ಬೆಳೆ ಇಳುವರಿ ಹೆಚ್ಚಿಸಲು, ಹೊಸಹೊಸ ತಳಿಗಳನ್ನು ಅಭಿವೃದ್ಧಿಪಡಿಸಲು, ಕೀಟಬಾಧೆ ನಿಯಂತ್ರಣ ಮಾಡಲು – ಸಸ್ಯರೋಗಗಳಿಗೆ ಸೂಕ್ತ ಪರಿಹಾರ ಕಂಡು ಹಿಡಿಯಲು, ಅವಾರ್ಚೀನ – ಆಧುನಿಕ ಎರಡೂ ಪದ್ಧತಿ ಸಮನ್ವಯಗೊಳಿಸ ಸಂಶೋಧನೆಗಳನ್ನು ಮಾಡಲು, ಕೃಷಿಕಾರ್ಯಗಳನ್ನು ಸರಾಗವಾಗಿ ಮಾಡಲು ಯಂತ್ರೋಪಕರಣಗಳನ್ನು ಅಭಿವೃದ್ಧಿಪಡಿಸಲು. ಕೃಷಿವೆಚ್ಚ ತಗ್ಗುವಂತೆ ಮಾಡಲು ಕೃಷಿ ವಿಶ್ವವಿದ್ಯಾಲಯದ ಬೇರೆಬೇರೆ ವಿಭಾಗಗಳ ವಿಜ್ಞಾನಿಗಳು ನಿರಂತರ ಶ್ರಮಿಸುತ್ತಿರುತ್ತಾರೆ.
ಇವರ ಪರಿಶ್ರಮ ಸಕಾಲದಲ್ಲಿ ಸಮುದಾಯಗಳಿಗೆ ತಲುಪುವಂತೆ ಮಾಡುವ ಜವಾಬ್ದಾರಿ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ಘಟಕದ ಮೇಲಿರುತ್ತದೆ. ಇದಕ್ಕಾಗಿ ಇಲ್ಲಿನ ಹಿರಿಯ – ಕಿರಿಯ ಕಾರ್ಯಕರ್ತರು ನಿರಂತರವಾಗಿ ಶ್ರಮಿಸುತ್ತಿರುತ್ತಾರೆ. ಆದ್ದರಿಂದ ಸಹಜವಾಗಿಯೇ ಇವರ ಮೇಲೆ ಕಾರ್ಯಭಾರದ ಒತ್ತಡವಿರುತ್ತದೆ.
ಇಂಥ ಮಹತ್ವದ ಕಾರ್ಯಗಳನ್ನು ನಿರ್ವಹಿಸುವ ವಿಸ್ತರಣಾ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯವನ್ನು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಮಾಡುತ್ತಾ ಬಂದಿದೆ. ಪ್ರಸ್ತುತ ವರ್ಷ, “ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ” ಇದೇ ವಿಶ್ವವಿದ್ಯಾಲಯದ ಕೃಷಿ ಮಾಹಿತಿ ಘಟಕದಲ್ಲಿ ಪ್ರಾಧ್ಯಾಪಕರು – ಹಿರಿಯ ವಾರ್ತಾತಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಕೆ. ಶಿವರಾಮು ಅವರಿಗೆ ಸಂದಿದೆ.

ಗ್ರಾಮಗಳಲ್ಲಿ ರೈತರಿಗೆ ಅಗತ್ಯ ಸಲಹೆ ನೀಡಿ ಅವರಿಂದಲೇ ಪ್ರಾತ್ಯಕ್ಷಿಕೆಗಳನ್ನು ಮಾಡಿಸುತ್ತಿರುವುದು

ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾದ ಡಾ. ಕೆ. ಶಿವರಾಮು ಅವರ ಸಂದರ್ಶನವನ್ನು “ಅಗ್ರಿಕಲ್ಚರ್ ಇಂಡಿಯಾ” ನಡೆಸಿತು. ಇದರಿಂದ ವಿಸ್ತರಣಾ ಕಾರ್ಯಕರ್ತರ ಜವಾಬ್ದಾರಿಗಳು – ಅವರ ಮುಂದಿರುವ ಸವಾಲುಗಳು, ಅವರುಗಳು ಯಾವಯಾವ ರೀತಿಯಲ್ಲಿ ಕೃಷಿ ತಂತ್ರಜ್ಞಾನಗಳನ್ನು ಸಮುದಾಯಗಳಿಗೆ ತಲುಪಿಸಲು ಶ್ರಮಿಸುತ್ತಿದ್ದಾರೆ ಎಂಬ ಒಳನೋಟವೂ ದೊರೆಯುತ್ತದೆ.
ಅಗ್ರಿಕಲ್ಚರ್ ಇಂಡಿಯಾ: ಕೃಷಿ ವಿಸ್ತರಣಾ ಚಟುವಟಿಕೆಗಳಲ್ಲಿ ಭಾಗಿಯಾದ ಪ್ರತಿಯೊಬ್ಬರು ಬಯಸುವ ಪ್ರತಿಷ್ಠಿತ “ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ”ಗೆ ಪಾತ್ರರಾಗಿದ್ದೀರಿ. ಅಭಿನಂದನೆ ಮತ್ತು ಶುಭಾಶಯಗಳು. ಈ ಸಂದರ್ಭದಲ್ಲಿ ನಿಮ್ಮ ಊರು-ಕೌಟುಂಬಿಕ ಹಿನ್ನೆಲೆ ಬಗ್ಗೆ ತಿಳಿಸಿ.
ಡಾ. ಕೆ. ಶಿವರಾಮು: ಮಂಡ್ಯ ಜಿಲ್ಲೆಯ ಚಿಕ್ಕಬಳ್ಳಿ ನನ್ನೂರು. ಕೃಷಿಕರಾದ ಕಾಳೇಗೌಡ ಮತ್ತು ನಿಂಗಮ್ಮ ನನ್ನ ತಂದೆತಾಯಿ. ಓದುವುದರ ಜೊತೆಗೆ ಕೃಷಿಕಾಯದಲ್ಲಿಯೂ ತೊಡಗಿಸಿಕೊಂಡಿದ್ದೆ. ಕೃಷಿ ವಿಸ್ತರಣಾ ವಿಷಯವನ್ನೇ ಅಧ್ಯಯನ ಮಾಡಬೇಕೆಂಬುದು ನನ್ನ ಇಚ್ಛೆಯಾಗಿತ್ತು. ಇದೇ ವಿಭಾಗದ ವಿದ್ಯಾರ್ಥಿಯಾಗಲು ಅವಕಾಶ ಸಿಕ್ಕಿತು. ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಿಂದ ಬಿ.ಎಸ್ಸಿ (ಕೃಷಿ), ಎಂ. ಎಸ್ಸಿ (ಕೃಷಿ) ಮತ್ತು ಪಿಹೆಚ್.ಡಿ. ಪದವಿಗಳನ್ನು ಕೃಷಿ ವಿಸ್ತರಣೆಯಲ್ಲಿ ಪಡೆದೆ.. ‘ಯು.ಎ.ಎಸ್. ಚಿನ್ನದ ಪದಕ’, `ಡಾ. ಆರ್. ದ್ವಾರಕೀನಾಥ್ ಚಿನ್ನದ ಪದಕ’ ಮತ್ತು `ಡಾ. ಕೆ. ಎ. ಜಾಲಿಹಾಳ್ ಚಿನ್ನದ ಪದಕ’ಗಳಿಗೆ ಪಾತ್ರನಾದೆ. ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ `ಮಾನವ ಸಂಪನ್ಮೂಲ ನಿರ್ವಹಣೆ’ಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮತ್ತು ಹೈದರಾಬಾದಿನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆಯಿಂದ `ಕೃಷಿ ವಿಸ್ತರಣಾ ನಿರ್ವಹಣೆ’ಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದೇನೆ. ಓದಿದ ವಿಶ್ವವಿದ್ಯಾಲಯದಲ್ಲಿಯೇ ಕೃಷಿಕರ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ಅಪಾರ ಖುಷಿ ಕೊಟ್ಟಿರುವ ಸಂಗತಿ.

ಅಗ್ರಿಕಲ್ಚರ್ ಇಂಡಿಯಾ : ಕೃಷಿ ವಿಶ್ವವಿದ್ಯಾಲಯದ ಯಾವಯಾವ ವಿಭಾಗಗಳಲ್ಲಿ ನೀವು ಕಾರ್ಯನಿರ್ವಹಿಸಿದ್ದೀರಿ.

