ಎರೆಹುಳುಗಳು, ಬೆಳೆಗಳ ಬೇರುಗಳನ್ನು ತಿನ್ನುತ್ತವೆ. ಇದರಿಂದ ಬೆಳೆ ಸಮರ್ಪಕವಾಗಿ ಬೆಳವಣಿಗೆಯಾಗುವುದಿಲ್ಲ. ಇಂಥದೊಂದು ತಪ್ಪು ಅಭಿಪ್ರಾಯ ಇಂದಿಗೂ ಸಾಕಷ್ಟು ಕೃಷಿಕರಲ್ಲಿದೆ. ಅಕ್ಷರಸ್ಥ ಕೃಷಿಕರಲ್ಲಿಯೂ ಇಂಥ ತಪ್ಪು ತಿಳಿವಳಿಕೆ ಹೊಂದಿದವರು ಇದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ. ಎರೆಹುಳುಗಳಿಂದ ಕೃಷಿಗೆ ಆಗುವ ಪ್ರಯೋಜನ- ಪರಿಣಾಮ ಅಪಾರ. ಆದ್ದರಿಂದ ಅವುಗಳ ಇರುವಿಕೆ, ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಕೃಷಿಭೂಮಿಯಲ್ಲಿ ನಿರ್ಮಾಣ ಮಾಡುವುದು ಅತ್ಯವಶ್ಯಕ.
ಮಣ್ಣಿನ ಫಲವತ್ತತೆ, ಉತ್ಪಾದಕತೆ ಹೆಚ್ಚಿಸಲು ಪ್ರಕೃತಿ ತನ್ನದೇ ವಿಧಾನಗಳನ್ನು ಆಧರಿಸಿದೆ.ಇದನ್ನು ಅರ್ಥ ಮಾಡಿಕೊಂಡು ಪೂರಕ ರೀತಿಯಲ್ಲಿ ಬೆಳೆ ಬೆಳೆಯಲು ಸಾವಯವ ಕೃಷಿ ಸಹಾಯಕ. ಏಕೆಂದರೆ ಇಲ್ಲಿ ರಾಸಾಯನಿಕ ಕೃಷಿ ಪದ್ದತಿಯಲ್ಲಿರುವಂತೆ ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮಣುಗಳನ್ನು ಮತ್ತು ಎರೆಹುಳುಗಳಂತ ಜೀವಿಗಳನ್ನು ಕೊಲ್ಲುವುದರ ಬದಲಾಗಿ ಸಂರಕ್ಷಿಸುವ ರೀತಿ-ನೀತಿಗಳಿವೆ.
ಸಾವಯವ ಪದಾರ್ಥಗಳನ್ನು ಸೇವಿಸಿ;ಜೀರ್ಣಿಸಿಕೊಂಡು ಎರೆಹುಳು ವಿಸರ್ಜಿಸುವ ಮಲ ಉತ್ಕೃಷ್ಟ ಬೆಳೆ ಪೋಷಕಾಂಶ ಇದರಲ್ಲಿ ಸಾರಜನಕ,ರಂಜಕ,ಪೊಟಾಷ್,ಕ್ಯಾಲ್ಸಿಯಂ,ಮೇಗ್ನಿಷಿಯಂ,ಕಬ್ಬಿಣ,ಮ್ಯಾಂಗನೀಸ್ಇತ್ಯಾದಿ ಪೋಷಕಾಂಶಗಳಿವೆ. ಇದಲ್ಲದೇ ಎರೆಹುಳುಗಳು ಜಮೀನಿನಲ್ಲಿ ಸ್ವಾಭಾವಿಕ ರೀತಿಯ ಉಳುಮೆ ಕೆಲಸ ಮಾಡುತ್ತವೆ. ಜಮೀನಿನಲ್ಲಿ ಅಸಂಖ್ಯಾತ ಸಣ್ಣ ಸಣ್ಣ ರಂಧ್ರಗಳನ್ನು ಉಂಟುಮಾಡುವುದರಿಂದ ಸಸ್ಯದ ಬೇರುಗಳಿಗೆ ಜೀವ ಚೈತನ್ಯ ನೀಡುವ ಆಮ್ಲಜನಕ,ಇತರ ಪೋಷಕಾಂಶ ಸರಾಗವಾಗಿ ದೊರೆಯುತ್ತದೆ; ಇದರಿಂದಾಗಿಯೇ ಎರೆಹಳುಗಳನ್ನು ಪ್ರಕೃತಿಯ ನೇಗಿಲು ಎಂದು ಹೇಳಲಾಗುತ್ತದೆ.
