ಲೇಖಕರು: ಲೋಕೇಶ್ ಮಾಕ್ಕಮ್, ಸಂಶೋಧಕರು/ವಿಜ್ಞಾನಿ

ಮಕ್ಕಳು ಬೆಳೆಯಲು ಪೌಷ್ಟಿಕಾಂಶಗಳು ಬೇಕು. ಅದಿಲ್ಲದಿದ್ದರೆ ಅವುಗಳು ರಕ್ತಹೀನತೆಯಿಂದ ಬಳಲುತ್ತವೆ. ಸಮರ್ಪಕವಾಗಿ ಬೆಳವಣಿಗೆಯಾಗುವುದಿಲ್ಲ. ಇಂಥ ಸಂದರ್ಭದಲ್ಲಿ ಅವರಿಗೆ ಅಗತ್ಯವಾಗಿ ಬೇಕಾದ ಆಹಾರ ನೀಡಬೇಕು. ಮುಖ್ಯವಾಗಿ ಅದರಲ್ಲಿ ಸತ್ವ ಇರಬೇಕು. ಸತ್ವವೇ ಇಲ್ಲದ ಆಹಾರವನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಿದರೂ ಪರಿಸ್ಥಿತಿಯೇನು ಸುಧಾರಿಸುವುದಿಲ್ಲ. ಇಂಥ ಸಂದರ್ಭದಲ್ಲಿ ಬೆಳವಣಿಗೆಗೆ ಕೃತಕ ಹಾರ್ಮೋನುಗಳನ್ನು ನೀಡಿದರೆ ಏನಾದರೂ ಪ್ರಯೋಜನವಾಗುತ್ತದೆಯೇ ಖಂಡಿತ ಇಲ್ಲ. ಇದೇ ಮಾತು ಸಸ್ಯಗಳಿಗೂ ಅನ್ವಯಿಸುತ್ತದೆ.

ಇಳುವರಿ ಕೊರತೆ: ಸಾಕಷ್ಟು ಮಂದಿ ರೈತರು ಹೊಲ-ಗದ್ದೆ-ತೋಟಗಳಲ್ಲಿರುವ ಸಸ್ಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಫರ್ಟಿಲೈಜರ್ ಗಳನ್ನು ತಂದು ಹಾಕುತ್ತಾರೆ. ಆದರೂ ಅವರು ನಿರೀಕ್ಷಿಸಿದಷ್ಟು ಇಳುವರಿ ಬರುವುದಿಲ್ಲ. ಕೆಲವೊಮ್ಮೆ ಇದು ತೀರಾ ಕಡಿಮೆಯಾಗಿರುತ್ತದೆ. ಇನ್ನೂ ಕೆಲವೊಮ್ಮೆ ಇಳುವರಿಯೇ ಬರುವುದಿಲ್ಲ. ಅರೇ.. ಅವಶ್ಯಕವಾದ ಫರ್ಟಿಲೈಜರ್ಸ್ ಕೊಟ್ಟಿದ್ದೇವೆ. ಆದರೂ ಏಕೆ ಹೀಗಾಗಿದೆ ಎಂದು ಚಿಂತೆಗೀಡಾಗುತ್ತಾರೆ.

ಮಣ್ಣಿನ ಫಲವತ್ತತೆ: ಸಸ್ಯಗಳು ಬೆಳವಣಿಗೆಯಾಗಬೇಕಾದರೆ, ಸೂಕ್ತವಾಗಿ ಇಳುವರಿ ದೊರೆಯಬೇಕಾದರೆ ಮಣ್ಣಿನಲ್ಲಿ ಸತ್ವ ಇರಬೇಕು. ಹೀಗಿಲ್ಲದೇ ಇದ್ದರೆ ಏನು ಮಾಡಿದರೂ ಪ್ರಯೋಜನವಾಗುವುದಿಲ್ಲ. ಮಣ್ಣಿನಲ್ಲಿ ಅಗಾಧ ಸಂಖ್ಯೆಯಲ್ಲಿ ಸೂಕ್ಷ್ಮಾಣುಗಳ ಚಟುವಟಿಕೆ ಇರಲೇಬೇಕು. ಇದಕ್ಕೆ ಅವಶ್ಯಕವಾದ ಗೊಬ್ಬರಗಳನ್ನು ಹಾಕಬೇಕು. ಅವುಗಳಲ್ಲಿ ಅಗತ್ಯವಾದ ಪೋಷಕಾಂಶಗಳು ಇರಬೇಕು. ಸಾಕಷ್ಟು ಮಂದಿ ಸಾಕಷ್ಟು ಪ್ರಮಾಣದಲ್ಲಿ ತಿಪ್ಪೆಗೊಬ್ಬರ/ ಹಟ್ಟಿಗೊಬ್ಬರ ಹಾಕುತ್ತಾರೆ. ಆದರೆ ಇದನ್ನು ಸಮಪರ್ಕವಾಗಿ ಕಳಿಯುವಂತೆ ಮಾಡಿರುವುದಿಲ್ಲ. ಅದು ಬಿಸಿಲು-ಮಳೆಗೆ ತೆರೆದುಕೊಂಡಿರುವುದರಿಂದ ಅದರಲ್ಲಿನ ಸತ್ವ ಹಾಳಾಗಿರುತ್ತದೆ. ಇಂಥ ಗೊಬ್ಬರವನ್ನು ಎಷ್ಟೇ ಪ್ರಮಾಣದಲ್ಲಿ ಹಾಕಿದರೂ ಪ್ರಯೋಜನವಾಗುವುದಿಲ್ಲ.

