ಅಕ್ಕಡಿಸಾಲು ಕೃಷಿಪದ್ಧತಿಯಿಂದ ಆಹಾರ ಭದ್ರತೆ

0
ಲೇಖಕರು: ಮಂಜುನಾಥ್

ಅಕ್ಕಡಿ ಸಾಲು ಕೃಷಿ ಹೇಗೆ ಮಣ್ಣಿಗೆ ಸತ್ವ ಮತ್ತು ರೈತನಿಗೂ ಮತ್ತು ಜಾನುವಾರುಗಳಿಗೆ ಆಹಾರ ಭದ್ರತೆ ಕೊಡಬಲ್ಲದು. ಒಂದು ಎಕರೆ 6 ಗುಂಟೆ ಜಮೀನಿನಲ್ಲಿ ಎಷ್ಟು ಬೆಳೆ ಬೆಳೆಯುವ ಮೂಲಕ ಸಮಗ್ರ ಕೃಷಿ ನಿರ್ವಹಣೆ ಮಾಡಬಹುದು ಎನ್ನುವ ಕುರಿತ  ಲೇಖನವಿದು

ಪ್ರಭಾಕರ್‌ ಬಿ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಬೈರಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣ ಸುಸ್ಥಿರ ಬೇಸಾಯ ಮಾದರಿಯಾದ ಅಕ್ಕಡಿ ಸಾಲು ಕೃಷಿ ಮಾಡುತ್ತಿರುವ ತೊಂಡಹಳ್ಳಿ ಗ್ರಾಮದ ಕೃಷಿಕರು. ಅದೂ ಭೋಗ್ಯಕ್ಕೆ ತೆಗೆದುಕೊಂಡ ಜಮೀನಿನಲ್ಲಿ ಸ್ಡಂತದ 15 ಗುಂಟೆ ಜಮೀನಿನಲ್ಲಿ ವರ್ಷದ ಎಲ್ಲಾ ಕಾಲದಲ್ಲೂ ಮನೆಗೆ ಬೇಕಾದಂಥ ತರಕಾರಿ ಸೊಪ್ಪು ಸುಸ್ತಿರ ಸಮಗ್ರ ಕೃಷಿ ಮಾಡುತ್ತಾರೆ. ಹಾಲು ಕರೆಯುವ ಮೂರು ಹಸುಗಳು ಮತ್ತು ಮೇಕೆ, ಕುರಿ ಕೋಳಿ ಸಾಕಣೆಯನ್ನೂ ಮಾಡುತ್ತಿದ್ದಾರೆ. ಹೀಗೆ ಕೃಷಿ ಮತ್ತು ಹೈನುಗಾರಿಕೆ ಎಲ್ಲವೂ ಸೇರಿ ಕೃಷಿ ಮಾಡುತ್ತಿರುವ

ಹಿನ್ನೆಲೆ.

ಒಂದು ಕಾಲದಲ್ಲಿ ಮಳೆಯಾಶ್ರಿತ ಬೆಳೆ ಅಂದ್ರೆ ಅದೂ ಅಕ್ಕಡಿ ಸಾಲು ಮಾದರಿಯ ಬಹುಬೆಳೆ ಪದ್ದತಿಯಾಗಿತ್ತು ಪ್ರತಿ ಜಮೀನಿನಲ್ಲಿ 10-15 ವಿಧದ ಬೆಳೆ ಸಂಯೋಜನೆ ಇರುತ್ತಿದ್ದ ಕಾಲ ಹೋಗಿ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಒಂದೆರೆಡು ಬೆಳೆಗಳಾದ ರಾಗಿ, ಕಡಲೆಕಾಯಿ, ಮುಸುಕಿನ ಜೋಳದಂತಹ ಏಕ ಬೆಳೆ ಮಾದರಿಗೆ ಬಂದು ನಿಂತಿದೆ. ಈ ಮಾದರಿಯಲ್ಲೀಗ ಅತಿಯಾದ ಕಳೆ, ರೋಗ ಮತ್ತು ಕೀಟಬಾಧೆಗಳು ಅತಿಯಾಗಿ ರಾಸಾಯನಿಕಗಳ ಮೊರೆಹೋಗುವಂತೆ ಮಾಡಿವೆ.

