ಮನುಷ್ಯನಿಗೆ ಎಲ್ಲ ಭಾಗ್ಯಗಳಿಗಿಂತ “ಆರೋಗ್ಯ ಭಾಗ್ಯ”ವೇ ಮೇಲು. ಪ್ರತಿನಿತ್ಯ ಸೇವಿಸುವ ಆಹಾರಕ್ಕೂ ಆರೋಗ್ಯಕ್ಕೂ ನಿಕಟವಾದ ಸಂಬಂಧವಿದೆ. ಶೈವಾವಸ್ಥೆಯಿಂದ ಜೀವಾಂತ್ಯದವರೆಗೂ ಉತ್ತಮ ಆರೋಗ್ಯ ಹೊಂದಬೇಕಾದರೆ ವಯಸ್ಸಿಗನುಗುಣವಾಗಿ ಪೌಷ್ಟಿಕ ಆಹಾರ/ಸಮತೋಲನ ಆಹಾರ ಬೇಕು.
ಭಾರತೀಯರ ಆಹಾರ ಪದ್ಧತಿಯು ಏಕದಳ ಧಾನ್ಯ ಆಧಾರಿತವಾಗಿದೆ. ನಾವು ಸೇವಿಸುವ ಬೆಳಗಿನ ಉಪಹಾರವಿರಲಿ, ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟವಿರಲಿ, ಇವರ ಊಟದ ತಟ್ಟೆಯಲ್ಲಿ ಏಕದಳ ಧಾನ್ಯದಿಂದ ತಯಾರಿಸಿದ ಪದಾರ್ಥಗಳಾದ ಅನ್ನ, ಚಪಾತಿ, ರೊಟ್ಟಿ ಮುಂತಾದವುಗಳೆ ಪ್ರಧಾನವಾಗಿರುತ್ತವೆ.
ಶೇಕಡ 60 ರಷ್ಟು ಪ್ರೋಟೀನ್‌ನ್ನು ಏಕದಳ ಧಾನ್ಯವೇ ಪೂರೈಸುತ್ತವೆ (ಓಓಒಃ ವರದಿ). ಆದರೆ, ಏಕದಳ ಧಾನ್ಯದಲ್ಲಿರುವ ಪ್ರೋಟೀನು ಗುಣಮಟ್ಟದ್ದಾಗಿರುವುದಿಲ್ಲ. ಇವುಗಳಲ್ಲಿ ದೇಹಕ್ಕೆ ಅವಶ್ಯಕವಾದ ಯಾವುದಾದರೊಂದು ಅಮೈನೋ ಆಮ್ಲಗಳ ಕೊರತೆ ಇರುತ್ತದೆ. ಏಕದಳ ಧಾನ್ಯಗಳನ್ನು ಬೇಳೆ ಕಾಳುಗಳು, ಹಾಲು ಮತ್ತು ಹಾಲಿನ ಪದಾರ್ಥದೊಂದಿಗೆ ಸೇವಿಸಿದಾಗ ಮಾತ್ರ ಗುಣಮಟ್ಟದ ಪ್ರೋಟಿನನ್ನು ಪಡೆಯಬಹುದಾಗಿದೆ.
ವಿಶ್ವಆಹಾರ ಭದ್ರತೆ ಮತ್ತು ಪೋಷಣೆಯ ಅಧ್ಯಯನದ ಪ್ರಕಾರ ಭಾರತದಲ್ಲಿ ಶೇಕಡ 73ಕ್ಕಿಂತ ಹೆಚ್ಚು ಜನರು ಪ್ರೋಟೀನ್ ಕೊರತೆಯಿಂದ ಬಳಲುತ್ತಿದ್ದಾರೆ . ಅಪೌಷ್ಟಿಕತೆ ನಿವಾರಿಸಲು ಹಲವಾರು ಆಯಾಮಗಳಿವೆ. ಅವುಗಳಲ್ಲಿ ದೈನಂದಿನ ಆಹಾರದಲ್ಲಿ ವೈವಿಧ್ಯಮಯ ಆಹಾರ ಸೇವನೆಯು ಒಂದು. ಅದರಲ್ಲೂ ಮುಖ್ಯವಾಗಿ ಅಧಿಕ ಪ್ರೋಟೀನ್ ಹೊಂದಿದ ಬೆಳೆಗಳನ್ನು ಉತ್ತೇಜಿಸುವುದು ಮತ್ತು ಬಳಸುವುದು. ಕಿನೋವಾ ಅಂತಹ ಬೆಳೆಗಳಲ್ಲಿ ಒಂದು.
