ಉತ್ತರ ಅಮರಿಕಾದ ಸಸ್ಯ
ಸೂರ್ಯಕಾಂತಿ ಮೂಲತಃ ಉತ್ತರ ಉತ್ತರ ಅಮೆರಿಕಾದ ಸಸ್ಯ. ಇದರ ಸಸ್ಯಶಾಸ್ತ್ರೀಯ ಹೆಸರು ಹೆಲಿಯಾಂತಸ್ . ಇದರ ಒಂದು ಪ್ರಬೇಧ ಹೆಲಿಯಾಂತಸ್ ಅನ್ನಸ್ ಸೂರ್ಯಕಾಂತಿಯನ್ನು ಮಾತ್ರ ಖಾದ್ಯ ತೈಲ ತೆಗೆಯಲು ಬಳಸುತ್ತಾರೆ. ಉತ್ತರ ಅಮೆರಿಕಾದಲ್ಲಿ ಐದು ಸಾವಿರ ವರ್ಷಗಳಷ್ಟು ಹಿಂದೆಯೇ ಇದನ್ನು ಗುರುತಿಸಲಾಗಿದೆ. ವಿಶ್ವದ ಎಲ್ಲೆಡೆ ವಾಣಿಜ್ಯ ಬೆಳೆಯಾಗಿರುವ ಸೂರ್ಯಕಾಂತಿ ಬೆಳೆಯ ವೈಜ್ಞಾನಿಕ ವಿವರಗಳು ನಿಮ್ಮ ಮುಂದಿದೆ.
ಸೂರ್ಯಕಾಂತಿ ಏಕವಾರ್ಷಿಕ ಸಸ್ಯ. ಬೀಜಗಳ ಸಲುವಾಗಿಯೇ ಇದನ್ನು ಬೆಳೆಸಲಾಗುತ್ತದೆ. ಕ್ರಿಸ್ತಪೂರ್ವ 2600 ರಷ್ಟು ಹಿಂದೆಯೇ ಮೆಕ್ಸಿಕೋದಲ್ಲಿ ಅಡುಗೆ ಎಣ್ಣೆಗಾಗಿ ಇದನ್ನು ಕೃಷಿ ಮಾಡಲಾಗುತ್ತಿತ್ತು. ಸ್ಪ್ಯಾನಿಷ್ ಪರಿಶೋಧಕರು ಈ ಸಸ್ಯವನ್ನು ಯೂರೋಪಿಗೆ ಪರಿಚಯಿಸಿದರು. ಅಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಇದರ ಕೃಷಿ ಅಲ್ಪಾವಧಿಯಲ್ಲಿಯೇ ವ್ಯಾಪಕವಾಯಿತು. ಭಾರತಕ್ಕೆ ಇದು ಪರಿಚಯವಾಗಿದ್ದು ಕೇವಲ ಐದು ದಶಕದ ಹಿಂದೆ. 1970ರಲ್ಲಿ ಇಲ್ಲಿ ಸೂರ್ಯಕಾಂತಿ ಕೃಷಿ ಆರಂಭವಾಯಿತು. ಒಂದೆರಡು ದಶಕದಲ್ಲಿ ಇದು ಬಹು ಜನಪ್ರಿಯ ಮತ್ತು ಬಹುದೊಡ್ಡ ಪ್ರಮಾಣದಲ್ಲಿ ಬೆಳೆಯಲ್ಪಡುವ ಎಣ್ಣೆಕಾಳು ಬೆಳೆಯಾಯಿತು.
