಯಲ್ಲಿ ಮೇಲೆದ್ದು ಹಾರಿ ಒಂದೇ ದಿನಕ್ಕೆ ಸಾಯುವ ಮಳೆಹಾತೆಗಳೂ ಗೆದ್ದಲಿನ ಒಂದು ಜಾತಿಯೆ.
ಕೃಷಿ ವ್ಯವಸ್ಥೆಯಲ್ಲಿ ಅದರಲ್ಲೂ ಕಾಫಿಯಲ್ಲಿ ಗೆದ್ದಲು ಹುಳು ಹೇಗೆ ಮತ್ತು ಯಾಕೆ ಮುಖ್ಯ ಎನ್ನುವುದನ್ನು ಗಮನಿಸೋಣ. ಮಣ್ಣಿನಲ್ಲೇ ಉಳಿದು ಅಲ್ಲಿಂದಲೇ ಆಹಾರ ಪಡೆಯುವ ಈ ಗೆದ್ದಲು ಹುಳು ಮಣ್ಣಿನ ಮೊದಲ ಐದಾರು ಅಡಿ ಆಳ ಸ್ತರದವರೆಗೆ ಹೋಗಿ ವಾಸಿಸುತ್ತವೆ. ಎಲ್ಲರಿಗೂ ಗೊತ್ತಿರುವಂತೆ ಭಾರತ ಶೇಡ್ ಗ್ರೋನ್ ಕಾಫಿ ಅಂದರೆ ನೆರಳಿನಾಶ್ರಯದಲ್ಲಿ ಬೆಳೆಯುವ ಕಾಫಿಗೆ ಹೆಸರುವಾಸಿ. ಅದರಲ್ಲೂ ಅರೇಬಿಕಾ ಕಾಫಿಗೆ, ತೋಟದ ಪೂರ್ತಿ, ಜಾಲರಿಯಷ್ಟು ಬಿಸಿಲು ಚೆಲ್ಲುವ ಎತ್ತರದ ನೆರಳು ಬೇಕು. ಹಾಗಂತ ಈ ನೆರಳು ಅಧಿಕವಾದರೂ ಕಾಫಿಯಲ್ಲಿ ಇಳುವರಿ ಕುಂಠಿತವಾಗುತ್ತದೆ.
ಪ್ರತಿವರ್ಷ ಬೆಳೆಗಾರರಿಗೆ ಬರುವ ಖರ್ಚಿನ ದೊಡ್ಡ ಬಾಬತ್ತು ಮರಗಸಿಯದ್ದು. ಮರಗಪಾತು ಅಂತಲೂ ಕರೆಸಿಕೊಳ್ಳುವ ಈ ಕೆಲಸದಲ್ಲಿ ಮರಗಳಲ್ಲಿ ಪ್ರತಿವರ್ಷ ಚಿಗುರುವ ದೊಡ್ಡ ನೆರಳಿನ ಹರೆಗಳನ್ನು ಕತ್ತರಿಸಿ ತೆಗೆಯಲಾಗುತ್ತದೆ. ಹೀಗೆ ಕತ್ತರಿಸಿ ತೆಗೆದ ಹರೆಗಳಲ್ಲಿ ಸ್ವಲ್ಪ ಮನೆಬಳಕೆಯ ಸೌದೆಗೆ,ಕೃಷಿ ಕಾರ್ಮಿಕರಿಗೆ ಕೊಡಲು ಬಳಕೆಯಾಗುತ್ತವೆ. ಉಳಿದ ದೊಡ್ಡ ಪ್ರಮಾಣದ ಕತ್ತರಿಸಿದ ಕವಲು ಹರೆ ಚಿಗುರು ತೋಟದಲ್ಲಿಯೇ ಉಳಿಯುತ್ತವೆ. ಅದರ ಜೊತೆಗೆ ಪ್ರತಿ ಮಳೆಗಾಳಿಯ ಸಂದರ್ಭದಲ್ಲಿ ಉರುಳುವ ಮರಗಳು,ನೆರಳಿಗಾಗಿ ಹಾಕುವ ಕಟಾವಿಗೆ ಬಳಕೆಯಾಗದ ಕೆಲವು ಜಾತಿಯ ಮರಗಳು ಆಯಸ್ಸು ತೀರುತ್ತಲೆ ಬೀಳುತ್ತವೆ.