ಇತ್ತೀಚೆಗೆ ಹೆಚ್ಚು ಆಸಕ್ತಿ ಮೂಡಿಸಿರುವ ಕಿನೋವಾ ಧಾನ್ಯವು ಏಕದಳಧಾನ್ಯಕ್ಕೆ ಹೊರತಾಗಿದೆ. ಈ ಧಾನ್ಯದಲ್ಲಿ ದೇಹಕ್ಕೆ ಬೇಕಾದ ಎಲ್ಲ ವಿಧಧ ಅಮೈನೊ ಆಮ್ಲಗಳನ್ನು ಹೊಂದಿರುವುದರಿಂದ ಮತ್ತು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಇದರ ಸೇವನೆಯಿಂದ ಗುಣಮಟ್ಟದ ಪ್ರೋಟೀನನ್ನು ಪಡೆಯುವುದರೊಂದಿಗೆ ಪ್ರೋಟೀನಿನ ಕೊರತೆಯನ್ನು ನೀಗಿಸಬಹುದಾಗಿದೆ.
ಕಿನೋವಾ ಒಂದು ಮಿಥ್ಯಧಾನ್ಯ. ವೈಜ್ಞಾನಿಕವಾಗಿ ಇದನ್ನು “ಚಿನೋಪೋಡಿಯಂ ಕಿನೋವಾ” ಎಂದು ಕರೆಯುತ್ತಾರೆ. ಇದರ ಮೂಲ ದಕ್ಷಿಣ ಅಮೇರಿಕಾದ ಆಂಡಿಸ್ ಪ್ರದೇಶ. ಇತರೆದೇಶಗಳಾದ ಬೊಲಿವಿಯಾ, ಪೆರು, ಈಕ್ವೆಡಾರ್, ಕೊಲಂಬಿಯಾ, ಅರ್ಜೇಂಟೀನಾ ಹಾಗೂ ಚಿಲಿ ದೇಶಗಳಲ್ಲಿ ಪ್ರಮುಖ ಆಹಾರ ಧಾನ್ಯವಾಗಿ ಬೆಳೆಯುತ್ತಿದ್ದಾರೆ.
ನಮ್ಮ ದೇಶದಲ್ಲಿ ಮುಖ್ಯವಾಗಿ ರಾಜಸ್ಥಾನ, ಗುಜರಾತ, ಉತ್ತರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಪರಿಚಯವಾಗುತ್ತಿದೆ. ಮುಂಬರುವ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಧಾನ್ಯದ ಕಾಳುಗಳು ತಿಳಿಹಳದಿ, ಕೆಂಪು ಇಲ್ಲವೇ ಕಪ್ಪು ಬಣ್ಣವನ್ನು ಹೊಂದಿವೆ. ತಿಳಿಹಳದಿ ಧಾನ್ಯಗಳು ಹೆಚ್ಚಿನ ಜನಪ್ರಿಯತೆ ಹೊಂದಿವೆ. ಕಿನೋವಾವು ಅಕ್ಕಿ, ಜೋಳ, ಗೋಧಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್‌ನ್ನು ಹೊಂದಿದ್ದು, ದೇಹಕ್ಕೆ ಬೇಕಾಗುವ ಎಲ್ಲಾ ಅವಶ್ಯಕ ಅಮಿನೋ ಆಮ್ಲಗಳನ್ನು ಒಳಗೊಂಡಿದೆ.
