ಬಹಳ ಖುಷಿಯ ಸುದ್ದಿ!! ನಮ್ಮ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರಿನಿಂದ “ಕ್ಯಾಶ್ಯೂ ಇಂಡಿಯಾ (Cashew India)” ಆಪ್ ನ್ನು ಗೇರು ಕೃಷಿಕರು ಹಾಗೂ ಗೇರಿಗೆ ಸಂಬಂಧಿಸಿದ ಎಲ್ಲರಿಗಾಗಿ ಅಭಿವೃದ್ಧಿಗೊಳಿಸಿದ್ದೇವೆ. ಗೂಗಲ್ ಪ್ಲೇಸ್ಟೋರಿನಲ್ಲಿ ಲಭ್ಯವಿರುವ ಇದು ಕೃಷಿ ಆಸಕ್ತರೆಲ್ಲರೂ ನೋಡಲೇಬೇಕಾದ ಅನನ್ಯ ಆಪ್. ಬೆಳೆ ಸಂಬಂಧೀ ಆಪ್ಸ್ ತಯಾರಿಕೆಯಲ್ಲಿ ಇದೊಂದು ಮಾದರಿಯಾಗಬಲ್ಲ ವಿನೂತನ ಹೆಜ್ಜೆ ಎಂಬ ಭರವಸೆ ನಮ್ಮದು. ಸುಮಾರು ಒಂದು ವರ್ಷದ ಹಲವರ ಶ್ರಮ ಇದರ ಹಿಂದಿದೆ.
‘ಕೃಷಿಕಸ್ನೇಹಿ’, ‘ಸಮಗ್ರ ಮಾಹಿತಿ’, ‘ಸುಲಭ ಬಳಕೆ’ ‘ದೇಶವ್ಯಾಪಿ‘ ಮಾನದಂಡಗಳನ್ನಿಟ್ಟುಕೊಂಡು ರೂಪಿಸಿದ ಈ ‘ಕ್ಯಾಶ್ಯೂ ಇಂಡಿಯಾ’ ಆಪ್ ವೈಶಿಷ್ಟ್ಯಗಳಿಲ್ಲಿವೆ.
- ಗೇರು ಕಸಿಗಿಡಗಳು, ನರ್ಸರಿ, ಕೃಷಿ, ಕೀಟ ಮತ್ತು ರೋಗ ನಿರ್ವಹಣೆ, ಕೊಯ್ಲೋತ್ತರ ಸಂಸ್ಕರಣೆ, ಮಾರುಕಟ್ಟೆ ಮಾಹಿತಿ, ಇ-ಮಾರುಕಟ್ಟೆ, ಗೇರಿಗೆ ಸಂಬಂಧಪಟ್ಟ ಕೃಷಿಕರು, ಸಂಶೋಧಕರು, ಅಭಿವೃದ್ಧಿ ಇಲಾಖೆಗಳು, ಸಂಸ್ಕರಣಾ ಘಟಕಗಳು ಇವೆಲ್ಲದರ ಮಾಹಿತಿಯನ್ನು ಒಂದೆಡೆ ಕೊಡುವ ಪ್ರಯತ್ನ ಮಾಡಿದ್ದೇವೆ.
- ಕೃಷಿಕ/ಬಳಕೆದಾರ ತನ್ನ ಗೇರು ತೋಟದ ಛಾಯಾಚಿತ್ರ ಹಾಗೂ ವೀಡಿಯೋಗಳನ್ನು ‘ಕೃಷಿ’ ವಿಭಾಗದಲ್ಲಿರುವ ಉಪವಿಭಾಗ ‘ನನ್ನ ಗೇರು ಬೆಳೆ’ ಯಡಿಯಲ್ಲಿ ಸಂಗ್ರಹಿಸಿಡಬಹುದು. ಆಯಾ ತೋಟದ ಖರ್ಚು-ವೆಚ್ಚ ಹಾಗೂ ತನ್ನ ಅನುಭವಗಳನ್ನು ಇಲ್ಲಿ ಸುಲಭವಾಗಿ ದಾಖಲಿಸಲು ಸಾಧ್ಯ.