ಡಾ. ಕೆ. ಶಿವರಾಮ್ : ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿ ಸೇವೆ ಅಲ್ಲಿಸಲು ಆರಂಭಿಸಿ 25 ವರ್ಷ ಸಂದಿದೆ. ಇಲ್ಲಿನ ಮೂರು ವಿಭಾಗಗಳಲ್ಲಿಯೂ ಸೇವೆ ಸಲ್ಲಿಸಿದ್ದೇನೆ. ಕೃಷಿ ಶಿಕ್ಷಣದಲ್ಲಿ 8 ವರ್ಷ, ಕೃಷಿ ಸಂಶೋಧನೆಯಲ್ಲಿ 6 ವರ್ಷ ಮತ್ತು ಕೃಷಿ ವಿಸ್ತರಣೆಯಲ್ಲಿ 11 ವರ್ಷಗಳ ಸೇವೆಯನ್ನು ಸಲ್ಲಿಸಿದ್ದೇನೆ. ಪ್ರಸ್ಥುತ ವಿಸ್ತರಣಾ ನಿರ್ದೇಶನಾಲಯದಲ್ಲಿರುವ ಕೃಷಿ ಮಾಹಿತಿ ಘಟಕದಲ್ಲಿ ಪ್ರಾಧ್ಯಾಪಕ ಹಾಗೂ ಹಿರಿಯ ವಾರ್ತಾತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.

ಗ್ರಾಮಗಳಲ್ಲಿ ಕೃಷಿ ಮಾಹಿತಿ ಜಾಥಾಗಳನ್ನು ಹಮ್ಮಿಕೊಂಡಿರುವುದು

ಅಗ್ರಿಕಲ್ಚರ್ ಇಂಡಿಯಾ: ನೀವು ಸಾಕಷ್ಟು ಕೃಷಿ ಸಾಹಿತ್ಯ ಕೃಷಿಯನ್ನು ಮಾಡಿದ್ದೀರಿ. ನಮ್ಮ ಓದುಗರಿಗೆ ಅದರ ಪರಿಚಯ ಮಾಡಿಕೊಡಿ
ಡಾ. ಕೆ. ಶಿವರಾಮು: ಕನ್ನಡದಲ್ಲಿ `ಬಾಳೆ ಬೇಸಾಯ’, `ಬೀಜೋತ್ಪ್ಪಾದನೆಯ ತಾಂತ್ರಿಕತೆಗಳು’ `ಕಬ್ಬು ಬೇಸಾಯ’ ಮತ್ತು `ಕೃಷಿ ಪತ್ರಿಕೋದ್ಯಮ’ ಪುಸ್ತಕಗಳು ಹಾಗೂ ಇಂಗ್ಲಿಷ್ ನಲ್ಲಿ `ಡೆಮೊಕ್ರೆಟಿಕ್ ಡಿಸೆಂಟ್ರಲೈಜೇಷನ್ ಇನ್ ಪಂಚಾಯತ್ ರಾಜ್ ಸಿಸ್ಟ್ಟಮ್’ ಮತ್ತು `ಕಮ್ಯುನಿಕೇಷನ್ ಸ್ಕಿಲ್ಸ್’ ಎಂಬ ಐದು ಪುಸ್ತಕಗಳನ್ನು ಬರೆದಿದ್ದೇನೆ. ಹಲವಾರು ಸಂಶೋಧನಾ ಲೇಖನಗಳು, ಸಂಶೋಧನಾ ಪ್ರಬಂಧಗಳು, ಜನಪ್ರಿಯ ಲೇಖನಗಳು, ಪ್ರಕಟವಾಗಿವೆ. ಮತ್ತು ರೇಡಿಯೊ ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ.
ನನ್ನ ಸಂಪಾದಕತ್ವದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಆಧುನಿಕ ಬೇಸಾಯ ಪದ್ಧತಿಗಳು, ಸುಧಾರಿತ ಬೇಸಾಯ ಪದ್ಧತಿಗಳ ಪೂರಕ ಕೈಪಿಡಿ, ಪಶು ಸಂಗೋಪನೆ, ರೇಷ್ಮೆ ಮತ್ತು ಮೀನು ಸಾಕಣಿಯ ಆಧುನಿಕ ನಿರ್ವಹಣಾ ಪದ್ಧತಿಗಳು ಹಾಗೂ ಕೃಷಿ ಬೆಳೆಗಳ ಸುಧಾರಿತ ಬೇಸಾಯ ಪದ್ಧತಿಗಳು ಪುಸ್ತಕಗಳು ಪ್ರಕಟವಾಗಿವೆ.
ಅತ್ಯುತ್ತಮ ಲೇಖನಕ್ಕಾಗಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ನೀಡುವ ಡಾ. ಬಿ. ದ್ವಾರಕೀನಾಥ್ ಪ್ರಶಸ್ತಿ ದೊರಕಿದೆ. ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಭಾರತ ಸರ್ಕಾರ. ನೆಹರು ಯುವ ಕೇಂದ್ರ, ಬೆಂಗಳೂರು ಇಲ್ಲಿಂದ ಅಟಲ್ ಬಿಹಾರಿ ವಾಜಪೇಯಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ, ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರಶಸ್ತಿ ದೊರೆತಿರುವುದು ನನ್ನ ಹುರುಪನ್ನು ಹೆಚ್ಚಿಸಿತು.