ಅಗತ್ಯಕ್ಕೆ ಅನುಗುಣವಾಗಿ ಎರೆಗೊಬ್ಬರ ಬಳಸುವುದರಿಂದ ಜಮೀನಿನ ಫಲವತ್ತತೆ ವೃದ್ದಿಸುತ್ತಾ ಹೋಗುತ್ತದೆ. ಚೆನ್ನಾಗಿ ಇಳುವರಿಯೂ ಬಂದು; ಫಸಲನ್ನೂ ದೀರ್ಘಕಾಲ ಸಂರಕ್ಷಿಸಿಡಬಹುದು. ಎರೆಗೊಬ್ಬರ ಬಳಸಿ ಬೆಳೆದ ಫಸಲಿನ ಆಹಾರ ಸೇವಿಸುವುದರಿಂದ ಆರೋಗ್ಯದ ಮೇಲೆ ಯಾವುದೆ ದುಷ್ಪರಿಣಾಮವೂ ಇರುವುದಿಲ್ಲ. ಸಾವಯವ ಬೇಸಾಯ ಪದ್ದತಿ ಅನುಸರಿಸುವ ರೈತರು ಬೆಳೆ ಪೋಷಕಾಂಶಗಳನ್ನು ಖರೀದಿಸಿ ತರುವ ಪ್ರವೃತ್ತಿ ನಿಲ್ಲಿಸುವುದು ಸೂಕ್ತ.ಇದರಿಂದ ಖರ್ಚು ಕಡಿಮೆಯಾಗಿ; ಲಾಭಾಂಶದ ಪ್ರಮಾಣ ತಕ್ಕಮಟ್ಟಿಗಾದರೂ ಏರಲು ಅನುಕೂಲವಾಗುತ್ತದೆ.
ನೆಲಮಟ್ಟದಿಂದ ಎರಡು-ಎರಡೂವರೆ ಅಡಿ ಎತ್ತರ, ಹತ್ತು ಅಡಿ ಉದ್ದ ,ಎರಡರಿಂದ ಎರಡೂವರೆ ಅಗಲವಿರುವ ತೊಟ್ಟಿ ನಿರ್ಮಾಣ ಮಾಡಬೇಕು. ಇದರ ತಳದಲ್ಲಿ ಆರು ಇಂಚು ಎತ್ತರದವರೆಗೆ ಸಣ್ಣ ಸಣ್ಣ ಕಲ್ಲು ಮತ್ತು ಇಟ್ಟಿಗೆ ಚೂರುಗಳನ್ನು ಹಾಕಬೇಕು. ಇದರ ಮೇಲೆ ಅರೆಕಳಿತ ಗೊಬ್ಬರ ಹಾಕಿ ತೊಟ್ಟಿ ತುಂಬಿಸಬೇಕು. ಇಲ್ಲಿ ತಿಳಿಸಿದ ಅಳತೆ ತೊಟ್ಟಿಗೆ 250 ಗ್ರಾಂ ಪ್ರಮಾಣದ ಎರೆಹುಳುಗಳನ್ನು ಬಿಡಬೇಕು.
ಎರೆಹುಳುಗಳು ತೊಟ್ಟಿಯಲ್ಲಿರುವ ಅರೆಕಳಿತ ಸಸ್ಯತ್ಯಾಜ್ಯಗಳನ್ನು ಸೇವಿಸಿ, ಜೀರ್ಣಿಸಿಕೊಂಡು ಎರೆಗೊಬ್ಬರ ನೀಡುತ್ತವೆ. ತಿಂಗಳೊಳಗೆ ಎರೆಗೊಬ್ಬರ ಸಿದ್ದ. ಈ ಗೊಬ್ಬರವನ್ನು ತೊಟ್ಟಿಯಿಂದ ಹೊರಗೆ ಸಂಗ್ರಹಿಸಬೇಕು. ಆಗ ಎರೆಹುಳುಗಳು ತೊಟ್ಟಿತಳದಲ್ಲಿ ಸೇರಿಕೊಂಡಿರುತ್ತವೆ. ಸಂಗ್ರಹಿಸಿದ ಎರೆಗೊಬ್ಬರವನ್ನು ಜರಡಿಯಾಡಬೇಕು;ಇದರಿಂದ ಪುಡಿ, ಎರೆಹುಳು ಸೇವಿಸದೇ ಉಳಿದ ಸಸ್ಯತ್ಯಾಜ್ಯ ಬೇರ್ಪಡುತ್ತದೆ. ಗೊಬ್ಬರದೊಳಗೆ ಎರೆಹುಳುಗಳಿದ್ದರೆ ಅವುಗಳನ್ನು ಪುನಃ ತೊಟ್ಟಿಯಲ್ಲಿ ಬಿಡಬೇಕು.ಈ ನಂತರ ಮತ್ತೆ ಅರೆಕಳಿತ ಗೊಬ್ಬರವನ್ನೇ ತೊಟ್ಟಿಗೆ ತುಂಬಿಸಬೇಕು.
ತುಂಬಾ ಉಪಯುಕ್ತ ಮಾಹಿತಿ