ಈ ಕಳೆಗಳಾಗಲೀ, ಪೀಡೆಗಳಾಗಲೀ, ರೋಗಗಳಾಗಲೀ ಹೊಸತಲ್ಲ. ಮೊದಲಿನಿಂದಲೂ ಕೃಷಿಯ ಅವಿಭಾಜ್ಯ ಅಂಗವಾಗಿಯೇ ಇವೆ. ಆಗ ದೊಡ್ಡ ಮಟ್ಟದ ಸಮಸ್ಯೆ ಎನಿಸದಿದ್ದ ಇವು ಇಂದು ದೊಡ್ಡದಾಗಿ ತೊಂದರೆ ಮಾಡುತ್ತಿವೆ. ಇದಕ್ಕೆ ಪಾರಂಪರಿಕ ರೈತರು ಹೇಳುವುದು “ನಾವು ಜಮೀನಿನಲ್ಲಿ ಜೈವಿಕ ವೈವಿದ್ಯತೆಯನ್ನು ಹಾಳು ಮಾಡಿಕೊಂಡು ಏಕ ಬೆಳೆ ಮಾದರಿ ಮತ್ತು ಅನವಶ್ಯಕ ಪ್ರಮಾಣದಲ್ಲಿ ರಾಸಾಯನಿಕ ಮತ್ತು ಕೃತಕ ಗೊಬ್ಬರಗಳನ್ನು ಬಳಸುತ್ತಿರುವುದು, ಸರಿ ಈ ಸಮಸ್ಯೆ ಬಹುಬೆಳೆ ಮಾದರಿಯ ಅಕ್ಕಡಿ ಸಾಲು ಬೆಳೆಗಳಲ್ಲಿ ಇಲ್ಲವಾ? ಇದ್ದರೇ ಹೇಗೆ ಪರಿಹಾರ ಕಂಡುಕೊಂಡಿದ್ದಾರೆ ಎನ್ನುವುದನ್ನು ನೋಡುವ ಸಲುವಾಗಿ ಭೇಟಿಕೊಟ್ಟು, ಪ್ರಭಾಕರ್‌ ಅವರ ಜೊತೆ ಸಂವಾದ ಮಾಡಿ ಉತ್ತರಗಳನ್ನು ಪಡೆದುಕೊಂಡೆವು.

ಏನಿದು ಅಕ್ಕಡಿ ಸಾಲು

ಅಕ್ಕಡಿ ಸಾಲು ಅಂದ್ರೆ ಸರಳವಾಗಿ ಒಂದೇ ಜಮೀನಿನಲ್ಲಿ ಬಹುಬೆಳೆಯನ್ನು ಹಾಕಿ ಬೆಳೆ ವೈವಿದ್ಯತೆ ಸೃಷ್ಟಿ ಮಾಡಿ ರೋಗ ನಿಯಂತ್ರಣಕ್ಕೆ ಬಲಿ ಬೆಳೆಗಳನ್ನು ಬಳಸಿ, ನೈಸರ್ಗಿಕವಾಗಿ ಪೀಡೆಗಳನ್ನು ನಿಯಂತ್ರಣ ಮಾಡಿ ಮುಖ್ಯಬೆಳೆಯನ್ನು ಕಾಪಾಡಿಕೊಳ್ಳುವ ಜೊತೆಗೆ ಅಗತ್ಯಕ್ಕೆ ಬೇಕಾದ ಬೇಳೆಕಾಳು ಮತ್ತು ಎಣ್ಣೆಕಾಳು ಇವೆಲ್ಲವನ್ನು ಬೆಳೆದುಕೊಳ್ಳುವ ಸಾಂಪ್ರದಾಯಿಕ ಮಾದರಿಯೇ ಅಕ್ಕಡಿ ಸಾಲು ಬೆಳೆ.

ಕೃಷಿಕ ಪ್ರಭಾಕರ್‌ ಅವರ ಜಮೀನಿನಲ್ಲಿ ಏನೆಲ್ಲಾ ಬೆಳೆ ಇವೆ ಅವನ್ನು ಹೇಗೆ ಸಂಯೋಜನೆ ಮಾಡುವುದು. ? 

