ಯಾಕಿಂಗೆ ನಾವು?
ಗನ್, ಲಾಂಗ್ ಹಿಡಿದು ಕಳ್ತನ, ಕೊಲೆಮಾಡೋನೇ ಹೀರೋ, ದೊಡ್ ಕಳ್ತನ ಮಾಡೋನು ದೊಡ್ ಹೀರೋ ಅಂತ ನಂಬಿಸ್ತಿರೋ ಕತೆಗಳನ್ನ ಬ್ಲಾಕ್ ಬಸ್ಟರ್ ಮಾಡ್ಕ್ಯಂತ ತಿರಗ್ತಿದೀವಿ. ರೈತರ ನಿಜವಾದ ಸಮಸ್ಯೆಗಳನ್ನು ಮುಟ್ಟಿರೋ, ಮುಟ್ ನೋಡ್ಕೊಳೋಂತ ಮಾತುಗಳಿರೋ ಸಿನೆಮಾಗಳನ್ನ ಪ್ರೊಡ್ಯೂಸರ್ ಮುಟ್ ಮುಟ್ ನೋಡ್ಕೊಳೋ ಹಂಗ್ ಸೋಲಿಸ್ತೀವಿ.
ಕ್ಷೇತ್ರಪತಿ ! ಪಕ್ಕಾ ಜವಾರಿ ಭಾಷಿ ಒಳಗ ರೈತರ ಸಮಸ್ಯೆ ಮಾತಾಡೋ ಕತೆ. ನವೀನ್ ಶಂಕರ್! ಖಡಕ್ ರೊಟ್ಟಿ ನಾಡಿನಿಂದ ಎದ್ದು ಬಂದ ಮಣ್ಣಿನ ಬಣ್ಣದ, ತೀಕ್ಷ್ಣ ನೋಟದ ಖಡಕ್ ನಟ. ಎಂಥಾ ಅಭಿನಯ ಅದು! ಮಾತೇ ಇಲ್ಲದ ಬರಿಯ ಲುಕ್ ನಲ್ಲೆ ಅಲುಗಾಡಿಸುವಂತಾ ಅರ್ಥ ಹೊರಡಿಸುವ ಆ ಶಕ್ತಿ. ವಾವ್. ಸರಿಯಾಗಿ ಬಳಸಿಕೊಂಡರೆ ನವೀನ್ ಕನ್ನಡ ಚಿತ್ರರಂಗದ ಮತ್ತೊಂದು ಆಸ್ತಿ. ಈ ಹಿಂದೆ ಗುಲ್ಟೂನಲ್ಲಿ, ಹೊಂದಿಸಿ ಬರೆಯಿರಿ ಯಲ್ಲಿ ಕೂಡ ನವೀನ್ ದು ಅಮೋಘ ಅಭಿನಯ.
ನಾನೂ ಬೆಳೆದದ್ದನ್ನ ಸ್ಕೂಟರಿಗೆ ಕಟ್ಟಿಕೊಂಡು ಮನೆಮನೆಗೆ ಮಾರಿದ್ದೇನೆ. ನಿನ್ನ ಜೀವನದ ಗುರಿ ಏನು ಅಂತ ಕೇಳಿದರೆ ಯಾವತ್ತಿಗೂ ನಾನು ಬೆಳೆದದ್ದನ್ನು ರಸ್ತೆ ಬದಿಯಲ್ಲಿ ಕೂತು ಮಾರೋದು ಅಂತಲೇ ಹೇಳುತ್ತೇನೆ. ರೈತರ ತೋಟಕ್ಕೂ ಗ್ರಾಹಕರ ತಾಟಿಗೂ ನಡುವೆ ಇರುವ ಬೇಧಿಸಲಾರದ ವ್ಯೂಹ ಇದೆಯಲ್ಲಾ…ಅದರ ಬಗ್ಗೆ ಕೆಟ್ಟ ಕೋಪ.
ಸಿನೆಮಾದಲ್ಲಿ ವಿಲನ್ ಕಣ್ಣಿಗೆ ಕಾಣ್ತಾನ್ರೀ. ಹೊಡೆವ ಹೀರೋ ಕೈಯಲ್ಲಿ ಕಸುವೂ ಇದೆ. ಆದರೆ ನಿಜದಲ್ಲಿ ಹಾಗೊಬ್ಬ ವಿಲನ್ ನಮ್ಮ ಕಣ್ಣಿಗೆ ಕಾಣಲ್ಲ ಕೈಗೆ ಸಿಗಲ್ಲ. ಮತ್ತು ಈ ಸಿನೆಮಾ ಹಾಗೆ ಹಳ್ಳೀಲಿ ಒಬ್ಬ ರೈತ ನಿಂತು ಬದುಕೋ ಮಾತಾಡಿದರೆ ಜಾತಿ ಗೀತಿ ಬಿಟ್ಟು ರೈತಜಾತಿಯಾಗಿ ಕೇಳೋ ಕಿವಿಗಳೂ ಹಳ್ಳಿಗಳಲ್ಲಿಲ್ಲ. ಸಿನೆಮಾದಂತೆ ಈ ಸಮಸ್ಯೆ ಫಿಸಿಕಲ್ ಫೈಟ್ ಸಹ ಅಲ್ಲ.
