ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಆಯೋಜಿಸಿರುವ ರಾಜ್ಯಮಟ್ಟದ ಕೃಷಿಮೇಳ ನವೆಂಬರ್ 11, 12 ಮತ್ತು 13 ರಂದು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯಲಿದೆ. ಕೋವಿಡ್ -19 ಹಿನ್ನೆಲೆಯಲ್ಲಿ ಡಿಜಿಟಲ್ ಆಯಾಮಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಗರಿಷ್ಠ ಸಂಖ್ಯೆಯ ಕೃಷಿಕರು ಇದರ ಪ್ರಯೋಜನ ಪಡೆಯಬಹುದೆಂದು ಕುಲಪತಿ ಡಾ. ಎಸ್. ರಾಜೇಂದ್ರಪ್ರಸಾದ್ ತಿಳಿಸಿದರು.
ಬೆಂಗಳೂರು ನಗರದ ಜಿಕೆವಿಕೆ ಆವರಣದಲ್ಲಿರುವ ಕುಲಪತಿ ಕಚೇರಿಯಲ್ಲಿ ಇಂದು ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕೊರೊನಾದ ಕರಿಛಾಯೆ ಎಲ್ಲ ಕ್ಷೇತ್ರಗಳ ಬಿದ್ದಿದೆ. ಆದರೆ ಕೃಷಿಯೋಧರು ಅದನ್ನು ಎದುರಿಸಿ ಎಂದಿನಂತೆ ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ. ಆಹಾರದ ಅಭಾವ ಸೃಷ್ಠಿಯಾಗದಂತೆ ಶ್ರಮಿಸಿದ್ದಾರೆ. ಅನ್ನದಾತರಿಗೆ ಕೃಷಿ ತಂತ್ರಜ್ಞಾನಗಳು ಸಕಾಲದಲ್ಲಿ ತಲುಪುವಂತಾಗಲು ಈ ವರ್ಷ ಸರಳ ಕೃಷಿ ಮೇಳವನ್ನು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ 2020ರ ನವೆಂಬರ್, 11, 12 ಮತ್ತು 13 ರಂದು ಮೂರು ದಿನಗಳ ಕಾಲ ಆಯೋಜಿಸಲಾಗಿದೆ ಎಂದರು.
ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗುವುದು. ಆದ್ದರಿಂದ ಪ್ರತಿದಿನ 200 ಮಂದಿ ರೈತರಿಗೆ ಕೃಷಿತಾಕುಗಳಿಗೆ ಭೇಟಿನೀಡಲು ಅವಕಾಶ ಮಾಡಿಕೊಡಲಾಗುವುದು. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆದ್ಯತೆ ನೀಡಲಾಗುವುದು. ಮಾಸ್ಕ್ ಧರಿಸದೇ ಬಂದವರು, 10 ವರ್ಷ ಒಳಪಟ್ಟವರಿಗೆ, 60ವರ್ಷ ಮೇಲ್ಪಟ್ಟವರಿಗೆ ಪ್ರವೇಶವಿಲ್ಲ ಎಂದು ಸ್ಪಷ್ಟ ಪಡಿಸಿದರು.


ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳು, ಸಂಶೋಧನಾ ಕೇಂದ್ರಗಳಲ್ಲಿ ಕೃಷಿಮೇಳದ ನೇರ ಪ್ರಸಾರ ಮಾಡಲಾಗುವುದು. ಇದನ್ನು ಆಯಾಭಾಗದ ಕೃಷಿಕರು ಸದುಪಯೋಗಪಡಿಸಿಕೊಳ್ಳಬಹುದು. ವಾಟ್ಸಾಪ್ ಮುಖಾಂತರ ತಮ್ಮ ಪ್ರಶ್ನೆಗಳನ್ನು ಕೇಳಬಹುದು ಎಂದು ವಿವರಿಸಿದರು. ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವೀಟರ್, ಇನ್ಸ್ಟಾಗ್ರಾಮ್ ಮತ್ತು ವಿಶ್ವವಿದ್ಯಾಲಯದ ವೆಬ್ ಸೈಟ್ ಮುಖಾಂತರವೂ ನೇರ ಪ್ರಸಾರ ಮಾಡಲಾಗುವುದು ಎಂದರು.
ಕೃಷಿ ಸಂಶೋಧನಾ ನಿರ್ದೇಶಕ ಡಾ. ವೈ.ಜಿ.ಷಡಕ್ಷರಿ ಮಾತನಾಡಿ ನೂತನ ತಳಿಗಳ ವೈಶಿಷ್ಟ್ಯಗಳನ್ನು  ವಿವರಿಸಿದರು. ನೆಲಗಡಲೆಯಲ್ಲಿ ಜಿಕೆವಿಕೆ 27, ಅಲಸಂದೆಯಲ್ಲಿ ಕೆ.ಸಿ.-8, ಮತ್ತು ಮೇವಿನ ಬೆಳೆಯಲ್ಲಿ ಅಲಸಂದೆ ಎಂ.ಎಫ್.ಸಿ.- 09-3 (ಎಂ.ಎಫ್.ಸಿ-3). ಮೂರು ಹೊಸ ತಳಿಗಳು ಮೇಳದಲ್ಲಿ ಲೋಕಾರ್ಪಣೆಯಾಗಲಿವೆ ಎಂದು ವಿವರಿಸಿದರು. ಕೃಷಿ ವಿಸ್ತರಣಾ ನಿರ್ದೇಶಕ ಡಾ. ಎಂ. ಭೈರೇಗೌಡ,  ಕೃಷಿ ಮಾಹಿತಿ ಕೇಂದ್ರದ ಮುಖ್ಯಸ್ಥ ಡಾ. ಮಂಜುನಾಥ್, ಹಿರಿಯ ವಾರ್ತಾತಜ್ಞ ಡಾ. ಕೆ.ಶಿವರಾಮು, ಸಂಶೋಧಕರುಗಳು ಉಪಸ್ಥಿತರಿದ್ದರು.
ವಿಶೇಷಗಳು: ಮೂರು ಹೊಸ ತಳಿಗಳು ಮತ್ತು 17 ತಂತ್ರಜ್ಞಾನಗಳ ಬಿಡುಗಡೆ. ಕೃಷಿ ಸಾಧಕರಿಗೆ ಪುರಸ್ಕಾರ. ಅಂಗೈಯಲ್ಲೇ ಕೃಷಿ ಮೇಳ. ವೆಬ್ಸೈಟ್, ಯೂಟ್ಯೂಬ್, ಫೇಸ್ಬುಕ್, ಟ್ಟಿಟ್ಟರ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಜೂಮ್ ಸಭೆ ಮೂಲಕ ನೇರ ಪ್ರಸಾರ. ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ತಾಕುಗಳು. ಕುಳಿತಲ್ಲಿಯೇ ಕೃಷಿಕರ ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ನೇರ ಪರಿಹಾರ.

ಹೆಚ್ಚಿನ ಮಾಹಿತಿಗೆ ಕುಲಪತಿ ಡಾ. ಎಸ್. ರಾಜೇಂದ್ರಪ್ರಸಾದ್, ವಿಸ್ತರಣಾ ನಿರ್ದೇಶಕ ಡಾ. ಎಂ. ಭೈರೇಗೌಡ, ಕೃಷಿ ಸಂಶೋಧನಾ ನಿರ್ದೇಶಕ ಡಾ. ವೈ.ಜಿ. ಷಡಕ್ಷರಿ ಮತ್ತು ಹಿರಿಯ ವಾರ್ತಾತಜ್ಞ ಡಾ. ಕೆ. ಶಿವರಾಮು ಅವರ ಸಂದರ್ಶನ ಇರುವ ಮುಂದಿನ ವಿಡಿಯೋ ನೋಡಬಹುದು.

1 COMMENT

LEAVE A REPLY

Please enter your comment!
Please enter your name here