ಮುಖ್ಯ ಬೆಳೆ ಅಕ್ಕಡಿ ಸಾಲು ಮಾದರಿಯಲ್ಲಿ ಒಂದು ಮುಖ್ಯ ಬೆಳೆ ಇರುತ್ತದೆ ಕಡಲೆಕಾಯಿ/ ರಾಗಿ. ಇಲ್ಲಿ ಕಡಲೇಕಾಯಿ ಮುಖ್ಯ ಬೆಳೆಯಾಗಿದೆ. ಮುಖ್ಯವಾಗಿ ವಾಣಿಜ್ಯ ಮೌಲ್ಯವಿರುವ ಬೆಳೆ ಮುಖ್ಯಬೆಳೆಯಾಗಿರುತ್ತದೆ.

ಅಂಚು ಬೆಳೆಗಳು Border crop ಹುಚ್ಚೆಳ್ಳು, ಸಾಸಿವೆ. ಎಳ್ಳು  ಚೆಂಡು ಹೂ ಇವೆಲ್ಲಾ ಹಳದಿ ಬಣ್ಣದ ಹೂಗಳನ್ನು ಬಿಡುವುದರಿಂದ ಮುಖ್ಯವಾಗಿ ಬೆಳೆಗೆ ಬರುವ ಪೀಡೆ ಕೀಟಗಳು ಜಮೀನಿನ ಒಳಗೆ ಬಂದ ತಕ್ಷಣ ಇವಕ್ಕೆ ಆಕರ್ಷಿತವಾಗಿ ಅವುಗಳ ಎಲೆಗಳನ್ನು ತಿಂದು ಮುಗಿಸುತ್ತವೆ ಹೀಗಾಗಿ ಮುಖ್ಯ ಬೆಳೆಗೆ ಪೀಡೆಗಳ ತೊಂದರೆ ನಿವಾರಣೆಯಾಗುತ್ತದೆ.

ಸಾಲು ಬೆಳೆ Mixed in between ಸಾಲು ಬೆಳೆಗಳು ಸಜ್ಜೆ ,ನವಣೆ ಬಿಳಿ,ನವಣೆ ಕೆಂಪು,ಮುಸುಕಿನ  ಜೋಳ, ಇವೆಲ್ಲಾ ಕೃಷಿಗೆ ಬರುವ ಹಕ್ಕಿಗಳನ್ನು ಆಕರ್ಷಿಸುತ್ತವೆ ಅವಕ್ಕೆ ಇವೇ ಆಹಾರ. ಜಮೀನಿಗೆ ಬಂದ ಹಕ್ಕಿಗಳು ಇವನ್ನು ತಿನ್ನುವುದಲ್ಲದೇ ಬೆಳೆಗೆ ಬರುವ ಪೀಡೆಗಳನ್ನು ತಿಂದು ಪೀಡೆ ಮುಕ್ತವಾಗಿ ಬೆಳೆ ಬೆಳೆಯಲು ಸಹಕಾರಿಯಾಗಿವೆ.

ದ್ವಿದಳ ಧಾನ್ಯದ ಬೆಳೆಗಳು ಅವರೆ,ತೊಗರಿ ಅಲಸಂದೆ ಇವನ್ನು ಸಾಧಾರಣವಾಗಿ ಬೆಳೆಯ ಮಧ್ಯದಲ್ಲಿ ಹಾಕಿದ್ದಾರೆ ದ್ವಿದಳ ದಾನ್ಯದ ಬೆಳೆಗಳಾಗಿದ್ದು ವಾತಾವರಣದಲ್ಲಿನ ಸಾರಜನಕವನ್ನು ಹೀರಿ ಬೆಳೆಗಳಿಗೆ ಕೊಡುವುದರ ಜೊತೆಗೆ ಬೇರುಗಳ ಗಂಟುಗಳಲ್ಲಿ ಶೇಖರಿಸಿ ಜಮೀನಿಗೆ ಸಾರಜನಕವನ್ನು ಒದಗಿಸುವ ಕೆಲಸ ಮಾಡುತ್ತವೆ.