ಪ್ರತಿ ಹಂಗಾಮಿಗೆ ಬೋರರ್ ಹುಳು ಹೊಡೆದ ಕಾಫಿಗಿಡದ ಕಿತ್ತ ಬೊಡ್ಡೆಗಳು ತೋಟದಲ್ಲಿ ಸಾಕಷ್ಟು ರಾಶಿ ಬೀಳುತ್ತವೆ.ಅದರಲ್ಲೂ ಕಡುಬೇಸಿಗೆಯನ್ನು ಎದುರಿಸಿದ ಋತುಗಳಲ್ಲಿ ಬೋರರ್ ನಿಂದ ಕಿತ್ತ ಗಿಡಗಳು ದೊಡ್ಡ ಸಂಖ್ಯೆಯಲ್ಲಿ ಇರುತ್ತವೆ.
ಇದರ ಜೊತೆಗೆ ತೋಟದಲ್ಲಿ ಪ್ರತಿವರ್ಷ ತೀರಾ ಹಳತಾದ,ಫಸಲುಕೊಡದ, ಬೇರು ಕಾಯಿಲೆ ಇರುವ, ಗಂಡುಗಿಡ ಅಂತ ಗುರುತಿಸಲಾಗುವ ಗಿಡಗಳನ್ನೂ ಬುಡಸಮೇತ ಕೀಳಲಾಗುತ್ತದೆ. ಹೀಗೆ ಕಿತ್ತು ಪೇರಿಸಿದ ಬೊಡ್ಡೆಗಳನ್ನು ವ್ಯಾಪಾರಿಗಳು ಖರೀದಿಸುತ್ತರಾದರೂ ದೊಡ್ಡ ಸಂಖ್ಯೆಯಲ್ಲಿ ಅವರಿಗೆ ಬೇಡವಾದವುಗಳನ್ನು ತೋಟದಲ್ಲೇ ಉಳಿಸಿಹೋಗ್ತಾರೆ.
ಹೀಗೆ ಕಾಫಿ ತೋಟದಲ್ಲಿ ಮರಕ್ಕೆ ಸಂಬಂಧಿಸಿದ (wood related)ತ್ಯಾಜ್ಯ ಬೃಹತ್ ಪ್ರಮಾಣದಲ್ಲಿ ಇರುತ್ತದೆ. ಈ ತ್ಯಾಜ್ಯವೇ ತೋಟದ ಮಣ್ಣಿನ ನಿಜವಾದ ಸಂಪತ್ತು. ಪ್ರತಿ ಋತುವಿನಲ್ಲೂ ಮಣ್ಣು ಕಳೆದುಕೊಳ್ಳುವ ತನ್ನ ಪೋಷಕಾಂಶಗಳ ಮರುಪೂರಣಕ್ಕೆ ಮರಮಟ್ಟುಗಳಿಂದ ಉತ್ಪನ್ನವಾಗುವ ತ್ಯಾಜ್ಯ ಮುಖ್ಯ ಆಗರ.
‘ಮಳೆ, ಬೆಳೆ ,ನಷ್ಟ ,ಮರುಪೂರಣ ಮತ್ತೆ ಬೆಳೆ’ಯೆನ್ನುವ ಮಣ್ಣಿನ ಚಕ್ರಕ್ಕೆ ಈ ಜೈವಿಕ ತ್ಯಾಜ್ಯಗಳ ಕೊಡುಗೆ ಗಣನೀಯ.
