ಕರ್ನಾಟಕದಲ್ಲಿ ಗಣನೀಯವಾಗಿ ಕಡಿಮೆಯಾಗಲಿರುವ ಮಳೆ, ಚೇತರಿಕೆ ಯಾವಾಗ

0

ವಿಸ್ತೃತ ಶ್ರೇಣಿಯ ಹವಾಮಾನ ಮುನ್ಸೂಚನೆಯ ಮಾರ್ಗಸೂಚಿಗಳ ಪ್ರಕಾರ ಇನ್ನೆರಡು ಅಥವಾ ಮೂರುದಿನದ ನಂತರ  ಮುಂದಿನ ೧೪ ದಿನಗಳ ಕಾಲ  ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಕಡಿಮೆಯಾಗುವ ಸಾಧ್ಯತೆಯಿದೆ. ಇದು ಮತ್ತೆ ಯಾವಾಗ ಚೇತರಿಸಿಕೊಳ್ಳುತ್ತದೆ ಎಂಬ ಬಗ್ಗೆ ಅಗ್ರಿಕಲ್ಚರ್‌ ಇಂಡಿಯಾ ಮಾಹಿತಿ ಸಂಗ್ರಹಿಸಿದ್ದು ವಿವರ ಮುಂದಿದೆ.

“ಆಗಾಗ ಈ ರೀತಿಯ ವಿದ್ಯಮಾನ ಹವಾಮಾನದಲ್ಲಿ ಘಟಿಸುತ್ತಿರುತ್ತದೆ. ಮುಂಗಾರು ಆರಂಭವಾದಾಗ ಕರ್ನಾಟಕ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗುತ್ತದೆ. ಆದರೆ ಮುಂಗಾರು ಮಾರುತಗಳು ಉತ್ತರ ವಲಯಕ್ಕೆ ಮುಂದುವರಿದಾಗ ಇಲ್ಲಿನ ಹಲವು ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗುತ್ತದೆ. ಇದಕ್ಕೆ ಕಾರಣ ದೇಶದ ಉತ್ತರ ವಲಯದಲ್ಲಿ ಗಾಳಿಯ ಒತ್ತಡ ಕಡಿಮೆಯಾಗುವುದರಿಂದ ಮೋಡಗಳು ಅತ್ತ ಆಕರ್ಷಿತವಾಗುತ್ತವೆ.

“ಇಂಥ ಹವಾಮಾನ ಪರಿಸ್ಥಿತಿ  ಕೆಲವು ದಿನಗಳ ಕಾಲ ಇರುತ್ತದೆ. ಕರ್ನಾಟಕ ಕರಾವಳಿ ತೀರದಲ್ಲಿಯೂ ಮಳೆ ಕಡಿಮೆಯಾಗುತ್ತದೆ. ಜೂನ್‌ ೧೮ರ ನಂತರ ಅಲಿನ ಪರಿಸ್ಥಿತಿ ಸುಧಾರಿಸುತ್ತದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಹಲವೆಡೆ ಜೂನ್‌ ತಿಂಗಳು ಕಳೆದ ನಂತರ ಮಳೆ ಸ್ಥಿತಿ ಸುಧಾರಿಸಲಿದೆ” ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹವಾಮಾನ ತಜ್ಞ ಡಾ. ತಿಮ್ಮೇಗೌಡ “ಅಗ್ರಿಕಲ್ಚರ್‌ ಇಂಡಿಯಾ” ಪ್ರತಿನಿಧಿಗೆ ತಿಳಿಸಿದರು.

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಜೂನ್‌ ನಲ್ಲಿ ಜುಲೈನಲ್ಲಿ ಸಾಮಾನ್ಯವಾಗಿ ಸರಾಸರಿ ೫೦ ಮಿಲಿ ಮೀಟರ್‌ ಮಳೆಯಾಗುತ್ತದೆ. ಆದರೆ ಈಗಾಗಲೇ ಸರಾಸರಿ ೯೦ ಮಿಲಿ ಮೀಟರ್‌ ಮಳೆಯಾಗಿದೆ. ಮುಂಗಾರು ಮಾರುತಗಳು ಆರಂಭದಲ್ಲಿ ಕರ್ನಾಟಕ ಕರಾವಳಿ ಮತ್ತು ಮಲೆನಾಡು ಪ್ರದೇಶದತ್ತ ಆಕರ್ಷಿತವಾಗುತ್ತವೆ. ಅಲ್ಲಿನ ವಾತಾವರಣ ಗಣನೀಯವಾಗಿ ತಂಪಾದಾಗ ಮೋಡಗಳು ದಕ್ಷಿಣ ಮತ್ತು ಉತ್ತರ ಒಳನಾಡಿನತ್ತ ಹೆಚ್ಚಾಗಿ ಚಲಿಸುತ್ತವೆ. ಆಗ ಈ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತದೆ.

“ಇನ್ನೆರಡು ದಿನಗಳಲ್ಲಿ ಕರ್ನಾಟಕದಲ್ಲಿ ಮಳೆ ಕ್ಷೀಣಿಸುವುದಕ್ಕೆ ಅಥವಾ ಗಣನೀಯವಾಗಿ ಕಡಿಮೆಯಾಗುವುದಕ್ಕೆ ಕೆಲವಾರು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾಗಿ ಸಿನೋಪ್ಟಿಕ್ ವಾತಾವರಣ ಅನುಕೂಲಕರವಾಗಿಲ್ಲದೇ ಇರುವುದು. ಗಾಳಿಯ ಬೀಸುವ ದಿಕ್ಕು ಬದಲಾಗುವುದು, ಉತ್ತರದಲ್ಲಿ ಗಾಳಿಯ ಒತ್ತಡ ಕುಗ್ಗುವುದು ಸೇರಿರುತ್ತದೆ. ಈ ಕಾರಣಗಳಿಂದ ಮುಂಗಾರು ಮಾರುತಗಳು ಉತ್ತರದತ್ತ ಚಲಿಸುತ್ತಿವೆ.

ಈ ರೀತಿಯ ಹವಾಮಾನ ಪರಿಸ್ಥಿಯಿಂದಾಗಿ ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಪ್ರದೇಶಗಳಲ್ಲಿಯೂ ಮಳೆ ಗಣನೀಯವಾಗಿ ಕಡಿಮೆಯಾಗುತ್ತದೆ. ಇನ್ನೂ ೧೫ ದಿನ ಇದೇ ಪರಿಸ್ಥಿತಿ ಮುಂದುವರಿಯುತ್ತದೆ ಎಂದು ಹವಾಮಾನ ಕೇಂದ್ರ, ಬೆಂಗಳೂರಿನ ಪ್ರಾದೇಶಿಕ ವಲಯದ  ವಿಜ್ಞಾನಿ‘ಎಫ್’,ಮುಖ್ಯಸ್ಥ  ಡಾ.ಎನ್.ಪುವಿಯರಸನ್  ಅವರು ಅಗ್ರಿಕಲ್ಚರ್‌ ಇಂಡಿಯಾ ಪ್ರತಿನಿಧಿಗೆ ವಿವರಿಸಿದರು.

ಜುಲೈ ಮೊದಲ ವಾರದಿಂದ ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ರಾಜ್ಯಕ್ಕೆ ವಾಡಿಕೆಗಿಂತ ಅಧಿಕ ಮಳೆ ಆಗುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here