ಮಲೆನಾಡಿನ ಎಲ್ಲ ಹಳ್ಳಗಳಂತೆಯೇ ಇದು ಕೂಡಾ ಸಹಜವಾಗಿಯೇ ಮಳೆಗಾಲದಲ್ಲಿ ಉಕ್ಕಿ ಹರಿದು ಬೇಸಿಗೆಯಲ್ಲಿ ಬಹುತೇಕ ಬತ್ತಿ ಹೋಗುವುದು. ಅತಿವೇಗದ ಹರಿವಿನ ಕಾರಣ ಮಳೆಗಾಲದ ಮೂರ್ನಾಲ್ಕು ತಿಂಗಳು ಇಳಿದು ದಾಟುವುದು ಕಷ್ಟ ಹಾಗೂ ಅಪಾಯಕಾರಿ.
ಇಂತಹ ಹಳ್ಳಗಳಿಗೆ ದಾಟಲು ಅಡಿಕೆ ಮರದ ತಾತ್ಕಾಲಿಕ ಕಾಲುಸಂಕ ಹಾಕಿಕೊಳ್ಳುವುದು ನಮ್ಮ ಕಡೆ ಮಾಮೂಲಿ. ಅಂತೆಯೇ ನಮ್ಮ ಮನೆಗೂ ತೋಟಕ್ಕೂ ನಡುವೆ ಹರಿಯುವ ಈ ಹಳ್ಳಕ್ಕೆ ಪ್ರತಿವರ್ಷ ಕಾಲುಸಂಕ ಹಾಕಿಕೊಳ್ಳುತ್ತಿದ್ದೆ.
ಇತ್ತೀಚಿನ ದಾಖಲೆ ಮಳೆಯ ಕಾರಣ ಹಳ್ಳದ ಪ್ರವಾಹ ಇಡೀ ಸಂಕವನ್ನು ಅನಾಮತ್ತಾಗಿ ಎತ್ತಿ ತುಂಗೆಯತ್ತ ಒಯ್ದುಬಿಡುತ್ತಿತ್ತು. ಈಗ ಗಟ್ಟಿಯಾದ ಸಂಕ ಹಾಕುವ ಅನಿವಾರ್ಯತೆ ಬಿತ್ತು. ಅದಕ್ಕೆ ಒದಗಿ ಬಂದದ್ದು ತುಂಡಾಗಿ ಬಿದ್ದಿದ್ದ ನಿರುಪಯುಕ್ತ ವಿದ್ಯುತ್ ಕಂಬಗಳು. ಮತ್ತೆ ಆ ವರ್ಷವೂ ಕಳೆದ ವರ್ಷದ ದಾಖಲೆ ಮುರಿದ ಪ್ರವಾಹಕ್ಕೆ ಈ ತೂಕದ ಸಂಕವೂ ಕೊಚ್ಚಿ ಹೋಗಿತ್ತು. ಮುಂದೇನು ?
ಅತಿಮಳೆಯ ಜೊತೆಗೆ ಹೆದ್ದಾರಿ ಅಗಲೀಕರಣದ ಪರಿಣಾಮ ಕುಸಿದ ಗುಡ್ಡಗಳ ಮಣ್ಣು ಕಲ್ಲುಗಳೂ ಕೊಚ್ಚಿ ಬರತೊಡಗಿದ ಮೇಲೆ ಹಳ್ಳದ ನಡವಳಿಕೆಯೂ ಅಸಹಜವಾಗತೊಡಗಿತ್ತು.ತೇಲಿಬರುವ ಮರಮಟ್ಟುಗಳು ಅದರ ಆಯುಧಗಳಾದವು. ಸಾಲದೆಂಬಂತೆ ಹೂಳು ತುಂಬಿದ ಅದರ ಗುಂಡಿಗಳು ಪ್ರವಾಹದ ವೇಗ ನಿಯಂತ್ರಿಸಲಾರದೆ ಪಾತ್ರ ವಿಸ್ತರಿಸುವಂತೆ ಪ್ರೇರೇಪಿಸುತ್ತಿದ್ದವೇನೋ.
ಈಗ ದೊಡ್ಡ ಚಿಂತೆ ಶುರುವಾಯಿತು. ಸರಕಾರದ ಇಲಾಖೆಗಳ ಸಹಾಯಕ್ಕೆ ಕೈಚಾಚುವುದು ನನಗೆ ಇಷ್ಟವಿಲ್ಲದ ವಿಷಯ. ಅಲ್ಲದೆ ಪ್ರಯತ್ನಿಸಿದರೂ ಪ್ರಭಾವ ಪ್ರಲೋಭ ಬಳಸಲು ಒಪ್ಪದ ನನ್ನಂತಹ ಸಾಮಾನ್ಯ ಕೃಷಿಕನಿಗೆ ಅದು ಅಲಭ್ಯ ಎಂಬ ಅನುಭವವೂ ಈ ಹಿಂದೆಯೇ ಆಗಿತ್ತು.