ಕೃಷಿ ಅಧಿಕಾರಿಗಳಿಗೆ ಕಾರ್ಯಾಗಾರದಲ್ಲಿ ಬೋಧನೆ ಮಾಡುತ್ತಿರುವುದು

ಅಗ್ರಿಕಲ್ಚರ್ ಇಂಡಿಯಾ: ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನ ವಿಸ್ತರಣಾ ಘಟಕದ ಕರ್ತವ್ಯಗಳು ಮತ್ತು ನೀವು ಕಾರ್ಯನಿರ್ವಹಿಸಿದ ರೀತಿಯನ್ನು ವಿವರವಾಗಿ ಪರಿಚಯ ಮಾಡಿಕೊಡಿ
ಡಾ. ಕೆ. ಶಿವರಾಮು: ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನ ಕೃಷಿ ವಿಸ್ತರಣಾ ನಿರ್ದೇಶನಾಲಯದಲ್ಲಿ “ಕೃಷಿ ಮಾಹಿತಿ ಘಟಕ” ಕಾರ್ಯಾಚರಣೆ ಮಾಡುತ್ತದೆ. ವಿಶ್ವವಿದ್ಯಾಲಯದ ಎಲ್ಲ ಚಟುವಟಿಕೆಗಳು ಅಂದರೆ ಕೃಷಿ ಸಂಶೋಧನೆ – ಅಭಿವೃದ್ಧಿ – ಲೇಖನಗಳು – ಸೆಮಿನಾರುಗಳು- ಸಮಾರಂಭಗಳು – ಕಾರ್ಯಾಗಾರಗಳ ವಿವರಗಳೆಲ್ಲವನ್ನೂ ಕೃಷಿಕ ಸಮುದಾಯಕ್ಕೆ ತಲುಪಿಸುವುದು. ಇದಕ್ಕಾಗಿ ಮುದ್ರಣ – ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳ ನೆರವು ಪಡೆದುಕೊಳ್ಳಲಾಗುವುದು. ಸುಧಾರಿತ ಬೇಸಾಯ ಪದ್ಧತಿಯ ಪುಸ್ತಕಗಳನ್ನು ಸಕಾಲದಲ್ಲಿ ಬಿಡುಗಡೆ ಮಾಡುವುದು. ಇದರಲ್ಲಿ ಕೃಷಿ ವಿಶ್ವವಿದ್ಯಾಲಯದ ಎಲ್ಲ ತಾಂತ್ರಿಕತೆಗಳೂ ಸೇರಿಸುತ್ತವೆ. ತಂತ್ರಜ್ಞಾನಗಳ ಡಿವಿಡಿಗಳನ್ನು ಆಸಕ್ತರಿಗೆ ತಲುಪಿಸುವುದು.
ಕೃಷಿ ಮಾಹಿತಿ ಘಟಕದ ಮುಖ್ಯಸ್ಥರಾಗಿ ಅಂದರೆ ಹಿರಿಯ ವಾರ್ತಾತಜ್ಞರಾಗಿ ಬಂದ ನಂತರ ಕೃಷಿ ವಿವಿ ಸಂಶೋಧಿಸಿದ – ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ತ್ವರಿತವಾಗಿ – ಸಕಾಲದಲ್ಲಿ ತಲುಪಲು ಆದ್ಯತೆ ನೀಡಿದೆ. ವಿಶ್ವವಿದ್ಯಾಲಯದ ಚಟುವಟಿಕೆಗಳಲ್ಲದೇ ಇದರ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳ ಪ್ರಗತಿಪರ ಕೃಷಿಕರ ಸಾಧನೆಗಳೂ ಮಾಧ್ಯಮದಲ್ಲಿ ಪ್ರಕಟವಾಗುವ ನಿಟ್ಟಿನಲ್ಲಿ ಪರಿಶ್ರಮ ವಹಿಸುತ್ತಿದ್ದೇನೆ.
ಈ ದಿಶೆಯಲ್ಲಿ “ಮಾಧ್ಯಮಗಳಲ್ಲಿ ಕೃಷಿ” ಎಂಬ ಕಾರ್ಯಾಗಾರವನ್ನೂ ಮಾಡಿದೆವು. ಇದಲ್ಲದೇ ಕೃಷಿಕರೇ ತಮ್ಮ ಅನುಭವಗಳನ್ನು ಬರೆದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಇದಕ್ಕಾಗಿ “ಕೃಷಿಕರ ಕೈಗೆ ಲೇಖನಿ” ಎಂಬ ಕಾರ್ಯಾಗಾರ ಮಾಡಿದೆವು. ಸಾಕಷ್ಟು ಮಂದಿ ಆಸಕ್ತ ರೈತರು ಇದರಲ್ಲಿ ಭಾಗವಹಿಸಿದರು. ಇದು ಮೂರು ಬಾರಿ ನಡೆಯಿತು. ಇದಾದ ನಂತರ ಭಾಗವಹಿದವರಲ್ಲಿ ಗಮನಾರ್ಹ ಸಂಖ್ಯೆಯ ರೈತರು ತಮ್ಮ ಸಾಧನೆಯ ವಿವರಗಳನ್ನು ತಾವೇ ಬರೆಯತೊಡಗಿದರು. ಇತರ ರೈತರ ಮೇಲೂ ಇದು ಹೆಚ್ಚಿನ ಪರಿಣಾಮ ಬೀರುತ್ತಿರುವುದು ಗಮನಕ್ಕೆ ಬಂದಿದೆ.