- ಈ ಆಪ್ ಮೂಲಕ ಆಯಾ ರಾಜ್ಯದಲ್ಲಿರುವ ಸಂಶೋಧನಾ ಕೇಂದ್ರಗಳಲ್ಲಿ ನಿಮಗೆ ಬೇಕಾದ ಗೇರು ಕಸಿಗಿಡಗಳನ್ನು ಬುಕ್ ಮಾಡಬಹುದು..
- ಇಲ್ಲಿರುವ ‘ಮಾರುಕಟ್ಟೆ ಮಾಹಿತಿ’ ವಿಭಾಗದಲ್ಲಿ ನೀವು ಗೇರು ಉತ್ಪನ್ನಗಳನ್ನು ಕೊಡು/ಕೊಳ್ಳುವುದು ಸಾಧ್ಯ.
- ಈ ಆಪ್ ನ್ನು ಗೇರು ಬೆಳೆಯುವ ೧೦ ರಾಜ್ಯಗಳಿಗೆ – ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಛತ್ತೀಸ್ ಘಡ, ಒರಿಸ್ಸ, ಪಶ್ಚಿಮ ಬಂಗಾಳ ಹಾಗೂ ಮೇಘಾಲಯ- ಅನುಕೂಲವಾಗುವಂತೆ ರೂಪಿಸಿದ್ದೇವೆ. ಇಷ್ಟು ರಾಜ್ಯಗಳಿಗೆ ಮಾಹಿತಿ ಕೊಡುವ ಆಪ್ ನಮ್ಮ ಗಮನಕ್ಕೆ ಇದುವರೆಗೆ ಬಂದಿಲ್ಲ.
- ಹಿಂದಿ, ಆಂಗ್ಲ, ಕನ್ನಡ, ಮರಾಠಿ, ಗುಜರಾತಿ, ಮಲಯಾಳಂ, ತಮಿಳು, ತೆಲುಗು, ಒಡಿಯಾ, ಗಾರೋ ಹಾಗೂ ಬೆಂಗಾಲಿ – ಹೀಗೆ ೧೧ ಭಾಷೆಗಳಲ್ಲಿ ಪ್ರತ್ಯೇಕವಾಗಿ ಮಾಹಿತಿ ಲಭ್ಯ. ಒಂದು ರಾಜ್ಯಕ್ಕೆ ಎರಡು ಭಾಷೆ – ಇಂಗ್ಲೀಷ್ ಮತ್ತು ಅಲ್ಲಿನ ಸ್ಥಳೀಯ ಭಾಷೆ. ಇಷ್ಟು ಭಾಷೆಗಳಲ್ಲಿ ಮಾಹಿತಿ ಕೊಡುವ ಆಪ್ ಇದು ಮೊದಲಿರಬಹುದು!
- ಕೃಷಿಕ/ಬಳಕೆದಾರ ‘ತಜ್ಜರನ್ನು ಕೇಳಿ’ ವಿಭಾಗದ ಮೂಲಕ ಬೇಕಾದ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಲು ಸಾಧ್ಯ.
- ‘ಚರ್ಚಾ ಕೋಣೆ’ ಯ ಮೂಲಕ ಆಯಾ ಸಮಯದಲ್ಲಿ ಆಪ್ ಬಳಸುತ್ತಿರುವ ಬಳಕೆದಾರರೊಡನೆ ನೀವು ಸಂವಹನ ನಡೆಸಬಹುದು.