ಗ್ಲುಟೇನ್ ರಹಿತವಾದ ಕಿನೋವಾದಲ್ಲಿ ಪ್ರೋಟೀನ್ (16.78 %), ನಾರಿನಾಂಶ (5.53 %), ಶರ್ಕರ ಪಿಷ್ಟ (60.11 %), ಕ್ಯಾಲ್ಸಿಯಂ (143 ಮಿ.ಗ್ರಾಂ %.) ಕಬ್ಬಿಣಾಂಶ (7.88 ಮಿ.ಗ್ರಾಂ %.) ಸತು (3.15 ಮಿ.ಗ್ರಾಂ%.) ಹಾಗೂ ಇತರೆ ಖನಿಜಾಂಶಗಳು ಹೇರಳವಾಗಿವೆ. ಪ್ರೋಟೀನ್ ಪ್ರಮಾಣ ಮತ್ತು ಪ್ರೋಟೀನ್ ಗುಣಮಟ್ಟದಲ್ಲಿ ಇದೊಂದು ಉತ್ಕೃಷ್ಟ ಧಾನ್ಯವಾಗಿದೆ.
ಈ ಧಾನ್ಯದ ಪ್ರಾಮುಖ್ಯತೆಯನ್ನು ಮನಗಂಡು ವಿಶ್ವ ಜನರಲ್ ಅಸೆಂಬ್ಲಿಯು 2013ನ್ನು “ಅಂತರರಾಷ್ಟಿಯ ಕಿನೋವಾ ವರ್ಷ” ಎಂದು ಘೋಷಣೆ ಮಾಡಿರುತ್ತದೆ. ಕಿನೋವಾ ಧಾನ್ಯವನ್ನು ಪಾಲಿಷ್ ಮಾಡಿ, ಧಾನ್ಯ, ಹಿಟ್ಟು ಮತ್ತು ರವೆಯ ರೂಪದಲ್ಲಿ ಸಂಸ್ಕರಿಸಿ, ದಿನನಿತ್ಯದ ಆಹಾರ ತಯಾರಿಕೆಯಲ್ಲಿ ಇತರ ಧಾನ್ಯಗಳಂತೆ ಬಳಸಬಹುದಾಗಿದೆ (ಉದಾ: ಕಿನೋವಾ ಅನ್ನ, ಪಾಯಸ, ಇಡ್ಲಿ, ದೋಸೆ, ಉಪ್ಪಿಟ್ಟು, ಲಡ್ಡು ಮತ್ತು ಚಕ್ಕುಲಿ ಮುಂತಾದವುಗಳು).
ಕಿನೋವಾ ಪೋಷಕಾಂಶಗಳ ಮೌಲ್ಯವನ್ನು ಮನಗಂಡು, ಬೆಂಗಳೂರು, ಕೃಷಿ ವಿಶ್ವವಿದ್ಯಾನಿಲಯದ “ಕೊಯ್ಲಿನೋತ್ತರ ಅಭಿಯಾಂತ್ರಿಕ ಹಾಗೂ ತಂತ್ರಜ್ಞಾನ “ವಿಭಾಗದಲ್ಲಿ ದಿಢೀರ್ ತಯಾರಿಸಲು, ಸಿದ್ಧ ಕಿನೋವಾ ಆಧಾರಿತ ಉಪಹಾರ ಮಿಶ್ರಣಗಳಾದ ಕಿನೋವಾ ಖಾರಾಬಾತ್ ಮಿಶ್ರಣ, ಕಿನೋವಾ ಬಿಸಿಬೇಳೆಬಾತ್ ಮಿಶ್ರಣ, ಕಿನೋವಾ ಖಾರಾಪೊಂಗಲ್ ಮಿಶ್ರಣ ಹಾಗೂ ಕಿನೋವಾ ಡೋಕ್ಲಾ ಮಿಶ್ರಣಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಅಭಿವೃದ್ಧಿಪಡಿಸಿದ ಕಿನೋವಾ ಉಪಹಾರ ಮಿಶ್ರಣಗಳಲ್ಲಿ ಹೆಚ್ಚಿನ ಪ್ರೊಟೀನ್, ಆಹಾರದ ನಾರಿನಾಂಶ, ಕ್ಯಾಲ್ಸಿಯಂ, ಸತು ಮತ್ತು ಉತ್ಕರ್ಷಣಾ ನಿರೋಧಕ ಅಂಶಗಳು ಉತ್ತಮವಾಗಿರುವುದರಿಂದ ಎಲ್ಲಾ ವಯೋಮಾನದವರಿಗೆ ಸೂಕ್ತ ಆಹಾರವಾಗಿರುತ್ತದೆ.