ಕರ್ನಾಟಕದಲ್ಲಿ ಅಧಿಕ
ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ಸೂರ್ಯಕಾಂತಿ ಬೆಳೆಯನ್ನು ಕೃಷಿ ಮಾಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಉಳಿದ ಎಲ್ಲ ರಾಜ್ಯಗಳಿಗಿಂತ ಇದನ್ನು ಅತ್ಯಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಇಲ್ಲಿನ ಎಣ್ಣೆಕಾಳು ಬೆಳೆಯುವ ಪ್ರದೇಶಗಳಲ್ಲಿ ಇದರ ಕೃಷಿ ವ್ಯಾಪಕವಾಗಿದೆ. ಇದಕ್ಕೆ ಅನೇಕ ಕಾರಣಗಳಿವೆ. ಮುಖ್ಯವಾಗಿ ಇಲ್ಲಿನ ಕೃಷಿ ವಿಶ್ವವಿದ್ಯಾಲಯಗಳು ನಡೆಸಿದ ಸಂಶೋಧನೆ ಮತ್ತು ಅಭಿವೃದ್ಧಿ ಗಣನೀಯ ಅಂಶವಾಗಿದೆ. ಅದರಲ್ಲಿಯೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಸಂಶೋಧನೆ ಮತ್ತು ಅಭಿವೃದ್ಧಿ ಇದರ ವ್ಯಾಪಕ ಕೃಷಿಗೆ ತನ್ನ ಕೊಡುಗೆ ನೀಡಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಕೊಡುಗೆ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗ ಸೂರ್ಯಕಾಂತಿ ಬೆಳೆಯಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದೆ. ಬೇರೆಬೇರೆ ಪ್ರದೇಶಗಳಲ್ಲಿ ಸುಗಮವಾಗಿ ಬೆಳೆಯುವ, ಅತ್ಯಧಿಕ ಇಳುವರಿ ನೀಡುವ ತಳಿಗಳನ್ನು ಪರಿಚಯಿಸಿದೆ. ಆಗಾಗ ಹೊಸ ಸಂಕರಣ ತಳಿಗಳನ್ನು ಪರಿಚಯಿಸುತ್ತಿದೆ. ಇವುಗಳ ರೋಗ ನಿರೋಧಕ ಮತ್ತು ಕೀಟ ನಿರೋಧಕ ಶಕ್ತಿ ಉತ್ತಮ ಎಂಬ ಪ್ರಶಂಸೆಯೂ ಬಂದಿದೆ.
ಮಳೆಯಾಶ್ರಿತ ಪ್ರದೇಶ ಹೆಚ್ಚು
ಕರ್ನಾಟಕ ರಾಜ್ಯದಲ್ಲಿ ಮಳೆಯಾಶ್ರಿತ ಪ್ರದೇಶ ಹೆಚ್ಚು. ನೀರಾವರಿ ಪ್ರದೇಶಕ್ಕೆ ಹೋಲಿಸಿದರೆ ಇಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಎಣ್ಣೆಕಾಳು ಬೆಳೆಗಳನ್ನು ಬೆಳೆಯಲಾಗುತ್ತಿದೆ. ಮಳೆಯಾಶ್ರದಲ್ಲಿ ಬೇಸಾಯ ಮಾಡುವ ಕೃಷಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಹ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕೆಲವಾರು ಸಂಕರಣ ತಳಿಗಳನ್ನು ಪರಿಚಯಿಸಿದೆ. ಉತ್ತರ ಕರ್ನಾಟಕದ ಕೃಷಿಭೂಮಿಗಳಲ್ಲಿಯೂ ಇವುಗಳು ಸಾಗುವಳಿಯಾಗುತ್ತಿವೆ
ಪಶ್ಚಿಮ ಬಂಗಾಳ ಮತ್ತು ಉತ್ತರ ಭಾರತದ ರಾಜ್ಯಗಳ ಕೃಷಿಕರು ಸಹ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ಸೂರ್ಯಕಾಂತಿ ತಳಿಗಳನ್ನು ಕೃಷಿ ಮಾಡುತ್ತಿದ್ದಾರೆ ಎನ್ನುವುದು ಹೆಮ್ಮೆಯ ವಿಷಯ. ಆ ರಾಜ್ಯಗಳಿಂದಲೂ ನಿರಂತರವಾಗಿ ಇಲ್ಲಿನ ಸಂಕರಣ ತಳಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ಎಲ್ಲ ರೀತಿಯ ಹವಾಮಾನ, ಮಣ್ಣು ಮತ್ತು ನೀರಿಗೂ ಹೊಂದಿಕೊಂಡು ಬೆಳೆದು ಸಮೃದ್ಧ ಇಳುವರಿ ನೀಡುತ್ತಿರುವುದೇ ಆಗಿದೆ.