- ಅಲ್ಲಲ್ಲಿ ಲಭ್ಯವಿರುವ ಇ-ಸ್ಪೀಕ್ ಗುಂಡಿಯನ್ನು ಒತ್ತಿದರೆ, ಅಲ್ಲಿರುವ ಬರಹಗಳ ಧ್ವನಿರೂಪವನ್ನು ಆಪ್ ಓದುತ್ತದೆ
ಆಪ್ ನ ಹಿಂದೆ : ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ವಹಣೆ : ಡಾ. ಮೋಹನ್ ತಲಕಾಲುಕೊಪ್ಪ, ಹಿರಿಯ ವಿಜ್ಞಾನಿ, ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು. ತಾಂತ್ರಿಕ ಮಾಹಿತಿ : ವಿಜ್ಞಾನಿಗಳು, ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು ಹಾಗೂ ವಿಜ್ಞಾನಿಗಳು, ಅಖಿಲ ಭಾರತ ಸಮನ್ವಿತ ಗೇಋ ಸಂಶೋಧನಾ ಪ್ರಾಯೋಜನೆಯ ಕೇಂದ್ರಗಳು/ ಮಾಹಿತಿ ಸಂಗ್ರಹ ,ಪರಿಷ್ಕರಣೆ ಮತ್ತು ನಿರ್ವಹಣೆ” ಡಾ. ಮೋಹನ್ ತಲಕಾಲುಕೊಪ್ಪ, ಶ್ರೀ ಮುತ್ತುರಾಜು (ತಾಂತ್ರಿಕಾಧಿಕಾರಿ), ಹಾಗೂ ಡಾ. ಎಂ. ಜಿ, ನಾಯಕ್. ಪ್ರಕಟಣೆ: ಡಾ. ಎಂ.ಜಿ. ನಾಯಕ್, ನಿರ್ದೇಶಕರು (ಪ್ರಭಾರ) ಹಾಗೂ ಪ್ರಧಾನ ವಿಜ್ಞಾನಿ (ತೋಟಗಾರಿಕೆ), ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು. ತಂತ್ರಾಂಶ ಅಭಿವೃದ್ಧಿ: ಮಾರ್ಕೆಟಿಂಗ್ ಮೈಂಡ್ಸ್, ಜೈಪುರ, ರಾಜಸ್ತಾನ
ಆರ್ಥಿಕ ನೆರವು: ತೋಟಗಾರಿಕೆಯ ಸಮಗ್ರ ಅಭಿವೃದ್ಧಿ ಮಿಷನ್, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ, ನವದೆಹಲಿ ಮತ್ತು ಡಾ. ವೆಂಕಟೇಶ್ ಹುಬ್ಬಳ್ಳಿ, ನಿರ್ದೇಶಕರು, ಗೇರು ಮತ್ತು ಕೊಕೊ ಅಭಿವೃದ್ಧಿ ನಿರ್ದೇಶನಾಲಯ, ಕೊಚ್ಚಿನ್.
ದಯವಿಟ್ಟು ಗಮನಿಸಿ: ಈಗ ಹೊರಬಂದಿರುವುದು ಮೊದಲ ಆವೃತ್ತಿ. ಹಾಗಾಗಿ. ಇದರಲ್ಲಿ ಇನ್ನೂ ಹಲವಾರು ವಿಷಯಗಳನ್ನು ಸುಧಾರಿಸಬೇಕಿದೆ. ಜೊತೆಗೆ ಈ ಕಿರುತಂತ್ರಾಂಶ ಬಳಸಲು ಅಂತರ್ಜಾಲ ಸಂಪರ್ಕ ಅತೀ ಅಗತ್ಯ. ಇದಿಲ್ಲದೆ ಮಾಹಿತಿ ಕೊಡುವಂತೆ ಮಾಡಲು ಪ್ರಸಕ್ತ ಕೆಲವು ತಂತ್ರಜ್ಞಾನದ ತೊಡಕುಗಳಿವೆ. ಮುಂದಿನ ದಿನಗಳಲ್ಲಿ ಇವು ಸರಿಹೋಗಬಹುದು. ನಿಮ್ಮ ಸಲಹೆ-ಸೂಚನೆಗಳಿಗೆ ನಮ್ಮದು ಸದಾ ತೆರೆದ ಕಿವಿ ಹಾಗೂ ಮನಸ್ಸು!!
ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್:
https://play.google.com/store/apps/details?id=com.cashew.icar&hl=en_IN