ಔಡಲ (ಹರಳು),  ದೊಡ್ಡದಾಗಿ 10 ಅಡಿಯವರೆಗೂ ಬೆಳೆಯುವ ಈ ಗಿಡ ಪತಂಗಗಳು ಬಂದು ಮೊಟ್ಟೆ ಇಡಲು ಸೂಕ್ತ ಬಲೆಬೆಳೆ (ಟ್ರ್ಯಾಪ್‌ ಬೆಳೆ) ಆಗಿ ಕೆಲಸ ಮಾಡುತ್ತದೆ. ಪತಂಗದ ಮರಿಗಳು ಕಂಬಳಿಹುಳು ಹಂತದಲ್ಲಿದ್ದಾಗ ಔಡಲದ ಅಗಲವಾದ ಎಲೆಗಳನ್ನು ತಿನ್ನುತ್ತಾ ಕೋಶಾವಸ್ಥೆಗೆ ಜಾರಿ ಹೋಗುತ್ತವೆ ಇದರಿಂದಾಗಿ ಮುಖ್ಯ ಬೆಳೆಗಳಿಗೆ ತೊಂದರೆ ಆಗುವುದಿಲ್ಲ. ಜೊತೆಗೆ ಎತ್ತರವಾಗಿ ಬೆಳೆಯುವ ಈ ಗಿಡಗಳು ಹಕ್ಕಿಗಳನ್ನು ಆಕರ್ಷಿಸಿ ಕೀಟಗಳನ್ನು ಹಕ್ಕಿಗಳು ಹಿಡಿದು ತಿಂದು ಖಾಲಿ ಮಾಡಿ ಬೆಳೆಗೆ ಆಗುವ ತೊಂದರೆ ಕಡಿಮೆ ಆಗುತ್ತದೆ

ತೊಗರಿ ದ್ವಿದಳ ಧಾನ್ಯವಾಗಿದ್ದು ಜೊತೆಗೆ ದೊಡ್ಡದಾಗಿ ಬೆಳೆದು ಹಕ್ಕಿಗಳನ್ನು ಆಕರ್ಷಿಸಿ ಪೀಡೆ ನಿಯಂತ್ರಣಕ್ಕೆ ಸಹಾಯವಾಗುತ್ತದೆ. ಜೊತೆಗೆ ತೊಗರಿ ಒಂದು ವಾಣಿಜ್ಯ ಬೆಳೆಯಾಗಿದೆ.  ಪುಂಡಿ ಸೊಪ್ಪು ಔಡಲ (ಹರಳು) ರಾಜಗೀರ ದಂಟು, ಮನೆಗೆ ಬೇಕಾದ ತಾಜಾ ಸೊಪ್ಪು ಕೊಡುವುದರ ಜೊತೆಗೆ ಹಕ್ಕಿಗಳಿಗೆ ಬೇಕಾದ ಬಲಿ ಬೆಳೆಯಾಗಿಯೂ ಕೆಲಸ ಮಾಡುತ್ತದೆ.

 ಜೇನು ಹುಳುಗಳಿಂದ ಪರಾಗ ಸ್ಪರ್ಶ ಕಾರ್ಯ:- ಅಕ್ಕಡಿ ಸಾಲಿನಲ್ಲಿ ಹತ್ತಾರು ವೈವಿದ್ಯ ಬೆಳೆಗಳ ಸಂಯೋಜನೆ ಜೇನು ಹುಳುಗಳನ್ನು ಆಕರ್ಷಿಸುತ್ತದೆ ಇವು ಮಕರಂದ ಹೀರುವುದರ ಜೊತೆಗೆ ಪರಾಗ ಸ್ಪರ್ಶ ಪ್ರಕ್ರಿಯೆಯಲ್ಲಿ ತೊಡಗಿಕೊಂಡು ಬೆಳೆ ಇಳುವರಿ ವೃದ್ಧಿಗೆ ಅನುಕೂಲ ಮಾಡಿಕೊಡುತ್ತವೆ.

ಅಕ್ಕಡಿ ಸಾಲು ಪ್ರತಿ 20 ಸಾಲು ಮುಖ್ಯ ಬೆಳೆ ಕಡಲೆಕಾಯಿ/ನೆಲಗಡಲೆ ಆದ ಮೇಲೆ ಸಾಲು ಬೆಳೆಯಾಗಿ ಅವರೆ, ಜೋಳ, ಔಡಲ, ಸಜ್ಜೆ  ಮತ್ತೆ 20 ಸಾಲು ನೆಲಗಡಲೆ  ಮತ್ತೆ ಸಾಲು ಬೆಳೆಯಾಗಿ ತೊಗರಿ ಜೋಳ, ಸಜ್ಜೆ, ಹುಚ್ಚೆಳ್ಳು, ನವಣೆ, ಅರೆಸಾಮೆ, ಊದಲು, ಪುಂಡಿ. ಬಿಳಿ ಎಳ್ಳು