ಅಧಿಕ ನೀರು ಬೇಡ
ಮುಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿ ಬೆಳೆದರೆ ಇಳುವರಿ ಪ್ರಮಾಣ ಕಡಿಮೆ. ಇದಕ್ಕೆ ಸಾಕಷ್ಟು ಕಾರಣಗಳಿವೆ. ಈ ಸಸ್ಯ ಅಧಿಕ ಪ್ರಮಾಣದ ನೀರಿಗೆ ಹೊಂದಿಕೊಳ್ಳುವುದಿಲ್ಲ. ಹಿತಮಿತ ನೀರಾವರಿ ಇದ್ದರೆ ಸಾಕು. ಈ ಬೆಳೆಗೆ ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿ ಬೇಕು. ಮುಂಗಾರು ಹಂಗಾಮಿನಲ್ಲಿ ಸದಾ ಮಳೆಯಾಗುತ್ತಿರುವುದರಿಂದ ಬೆಳೆಗೆ ದಕ್ಕುವ ಪೋಷಕಾಂಶದ ಪ್ರಮಾಣ ಕಡಿಮೆಯಾಗುತ್ತದೆ. ಇನ್ನೊಂದು ಮುಖ್ಯ ಕಾರಣ ಈ ಹಂಗಾಮಿನಲ್ಲಿ ಜೇನುನೊಣಗಳ ಚಟುವಟಿಕೆ ತೀರ ಕಡಿಮೆ ಇರುವುದು
ನೀರಾವರಿ ಪ್ರದೇಶದಲ್ಲಿಯೂ ಉತ್ತಮವಾಗಿ ಬೆಳವಣಿಗೆಯಾಗುವ ಸಂಕರಣ ತಳಿಗಳು ಸಾಕಷ್ಟಿವೆ. ಆದರೆ ಭತ್ತಕ್ಕೆ ನೀರು ಪೂರೈಸಿದ ಹಾಗೆ ಸೂರ್ಯಕಾಂತಿ ಬೆಳೆಗೆ ನೀರು ಪೂರೈಸಬಾರದು. ಇದಕ್ಕೆ ಕಾರಣ ಅಧಿಕ ತೇವಾಂಶವಾದರೆ ಇದರ ಬೇರುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಇದರಿಂದ ಹೂವಿನಲ್ಲಿ ಕಾಳು ಕಟ್ಟುವ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗುತ್ತದೆ. ಲಭ್ಯವಾಗುವ ಕಾಳುಗಳಲ್ಲಿಯೂ ಎಣ್ಣೆ ಅಂಶ ಅತೀ ಕಡಿಮೆ ಪ್ರಮಾಣದಲ್ಲಿ ಇರುತ್ತದೆ.
ಪೋಷಕಾಂಶ
ಸೂರ್ಯಕಾಂತಿ ಬೆಳೆಗೆ ಎಷ್ಟು ಪ್ರಮಾಣದ ಪೋಷಕಾಂಶ ಬೇಕು, ಎಷ್ಟು ಪ್ರಮಾಣದ ನೀರು ಬೇಕು ಎಂಬ ಅಂಶಗಳ ಬಗ್ಗೆ ಸಾಕಷ್ಟು ಅಧ್ಯಯನಗಳು ಆಗಿವೆ. ಬೆಳೆ ಬೆಳೆಯುವ ಮೊದಲು ಮಣ್ಣಿನ ಪರೀಕ್ಷೆ ಮಾಡಿಸಬೇಕು. ಇದರಿಂದ ಮಣ್ಣಿನಲ್ಲಿ ಕೊರತೆಯಾಗಿರುವ ಪೋಷಕಾಂಶಗಳ ವಿವರ ತಿಳಿಯುತ್ತದೆ. ಆಗ ಅವುಗಳನ್ನು ತಜ್ಞರು ಶಿಫಾರಸು ಮಾಡಿದ ಪ್ರಮಾಣದಲ್ಲಿ ಮಾತ್ರ ಹಾಕಬೇಕು. ಬೆಳೆ ಚೆನ್ನಾಗಿ ಬರುತ್ತದೆ ಎಂದು ಅಧಿಕವಾಗಿ ಹಾಕಿದರೆ ಅದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು.
ಸೂರ್ಯಕಾಂತಿ ಬೆಳೆ ಸಾವಯವ ಕೃಷಿ ಪದ್ಧತಿಯಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ. ಈ ಪದ್ಧತಿಯಲ್ಲಿ ಬೆಳೆದಾಗ ಕಾಳುಗಳು ಅತ್ಯಧಿಕ ಪ್ರಮಾಣದಲ್ಲಿಯೂ ಕಟ್ಟುತ್ತದೆ. ಇದಕ್ಕೆ ಮುಖ್ಯ ಕಾರಣ ಜೇನುನೊಣಗಳ ಚಟುವಟಿಕೆ ಅತ್ಯುತ್ತಮವಾಗಿರುವುದು.