ಕೃಷಿ ವಿಸ್ತರಣಾ ಘಟಕದ ಕಾರ್ಯಕರ್ತರು – ವಿಜ್ಞಾನಿಗಳು – ಕೃಷಿ = ತೋಟಗಾರಿಕೆಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗಾಗಿ ಕಾರ್ಯಾಗಾರಗಳನ್ನು ಮಾಡಿದೆವು. ಏಕೆಂದರೆ ಇವರು ಹೆಚ್ಚಿನ ಆಸ್ಥೆ ವಹಿಸಿ ಕೆಲಸ ಮಾಡುತ್ತಿದ್ದರೂ ಈ ವಿವರಗಳನ್ನು ಸಮುದಾಯಕ್ಕೆ ತಲುಪುವಂತೆ ಲೇಖನಗಳನ್ನು ಬರೆಯುವುದು ಕಡಿಮೆ. ಇದಕ್ಕಾಗಿ ಇವರಿಗೆ “ ರೈತಪರ ಲೇಖನಗಳು” ಎಂಬ ಕಾರ್ಯಾಗಾರವನ್ನು ಮಾಡಿದೆವು. ಉತ್ತಮ ಸ್ಪಂದನೆ ದೊರೆಯಿತು. ಈ ಬಳಿಕ ಇವರಲ್ಲಿ ಸಾಕಷ್ಟು ಮಂದಿ ನಿರಂತರವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ.
ಸುಧಾರಿತ ವೇಸಾಯ ಪದ್ಧತಿ:
ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ಘಟಕ ತಂತ್ರಜ್ಞಾನ – ಮಾಹಿತಿಗಳನ್ನು ಸಮುದಾಯಕ್ಕೆ ತಲುಪಿಸಲು ಪುಸ್ತಕಗಳನ್ನೂ ಪ್ರಕಟಿಸುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂಥ ಪುಸ್ತಕಗಳ ಮಾರಾಟ ಕಡಿಮೆಯಾಗಿದೆ. ಆದರೆ ಓದುವುದೇನೂ ಕಡಿಮೆಯಾಗಿಲ್ಲ. ಮೊಬೈಲ್ ನಲ್ಲಿ ನೀಡಿದರೆ ಓದುತ್ತಾರೆ. ಇದನ್ನು ಮನಗಂಡು ಸುಧಾರಿತ ಬೇಸಾಯ ಪದ್ಧತಿ ಲೇಖನಗಳನ್ನು ಪಿಡಿಎಫ್ ಮೂಲಕ ನೀಡಿದೆವು. ಒಂಭತ್ತು ತಿಂಗಳ ಅವಧಿಯಲ್ಲಿ ಮೂರುವರೆ ಲಕ್ಷಕ್ಕೂ ಹೆಚ್ಚಿನ ರೈತರಿಗೆ ವಾಟ್ಸಪ್ ಮುಖಾಂತರ ನೇರವಾಗಿ ತಲುಪಿಸಲು ಶ್ರಮಿಸಿದ್ದೇವೆ, ಇವರಗಳ ಮುಖಾಂತರ ಇನ್ನೂ ಲಕ್ಷಾಂತರ ಮಂದಿಗೆ ಇದು ತಲುಪಿದೆ. ವಿಶ್ವವಿದ್ಯಾಲಯದ ವೆಬ್ ಸೈಟಿನಲ್ಲಿಯೂ ಪ್ರಕಟಿಸಿದ್ದೇವೆ.