ಹೀಗೇ ಪ್ರತಿ 20 ಸಾಲು ನೆಲಗಡಲೆಯಾದ ಮೇಲೆ ಸಾಲು ಬೆಳೆಗಳನ್ನು ಹಾಕಲಾಗುತ್ತದೆ ಒಂದು ಎಕರೆಯಲ್ಲಿ 400 ಸಾಲು ಮುಖ್ಯ ಬೆಳೆಯಾದರೇ 20 ಸಾಲು ಸಾಲು ಬೆಳೆಗಳು ಮತ್ತು ಅಂಚು ಬೆಳೆಗಳು ಹೀಗೆ ಅಕ್ಕಡಿ ಸಾಲು ವಿಧಾನದ ಬೇಸಾಯ ಒಂದೆಕೆರೆ ಜಮೀನಿನಲ್ಲಿ ಸರಾಸರಿ 450 ಸಾಲು ವೈವಿಧ್ಯ ಪೂರ್ಣ ಕೃಷಿಯನ್ನು ಒಳಗೊಂಡಿರುತ್ತದೆ.

ಗೊಬ್ಬರಗಳು :-

ಹಸಿರೆಲೆ ಗೊಬ್ಬರ ಶುರುವಿನಲ್ಲಿ ನವಧಾನ್ಯ ಬಿತ್ತನೆ ಏಕದಳ ಮೂರು ದ್ವಿದಳ ಮೂರು ಮತ್ತು ಎಣ್ಣೆಕಾಳುಗಳು ಮೂರು ವಿಧದ್ದು ಸುಮಾರು 30 ಕೆಜಿಯಷ್ಟು ಬಿತ್ತನೆ ಮಾಡಿ ಮೊದಲನೆ ಮಳೆಗೆ ಚೆನ್ನಾಗಿ ಬೆಳೆದ ಈ ಬೆಳೆಯನ್ನಯು 45 ದಿನಕ್ಕೆ ಹೂವು ಹೊಡೆಯುವ ಹೊತ್ತಿನಲ್ಲಿ ರೋಟ್ರವೇಟರ್‌ ಬಳಸಿ ಎಲ್ಲವನ್ನು ಮರಳಿ ಮಣ್ಣಿಗೆ ಸೇರಿಸುತ್ತಾರೆ. ಈ ಹಂತದಲ್ಲಿ ಜಮೀನಿಗೆ 3ರಿಂದ 10 ಟನ್‌ ಹಸಿರೆಲೆ ( 6ಇಂಚು  ಬೆಳೆದಿದ್ದರೆ 3ಟನ್‌,1ಅಡಿ ಬೆಳೆದಿದ್ದರೆ 7ಟನ್‌, 1.5 ಅಡಿ ಬೆಳೆದಿದ್ದರೆ 10 ಟನ್)‌  ಗೊಬ್ಬರ ಸಿಗುತ್ತದೆ.

(ಇದನ್ನು ಪ್ರತಿ ಚದರಡಿಯ ಸ್ಥಳದಲ್ಲಿ ಬೆಳೆದ ಗಿಡಗಳನ್ನು ಬೇರು ಸಮೇತ ತೂಕ ಹಾಕಿ ಕಂಡುಕೊಂಡಿದ್ದಾರೆ)

ಕಳೆದ ವರ್ಷ ಶುರುವಿನಲಿ ನಾಲ್ಕು ಟ್ರಾಕ್ಟರ್‌ ತಿಪ್ಪೆಗೋಬ್ಬರವನ್ನು ಈ ಜಮೀನಿಗೆ ಕೊಟ್ಟಿದ್ದಾರೆ ಮತ್ತು ಹಸಿರೆಲೆ ಗೊಬ್ಬರ ಮಾಡಿದ್ದಾರೆ ಬಿಟ್ಟರೇ ಬೇರೇನೂ ಮಾಡಿಲ್ಲ. ದ್ರವ ಮತ್ತು ಘನ ಜೀವಾಮೃತ ಗೊಬ್ಬರಗಳನ್ನು ಅವಶ್ಯಕತೆ ಇದ್ದಾಗ ಜಮೀನಿಗೆ ಕೊಡುವುದು.