ರಾಸಾಯನಿಕ ಪದ್ಧತಿಯಲ್ಲಿ ಹೆಚ್ಚು ಪ್ರಮಾಣದಲ್ಲಿ ಕೀಟನಾಶಕಗಳನ್ನು ಸಿಂಪಡಿಸಿದರೆ ಮಣ್ಣಿನ ಮೇಲೆ, ಬೆಳೆಯ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ. ರೈತಮಿತ್ರ ಎಂದೇ ಕರೆಯಲ್ಪಡುವ ಎರೆಹುಳುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ. ಸೂರ್ಯಕಾಂತಿ ಕಾಳುಗಳ ಇಳುವರಿಗೆ ಕಾರಣವಾಗುವ ಜೇನುನೊಣಗಳು ಬಾಧಿತವಾಗುತ್ತವೆ. ಇವುಗಳ ಸಂಖ್ಯೆಯೂ ಅಂಥ ಪ್ರದೇಶದಲ್ಲಿ ಕುಗ್ಗುತ್ತದೆ. ಆದ್ದರಿಂದ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ
ಸೂರ್ಯಕಾಂತಿ ಬೆಳೆಯನ್ನು ಅತ್ಯುತ್ತಮವಾಗಿ ಬೆಳೆಯಲು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅಗತ್ಯ. ಮುಖ್ಯವಾಗಿ ವೈಜ್ಞಾನಿಕ ಮಾದರಿಯ ಬೇಸಾಯ ಕ್ರಮಗಳ ಬಗ್ಗೆ ಅರಿತುಕೊಳ್ಳುವುದು ಅಗತ್ಯ. ಈ ಅಂಶಗಳು ಬೆಳೆ ಚೆನ್ನಾಗಿ ಬೆಳವಣಿಗೆಯಾಗುವಂತೆ ಮಾಡುತ್ತದೆ. ಕಾಳು ಕಟ್ಟುವಿಕೆಯೂ ಅತ್ಯುತ್ತಮ ಪ್ರಮಾಣದಲ್ಲಿ ಇರುತ್ತದೆ. ಇಂಥ ಅಂಶಗಳನ್ನು ಅಳವಡಿಸಿಕೊಂಡು ಉತ್ತಮ ಲಾಭಾಂಶ ಪಡೆಯುತ್ತಿರುವ ಕೃಷಿಕರು ಸಾಕಷ್ಟು ಮಂದಿ ಇದ್ದಾರೆ.
ಕಾಳಿನ ಪ್ರಮಾಣ, ಅವುಗಳಿಂದ ಒದಗುವ ಎಣ್ಣೆ ಅಂಶಗಳನ್ನು ಹೆಚ್ಚಿಸುವ ಕ್ರಮಗಳು ಅಗತ್ಯ. ಈ ನಿಟ್ಟಿನಲ್ಲಿ ಪೋಷಕಾಂಶಗಳ ಗಣನೀಯ ಪಾತ್ರ ವಹಿಸುತ್ತವೆ. ಮುಖ್ಯವಾಗಿ ಸೂರ್ಯಕಾಂತಿ ಹೆಚ್ಚು ಪ್ರಮಾಣದ ಪೋಷಕಾಂಶ ಬೇಡುವ ಬೆಳೆ. ಇವುಗಳನ್ನು ಸೂಕ್ತ ಪ್ರಮಾಣದಲ್ಲಿ ಒದಗಿಸಿದಾಗ ಫಲಿತಾಂಶವೂ ಉತ್ತಮವಾಗಿರುತ್ತದೆ. ಆದರೆ ಪೂರೈಸುತ್ತಿರುವ ಪೋಷಕಾಂಶಗಳ ಗುಣಮಟ್ಟವೂ ಅಗತ್ಯ.