ಇದರಿಂದ ಆಗುವ ಅನುಕೂಲವೇನೆಂದರೆ ರೈತರು ಎಲ್ಲಿ ಕೆಲಸ ಮಾಡುತ್ತಿದ್ದಾರೋ ಅಲ್ಲಿಯೇ ಏನಾದರೂ ಅನುಮಾನ ಬಂದರೆ ತಕ್ಷಣವೇ ಅಗತ್ಯ ಮಾಹಿತಿ ನೆರವು ಪಡೆಯಬಹುದು. ಅವರು ತಮಗೆ ಬೇಕಾದ ವಿಷಯದ ಸರ್ಚ್ ನೀಡಿದರೆ ತಕ್ಷಣ ಅದು ಅಂಗೈಯಲ್ಲಿಯೇ ಲಭ್ಯವಾಗುತ್ತದೆ. ಇದರ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ದ್ವೀತಿಯ ಪಿಯುಸಿ ಪಾಸಾದ ವಿಜ್ಞಾನ ವಿದ್ಯಾರ್ಥಿಗಳಿಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ಇರುವ ಹೆಚ್ಚಿನ ವಿಷಯಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಇದನ್ನು ಅವರಿಗೆ ತಲುಪಿಸಲು “ಕೃಷಿ ಜ್ಞಾನದೇಗುಲ” ಎಂಬ ಡಿವಿಡಿಯನ್ನು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಹೊರತಂದೆವು. ಇದರಿಂದ ಅಪಾರ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.
ಕೃಷಿಕ ಸಮುದಾಯಕ್ಕೆ ವಿಶ್ವವಿದ್ಯಾಲಯದ ಎಲ್ಲ ಅಭಿವೃದ್ಧಿ – ಸಂಶೋಧನೆ ಚಟುವಟಿಕೆಗಳನ್ನು ಸಮುದಾಯಗಳಿಗೆ ತಲುಪಿಸಲು ಸಾಧನೆ ಹಾದಿಯಲ್ಲಿ – ಕೃಷಿ ಸಂಶೋಧನೆ – ಕೃಷಿ ವಿಸ್ತರಣೆ – ಕೃಷಿ ಶಿಕ್ಷಣ ಇತ್ಯಾದಿ ಹೀಗೆ ಬೇರೆಬೇರೆ ಐದೇದು ನಿಮಿಷ ಕಾಲಾವಧಿಯ ವಿಡಿಯೋ ಸರಣಿಯನ್ನೇ ಮಾಡಿದ್ದೇವೆ. ಇದು ವಿವಿಯ ಯೂಟ್ಯೂಬ್ ಚಾನೆಲ್, ಪೇಸ್ಬುಕ್ ಪೇಜ್ ಮೂಲಕ ಆಸಕ್ತರಿಗೆ ತಲುಪುತ್ತಿದೆ.

