“ಕೇಂದ್ರಸರ್ಕಾರ ಅಪಾರ ಖರ್ಚುಮಾಡಿ ಶಾಲಾಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸಿದೆ. ಇದರೊಂದಿಗೆ ಎಳನೀರು ನೀಡಿದರೆ ತೆಂಗು ವಲಯ ಊಹೆಗೂ ಮೀರಿದ ನಿಟ್ಟಿನಲ್ಲಿ ಚೇತರಿಸಿಕೊಳ್ಳುತ್ತದೆ. ಎಳನೀರು ಅನೇಕ ಪೋಷಕಾಂಶಗಳನ್ನು ಹೊಂದಿರುವುದರಿಂದ ಅದರ ಪ್ರಯೋಜನ ಮಕ್ಕಳಿಗೆ ದೊರೆಯುತ್ತದೆ” ಹೀಗೊಂದು ಬೇಡಿಕೆಯನ್ನು ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಿ.ವಿ. ಆನಂದ್ ಬೋಸ್ ಅವರು ಕೇಂದ್ರಸರ್ಕಾರದ ಮುಂದಿಟ್ಟಿದ್ದಾರೆ.

ಕೃತಕ ತಂಪುಪಾನೀಯಗಳ ಭರಾಟೆಯಲ್ಲಿ ನೈಸಗರ್ಿಕ ತಂಪುಪಾನೀಯ ಎಳನೀರು ಮಂಕಾಗಿದೆ. ಬಹುರಾಷ್ಟ್ರೀಯ ಕಂಪನಿಗಳ ಜಾಹಿರಾತು ಭರಾಟೆ ಹೇಗಿದೆಯೆಂದರೆ ಶಾಲಾ ಮಕ್ಕಳಿರಲಿ ಐದು ವರ್ಷದ ಮಕ್ಕಳು ಕೂಡಾ ಕೃತಕ ತಂಪುಪಾನೀಯವೇ ಬೇಕೆಂದು ಹಠ ಹಿಡಿಯುವಷ್ಟು. ಇಂಥ ತಂಪುಪಾನೀಯಗಳನ್ನೇ ಬೇಕೆಂದು ಬಯಸುವವರು ಕೇವಲ ಮಕ್ಕಳಷ್ಟೇ ಅಲ್ಲ. ಯುವಕರು-ಮಧ್ಯವಯಸ್ಕರೂ ಸೇರಿದ್ದಾರೆ. ಇವರಿಗೆ ಎಳನೀರು ಸೇವನೆಯಿಂದ ದಕ್ಕುವ ಪ್ರಯೋಜನಗಳನ್ನು ಮನದಟ್ಟು ಮಾಡಿಸಬೇಕಾಗಿದೆ. ಈ ನಿಟ್ಟಿನಲ್ಲಿಯೂ ತೆಂಗು ಮಂಡಳಿ ಕಾರ್ಯೋನ್ಮುಖವಾಗಿದೆ.

ತೆಂಗು ಮತ್ತು ತೆಂಗಿನ ಮೌಲ್ಯವರ್ಧನೆಗಳು ಜನಪ್ರಿಯಗೊಂಡಿದ್ದರೆ ಮಧ್ಯಾಹ್ನದೂಟ ಯೋಜನೆಯಲ್ಲಿ ಎಳನೀರು ಸೇವಿಸಿ ಎಂಬ ಆಗ್ರಹ ಬರುತ್ತಿರಲಿಲ್ಲವೇನೋ. ಎಳನೀರಿನಂಥ ಪಾನೀಯಗಳ ಸ್ಥಿತಿ ಹೇಗಿದೆಯೆಂದರೆ ಕೇವಲ ರೋಗಿಗಳು ಮಾತ್ರ ಕುಡಿಯಬೇಕೇನೋ ಎಂಬ ಮನೋಭಾವ ಹಲವರಲ್ಲಿದೆ. ಮಾನಸಿಕ ಅಥವಾ ದೈಹಿಕ ಶ್ರಮ ಆದಾಗ ತಣ್ಣನೆಯ ಎಳನೀರು ಕುಡಿದರೆ ಆಗುವ ಚೇತೋಹಾರಿ ಪರಿಣಾಮಗಳನ್ನು ಇವರಿಗೆ ಮನದಟ್ಟು ಮಾಡಿಸಲು ತೆಂಗುಮಂಡಳಿ ಇನ್ನಿತರ ಸಂಸ್ಥೆಗಳ ನೆರವನ್ನೂ ಪಡೆದುಕೊಳ್ಳುತ್ತಿದೆ. ಇದರೊಂದಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಇವುಗಳಲ್ಲಿ ಯುವಜನಾಂಗದಲ್ಲಿ ಎಳನೀರು ಪಾನೀಯ ಜನಪ್ರಿಯಗೊಳಿಸಲು ‘ಜೆನ್-ನೆಕ್ಸ್ಟ್’ ಎಂಬ ಅಪರೂಪದ ಯೋಜನೆ ಸೇರಿದೆ.