ಜಾನುವಾರುಗಳಿಗೆ ಮೇವು ಭದ್ರತೆ:- 

ಏಕಬೆಳೆಯಲ್ಲಿ ಜಾನುವಾರುಗಳಿಗೆ ಅಬ್ಬಬ್ಬಾ ಎಂದರೆ ಒಂದೆರೆಡು ರೀತಿಯ ಮೇವು ಕೊಯ್ಲಿನ ಬಳಿಕ ಸಿಗುತ್ತದೆ ಆದರೆ ಅಕ್ಕಡಿ ಸಾಲಿನ ಬೇಸಾಯದಲ್ಲಿ ಜಾನುವಾರುಗಳಿಗೆ ಮಿಶ್ರಬೆಳೆ ಮತ್ತು ಬೇರೆ ಬೇರೆ ಸಮಯದಲ್ಲಿ ಕೊಯ್ಲು ಆಗುವುದರಿಂದ  ಬೇಕಾದಷ್ಟು ಮೇವಿನ ಲಭ್ಯತೆ ಇರುತ್ತದೆ.

ಜೊತೆಗೆ ಕೃಷಿಯೆಲ್ಲಾ ಮುಗಿದ ಮೇಲೆ ಕೃಷಿಯ ಅವಶೇಷಗಳನ್ನು ಮತ್ತೆ ಉಳುಮೆ ಮಾಡಿ ಮಣ್ಣಿಗೆ ಸೇರಿಸುವುದರಿಂದ ಮಣ್ಣಿಗೆ ಬೇಕಾದ ಸಾವಯವ ಇಂಗಾಲವೂ ಸಾಕಷ್ಟು ಪ್ರಮಾಣದಲ್ಲಿ ಮಣ್ಣಿಗೆ ಸೇರುತ್ತದೆ.

ಆದಾಯ ಖರ್ಚು  (ಮಾಹಿತಿ ಪ್ರಭಾಕರ್ರವರಿಂದ)

ಜಮೀನಿಗೆ ಮೂರು ವರ್ಷ ಭೋಗ್ಯಕ್ಕೆ 33ಸಾವಿರ ರೂ ಮತ್ತು ಬೀಜಗಳು ಇವರೇ ಶೇಖರಿಸಿದ ಬೀಜಗಳನ್ನು ಬಳಸುತ್ತಾರೆ ಒಮ್ಮೆ ಮಾತ್ರವೇ ಕೊಂಡು ಮತ್ತೆ ಪ್ರತೀ ಕೋಯ್ಲಿನಲ್ಲಿ ಆರೋಗ್ಯವಂತ ಗಿಡಗಳಿಂದ ಬೀಜಗಳನ್ನು ಆಯ್ಕೆ ಮಾಡಿಕೊಂಡು ಮುಂದಿನ ಬೆಳೆಗೆ ಬಳಸುತ್ತಾರೆ.

ಒಟ್ಟು ಖರ್ಚು;- 

ಉಳುಮೆಗೆ 5-6 ಸಾವಿರ, ಇಡೀ ಬೆಳೆ ಆವಧಿಯಲ್ಲಿ ಕಳೆ ತೆಗೆಯಲು 2000, ಇವರದ್ದೇ ಮನೆಯಲಿ ಹಸು, ಕುರಿ ಮೇಕೆ ಮತ್ತು ಕೋಳಿ ಸಾಕಣೆ ಇರುವುದರಿಂದ ತಿಪ್ಪೆಗೊಬ್ಬರ ಸಿಗುತ್ತದೆ. ಕಳೆದ ಸಾರಿ ಕೃಷಿ ಶುರುಮಾಡುವಾಗ 5 ಟ್ರಾಕ್ಟರ್‌ ತಿಪ್ಪೆಗೊಬ್ಬರ ಹಾಕಿಸಿದ್ದಾರೆ. ಇದನ್ನು ಬೇರೆಯವರಿಂದ ತೆಗೆದುಕೊಳ್ಳಬೇಕಾದರೆ ಕನಿಷ್ಠ 25 ಸಾವಿರ ಖರ್ಚುಮಾಡಬೇಕಾಗುತ್ತದೆ ಇದನ್ನು ಒಮ್ಮೆಗೆ ಮಾಡಿದ್ರೆ 2-3 ವರ್ಷ ಮತ್ತೆ ಹಾಕಬೇಕಾಗಲ್ಲ. ಮೀನು ಆಮ್ಲ ತಯಾರಿಕೆಗೆ 2500, ಹಸಿರೆಲೆ ಗೊಬ್ಬರ ಬಿತ್ತನೆಗೆ ಬೀಜಗಳು 1500. ಇನ್ನು ಕೊಯ್ಲಿಗೆ ಸಾಧಾರಣವಾಗಿ ಸುಮಾರು 6-8ಸಾವಿರ ಖರ್ಚು ಬರುತ್ತದೆ ಒಟ್ಟು. ಅಂದಾಜು ಪ್ರತಿ ವರ್ಷ 20-25 ಸಾವಿರ ಖರ್ಚು ಬರುತ್ತದೆ.

