ಲೇಖಕರು: ಎನ್.ಎನ್.‌ ಮೂರ್ತಿ ಪ್ಯಾಟಿ
ಅರಣ್ಯ ಮಾದರಿ ಕೃಷಿ ಮಾಡುವುದು ಸುಲಭವೇನಲ್ಲ. ಸಾಕಷ್ಟು ಪೂರ್ವಯೋಜನೆ, ಸಿದ್ಧತೆ ಅತ್ಯವಶ್ಯಕ. ಇದರಿಂದ ಪ್ರತ್ಯಕ್ಷ – ಪರೋಕ್ಷ ಪರಿಣಾಮಗಳಿವೆ. ತೋಟದ ನಿರ್ವಹಣೆ ಮಾಡುವವರಿಗಷ್ಟೇ ಅಲ್ಲದೇ ಸುತ್ತಮುತ್ತಲಿನವರಿಗೂ ಇದರಿಂದ ಅಪಾರ ಪ್ರಯೋಜನಗಳಿವೆ. ಆದರೆ ಅವರು ಇದರ ಪ್ರಯೋಜನ ಅರಿಯಬೇಕಷ್ಟೇ. ಅರಿಯದೇ ಇದ್ದಾಗ ಏನಾಗುತ್ತದೆ ಎಂಬದರ ಬಗ್ಗೆ ನನ್ನ ಅನುಭವವನ್ನು ಇಲ್ಲಿ ಹೇಳಿದ್ದೇನೆ.
ಪ್ರತಿಬಾರಿ ನಿಟ್ಟಾಲಿಗೆ ಹೋದಾಗ ಅದೇ ರಗಳೆ. ನಾನು ತೋಟದಲ್ಲಿ ಬರೀ ಗಿಡಗಳನ್ನೇ ಬೆಳೆಸಿದ್ದಕ್ಕೆ ತಮ್ಮನೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ ಅನ್ನೋದು ಕೆಲವಾರು ಮಹಿಳೆಯರ ಗೋಳು. ತೋಟದ ಎರಡೂ ಬದಿಯಲ್ಲಿ ರಸ್ತೆ. ರಸ್ತೆಯ ಪಕ್ಕವೇ ಮನೆಗಳ ಸಾಲು. ಹಾಗೆ ನೋಡಿದರೆ ಬೇಸಿಗೆಯಲ್ಲಿ ಕೊಪ್ಪಳದ ಇತರೆ ಭಾಗಕ್ಕಿಂತ ನನ್ನ ತೋಟದಲ್ಲಿನ ತಾಪಮಾನ ಬರೋಬ್ಬರಿ ಎರಡರಿಂದ ಮೂರು ಡಿಗ್ರಿ ಕಡಿಮೆ ಇರುತ್ತದೆ. ಇದನ್ನು ಕಳೆದ ವರ್ಷದಿಂದ ದಾಖಲಿಸುತ್ತಿದ್ದೇನೆ.
ದುರಂತವೆಂದರೆ ಮನೆ ಎದುರೇ ಕಾಡನ್ನು ಇಟ್ಟುಕೊಂಡ ಜನರು, ಅದರಿಂದಾಗುವ ಲಾಭವನ್ನು ಮನಗಾಣದೇ ಹೀಗೇಕೆ ಮಾತಾಡುತ್ತಾರೆ ಅನ್ನೋದೇ ಗೊತ್ತಾಗುತ್ತಿಲ್ಲ. ಇನ್ನು ನಾನು ಗಿಡಗಳನ್ನು ಕತ್ತರಿಸೋದಿಲ್ಲ ಅನ್ನೋದು ಗೊತ್ತಾಗಿ ಇತ್ತೀಚಿಗೆ ಹೊಸ ವರಸೆಯೊಂದು ಶುರುವಾಗಿದೆ. ಹೊಲದ ಪಕ್ಕದಲ್ಲಿ ಹಾದು ಹೋಗಿರೋ ವಿದ್ಯುತ್ ತಂತಿಗೆ ಬದುವಿನಲ್ಲಿರೋ ಗಿಡಗಳ ಟೊಂಗೆ ಬಡಿದು ಬೆಂಕಿ ಬರುತ್ತಿದೆ ಅಂತಾ ದೂರುಗಳು ಬರುತ್ತಿವೆಯಂತೆ. ಜೆಸ್ಕಾಂನ ಸಿಬ್ಬಂದಿ ಈ ಬಗ್ಗೆ ನನಗೆ ಫೋನ್ ಮಾಡಿದಾಗ ಅಂಥ ಟೊಂಗೆಗಳನ್ನು ಕತ್ತರಿಸುವಂತೆ ಹೇಳಿದೆ. ಆದರೆ ಇಡೀ ಗಿಡಗಳನ್ನೇ ಕತ್ತರಿಸೋದಾಗಿ ಅವರು ಹೇಳಿದರು. ಅದಕ್ಕೆ ನಾನು ವಿರೋಧ ವ್ಯಕ್ತಪಡಿಸಿದೆ. ಟೊಂಗೆಗಳನ್ನು ಕತ್ತರಿಸಿದರೆ ಅಲ್ಲಿಗೆ ಸಮಸ್ಯೆ ಮುಗಿಯುತ್ತೆ. ಆದರೆ ಇಡೀ ಗಿಡಗಳ ಬುಡಕ್ಕೇ ಕೊಡಲಿ ಏಕೆ? ಯಾವುದೇ ಕಾರಣಕ್ಕೂ ಇದಕ್ಕೆ ಒಪ್ಪದೇ ಇದ್ದಿದ್ದಕ್ಕೆ ಇದೀಗ ಟೊಂಗೆಗಳು ತಂತಿಗೆ ತಾಗೋದೂ ನಿಂತಿದೆ. ಒಂದು ವೇಳೆ ತಾಗಿದರೂ ಸ್ಪಾರ್ಕ್ ಬರೋದೂ ನಿಂತಿದೆ..!