ಸ್ವಂತ ಖರ್ಚಿನಲ್ಲಿ ಒಂದು ಚಿಕ್ಕ ಶಾಶ್ವತ ಕಾಲುಸಂಕ ಮಾಡಿಕೊಳ್ಳುವ ಯೋಜನೆ ಸಿದ್ಧಪಡಿಸಿಕೊಂಡೆ. ಆದರೆ ಕಾರ್ಮಿಕರು (ಗಂಡಾಳುಗಳು) ಸಿಗದ ಕಾರಣ ಬೇಸಿಗೆ ಮುಗಿಯುತ್ತಾ ಬಂದರೂ ಕೆಲಸ ಪ್ರಾರಂಭಿಸಲು ಸಾಧ್ಯವಾಗಲೇ ಇಲ್ಲ.
ಮತ್ತೊಂದು ಮಳೆಗಾಲ ಸಮೀಪಿಸಿಯೇ ಬಿಟ್ಟಿತ್ತು. ಮೇ ಅಂತ್ಯ, ಪೂರ್ವ ಮುಂಗಾರು ಮಳೆಗಳು ಎಚ್ಚರಿಕೆ ನೀಡಿ ನಿದ್ದೆಗೆಡಿಸತೊಡಗಿದ್ದವು. ಇನ್ನು ವಿಧಿಯಿಲ್ಲ. ಒಬ್ಬಂಟಿಯಾಗಿಯೇ ಯುದ್ಧಕ್ಕಿಳಿಲು ಸಿದ್ಧನಾದೆ. ಮಾರನೇ ದಿನವೇ ಸಕಲ ಸರಕು ಕಚ್ಚಾವಸ್ತು, ಹತಾರಿಗಳೊಂದಿಗೆ ಶುರುಹಚ್ಚಿಕೊಂಡೆ.
ತಂತ್ರಜ್ಞ, ಮೇಸ್ತ್ರಿ, ಕಾರ್ಮಿಕ ಎಲ್ಲವೂ ನಾನೇ ಆಗಿ ತ್ರಿಬಲ್ ಆಕ್ಟ್ ಮಾಡುತ್ತಾ ಹತ್ತೇ ದಿನಗಳಲ್ಲಿ ಮುಗಿಸಿದೆ. ಮೇಲೇರಿಸುವಾಗ ಆಯತಪ್ಪಿ ಉರುಳುವುದರಲ್ಲಿದ್ದ ಭೀಮ್ ತಡೆಯುವ ಪ್ರಯತ್ನದಲ್ಲಿ ಭುಜಕ್ಕೆ ಸ್ವಲ್ಪ ಪೆಟ್ಟಾಗಿದ್ದು ಬಿಟ್ಟರೆ ಮತ್ತೆಲ್ಲವೂ ಸುಖಾಂತ್ಯ.
ವಿಚಿತ್ರವೆಂದರೆ ಕೆಲಸ ಮುಗಿದ ಮಾರನೇ ದಿನದಿಂದಲೇ ಮಳೆಗಾಲ ಪ್ರಾರಂಭವಾಗಿತ್ತು! ನಮ್ಮ ಬೆಕ್ಕು ಓಚನಿಂದ ಸ್ವಯಂಪ್ರೇರಿತವಾಗಿ ಮಂಗಳವಾರದ ಶುಭದಿನದಂದು ಉದ್ಘಾಟಿಸಲ್ಪಟ್ಟ ಈ ನನ್ನ ಖಾಸಗಿ ಸೇತುವೆ ಈಗ ಎರಡನೇ ಮಳೆಗಾಲವನ್ನು ಯಶಸ್ವಿಯಾಗಿ ದಾಟಿಸುತ್ತಿದೆ.
(ಕಳೆದ ವರ್ಷ ಇದನ್ನು ಫೊಟೋಗಳೊಂದಿಗೆ ಸಂಕ್ಷಿಪ್ತವಾಗಿ ಬರೆದಿದ್ದೆ. ಈಗ ಮತ್ತೆ ಸವಿವರವಾಗಿ ಬರೆಯಲು ಕಾರಣ ಕಳೆದ ವಾರ ನಾನು ಶೇರ್ ಮಾಡಿಕೊಂಡಿದ್ದ ವಿಡಿಯೋವೊಂದಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳು. ನಾನು ಬರೀ ಹೇಳುವವನಲ್ಲ, ಮಾಡುವವನು ಕೂಡಾ)