ಕೊಟ್ಟಿಗೆ ಗೊಬ್ಬರ
ರಾಸಾಯನಿಕ ಗೊಬ್ಬರಗಳಿಗಿಂತಲೂ ಕೊಟ್ಟಿಗೆ ಗೊಬ್ಬರದಲ್ಲಿ ಸಸ್ಯಕ್ಕೆ ಅಗತ್ಯವಾದ ಹದಿನಾರು ಬಗೆಯ ಪೋಷಕಾಂಶಗಳು ಲಭ್ಯವಾಗುತ್ತವೆ. ಇದು ಮಣ್ಣಿನ ಫಲವತ್ತತೆಯನ್ನೂ ಹೆಚ್ಚಿಸುತ್ತದೆ. ಎರೆಹುಳುಗಳು ವೃದ್ಧಿಸುತ್ತವೆ. ಅವುಗಳ ಚಟುವಟಿಕೆಯೂ ಅತ್ಯುತ್ತಮವಾಗಿರುತ್ತದೆ. ಆದ್ದರಿಂದ ಸೂರ್ಯಕಾಂತಿ ಬೆಳೆಯಲು ಇಚ್ಛಿಸುವ ರೈತರು ಗುಣಮಟ್ಟದ ಕೊಟ್ಟಿಗೆ ಗೊಬ್ಬರವನ್ನು ಪೂರೈಸುವುದು ಅತ್ಯಗತ್ಯ
ಸೂರ್ಯಕಾಂತಿ ಬೆಳೆಗೆ ಯಾವಯಾವ ಹಂತಗಳಲ್ಲಿ ನೀರು ಪೂರೈಸುತ್ತೇವೆ, ಅದರ ಪ್ರಮಾಣ ಎಷ್ಟು ಎಂಬ ಅಂಶಗಳು ಸಹ ಮುಖ್ಯ. ಸೂಕ್ತವಾದ ಹಂತಗಳಲ್ಲಿ ನೀರು ಪೂರೈಕೆ ತಡವಾದರೆ ಅಥವಾ ಲಭ್ಯವಾಗದಿದ್ದರೆ ಅದು ಕಾಳು ಕಟ್ಟುವಿಕೆ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಆದ್ದರಿಂದ ಮಳೆಯಶ್ರಿತ ಪ್ರದೇಶದ ರೈತರು ಈ ಅಂಶಗಳತ್ತ ಹೆಚ್ಚು ಗಮನ ಹರಿಸುವುದು ಸೂಕ್ತ.
ಕೃಷಿಕರು ಮಣ್ಣಿನ ಸಂರಕ್ಷಣೆಯತ್ತ ಹೆಚ್ಚು ಗಮನಹರಿಸುವುದು ಅತ್ಯಗತ್ಯ. ಮೇಲ್ಮಣ್ಣು ಕೊಚ್ಚಿ ಹೋಗದಂತೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮುಖ್ಯವಾಗಿ ಭದ್ರವಾದ ಬದುಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಬಿತ್ತನೆ ಮುನ್ನ ಕೊಟ್ಟಿಗೆ ಗೊಬ್ಬರ ಹಾಕಿ ಅದು ಮಣ್ಣಿನೊಂದಿಗೆ ಚೆನ್ನಾಗಿ ಮಿಶ್ರಣವಾಗುವಂತೆ ಮಾಡಬೇಕು. ಬೆಳೆ ಇಲ್ಲದಿರುವ ಸಮಯದಲ್ಲಿ ಮಾಗಿ ಉಳುಮೆ ಮಾಡಬೇಕು
ಕೆಲವೊಂದು ಪೋಷಕಾಂಶಗಳು ಕಾಳಿನಲ್ಲಿ ಅಧಿಕ ಪ್ರಮಾಣದ ಎಣ್ಣೆ ಸಂಗ್ರಹವಾಗುವಂತೆ ಮಾಡುತ್ತವೆ. ಈ ನಿಟ್ಟಿನಲ್ಲಿ ಗಂಧಕದ ಪಾತ್ರ ಗಣನೀಯ. ಆದರೆ ಇದನ್ನು ಹಿತಮಿತ ಪ್ರಮಾಣದಲ್ಲಿ ನೀಡಬೇಕು. ಬೆಳೆಯನ್ನು ಎಷ್ಟು ಎಕರೆಯಲ್ಲಿ ಬೆಳೆಯುತ್ತಿದ್ದೇವೆ, ಹಾಕಿರುವ ತಳಿ ಯಾವುದು ಎಂಬ ಅಂಶಗಳು ಕೂಡ ಮುಖ್ಯ. ಆದ್ದರಿಂದ ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯಗಳ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು.
