ಸಂವರ್ಧನೆ, ಮರು ಸುಧಾರಣೆ ಕಾಮಗಾರಿ ಮರುಪರಿಗಣನೆಗೆ ಈಶ್ವರ ಖಂಡ್ರೆ ಮನವಿ

0

ನವದೆಹಲಿ, ಜೂ.30: ಸಂವರ್ಧನೆ ಮತ್ತು ಮರು ಸುಧಾರಣೆ (retrofitting and augmentation works) ಕಾಮಗಾರಿಗಳ ವೆಚ್ಚವನ್ನು ಜಲ ಜೀವನ ಮಿಷನ್ ಅಡಿ ಕೇಂದ್ರ ಸರ್ಕಾರ ಭರಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ.

ದೆಹಲಿಯ ಅಧಿಕೃತ ಪ್ರವಾಸದಲ್ಲಿರುವ ಅವರು ಇಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಹಾಗೂ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ  ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ಜಲ ಶಕ್ತಿ ಸಚಿವಾಲಯದ ಎನ್.ಜೆ.ಜೆ.ಎಂ. ಕಳೆದ ಆಗಸ್ಟ್ 26ರಂದು ಹಾಗೂ  ಡಿಸೆಂಬರ್  29ರಂದು ರಾಜ್ಯಕ್ಕೆ ಬರೆದಿರುವ ಪತ್ರದಲ್ಲಿ  ಜೆಜೆಎಂ ಕಾಮಗಾರಿಗಳ ನವೀಕರಣ  ಮತ್ತು ತ್ವರಿತ ಯೋಜನೆ ಕಾಮಗಾರಿಗಳಿಗೆ  ಕೇಂದ್ರ ಸರ್ಕಾರದಿಂದ ವೆಚ್ಚವನ್ನು ಭರಿಸುವುದಿಲ್ಲ ಮತ್ತು ಅಂತಹ ಕಾಮಗಾರಿಗಳನ್ನು ರಾಜ್ಯ ಸಂಪನ್ಮೂಲದ ಮೂಲಕ ಪೂರ್ಣಗೊಳಿಸಬೇಕು ಎಂದು ತಿಳಿಸಲಾಗಿದೆ. ಇದರಿಂದ ರಾಜ್ಯದ ಮೇಲೆ ಹೆಚ್ಚಿನ ಹೊರೆ ಹೊರಿಸಿದಂತಾಗಿದೆ ಎಂದು  ವಿವರಿಸಿದರು.

ಇಂತಹ ಯೋಜನೆಗಳ ಅಂದಾಜು ವೆಚ್ಚ 25,451 ಕೋಟಿ ರೂ.ಗಳಾಗಿದ್ದು, ಇದರಲ್ಲಿ, ರಾಜ್ಯವು ಈಗಾಗಲೇ ಈ ಅನುಮೋದಿತ ಕಾಮಗಾರಿಗಳಿಗೆ 14,382 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ, ಸುಮಾರು 11,069 ಕೋಟಿ ರೂ. ಮರು ಪಾವತಿ ಮಾಡಬೇಕಿದೆ. ಈ ಹಣವನ್ನು ಕೇಂದ್ರ ಸರ್ಕಾರ ಭರಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಈ ಯೋಜನೆಗಳ ಆರ್ಥಿಕ ನೆರವು ನಿಲ್ಲಿಸಿದರೆ, ಜಲಜೀವನ ಮಿಷನ್  ಯೋಜನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ಪ್ರಗತಿಯಲ್ಲಿರುವ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬ ಆಗುತ್ತದೆ.  ಗ್ರಾಮೀಣ ಜನರ ಮನೆಗಳಿಗೆ ಕೊಳಾಯಿ (ನಲ್ಲಿ) ಸಂಪರ್ಕವನ್ನು ಸಕಾಲದಲ್ಲಿ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ವಿವರಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯವರು ಕಳೆದ ಸೆಪ್ಟೆಂಬರ್  03ರಂದು ಈ ಸಂಬಂಧ ಪತ್ರ ಬರೆದು, ಭಾರತ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳಿಗೆ ಅನುಗುಣವಾಗಿ ಕರ್ನಾಟಕವು ಜೆಜೆಎಂ ಅನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದೆ. ಗ್ರಾಮೀಣ ಮನೆಗಳು, ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ನೀರು ಸರಬರಾಜು ಮಾಡಲು ಒಟ್ಟು 66,344 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.  ಈ ಕಾಮಗಾರಿಗಳಿಗೆ ರಾಜ್ಯ ಮಟ್ಟದ ಯೋಜನಾ ಮಂಜೂರಾತಿ ಸಮಿತಿ (ಎಸ್.ಎಲ್. ಎಸ್.ಎಸ್.ಸಿ.) ಸೂಕ್ತ ಅನುಮೋದನೆ ನೀಡಿದೆ ಎಂಬುದನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೇಂದ್ರ ಸರ್ಕಾರ ಬಾಕಿ ಇರುವ ರಾಜ್ಯದ ಪಾಲನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಮತ್ತು ಅಂತಹ ಕಾಮಗಾರಿಗಳನ್ನು ಕೇವಲ ಐ.ಎಂ.ಐ.ಎಸ್. ವರ್ಗೀಕರಣದ ಕಾರಣದಿಂದಾಗಿ ಹೊರಗಿಡಬಾರದು ಎಂದು ಕೇಂದ್ರ ಜಲಶಕ್ತಿ ಸಚಿವರಿಗೆ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ

LEAVE A REPLY

Please enter your comment!
Please enter your name here