ಸಾವಯವ ಗೊಬ್ಬರ: ಉತ್ತಮ ರೀತಿಯಲ್ಲಿ ಕಳಿತ ಸಾವಯವ ಗೊಬ್ಬರದಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸುವ ಪೋಷಕಾಂಶಗಳಿರುತ್ತವೆ. ಸಸ್ಯಗಳ ಬೆಳವಣಿಗೆಗೆ ಬೇಕಾದ ಹದಿನಾರು ಬಗೆಯ ಲಘು ಪೋಷಕಾಂಶಗಳ ಲಭ್ಯತೆಯೂ ಇರುತ್ತದೆ. ಇಷ್ಟುಬಗೆಯ ಪೋಷಕಾಂಶಗಳು ರಾಸಾಯನಿಕ ಗೊಬ್ಬರಗಳಲ್ಲಿ ಇರುವುದಿಲ್ಲ. ಆದ್ದರಿಂದ ಇವುಗಳನ್ನು ಯಥೇಚ್ಛವಾಗಿ ಹಾಕಿದರೂ ಮಣ್ಣಿನ ಸತ್ವವೇನೂ ಹೆಚ್ಚಾಗುವುದಿಲ್ಲ.

ಸೂಕ್ಷ್ಮಾಣುಗಳ ಚಟುವಟಿಕೆ: ಸಾವಯವ ಗೊಬ್ಬರಗಳನ್ನು ಹಾಕುವುದರಿಂದ ಮಣ್ಣಿನಲ್ಲಿ ಸೂಕ್ಷ್ಮಾಣುಗಳ ಚಟುವಟಿಕೆ ಇರುತ್ತದೆ. ಇವುಗಳ ಚಟುವಟಿಕೆ ಹೆಚ್ಚಿದಷ್ಟೂ ಸಸ್ಯಗಳ ಅಭಿವೃದ್ಧಿ ಚೆನ್ನಾಗಿ ನಡೆಯುತ್ತದೆ. ಎಲೆಗಳ ಪೋಟೊ ಸಿಂಥೆಸಿಸ್ ಅಥವಾ ಪತ್ರಹರಿತ್ತು ಕ್ರಿಯೆ ಅತ್ಯುತ್ತಮವಾಗಿ ನಡೆಯುತ್ತದೆ. ಬೇರುಗಳು ಆಳವಾಗಿ ಕೆಳಗಿಳಿಯುತ್ತವೆ. ಕಾಂಡಗಳು ಬಲಿಷ್ಠವಾಗುತ್ತದೆ. ಬೆಳವಣಿಗೆಗೆ ಬೇಕಾದ ನೀರು ಮತ್ತು ಪೋಷಕಾಂಶವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಲಭಿಸುತ್ತದೆ.

ಮ್ಯೂಸಿಲೆಜ್: ಮಣ್ಣಿನ ಮೇಲ್ಪದರಲ್ಲಿ ಮ್ಯೂಸಿಲೆಜ್ ಅಂಶ ಇರಬೇಕು. ಹೀಗೆ ಇರದಿದ್ದರೆ ಮಣ್ಣಿನ ಮೇಲ್ಪದರ ಕಾಂಕ್ರಿಟಿನಂತೆ ಗಟ್ಟಿಯಾಗುತ್ತದೆ. ಮ್ಯೂಸಿಲೆಜ್ ಅಂಶವಿದ್ದಾಗ ಜೈವಿಕ ಪ್ರಕ್ರಿಯೆಗಳು ನಡೆಯುತ್ತದೆ.ತನಗೆ ಬೇಕಾದ ಅಂಶಗಳನ್ನು ಸಸ್ಯ ನಿಧಾನವಾಗಿ ಹೀರಿಕೊಳ್ಳುತ್ತದೆ.