ಸೂರ್ಯಕಾಂತಿ ಬೆಳೆ ಎಲ್ಲ ರೀತಿಯ ಮಣ್ಣಿನಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ. ಆದರೆ ಕಪ್ಪುಮಣ್ಣಿನಲ್ಲಿ ಅತ್ಯುತ್ತಮವಾಗಿ ಬೆಳೆಯುತ್ತದೆ. ಅದರಲ್ಲಿರುವ ಪೋಷಕಾಂಶಗಳೂ ಕೂಡ ಇದಕ್ಕೆ ಕಾರಣ. ಹೆಚ್ಚು ಕೆಂಪು ಅಂಶ ಇರುವ ಮಣ್ಣಿನಲ್ಲಿ ಸಾಮಾನ್ಯವಾಗಿ ಇದರ ಬೆಳವಣಿಗೆ ಸಾಧಾರಣ. ಇದನ್ನು ಗಮನಕ್ಕೆ ತೆಗೆದುಕೊಳ್ಳದೇ ಅಧಿಕ ಇಳುವರಿ ಪಡೆಯಲು ಹೆಚ್ಚೆಚ್ಚು ಪೋಷಕಾಂಶ ಪೂರೈಸುವುದು ನಷ್ಟಕ್ಕೆ ಕಾರಣವಾಗುತ್ತದೆ.
ಹವಾಗುಣ
ಅತ್ಯಧಿಕ ಇಳುವರಿ ಅಂಶ ಆಯಾ ಪ್ರದೇಶದ ಹವಾಗುಣ, ಮಣ್ಣು, ನೀರು ಮತ್ತು ಪೂರೈಸುತ್ತಿರುವ ಪೋಷಕಾಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಕಡಿಮೆ ಇಳುವರಿ ಬಂದರೆ ಕೃಷಿಕರು ಕಂಗಾಲಾಗುವ ಅಗತ್ಯವಿಲ್ಲ. ಅದಕ್ಕೆ ಕಾರಣವಾಗಿರುವ ಅಂಶಗಳನ್ನು ತಿಳಿದುಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಬೇಕು. ಆಗ ಅದರಲ್ಲಿರುವ ರಾಸಾಯನಿಕ ಅಂಶಗಳು, ಅವುಗಳ ಪ್ರಮಾಣ ತಿಳಿಯುತ್ತದೆ.
ಕಳೆ ನಿರ್ವಹಣೆ
ಸೂರ್ಯಕಾಂತಿ ಬೆಳೆಯಲ್ಲಿ ಕಳೆ ನಿರ್ವಹಣೆ ಪ್ರಮುಖ ಅಂಶ. ಕಳೆಗಳು ಹೆಚ್ಚಾಗಲು ಕಾರಣಗಳಿವೆ. ಕಳೆ ಅಧಿಕವಾಗಿ ಬಂದಾಗ ಅದನ್ನು ನಿಯಂತ್ರಿಸಲು ಸೂಕ್ತ ವಿಧಾನಗಳನ್ನು ಅನುಸರಿಸಬೇಕು. ಮಣ್ಣಿನಲ್ಲಿ ಫಲವತ್ತತೆ ಅಂಶ ಹೆಚ್ಚಾಗಿದ್ದಾಗ ಕಳೆ ಅಧಿಕ ಪ್ರಮಾಣದಲ್ಲಿ ಬರುತ್ತದೆ. ಕಳೆ ಎನ್ನುವುದು ಸಾಂದರ್ಭಿಕ. ಕೆಲವು ಸಂದರ್ಭಗಳಲ್ಲಿ ಬೆಳೆ ಎಂದುಕೊಳ್ಳುವಂಥವು ಅನಗತ್ಯ ಸಂದರ್ಭ, ಜಾಗದಲ್ಲಿ ಬೆಳೆದರೆ ಕಳೆ ಎನ್ನಿಸಿಕೊಳ್ಳುತ್ತದೆ. ಕಳೆಯನ್ನು ಕೂಡ ಸೂಕ್ತರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬಹುದು.