ಕೃಷಿಮಾಹಿತಿಗಳನ್ನು ತಲುಪಿಸಲು ಆ್ಯಪ್ ಬಿಡುಗಡೆ. ಚಿತ್ರದಲ್ಲಿ ಕುಲಪತಿ ಡಾ. ಎಸ್. ರಾಜೇಂದ್ರಪ್ರಸಾದ್, ಕೃಷಿ ಸಂಶೋಧನಾ ನಿರ್ದೇಶಕ ಡಾ. ಷಡಕ್ಷರಿ, ಕೃಷಿ ವಿಸ್ತರಣಾ ನಿರ್ದೇಶಕ ಡಾ. ಎಂ. ಭೈರೇಗೌಡ ಮತ್ತು ಹಿರಿಯ ವಾರ್ತಾತಜ್ಞ ಡಾ. ಕೆ. ಶಿವರಾಮು ಇದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಕೃಷಿಕರ ಕೈಯಲ್ಲಿ ಸ್ಮಾರ್ಟ್ ಪೋನ್ ಗಳಿವೆ. ಇಂದಿನ ದಿನಗಳಲ್ಲಿ ಸುಲಭ ಸಂಪರ್ಕಕ್ಕೆ – ಮಾಹಿತಿ ಹಂಚಿಕೆಗೆ ಇದು ಸಹಕಾರಿ. ಈ ಮುಖಾಂತರ ಗಣನೀಯ ಸಂಖ್ಯೆಯ ರೈತರು ಜಾಲತಾಣಗಲ್ಲಿದ್ದಾರೆ. ಇವುಗಳನ್ನು ಬಳಸಿಕೊಂಡು ಮಾಹಿತಿಗಳನ್ನು ಹಂಚಿದಾಗ ಕೃಷಿ ವಿಶ್ವವಿದ್ಯಾಲಯದ ಸಾಧನೆಗಳು ತ್ವರಿತವಾಗಿ ತಲುಪಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ್ದೇ ಆದ ಯೂಟ್ಯೂಬ್ ಚಾನೆಲ್, ಫೇಸ್ಬುಕ್ ಪೇಜ್, ಟ್ವೀಟರ್ ಖಾತೆಗಳನ್ನು ತೆರೆಯಲು ಆಸಕ್ತಿ ವಹಿಸಿದೆವು. ಇದರಿಂದ ವಿಶ್ವವಿದ್ಯಾಲಯದ ಸಾಧನೆಗಳು ರಾಷ್ಟ್ರೀಯ – ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಲು ಸಹಕಾರಿಯಾಗಿವೆ ಎಂದು ತಿಳಿದವರು ಹೇಳುವುದು ಕೃಷಿಯ ಸಂಗತಿ.
ಪ್ರಸ್ತುತ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿನ ಹಿರಿಯರು ನನ್ನ ಕರ್ತವ್ಯ ಮತ್ತು ಸೇವೆಗೆ “ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ” ನೀಡಿದ್ದಾರೆ. ಇದು ನನ್ನ ಜವಾಬ್ದಾರಿಯನ್ನು ಮತ್ತಷ್ಟೂ ಹೆಚ್ಚಿಸಿದೆ. ಕೃಷಿವಿಜ್ಞಾನಿಗಳ ಸಾಧನೆಗಳನ್ನು ಮತ್ತಷ್ಟೂ ತ್ವರಿತವಾಗಿ ರೈತಸಮುದಾಯಕ್ಕೆ ತಲುಪಿಸಲು ಗರಿಷ್ಠ ಮಟ್ಟದಲ್ಲಿ ದುಡಿಯಲು ಉತ್ಸಾಹ – ಹುಮ್ಮಸ್ಸು ಮತ್ತು ಹುರುಪು ತುಂಬಿದೆ.

1 COMMENT

LEAVE A REPLY

Please enter your comment!
Please enter your name here