ಮಾಗಿ ಉಳುಮೆ: ಇದು ಸಹ ಮಣ್ಣಿನ ಫಲವತ್ತತೆ ಹೆಚ್ಚಿಸಲು ಪೂರಕವಾಗಿರುತ್ತದೆ. ನೆಮಿಟೊಡ್ಸ್ ಗಳು ಬೇರುಗಳ ಒಳಗೆ ಸೇರಿದಾಗ ಗಂಟುಗಳು ಉಂಟಾಗುವ ಪ್ರಕ್ರಿಯೆಯನ್ನು ಸಹ ಮಾಗಿ ಉಳುಮೆ ನಿವಾರಿಸುತ್ತದೆ. ಒಂದು ಮುಖ್ಯವಾದ ಅಂಶವೇನೆಂದರೆ ಮಾಗಿ ಉಳುಮೆ ಮಾಡುವ ಸಂದರ್ಭದಲ್ಲಿ ಗೊಬ್ಬರಗಳನ್ನು ಹಾಕಿದ್ದರೆ ನಂತರ ಮಣ್ಣಿನಲ್ಲಿ ತೇವಾಂಶವಿರುವಂತೆ ಮಾಡಬೇಕು. ಮಣ್ಣು, ಹದವಾದ ಹಸಿಯಿಂದ ಕೂಡಿದಾಗ ಜೈವಿಕ ಪ್ರಕ್ರಿಯೆಗಳು ವೇಗವಾಗಿ ನಡೆಯುತ್ತವೆ.

ಮುಖ್ಯವಾದ ಅಂಶವೆಂದರೆ ಮಣ್ಣಿನಲ್ಲಿ ಸೂಕ್ಷ್ಮಾಣುಗಳ ಪ್ರಕ್ರಿಯೆ ಮತ್ತು ಸಸ್ಯಗಳ ಬೆಳವಣಿಗೆ ಸಮರ್ಪಕವಾಗಿ ಆಗಬೇಕಾದರೆ ಉತ್ತಮವಾಗಿ ಕಳಿತ ಜೈವಿಕ ಗೊಬ್ಬರವನ್ನು ಕೊಡಬೇಕು. ಇದು ಮಣ್ಣಿನಲ್ಲಿ ಚೆನ್ನಾಗಿ ಮಿಳಿತವಾಗುವಂತೆ ಮಾಡಬೇಕು. ಭೂಮಿ ಹಸಿಯಾಗಿರಬೇಕು. ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳದೇ ಸಸ್ಯ ಪ್ರಚೋದಕಗಳನ್ನು ಅಂದರೆ ಪ್ಲಾಂಟ್ ಗ್ರೋಥ್ ಹಾರ್ಮೋನ್ ಗಳನ್ನು ಸಿಂಪಡಿಸುವುದರಿಂದ ಪ್ರಯೋಜನವಾಗುವುದಿಲ್ಲ

ಸಸ್ಯಗಳ ಬೆಳವಣಿಗೆಗೆ ಅವಶ್ಯಕವಾದ ಪೂರಕ ಪರಿಸರ ನಿರ್ಮಾಣ ಮಾಡಿದರೆ ಅವುಗಳೇ ಸ್ವಯಂ ಬೆಳವಣಿಗೆಗೆ ಬೇಕಾದ ಹಾರ್ಮೋನುಗಳನ್ನು ಉತ್ಪದಿಸಿಕೊಳ್ಳುತ್ತವೆ. ಪ್ರಕೃತಿ ಅಂಥ ಶಕ್ತಿಯನ್ನು ಅವುಗಳಿಗೆ ನೀಡಿದೆ. ಆದ್ದರಿಂದ ಹೊರಗಡೆಯಿಂದ ತಂದು ನೀಡುವ ಅವಶ್ಯಕತೆಯಿರುವುದಿಲ್ಲ.

ಮುಂದುವರಿಯುತ್ತದೆ….

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9900800033

LEAVE A REPLY

Please enter your comment!
Please enter your name here