ಕಳೆಗಳಲ್ಲಿ ಅಧಿಕ ಪ್ರಮಾಣದ ಪೋಷಕಾಂಶವಿರುತ್ತದೆ. ಆದ್ದರಿಂದ ಇವುಗಳನ್ನು ನಾಶ ಮಾಡಲು ಕಳೆನಾಶಕಗಳನ್ನು ಬಳಸಬಾರದು. ಇದು ಮಣ್ಣಿನ ಫಲವತ್ತತೆ ಅಂತರ್ಜಲದ ಮೇಲೆ ಮಾರಕ ಪರಿಣಾಮ ಉಂಟು ಮಾಡುತ್ತದೆ. ಆದ್ದರಿಂದ ಕಳೆಯನ್ನು ಸರಾಗವಾಗಿ ಕಟಾವು ಮಾಡುವ ಯಂತ್ರಗಳನ್ನು ಬಳಸಬೇಕು. ಕತ್ತರಿಸಿದ ಕಳೆಯನ್ನು ಕಾಂಪೋಸ್ಟ್ ಗೊಬ್ಬರ ಮಾಡಬಹುದು. ಮುಚ್ಚಿಗೆ ಪದ್ಧತಿ ಅನುಸರಿಸಿ ಅದರ ಮೇಲೆ ತೆಳುವಾಗಿ ಸ್ಲರಿ ಹಾಕಿದರೆ ಅಲ್ಲಿಯೇ ಕಳಿತು ಉತ್ತಮ ಪೋಷಕಾಂಶ ಮಣ್ಣಿಗೆ, ಸಸ್ಯಕ್ಕೆ ದಕ್ಕುತ್ತದೆ.
ಪರಾಹಸ್ಪರ್ಶ
ಸೂರ್ಯಕಾಂತಿ ಪರಕೀಯ ಪರಾಗಸ್ಪರ್ಶ ಅಗತ್ಯವಾಗಿರುವ ಬೆಳೆ. ಇದಾಗದಿದ್ದರೆ ಕಾಳು ಜೊಳ್ಳಾಗುತ್ತದೆ. ಕೃಷಿಕರು ನಷ್ಟಕ್ಕೀಡಾಗಬೇಕಾಗುತ್ತದೆ. ಆದ್ದರಿಂದ ಈ ಬೆಳೆ ಇರುವ ಹೊಲಗಳಲ್ಲಿ ಜೇನು ಸಾಕಣೆ ಮಾಡುವುದು ಭಾರಿ ಅನುಕೂಲಕರ. ಇದು ಎರಡು ರೀತಿಯ ಲಾಭವನ್ನು ತಂದುಕೊಡುತ್ತದೆ. ಅತ್ಯುತ್ತಮ ಗುಣಮಟ್ಟದ, ಅಧಿಕ ಪ್ರಮಾಣದ ಜೇನು ಸಂಗ್ರಹವಾಗುತ್ತದೆ. ಇದರ ಮಾರಾಟದಿಂದಲೂ ಉತ್ತಮ ಲಾಭಾಂಶ ಪಡೆಯಬಹುದು. ಇದಲ್ಲದೇ ನಿರೀಕ್ಷೆಗಿಂತಲೂ ಅಧಿಕ ಪ್ರಮಾಣದ ಇಳುವರಿ ಲಭ್ಯವಾಗುತ್ತದೆ.
ಜೇನುಸಾಕಣೆ ಘಟಕ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಜೇನು ಸಾಕಣೆ ಘಟಕವಿದೆ. ಇಲ್ಲಿನ ತಜ್ಞರನ್ನು ಸಂಪರ್ಕಿಸಿದರೆ ಅವರು ಆಯಾ ಪ್ರದೇಶಕ್ಕೆ ಹೊಂದಿಕೊಳ್ಳುವ ಜೇನುತಳಿಗಳ ಬಗ್ಗೆ ತಿಳಿಸುತ್ತಾರೆ. ಅವುಗಳ ಸಾಕಣೆ ವಿಧಾನಗಳನ್ನು ವಿವರಿಸುತ್ತಾರೆ. ತೋಟಗಾರಿಕೆ ಸಂಸ್ಥೆ ಮತ್ತು ಇಲಾಖೆಯಲ್ಲಿಯೂ ಜೇನು ಸಾಕಣೆ ತರಬೇತಿ ಶಿಬಿರಗಳು ನಡೆಯುತ್ತಿರುತ್ತವೆ. ಇದರ ಪ್ರಯೋಜನವನ್ನು ಕೃಷಿಕರು ಪಡೆಯಬಹುದು
ಸಸ್ಯತ್ಯಾಜ್ಯ
ಎರೆಗೊಬ್ಬರ ನೀಡುವುದರಿಂದಲೂ ಬೆಳೆಯ ಬೆಳವಣಿಗೆ ಅತ್ಯುತ್ತಮವಾಗಿರುತ್ತದೆ. ಈ ನಿಟ್ಟಿನಲ್ಲಿ ಲಭ್ಯವಾಗುವ ಸಸ್ಯತ್ಯಾಜ್ಯಗಳನ್ನೇ ಬಳಸಬಹುದು. ಇದಕ್ಕೆ ಅಗತ್ಯವಾದ ತಳಿಯ ಎರೆಹುಳುಗಳು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಲಭ್ಯವಾಗುತ್ತವೆ. ಇವುಗಳ ಸಂಖ್ಯೆ ಶೀಘ್ರವಾಗಿ ವೃದ್ಧಿಸುತ್ತದೆ. ಸ್ಥಳೀಯವಾಗಿ ಲಭ್ಯ ಇರುವ ಪರಿಕರಗಳನ್ನೇ ಬಳಸಿ ಎರೆತೊಟ್ಟಿಗಳನ್ನು ನಿರ್ಮಿಸಬಹುದು. ಈ ದಿಶೆಯಲ್ಲಿ ಎರೆಹುಳು ಸಾಕಣೆ, ಗೊಬ್ಬರ ತಯಾರಿಕೆ ಬಗ್ಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರಗಳು ತರಬೇತಿ ನೀಡುತ್ತವೆ. ಇದರ ಪ್ರಯೋಜನ ಪಡೆಯಬಹುದು.