ಶಾಲಾಮಕ್ಕಳಲ್ಲಿ ಎಳನೀರು ಉಪಯೋಗದ ಬಗ್ಗೆ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ತೆಂಗು ಮಂಡಳಿ, ಕೇರಳದ ಕೊಚ್ಚಿಯ ಎಸ್.ಆರ್.ಕೆ. ಶಾಲೆಯನ್ನು ದತ್ತು ತೆಗೆದುಕೊಂಡಿದೆ. ಇಲ್ಲಿನ ಮಕ್ಕಳಿಗೆ ಪ್ರತಿದಿನ ಉಚಿತವಾಗಿ ಎಳನೀರು ನೀಡುತ್ತಿದೆ. ಪರಿಸರ ಸ್ನೇಹಿ ಕಾಗದದ ಲೋಟಗಳಲ್ಲಿ ಭರ್ತಿ ಮಾಡಿದ ಶುದ್ದ ಎಳನೀರು ಇವರಿಗೆ ಪೂರೈಕೆಯಾಗುತ್ತದೆ. ಎಳನೀರು ತುಂಬಿದ ಲೋಟವನ್ನು ಸೀಲ್ ಮಾಡಲಾಗಿರುತ್ತದೆ. ಇದರಿಂದ ಎಳನೀರು ಕಲುಷಿತಗೊಳ್ಳುತ್ತದೆ ಎಂಬ ಆತಂಕವಿರುವುದಿಲ್ಲ.

ಪ್ರತಿ ತೆಂಗಿನಕಾಯಿಯಲ್ಲಿಯೂ ನಿಶ್ಚತ ಪ್ರಮಾಣದ ಎಳನೀರು ದೊರೆಯುವುದಿಲ್ಲ. ಈ ದಿಶೆಯಲ್ಲಿ 10 ರಿಂದ 12 ರುಪಾಯಿಗೆ ನಿಶ್ಚತ ಪ್ರಮಾಣದಲ್ಲಿ ಲೋಟದಲ್ಲಿ ತುಂಬಿದ ಎಳನೀರು ಲಭ್ಯವಾಗುವಂತೆ ಮಂಡಳಿ ಮಾಡಿದೆ. ಇದಕ್ಕಾಗಿ ಕಾಟರ್್ಗಳನ್ನು ಸಿದ್ದಗೊಳಿಸಿದೆ. ಇದು ತೆಂಗಿನ ಮಂಡಳಿಯ ವಿಶಿಷ್ಟ ಪರಿಕಲ್ಪನೆ. ಈ ಸಂಚಾರಿ ಕಾಟರ್್ಗಳು ಮಧ್ಯಾಹ್ನದ ಸಮಯದಲ್ಲಿ ಐಟಿ ಮತ್ತು ಇನ್ನಿತರ ಕಚೇರಿಗಳ ಸಮೂಹಗಳ ಬಳಿ ನಿಂತಿರುತ್ತವೆ. ಇದರಿಂದ ಆಸಕ್ತರಿಗೆ ತಂಪನೆಯ ಎಳನೀರು ದೊರೆಯುತ್ತದೆ. ತೆಂಗಿನಕಾಯಿ ಕೆತ್ತಿ ಕೊಡುವ ಎಳನೀರಿಗಿಂತಲೂ ಕಾಟರ್್ನಲ್ಲಿ ದೊರೆಯುವ ಎಳನೀರು ತಂಪಾಗಿರುತ್ತದೆ. ಈ ಮಾದರಿಯಲ್ಲಿ ಕಾರ್ಟ್ ಅನ್ನು ವಿನ್ಯಾಸಗೊಳಿಸಲಾಗಿರುತ್ತದೆ.

