ರಾಜ್ಯದ ಬಹುತೇಕ ಗ್ರಾಮೀಣರ ಜೀವನಾಧಾರ ಹೈನುಗಾರಿಕೆ. ಇದನ್ನು ಕ್ರಮಬದ್ಧ ಮತ್ತು ವೈಜ್ಞಾನಿಕ ಮಾದರಿಯಲ್ಲಿ ಮಾಡಬೇಕು. ಇಲ್ಲದಿದ್ದರೆ ನಷ್ಟಗಳ ಸರಮಾಲೆಯೇ ಉಂಟಾಗುತ್ತದೆ. ಆದ್ದರಿಂದ ಹೈನುಗಾರಿಕೆಯನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಮಾಡುವುದು ಹೇಗೆ ಎಂದು ತಿಳಸುವ ಆ್ಯಪ್ ಅಗತ್ಯ. ಇತ್ತೀಚೆಗೆ ಇಂಥ ಆ್ಯಪ್ ಬಿಡುಗಡೆಯಾಗಿದೆ.
ರಾಜ್ಯದಲ್ಲಿ ಹೈನುಗಾರಿಕೆ ಕ್ರಾಂತಿಯೇ ಉಂಟಾಗಿದೆ. ಇದಕ್ಕೆ ಕಾರಣ ತಜ್ಞರ ಮಾರ್ಗದರ್ಶನ ಮತ್ತು ಗ್ರಾಮೀಣರ ಆಸಕ್ತಿ. ಬಹುತೇಕ ಗ್ರಾಮೀಣರಿಗೆ ಇದು ಜೀವನಾಧಾರ. ಅವರ ದೈನಂದಿನ ಜೀವನಾವಶ್ಯಕತೆಗೆ ಅವಶ್ಯಕವಾದ ಹಣ ಇದರಿಂದಲೇ ದೊರೆಯುತ್ತದೆ. ಒಂದು ವೇಳೆ ಜಾನುವಾರುಗಳಿಗೆ ತಗುಲುವ ಸಾಂಕ್ರಾಮಿಕ ರೋಗಗಳ ಬಗ್ಗೆ ಮುಂಚಿತವಾಗಿ ತಿಳಿಯದಿದದ್ದರೆ ಆಗುವ ನಷ್ಟ ಅಪಾರ.
ರಾಜ್ಯದ ಪಶುಸಂಗೋಪನೆ ಇಲಾಖೆ, ಜಾನುವಾರು ಸಾಕಣೆ, ಅದರಲ್ಲಿಯೂ ಹೈನುಗಾರಿಕೆ ಬಗ್ಗೆ ಅವಶ್ಯಕವಾದ ಮಾಹಿತಿಯನ್ನು ನೀಡುತ್ತಿರುತ್ತದೆ. ಹೋಬಳಿ ಮಟ್ಟಗಳಲ್ಲಿ ಇರುವ ಪಶು ಆಸ್ಪತ್ರೆ ಸಿಬ್ಬಂದಿ ಜಾನುವಾರು ಚಿಕಿತ್ಸೆ ಜೊತೆ ಉಪಯುಕ್ತ ಮಾಹಿತಿ ನೀಡುವುದರಲ್ಲಿಯೂ ತೊಡಗಿರುತ್ತಾರೆ. ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸಹ ಇಂಥ ಮಾಹಿತಿ ನೀಡುತ್ತಿರುತ್ತದೆ. ಈಗಾಗಲೇ ಪಶುಸಂಗೋಪನೆ ಇಲಾಖೆ ಮೇವು ಬಗ್ಗೆ ಮಾಹಿತಿ ನೀಡುವ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ.
