ಈ ವರ್ಷ 2024ರಲ್ಲಿ ಸಕಾಲದಲ್ಲಿಯೇ ನೈರುತ್ಯ ಮುಂಗಾರು ಆರಂಭವಾಗಿದೆ. ರಾಷ್ಟ್ರದಲ್ಲಿ ಸಿಹಿಕಹಿ ಎರಡೂ ಭಾವನೆಗಳನ್ನು ಉಂಟು ಮಾಡಿರುವ ಇದು ಇದೇ ಸೆಪ್ಟೆಂಬರ್ 22 ರಿಂದ ನಿರ್ಗಮನ ಪ್ರಕ್ರಿಯೆ ಆರಂಭಿಸಬಹುದು
ರಾಷ್ಟ್ರದಲ್ಲಿ ಒಟ್ಟಾರೆಯಾಗಿ ಇತ್ತೀಚಿನ ವರ್ಷಗಳಲ್ಲಿ ದೀರ್ಘಾವಧಿಯ ಸರಾಸರಿಗಿಂತ ಶೇಕಡ 8ರಷ್ಟು ಹೆಚ್ಚು ಮಳೆಯಾಗಿದೆ. ಹಲವೆಡೆ ಭೂಮಿ ಸಂಪೂರ್ಣ ತೋಯ್ದಿದೆ. ಕೆರೆಕುಂಟೆ- ಜಲಾಶಯಗಳು ಭರ್ತಿಯಾಗಿದೆ. ಸೆಪ್ಟೆಂಬರ್ 22 ರ ಸುಮಾರಿಗೆ ವಾಯುವ್ಯ ಭಾರತದ ಭಾಗಗಳಿಂದ ಮುಂಗಾರು ನಿರ್ಗಮನ ಆರಂಭವಾಗಬಹುದು. ಹೀಗೆ ಆದರೆ ಇತ್ತೀಚಿನ ವರ್ಷಗಳಲ್ಲಿಯೇ ತ್ವರಿತ ನಿರ್ಗಮನ ಎಂದಾಗುತ್ತದೆ.
ಕಳೆದ ವರ್ಷ ಮುಂಗಾರು ನಿರ್ಗಮನವು ಸೆಪ್ಟೆಂಬರ್ 25 ರ ಸುಮಾರಿಗೆ ಪ್ರಾರಂಭವಾಯಿತು, ಆದರೆ 2022 ರಲ್ಲಿ, ಭಾರತ ಹವಾಮಾನ ಇಲಾಖೆ ಸೆಪ್ಟೆಂಬರ್ 30 ರಂದು ಪಂಜಾಬ್, ಚಂಡೀಗಢ, ದೆಹಲಿ, ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳು, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಹರಿಯಾಣದಿಂದ ಮಾನ್ಸೂನ್ ನಿರ್ಗಮನವಾಗಿದೆ ಎಂದು ಘೋಷಿಸಿತ್ತು.
ನೈರುತ್ಯ ಮುಂಗಾರು, ವಾಯುವ್ಯ ಭಾರತದ ಎಲ್ಲಾ ಭಾಗಗಳಿಂದ ಏಕಕಾಲದಲ್ಲಿ ನಿರ್ಗಮಿಸುತ್ತದೆ ಎಂದು ಹೇಳಲಾಗುವುದಿಲ್ಲ. ಕಡಿಮೆ ಒತ್ತಡದ ಪ್ರದೇಶವು ಮುಂದಿನ ವಾರ ಮಧ್ಯ ಭಾರತದಾದ್ಯಂತ ಗುಜರಾತ್ ಮತ್ತು ರಾಜಸ್ಥಾನಕ್ಕೆ ಚಲಿಸುವ ಮುನ್ಸೂಚನೆಯಿರುವುದರಿಂದ ಮಳೆಯನ್ನು ಇನ್ನೂ ನಿರೀಕ್ಷಿಸಬಹುದು.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಗಳು ಸೆಪ್ಟೆಂಬರ್ 19-25 ರ ಅವಧಿಯಲ್ಲಿ ಪ್ರಮುಖ ಹವಾಮಾನ ವ್ಯವಸ್ಥೆಗಳು ದೇಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸೂಚಿಸುತ್ತವೆ.
ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ, ಪ್ರತ್ಯೇಕವಾದ ಭಾರೀ ಮಳೆಯೊಂದಿಗೆ ವ್ಯಾಪಕವಾದ ಮಳೆಯನ್ನು ನಿರೀಕ್ಷಿಸಲಾಗಿದೆ. ದೇಶದ ಉಳಿದ ಭಾಗಗಳಲ್ಲಿ ಗಮನಾರ್ಹ ಮಳೆಯಾಗುವ ನಿರೀಕ್ಷೆಯಿಲ್ಲ.
ಒಟ್ಟಾರೆಯಾಗಿ, ದಕ್ಷಿಣ ಪೆನಿನ್ಸುಲರ್ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮತ್ತು ಇತರೆಡೆ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ. ವಾರದ ಉತ್ತರಾರ್ಧದಲ್ಲಿ ವಾಯುವ್ಯ ಭಾರತದ ಭಾಗಗಳಿಂದ ನೈಋತ್ಯ ಮುಂಗಾರು ಹಿಂತೆಗೆತ ಆರಂಭಕ್ಕೆ ಪರಿಸ್ಥಿತಿಗಳು ಅನುಕೂಲಕರವಾಗಬಹುದು.
ಜೂನ್ 1 ರಂದು ಮುಂಗಾರು ಹಂಗಾಮು ಆರಂಭವಾದಾಗಿನಿಂದ ಒಟ್ಟಾರೆ ಶೇ.8ರಷ್ಟು ಅಧಿಕ ಮಳೆಯಾಗಿದೆ. ಮಧ್ಯ ಭಾರತವು ಶೇಕಡ 19ರಷ್ಟು ಹೆಚ್ಚುವರಿ, ವಾಯುವ್ಯ ಭಾರತದಲ್ಲಿ ಶೇಕಡ 5 ಹೆಚ್ಚುವರಿ, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಶೇಕಡ 16 ರಷ್ಟು ಮತ್ತು ಪರ್ಯಾಯ ದ್ವೀಪ ಭಾರತದಲ್ಲಿ ಶೇಕಡ 24ರಷ್ಟು ಅಧಿಕ ಮಳೆಯಾಗಿದೆ.
ಸಾಮಾನ್ಯವಾಗಿ ನೈರುತ್ಯ ಮುಂಗಾರು ನಿರ್ಗಮನ ಪ್ರಕ್ರಿಯೆ ಸೆಪ್ಟೆಂಬರ್ 17 ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 15 ರ ವೇಳೆಗೆ ಇದರ ನಿರ್ಗಮನ ಪ್ರಕ್ರಿಯೆ ಪೂರ್ಣವಾಗುತ್ತದೆ.
ನೈರುತ್ಯ ಮುಂಗಾರು ನಿರ್ಗಮನ ವಿಳಂಬವಾಗುವುದರಿಂದ ರಾಷ್ಟ್ರದ ಹಲವೆಡೆ ಕೃಷಿ ಕಾರ್ಯಗಳಿಗೆ ತೊಂದರೆಯಾಗಬಹುದು. ಮುಖ್ಯವಾಗಿ ಕೊಯ್ಲು ಹಂತದಲ್ಲಿರುವ ಬೆಳೆಗಳಿಗೆ ಹಾನಿ ಉಂಟಾಗಬಹುದು.