ಸಕಾಲದಲ್ಲಿ ಕೊಯ್ಲು ಅಗತ್ಯ
ಸೂರ್ಯಕಾಂತಿ ಬೆಳೆ 90 ರಿಂದ 100 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಸಕಾಲದಲ್ಲಿ ಕೊಯ್ಲು ಮಾಡಬೇಕು. ಇಲ್ಲದಿದ್ದರೆ ತೆನೆ ಕೆಳಗೆ ಬಿದ್ದು ನಷ್ಟವಾಗಬಹುದು. ವೈಜ್ಞಾನಿಕ ಮಾದರಿಯ ಕೊಯ್ಲು ವಿಧಾನಗಳನ್ನು ಅನುಸರಿಸಬೇಕು. ಇದರಿಂದ ಕಾಳುಗಳು ವ್ಯರ್ಥವಾಗುವುದಿಲ್ಲ. ಪ್ರಸ್ತುತ ದಿನಗಳಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಕೊಯ್ಲು ಮಾಡುವುದು ಹೇಗೆ ಎಂಬ ಕುರಿತು ತರಬೇತಿಗಳು ಲಭ್ಯವಿದೆ.
ಸಲಹೆಗಳು
ಬೆಳೆಯ ಯಾವಯಾವ ಹಂತಗಳಲ್ಲಿ ಯಾವಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಮಾಹಿತಿಗಳನ್ನು ನೀಡಲು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಸೂರ್ಯಕಾಂತಿ ಘಟಕವಿದೆ. ಇಲ್ಲಿನ ತಜ್ಞರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆಯಬಹುದು. ಅಗತ್ಯವೆನ್ನಿಸಿದರೆ ಇವರು ಸ್ಥಳಕ್ಕೆ ಭೇಟಿ ನೀಡಿಯೂ ಸಲಹೆಗಳನ್ನು ನೀಡುತ್ತಾರೆ. ಕೃಷಿಕರಿಗೆ ಸದಾ ನೆರವು ನೀಡಲು ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರಗಳು ಸಿದ್ಧವಾಗಿರುತ್ತವೆ.
ವರ್ಷದ ಯಾವ ಹಂತದಲ್ಲಿ ಸೂರ್ಯಕಾಂತಿ ಬೆಳೆ ಹಾಕಬೇಕು, ಯಾವ ಹಂತದಲ್ಲಿ ಹಾಕಬಾರದು ಎಂಬ ಬಗ್ಗೆ ಸಲಹೆಗಳನ್ನು ನೀಡಲಾಗುತ್ತದೆ. ಆದ್ದರಿಂದ ಕೃಷಿಕರು ತಮ್ಮ ಹಳ್ಳಿಗೆ ಸಮೀಪ ಇರುವ ಕೃಷಿ ವಿಜ್ಞಾನ ಕೇಂದ್ರಗಳ ಸಂಪರ್ಕದಲ್ಲಿ ಇರುವುದು; ಆಗಾಗ ಅಲ್ಲಿಗೆ ಭೇಟಿ ನೀಡಿ ಸಲಹೆಗಳನ್ನು ಪಡೆಯುವುದು ಅಗತ್ಯ. ಈ ಸೇವೆ ಉಚಿತವಾಗಿ ಲಭ್ಯವಾಗುತ್ತದೆ ಎಂಬುದು ಗಮನಾರ್ಹ