ಆದಾಯವನ್ನು ಕಳೆದ ಸಾರಿ ಎಲ್ಲ ಜಮೀನಿನ ಬೆಳೆಯನ್ನು ಒಟ್ಟಿಗೆ ಸೇರಿಸಿದ್ದರಿಂದ ಅಂದಾಜು ಮಾಡಲಾಗಿಲ್ಲ. ಆದ್ರೆ ಓಂದು ಎಕರೆಯಲ್ಲಿ ಏನೆಲ್ಲಾ  ಉತ್ಪನ್ನಗಳ ಸಿಕ್ಕಿದೆ ಎನ್ನುವುದನ್ನು  ಹೇಳುತ್ತಾರೆ ಮತ್ತು ಈ ಸಾರಿ ಆ 1ಎಕರೆ ಜಮೀನಿನಲ್ಲಿ ಬೆಳೆದ ಪ್ರತಿಯೊಂದನ್ನು ಪ್ರತ್ಯೇಕವಾಗಿ ಮೌಲ್ಯ ಮಾಪನ ಮಾಡುವ ಯೋಜನೆ ಮಾಡಿದ್ದಾರೆ.

Center for social and environmental innovation (CSEI)- ATREE ಸಂಸ್ಥೆ ನಡೆಸುತ್ತಿರುವ ಕೃಷಿ ಅಧ್ಯಯನದ ಭಾಗವಾಗಿ ಈ ಲೇಖನ ಬರೆಯಲಾಗಿದೆ.  ಇದಕ್ಕೆ ಸಾಯಿಲ್ ವಾಸು ಮತ್ತು ಕೃಷಿಕ  ಪ್ರಭಾಕರ್ ಬಿ. ಸಹಾಯ ಮಾಡಿದ್ದಾರೆ.

(RRAN) ಮಳೆ ಬೇಸಾಯ ವೇದಿಕೆ – ಕರ್ನಾಟಕದ ಕ್ಷಿತಿಜ್ ಅರಸ್ ಮತ್ತು ಫಣಿಶ್ ರವರು ತಮ್ಮ ವೇದಿಕೆಯ ಮೂಲಕ ನಮಗೆ ಶುರುವಿನಲ್ಲಿ ಹಣಕಾಸು ಮತ್ತು ತಾಂತ್ರಿಕ ಜ್ಞಾನವನ್ನು ನೀಡಿ ಪ್ರೋತ್ಸಾಹಿಸಿದರು. ಜೊತೆಗೇ ಇಲ್ಲಿನ ಸ್ತ್ರೀಶಕ್ತಿ ಸಂಘಗಳಿಗೆ ಅರಿವಿನ ಕಾರ್ಯಕ್ರಮಗಳನ್ನು ಮಾಡೀ ಜೊತೆಗೇ ಮಾತನಾಡಿ ಅವರಿಗೇ ಅಕ್ಕಡಿಸಾಲು ಬೆಳೆಗಳ ದೇಸಿ ಬಿತ್ತನೆ ಬೀಜಗಳನ್ನು ಪೂರೈಕೆ ಮತ್ತು ಅರಿವನ್ನುಂಟು ಮಾಡಿದರು. ಇದು ನಮಗೆ ತುಂಬಾ ಉಪಯೋಗವಾಗಿದೆ
– ಪ್ರಭಾಕರ್ ಸಾವಯವ ಅಕ್ಕಡಿಸಾಲು ಬೆಳೆಗಾರರು

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 77601 39199 

LEAVE A REPLY

Please enter your comment!
Please enter your name here