ಪಶು ಸಾಂಕ್ರಾಮಿಕ ರೋಗಗಳು ಬಹು ಕ್ಷಿಪ್ರವಾಗಿ ಹರಡುತ್ತವೆ. ಮುಂಜಾಗ್ರತೆಯಿಂದ ಲಸಿಕೆ ಹಾಕಿಸಿರದಿದ್ದರೆ ಭಾರಿ ನಷ್ಟ ಉಂಟಾಗುತ್ತದೆ. ಅದರಲ್ಲಿಯೂ ಸಣ್ಣ ಮತ್ತು ಅತಿಸಣ್ಣ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಆದ್ದರಿಂದ ಮಾಹಿತಿಯನ್ನು ಬಹು ತ್ವರಿತವಾಗಿ ತಲುಪಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಉಪಯುಕ್ತವಾಗುವ ಮೊಬೈಲ್ ಆ್ಯಪ್ ಬಿಡುಗಡೆಯಾಗಿದೆ.
ಗ್ರಾಮೀಣ ಪ್ರದೇಶದಲ್ಲಿಯೂ ಸ್ಮಾರ್ಟ್ ಪೋನ್ ಗಳ ಬಳಕೆ ಹೆಚ್ಚುತ್ತದೆ. ಹವಾಮಾನ, ಮಾರುಕಟ್ಟೆ ಇತ್ಯಾದಿ ವಿಷಯ ತಿಳಿಯಲು ಅನುಕೂಲವಾದ್ದರಿಂದ ಈ ಪೋನ್ ಅನ್ನು ಬಳಸಲು ಹೆಚ್ಚಿನ ರೈತರು ಇಷ್ಟಪಡುತ್ತಿದ್ದಾರೆ. ಇದನ್ನು ಬಳಸಿಕೊಂಡು ಮೊಬೈಲ್ ಆ್ಯಪ್ ಮುಖಾಂತರ ಮಾಹಿತಿ ತಿಳಿಸುವ ಕಾರ್ಯವನ್ನು ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದೆ. ಹೈನುಗಾರಿಕೆಗೆ ಇದು ಬಹಳ ಅನುಕೂಲವಾಗಿದೆ.
ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಯೋಜನೆಯಡಿ ಈ ಆ್ಯಪ್ ಅಭಿವೃದ್ದಿ ಆಗಿದೆ. ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ವೈದ್ಯಕೀಯ ಕಾಲೇಜು ಸಿಬ್ಬಂದಿ ಈ ಕಾರ್ಯ ಮಾಡಿದ್ದಾರೆ. ಇದರಲ್ಲಿ ಚಿತ್ರ ಮತ್ತು ಧ್ವನಿ ಸಮೇತ ಮಾಹಿತಿ ನೀಡಲಾಗಿದೆ.
ಹೈನುಗಾರಿಕೆಗೆ ಸೂಕ್ತವಾದ ತಳಿ ರಾಸುಗಳ ಆಯ್ಕೆ ಅತ್ಯಗತ್ಯ. ಇಂಥ ಮಾಹಿತಿ ಜೊತೆಗೆ ಬೆದೆಗೆ ಬಂದ ಲಕ್ಷಣಗಳು, ಕೃತಕ ಗರ್ಭದಾರಣೆ, ರಾಸುಗಳ ಆಹಾರ, ಅವುಗಳಿಗೆ ಬರಬಹುದಾದ ಸಾಂಕ್ರಾಮಿಕ ರೋಗಗಳು, ಅವುಗಳ ಚಿಕಿತ್ಸೆ, ಆರೋಗ್ಯಯುತ ಹಾಲು ಉತ್ಪಾದನೆ, ಸಂಗ್ರಹಣೆ, ಇತ್ಯಾದಿ ಉಪಯುಕ್ತ ಮಾಹಿತಿಯನ್ನು ಇದು ಒಳಗೊಂಡಿದೆ. ಈ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರಿನಲ್ಲಿ ಡೈರಿ ಕನ್ನಡ ಎಂದು ನಮೂದಿಸಿ ಡೌನ್ ಲೋಡ್ ಮಾಡಿಕೊಳ್ಳಬಹುದು.
Cow frame