ಮತ್ತೆ ಗೆದ್ದಲು ಹುಳುವಿನತ್ತ ಬರೋಣ
ತೋಟದಲ್ಲಿ ಹೀಗೆ ರಾಶಿ ಬಿದ್ದ ಬೃಹತ್ ಪ್ರಮಾಣದ ಈ ಮರದ ಕೊಂಬೆ ಸೌದೆ ಹರೆ, ಚಿಗುರು ಬೊಡ್ಡೆಗಳಲ್ಲಿ ಸೆಲ್ಯುಲೋಸ್ ಮತ್ತು ಲಿಗ್ನೈನ್ ಎನ್ನುವ ಸಕ್ಕರೆ ಅಂಶಗಳು ಹೇರಳವಾಗಿರುತ್ತವೆ. ಮರಗಳು ನೆಲಕ್ಕೆ ಬಿದ್ದ ಮೂರೇ ದಿನದಲ್ಲಿ ಈ ಸಕ್ಕರೆಯ ಸಲುವಾಗಿ ಹುಡುಕಿ ಬರುವ ಗೆದ್ದಲುಗಳು ತಮ್ಮ ಬಾಯಲ್ಲಿರುವ ಬಲಿಷ್ಠ ಕೊಂಡಿಗಳಿಂದ ಅದನ್ನು ಸಣ್ಣಗೆ ಕತ್ತರಿಸಿಕೊಂಡು ನುಂಗುತ್ತವೆ. ಹಾಗೆ ನೋಡಲಿಕ್ಕೆ ಹೋದರೆ ಗೆದ್ದಲು ನೇರ ಮನುಷ್ಯರಿಗೆ ಉಪಕಾರಿಯಲ್ಲ. ಆದರೆ ಅದರ ಹೊಟ್ಟೆ ಮತ್ತು ಅದರೊಳಗಿರುವ ಅಪರೂಪದ ಜೀರ್ಣಶಕ್ತಿಯ ಪರವಾಲಂಬಿ ಜೀವಿಗಳ ನಡೆಸುವ ಜೀರ್ಣಕ್ರಿಯೆ ಮಣ್ಣಿಗೆ ಪ್ರತಿದಿನಕ್ಕೆ ಬೇಕಾಗುವ ಪೋಷಕಾಂಶ ಒದಗಿಸುತ್ತದೆ. ಈ ಗೆದ್ದಲು ಹುಳುಗಳ ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ಪ್ರೋಟೋಝೊವಾ ಗಳು ಹೊಟ್ಟೆಗೆ ಬಂದ ಈ ಮರದ ಪುಡಿಯನ್ನು ವಿಘಟಿಸಿ ಜೀರ್ಣಿಸಿಕೊಂಡ ನಂತರ ವಿಸರ್ಜನೆಗೆ ಕಳಿಸುತ್ತದೆ. ಹೊಟ್ಟೆಗೆ ಬಂದ ಮರದ ಪುಡಿಯಲ್ಲಿರುವ ಸಂಕೀರ್ಣ ಸೆಲ್ಯುಲೋಸ್ ನ್ನು ಒಂದು ದಿನದೊಳಗೆ ಸರಳ ಸಕ್ಕರೆಯಾಗಿ ಪರಿವರ್ತಿಸುವ ಕ್ಷಮತೆ ಈ ಸೂಕ್ಷ್ಮ ಜೀವಿಗಳಿಗಿದೆ.
ಫ್ರಮಿಕ್ಯೂಟ್ಸ್, ಪ್ರೋಟಿಯೊಬ್ಯಾಕ್ಟಿರೀಯಾ, ಸ್ಪಿರೊ ಕಿಟ್ಸ್, ಕ್ಯಾಂಡಿಡ್ಯಾಟಸ್, ಬ್ಯಾಕ್ಟಿರಿಯೊಡೈಟಸ್ (ಗೂಗಲ್ ಮಾಹಿತಿ) ಎನ್ನುವ ಹೆಸರಿನ ಗೆದ್ದಲಿನ ಹೊಟ್ಟೆಯಲ್ಲಿರುವ ಈ ಎಲ್ಲ ಏಕಾಣು ಜೀವಿಗಳನ್ನು ಇಡೀ ಭೂಮಂಡಲದ ಜೀವಿಗಳಲ್ಲಿರಬಹುದಾದ ಅತ್ಯಂತ ಶ್ರೇಷ್ಠ bioreactorಗಳು ಅಂತ ಪರಿಗಣಿಸಲಾಗಿದೆ.
ಈ ಜೀವಿಗಳು ಮರದಲ್ಲಿನ ಸೆಲ್ಯುಲೋಸ್ ನ್ನು ಜೀರ್ಣಿಸಲು ಅವಶ್ಯವಿರುವ ಕಿಣ್ವ ಸೆಲ್ಯುಲೇಸ್ ನ್ನು ಹೊರಸೂಸಿ ಮರದ ಕಣಗಳನ್ನು ಸಂಪೂರ್ಣವಾಗಿ ಕರಗಿಸುತ್ತವೆ. ಆ ಕ್ರಿಯೆಯಲ್ಲಿ ಬಿಡುಗಡೆಯಾಗುವ ಪೋಷಕಾಂಶಗಳನ್ನು ಗೆದ್ದಲುಗಳು ಬಳಸಿಕೊಂಡು ತಮ್ಮ ಜೀವನ ಮುಂದುವರೆಸುತ್ತವೆ.