ಕೆಲವರ್ಷಗಳ ಹಿಂದೆ ತೆಂಗಿನೆಣ್ಣೆ ಬಗ್ಗೆ ನಡೆದ ವ್ಯವಸ್ಥಿತ ಅಪಪ್ರಚಾರದಿಂದ ತೆಂಗಿನೆಣ್ಣೆ ಉದ್ಯಮಕ್ಕೆ ಸುಲಭವಾಗಿ ಚೇತರಿಸಿಕೊಳ್ಳಲಾಗದ ಪೆಟ್ಟು ಬಿದ್ದಿತ್ತು. ತೆಂಗಿನೆಣ್ಣೆ ಬಳಕೆ ಮಾಡಿದರೆ ಹೃದ್ರೋಗಗಳು ಉಂಟಾಗುತ್ತವೆ ಎಂಬುದೇ ಈ ಅಪಪ್ರಚಾರವಾಗಿತ್ತು. ಇದರ ಹಿಂದೆ ಬಹುರಾಷ್ಟ್ರೀಯ ಕಂಪನಿಗಳ ಹುನ್ನಾರವಿದಿದ್ದು ಸ್ಪಷ್ಟ. ಇದನ್ನು ಸಂಪೂರ್ಣವಾಗಿ ತೊಡದುಹಾಕಿ ತೆಂಗಿನೆಣ್ಣೆ ಬಳಕೆಯಿಂದ ಆಗುವ ಪ್ರಯೋಜನಗಳನ್ನೂ ಮನದಟ್ಟು ಮಾಡಸಲು ಮಂಡಳಿ ಶ್ರಮಿಸುತ್ತಿದೆ. ಮೊದಲೇ ಪ್ರಸ್ತಾಪಿಸಿದ ಹಾಗೆ ಈ ನಿಟ್ಟಿನಲ್ಲಿ ಸಂಶೋಧನಾ ಸಂಶ್ಥೆಗಳ ನೆರವು ಪಡೆದುಕೊಂಡಿದೆ. ನ್ಯಾಷನಲ್ ಇನ್ಸ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಯೇಷನ್, ಚಿತ್ರಾ ಇನ್ಸ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ಕೇರಳ ವಿಶ್ವವಿದ್ಯಾಲಯದ ಸಂಶೋಧನಾ ಘಟಕಗಳು ತೆಂಗಿನೆಣ್ಣೆ ಬಳಕೆಯಿಂದ ದಕ್ಕುವ ಉಪಯೋಗಗಳ ಕುರಿತು ಸಂಶೋಧನೆ ನಡೆಸಿ ಜನರಿಗೂ ತಿಳಿಸುವಲ್ಲಿಯೂ ಶ್ರಮಿಸುತ್ತಿವೆ.

ತೆಂಗು ಮಂಡಳಿ ಅಧ್ಯಕ್ಷ ಬೋಸ್ ಅವರು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದಾರೆ. ತೆಂಗು ವಲಯದ ಪುನಶ್ಚೇತನಕ್ಕೆ ಈ ಸಂಸ್ಥೆಯ ನೆರವು ತೆಗೆದುಕೊಂಡಿದ್ದಾರೆ. ಈ ಸಂಸ್ಥೆಯ ಮಾರಾಟ ಮಳಿಗೆಗಳಲ್ಲಿ ತೆಂಗಿನ ಉತ್ಪನ್ನಗಳು ನ್ಯಾಯೋಚಿತ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತವೆ.

ತೆಂಗು ಉತ್ಪನ್ನಗಳನ್ನು ಮತ್ತಷ್ಟು ಜನಪ್ರಿಯಗೊಳಿಸಲು ಮಂಡಳಿಯಲ್ಲಿ ಅನೇಕ ಯೋಜನೆಗಳಿವೆ. ಇವುಗಳಲ್ಲಿ ಹಲವು ಈಗಾಗಲೇ ಜಾರಿಗೊಂಡಿವೆ. ಉಳಿದ ಯೋಜನೆಗಳು ಜಾರಿಯಾಗಲು ಕೇಂದ್ರ ಸಕರ್ಾರದ ನೆರವು ಅತ್ಯಗತ್ಯ. ಇದು ದೊರೆಯುವುದೆಂಬ ಆಶಾ ಭಾವನೆಯನ್ನು ಬೋಸ್ ವ್ಯಕ್ತಪಡಿಸುತ್ತಾರೆ.

LEAVE A REPLY

Please enter your comment!
Please enter your name here