ಕಿನೋವಾ ಆಧಾರಿತ ಉಪಹಾರ ಮಿಶ್ರಣಗಳಲ್ಲಿ (100ಗ್ರಾಂ.) ಸರಾಸರಿ 12-17 ಗ್ರಾಂ. ಪ್ರೋಟೀನ್, 360-380 ಕಿ.ಕ್ಯಾಲರಿ ಶಕ್ತಿ ಹಾಗೂ 11 ರಿಂದ 13 ಗ್ರಾಂ. ಆಹಾರದ ನಾರಿನಾಂಶ ದೊರೆಯುತ್ತದೆ. ಇದರ ಜೊತೆಗೆ ಸೂಕ್ಷ್ಮ ಪೋಷಕಾಂಶಗಳಾದ ಕ್ಯಾಲ್ಸಿಯಂ, ಕಬ್ಬಿಣ, ಸತು ಹಾಗೂ ಉತ್ಕರ್ಷಣಾ ನಿರೋಧಕ ಅಂಶಗಳು ಲಭಿಸುತ್ತವೆ. ಈ ಮಿಶ್ರಣಗಳನ್ನು ಎಂಪಿಪಿ (ಮೆಟಾಲೈಜ್ಡ್ ಪಾಲಿಪ್ರೋಪಿಲಿನ್) ಕವರ್‌ಗಳಲ್ಲಿ 6 ತಿಂಗಳವರೆಗೆ ಕೆಡದಂತೆ ಶೇಖರಿಸಬಹುದಾಗಿದೆ.
ಕಿನೋವಾ ಆಧಾರಿತ ಉಪಹಾರ ಮಿಶ್ರಣಗಳಿಂದ ಅತೀ ಕಡಿಮೆ ಸಮಯದಲ್ಲಿ ಸುಲಭವಾಗಿ ಯಾವಾಗಬೇಕು ಆಗ ಆಹಾರ ತಯಾರಿಸಬಹುದಾಗಿದೆ. ಪೂರ್ವ ಸಿದ್ಧತೆಯಿಲ್ಲದೆ ಈ ಮಿಶ್ರಣಗಳನ್ನು ಕುದಿಯುವ ನೀರಿಗೆ ಹಾಕಿ 4-5 ನಿಮಿಷದಲ್ಲಿ ಸೇವಿಸಲು ಸಿದ್ಧ ಉಪಹಾರಗಳನ್ನು ತಯಾರಿಸಬಹುದಾಗಿದೆ. ಅಲ್ಲದೆ ಬಿಸಿನೀರಿಗಾಗಿ ಉಪಯೋಗಿಸುವ ಕೆಟಲ್‌ನಲ್ಲಿಯೂ ಸಹ ತಯಾರಿಸಬಹುದಾಗಿದೆ.
ಈ ಆಹಾರ ಮಿಶ್ರಣಗಳನ್ನು ಪ್ರವಾಸದ ಸಮಯದಲ್ಲಿ, ಸಮಯದ ಅಭಾವವಿದ್ದವರಿಗೆ, ವೃತ್ತಿ ನಿರತ ಮಹಿಳೆಯರಿಗೆ, ವಸತಿ ನಿಲಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕಡಿಮೆ ಸಮಯದಲ್ಲಿ ಪೌಷ್ಟಿಕ ಉಪಹಾರವನ್ನು ತಯಾರಿಸಲು ಸೂಕ್ತವಾಗಿದೆ.