ಈ ಬಗ್ಗೆ ನಾನು ವಿಜಯಕರ್ನಾಟಕದ ನನ್ನ ಅಂಕಣದಲ್ಲಿ ಬರೆದ ಲೇಖನಗಳಿಗೆ ಲೆಕ್ಕವಿಲ್ಲ. ಆದರೆ ನೂರಾರು ಲೇಖನ, ಭಾಷಣಗಳಿಗಿಂತ ಯಾವುದೇ ಸಮಸ್ಯೆಯನ್ನು ಕಲೆ ಅತ್ಯಂತ ಪರಿಣಾಮಕಾರಿಯಾಗಿ ದಾಟಿಸಬಲ್ಲದು.
‘ಈ ಸಮಿತಿ, ವರದಿಗಳಿಂದ ಏನಾಕ್ಕೈತ್ರೀ? ಗಾಯ ಎಲ್ಲೋ ಆಕ್ಕತಿ, ಮುಲಾಮು ಇನ್ನೆಲ್ಲೋ ಹಚ್ಚಾಕತ್ತೀವಿ. ನಾವ್ ಬೆಳೆಯೋ ಬೆಳೆಗೆ ಇಷ್ಟು ಬೆಲೆ ಸಿಕ್ತಾತಂತ ಗ್ಯಾರಂಟಿ ಇರಬೇಕು’ – ರೈತನ ಮಾತು ‘ಜನ ಆಳಿಸ್ಕೋಬೇಕಂತಾರ. ನಾ ಆಳಬೇಕಂತೀನಿ. ಒಂದ್ ಕ್ವಾರ್ಟರ್ , ಎರಡ್ ಚಿಕನ್ ಪೀಸ, ಐದ್ನೂರ್ ರೂಪಾಯ್ ಬಿಸಾಕಿದ್ರ ನನ್ನಾ ಹೆಗಲ್ ಮ್ಯಾಲ್ ಹೊತ್ ಮೆರಸ್ತಾರ’ – ಸಾವ್ಕಾರ್ ಕಂ ಪೊಲಿಟಿಶಿಯನ್ ಮಾತು.
ಈ ಸಿನೆಮಾದಲ್ಲಿ ಸಮಸ್ಯೆ ಮಾತ್ರ ಇಲ್ಲ. ರೈತರು, ಮಾಧ್ಯಮ, ಸರಕಾರ ಎಲ್ರೂ ಸೇರಿ ಕಂಡುಕೊಳ್ಳಬೇಕಾದ ಸಮಗ್ರ ಪರಿಹಾರ ಸೂತ್ರ ಇದೆ. ರೈತರ ಸಮಸ್ಯೆಗೆ ಹೊಲದ ಬೆಳೆ ಮಾತ್ರ ಅಲ್ಲ. ಸ್ಥಳೀಯ ವಸ್ತುಗಳ ಮಾರಾಟವನ್ನೂ ಸೂಚಿಸಿದ್ದು ನನಗೆ ಬಹಳ ಹಿಡಿಸಿತು. BGM ಕೂಡ wonderful. ಕಡೇಲಿ ಸ್ವಲ್ಪ ಲ್ಯಾಗ್ ಆಗ್ಯಾದ ಖರೇ. ಸ್ವಲ್ಪ್ ಸಹಿಸ್ಕೊಳ್ರೀ. ನಮ್ ಪ್ರಾಬ್ಲಂ ಸಹಿಸಲಾರದಷ್ಟು ಲ್ಯಾಗ್ ಅದಾವ. ಹೇಳಾಕ ಅಷ್ಟ್ ಟೈಮಾರ ಬೇಕಲ್ರೀ?
ಕ್ಲೈಮ್ಯಾಕ್ಸ್ ಪಾಸಿಟಿವ್. ನಿಜದ ಬದುಕಿನ್ನೂ ನೆಗೆಟಿವ್. ಸಿನೆಮಾ ಅಂದರೆ ಆಶಯ ತಾನೇ? ಇದಾಗಬೇಕ್ರೀ ನಿಜವಾದ ಬ್ಲಾಕ್ ಬಸ್ಟರ್. ಮಾಡ್ರಲಾ. ದಯವಿಟ್ಟು, ದಯವಿಟ್ಟು ಇಂತಾ ಪಿಚ್ಚರ್ ಸೋಲಿಸಬ್ಯಾಡ್ರೀ. ಹೋಗ್ ನೋಡ್ರೀ