ಇನ್ನು ಸೊಳ್ಳೆಗಳ ಕಾಟಕ್ಕೆ ತಮ್ಮನೆಯ ಮುಂದೆ ಹರಿಯುತ್ತಿರೋ (ಹರಿಯೋದು ಬಂದಾಗಿ ಎಷ್ಟೋ ದಿನಗಳಾಗಿವೆ,‌ ಕಸ-ಕಡ್ಡಿ ಹಾಕಿ ನೀರು ಹರಿಯೋದೇ ನಿಂತು ಹೋಗಿದೆ…) ಚರಂಡಿ ಅನ್ನೋದು ಜನರಿಗೆ ಗೊತ್ತಾಗೋದಿಲ್ಲವೇ? ಮನೆಯಲ್ಲಿ ಟಾಯ್ಲೆಟ್ ಇದ್ದರೂ ಮಕ್ಕಳನ್ನು ಹೊರಗೆ ಕೂಡಿಸಿ ಆನಂದಪಡುವುದರಿಂದ ಸಮಸ್ಯೆ ಉಂಟಾಗುತ್ತಿದೆ ಅನ್ನೋದು ಇವರಿಗೆ ಗೊತ್ತಿಲ್ಲವೇ? ಜನರಿಗೆ ಪರಿಸರದ ಬಗ್ಗೆ ಅದ್ಯಾವಾಗ ಕಾಳಜಿ ಬರುತ್ತೋ ಗೊತ್ತಿಲ್ಲ. ಗಿಡ ಕತ್ತರಿಸಲು ಅವಕಾಶ ಸಿಕ್ಕರೆ ಸಾಕು ಕೊಡಲಿ ಹಿಡಿದುಕೊಂಡು ವೀರರಂತೆ ಬರೋ ಇವರಿಗೆ ಮುಂದಿನ ಪೀಳಿಗೆಯ ಬಗ್ಗೆ ಕಾಳಜಿ ಇಲ್ಲವೇ? ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕೋದೇ ಹುಚ್ಚುತನ. ಅಲ್ಲವೇ!?
ಮತ್ತೆ ವಿಶ್ವ ಪರಿಸರ ದಿನ ಬಂದಿದೆ. ಜೂನ್ 5 ರಂದು ಪರಿಸರ ದಿನವನ್ನಾಗಿ ಆಚರಿಸೋ ಘೋಷಣೆಯಾಗಿ ಇದೀಗ ಐವತ್ತು ವರ್ಷಗಳು ಕಳೆದಿವೆ. ನಾನು ಹೊಲದಲ್ಲಿ ಗಿಡ ನೆಡೋದನ್ನು ಶುರು ಮಾಡಿ ಹದಿನೈದು ವರ್ಷಗಳಾದವು. ವರ್ಷದಿಂದ ವರ್ಷಕ್ಕೆ ಗಿಡಗಳು ಬೆಳೆಯುತ್ತಾ ಹೋಗುತ್ತಿವೆ. ಆದರೆ ಈ ಬಗ್ಗೆ ಯಾರೇ ಮಾತಾಡಿದರೂ ಮತ್ತದೇ ಪ್ರಶ್ನೆಯನ್ನು ಕೇಳುತ್ತಾರೆ: “ತಿಂಗಳಿಗೆ ತೋಟದಿಂದ ಬರೋ ಆದಾಯವೆಷ್ಟು?” ನಾನು ಸುಮ್ಮನೇ ನಗುತ್ತೇನೆ. ಏಕೆಂದರೆ ಆ ಪ್ರಶ್ನೆಗೆ ನನ್ನ ಬಳಿ ಉತ್ತರವೇ ಇಲ್ಲ..!
ಖುಷಿಯನ್ನು ಹಣ ಎಣಿಸೋ ಯಂತ್ರದಿಂದ ಲೆಕ್ಕ ಹಾಕೋಕೆ ಬರೋದಿಲ್ಲ…!
ವೃಕ್ಷೋ ರಕ್ಷತಿ ರಕ್ಷಿತಃ

1 COMMENT

  1. ತಾವು ಪ್ರಯತ್ನಿಸುತ್ತಿರುವಂತಹ ಈ ಕಾಳಜಿ ಪರಿಸರದಿಂದ ನಮ್ಮ ಭವಿಷ್ಯ ಕೊಂಚವಾದರೂ ಸುಧಾರಿಸುತ್ತದೆ. ತಮಗೆ ಅನಂತ ಅಭಿನಂದನೆಗಳು 🙏

LEAVE A REPLY

Please enter your comment!
Please enter your name here