ಎಂತಹ ಸಹಬಾಳ್ವೆ!!
ಗೆದ್ದಲಿನ ಹೊಟ್ಟೆಯಲ್ಲಿರುವ ಈ ಸೂಕ್ಷ್ಮ ಜೀವಿಗಳನ್ನು ಪ್ರಯೋಗಾಲಯದಲ್ಲಿ ಬೇರ್ಪಡಿಸಿ, ಬೆಳೆಸಿ ಅವುಗಳ ಸಹಾಯದಿಂದ ನಗರ ತ್ಯಾಜ್ಯವನ್ನು ಮಣ್ಣಿಗೆ ಉಪಕಾರಿ ಪೋಷಕಾಂಶ ಮಾಡುವ ಪ್ರಯತ್ನವೂ ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿದೆ.
ಇಡೀ ಭೂಮಂಡಲದಲ್ಲಿ ಅತ್ಯಂತ ಅಲ್ಪ ಅನಿಸಿಕೊಂಡಿರುವ ಕೊನೆಯ ಜೀವಿಯಿಂದ ಮನುಷ್ಯನವರೆಗೆ ಬೆಸೆದು ನಿಂತಿರುವ ಜೀವ ಸಮತೋಲನದ ಈ ಸರಪಳಿಯ ಕುರಿತು ತಿಳಿದಷ್ಟೂ ಮಣ್ಣಿಗೆ ವಿಧೇಯವಾಗುವ ಗುಣ ಹೆಚ್ಚುತ್ತದೆ. ಹೃದಯ ಕೃತಜ್ಞತೆಯಿಂದ ತುಂಬಿಕೊಳ್ಳುತ್ತದೆ. ಇದೆಲ್ಲದರ ಜೊತೆಗೆ ಮತ್ತೊಂದು ಅಚ್ಚರಿಯ ಸಂಗತಿಯೂ ಇದೆ.
ಎರಡು ಮೂರು ತಲೆಮಾರುಗಳ ಹಿಂದೆ ಹೀಗೆ ಗೆದ್ದಲು ಗೂಡಿನಲ್ಲಿ ಸಿಗುವ ರಾಣಿ ಗೆದ್ದಲನ್ನು ಹಿಡಿದು ಹೆಳವ ಬಿದ್ದ (ಮೂರು ನಾಲ್ಕು ವರ್ಷವಾದರೂ ನಡೆಯದೆ ಮಲಗಿದಲ್ಲೇ ತೆವಳುವ ಮಕ್ಕಳನ್ನು ಆಗಿನವರು ಹೆಳವ ಬಿದ್ದ ಮಕ್ಕಳು ಅಂತಿದ್ದರಂತೆ) ಎಳೆಮಕ್ಕಳಿಗೆ ನುಂಗಿಸುವ ಪದ್ದತಿ ಇತ್ತಂತೆ. ಬಹುಶಃ ಅದರ ಹೊಟ್ಟೆಯಲ್ಲಿರುವ ಅಪಾರ ಜೀರ್ಣಕ್ರಿಯೆ ಶಕ್ತಿಯಿರುವ ಏಕಕೋಶ ಜೀವಿಗಳಿಗಾಗಿ ಈ ರಾಣಿ ಗೆದ್ದಲನ್ನು ನುಂಗಿಸುತ್ತಿದ್ದಿರಬಹುದು.
ಮಕ್ಕಳಿಗೆ ಮಾತ್ರವಲ್ಲದೆ ಹೆಚ್ಚಿನ ಶಕ್ತಿ ಬಯಸುವ ಯುವಕರೂ ಹೊಲದಲ್ಲಿ ಕೆಲಸ ಮಾಡುವಾಗ ಸಿಕ್ಕುವ ಈ ಗೆದ್ದಲನ್ನು ಹಾಗೇ ನುಂಗ್ತಿದ್ದರಂತೆ. ಇದನ್ನೆಲ್ಲ ಕೇಳುವಾಗ ಈ ಮನುಷ್ಯ ತಿನ್ನದೆ ಉಳಿಸಿದ್ದು ಯಾವುದಿರಬಹುದು ಅಂತ ಯೋಚಿಸುವಂತಾಯ್ತು.